ADVERTISEMENT

ಭಾಳ ಸಂತೋಷ ಆದದ್ದಂದ್ರ, ಅವ್ವ ಸತ್ತಾಗ...

ಡಾ.ಬಸವರಾಜ ಸಾದರ
Published 4 ಫೆಬ್ರುವರಿ 2017, 19:30 IST
Last Updated 4 ಫೆಬ್ರುವರಿ 2017, 19:30 IST
ಭಾಳ ಸಂತೋಷ ಆದದ್ದಂದ್ರ, ಅವ್ವ ಸತ್ತಾಗ...
ಭಾಳ ಸಂತೋಷ ಆದದ್ದಂದ್ರ, ಅವ್ವ ಸತ್ತಾಗ...   

ಅಂತರರಾಷ್ಟ್ರೀಯ ಖ್ಯಾತಿ ಹೊಂದಿದ್ದ ದೇಶದ ಹೆಸರಾಂತ ಡಾಕ್ಟರೊಬ್ಬರನ್ನು 1998ರಲ್ಲಿ ಆಕಾಶವಾಣಿಗಾಗಿ ಸಂದರ್ಶಿಸಿದ್ದೆ. ಬಾನುಲಿಯ ಆ ಸಂದರ್ಶನದ ನಡುವೆ ಏಕಾಏಕಿಯಾಗಿ ನಾನು ಅವರಿಗೆ ಕೇಳಿದ ಪ್ರಶ್ನೆ – ‘ಸರ್, ಜೀವನದೊಳಗ ನೀವು ಅತ್ಯಂತ ಸಂತೋಷಪಟ್ಟ ಪ್ರಸಂಗ ಯಾವುದು?’
ಆ ಪ್ರಶ್ನೆಗೆ ಅವರು ತಕ್ಷಣ ಕೊಟ್ಟ ಉತ್ತರ – ‘ಇದು ಭಾಳ ವಿಚಿತ್ರರಿ, ಮಂದಿ ಏನಂತಾರೋ ಗೊತ್ತಿಲ್ಲ. ಆದ್ರೂ ನಿಮ್ಮುಂದ ಖರೇ ಹೇಳಿಬಿಡ್ತೀನ್ರಿ. ನನಗ ಭಾಳ ಸಂತೋಷ ಆದದ್ದಂದ್ರ, ನಮ್ಮವ್ವ ಸತ್ತಾಗರಿ’.

‘ಆಂ! ಲೋಕವಿರೋಧಿ ಅನಸ್ತೈತೆಲ್ಲ ಇದು?’ ಮತ್ತೆ ನನ್ನ ಕುತೂಹಲಕಾರಿ ಪ್ರಶ್ನೆ.

‘ನೀವು ಏನರ ಅನಕೊಳ್ರಿ, ಇದಂತೂ ಖರೆ. ಯಾಕಂದ್ರ ಹೇಳ್ತೇನ್ರಿ, ನಮ್ಮವ್ವಗ ಕ್ಯಾನ್ಸರ್ ಆಗಿತ್ರಿ. ಎಷ್ಟ್ ತ್ರಾಸಿತ್ತಂದ್ರ ಅಕಿಗೆ, ಅಕೀ ಮುಂದ ಕುಂತ್ನಿ ಅಂತಂದ್ರ, ನನಗಾ ಜಡ್ಡು ಬಂದಂಗ ಅನಸ್ತಿತ್ತು. ಅದಕ್ಕ ಎಂದರಾ ಸಾಯ್ತಾಳೋ ನಮ್ಮವ್ವ ಅಂತ ಅಂತಿದ್ನಿ. ಅಕಿ ಅಷ್ಟು ವಿಲಿವಿಲಿ ಒದ್ದಾಡ್ತಿದ್ಲು. ಅಕಿ ಯಾವಾಗ ಸತ್ಳೋ; ಗೆದ್ದಾಂಗಾತ್ ನೋಡ್ರಿ. ಎದ್ದಾ ಬಿಟ್ನಿ ಸಟಕ್ನ. ಒಂದ್ ವಾರದ ತನ್ಕಾ ಅತ್ತಿದ್ದಿಲ್ಲ. ಅಷ್ಟು ಸಂತೋಷಾಗಿತ್ತ್ ನೋಡ್ರಿ ನನಗ ನಮ್ಮವ್ವ ಸತ್ತಾಗ’.

‘ಇದು ಒಬ್ಬ ವೈದ್ಯನಿಗಿರಬೇಕಾದ ದೃಷ್ಟಿಕೋನ ಅಂತನಸ್ತೈತಿ ಅಲ್ಲಾ?’
‘ಅದೇನ್ ಅನ್ಕೋತೀರೋ ಅನಕೋರಿ, ಆದ್ರ ನನಗಂತೂ ಅಕಿ ತೀರ್ಕೊಂಡ ದಿವ್ಸ ಅಷ್ಟು ಸಂತೋಷ ಆತ್ ನೋಡ್ರಿ’.

‘ಹಂಗಾರ, ಅಗದೀ ದುಃಖ ಆಗಿ, ಬಾಳ ನೊಂದ್ಕೊಂಡದ್ದು ಯಾವಾಗ?’

‘ಅದೂ ನಮ್ಮವ್ವನ ಸಂಬಂಧನರೀ. ನಮ್ಮವ್ವ, ನನ್ನ ಎಂ.ಬಿ.ಬಿ.ಎಸ್. ಮಾಡಾಕ ಕಳಿಸಿದ್ಲು. ನಮ್ಮ ಪರಿಸ್ಥಿತಿ ಭಾಳ ಕೆಟ್ಟ್ ಇತ್ತು. ಅಕೀ, ಹೊಟ್ಟೀ ತುಂಬಸ್ಕೋಳ್ಳಾಕ ಏನೂ ಇದ್ದಿದ್ದಿಲ್ರಿ. ಕೂಲೀ ಮಾಡ್ತಿದ್ಳರಿ. ಆವಾಗನ ಅಕಿಗೆ ಕ್ಯಾನ್ಸರ್ ಆತ್ರಿ. ತನಗ ಕ್ಯಾನ್ಸರ್ ಆಗಿದ್ದು ನನಗ ಹೇಳಿದ್ಲು ಅಂದ್ರ, ನನ್ನ ಓದು ಎಲ್ಲಿ ನಿಂದರ್ತೈತ್ಯೋ ಅಂತ್ಹೇಳಿ ಹಂಗಾ ನುಂಗ್ಕೋತಾ ಕೂಲೀಗೆ ಹ್ವಾದಳಲ್ಲ, ಅದು ನನಗ ಗುರ್ತಾದ ಮ್ಯಾಲ ಹೊಟ್ಟ್ಯಾಗ ಕೈ ಹಾಕಿ ತಿರುವಿದೆಂಗಾತ್ ನೋಡ್ರಿ. ಅದು ದುಃಖ ಅನಸೂದೇನ್ರಿ, ಈಗ ನೆನಪಾದ್ರೂ ಕಣ್ಣಾಗ ನೀರು ತಾಂವಾಗೇ ಬರತಾವು’ – ಇಷ್ಟು ಹೇಳೂವಾಗ ಆ ವೈದ್ಯರ ಗಂಟಲು ತುಂಬಿ ಬಂದಿತ್ತು. ಮುಂದೆ ಮಾತೇ ಬರಲಿಲ್ಲ. ನನ್ನ ಕಣ್ಣಲ್ಲೂ ನೀರು ತುಂಬಿ ನಿಂತಿತ್ತು. ಅಷ್ಟಕ್ಕೇ ಆ ಸಂದರ್ಶನ ಮುಗಿಸಿ ಅವರು ಮತ್ತು ನಾನು ಸ್ಟುಡಿಯೊದಿಂದ ಹೊರಗೆ ಬಂದುಬಿಟ್ಟೆವು.

ಹೆಸರಾಂತ ವೈದ್ಯ ಡಾ. ಎಸ್.ಜೆ. ನಾಗಲೋಟಿಮಠ ಅವರೇ ಆ ವೈದ್ಯರು. ಕರ್ನಾಟಕದ ಅತ್ಯಂತ ಪ್ರಮಾಣಿಕ ಮನುಷ್ಯ ಮತ್ತು ದೇಶದ ಶ್ರೇಷ್ಠ ವೈದ್ಯರಾಗಿದ್ದ ಅವರ ಆತ್ಮಕಥೆ ‘ಬಿಚ್ಚಿದ ಜೋಳಿಗೆ’ಯಲ್ಲಿ ಅವರ ಅಚ್ಚ ಜವಾರಿ ಬದುಕು ಬಿಚ್ಚಿಕೊಂಡದ್ದನ್ನು ಓದಿ ತಿಳಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.