ADVERTISEMENT

ಭಾಷೆ ಮತ್ತು ನಗು

ಕಥೆ

ಕೆ.ಸತ್ಯನಾರಾಯಣ
Published 30 ಆಗಸ್ಟ್ 2014, 19:30 IST
Last Updated 30 ಆಗಸ್ಟ್ 2014, 19:30 IST

ಇದೊಂದು ಒಳ್ಳೆಯ ಕೇಸು ಮತ್ತು ಅಪರೂಪದ ಕೇಸು ಕೂಡ ಹೌದು. ಈಚಿನ ವರ್ಷಗಳಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗದ ಮುಂದೆ ದಾಖಲಿಸುತ್ತಾ ಬಂದ ಕೇಸುಗಳ ಪೈಕಿ. ಎರಡೂ ಆಯೋಗಗಳ ಮುಂದೂ ಏಕೆ ಕೇಸನ್ನು ದಾಖಲಿಸಬೇಕಾಯಿತೆಂದರೆ ಸದರಿ ಕೇಸು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಇವರು, ಇಲ್ಲ ಇಲ್ಲ ಅವರ ವ್ಯಾಪ್ತಿಗೇ ಬರುತ್ತದೆ ಎಂದು ಮತ್ತೊಬ್ಬರು, ನಿರಂತರವಾಗಿ ಪ್ರಥಮ ದರ್ಜೆಯ ಕ್ಯಾತೆಯನ್ನು ತೆಗೆಯುತ್ತಾ ಹೋದದ್ದರಿಂದ.

ಕೊನೆಗೆ ಎರಡೂ ಆಯೋಗಗಳ ಉಪಾಧ್ಯಕ್ಷರುಗಳ ಜಂಟಿ ಮೀಟಿಂಗ್ ಕರೆದು ಹೊಸ ನ್ಯಾಯಮಂಡಳಿ ರಚಿಸಿ, ತರುವಾಯ ಆ ಮಂಡಳಿಯೇ ಕೇಸನ್ನು ತೆಗೆದುಕೊಳ್ಳಬೇಕಾಯಿತು. ತೆಗೆದುಕೊಂಡಿತು ಅಷ್ಟೇ. ಇಷ್ಟು ಮಾತ್ರಕ್ಕೆ ಕೇಸು ಅಪರೂಪವಲ್ಲ ಸ್ವಾಮಿ. ಕೇಸನ್ನು ದಾಖಲಿಸಿದ್ದು ಗೌರೀಶಂಕರರ ಮೇಲೆ. ಗೌರೀಶಂಕರ್ ನಿಮಗೆ ಗೊತ್ತಲ್ಲ. ರಾಯರ ರಾಯ ಕೃಷ್ಣದೇವರಾಯನ ಕಾಲದಿಂದಲೂ ಚೂರೂ ಮೈಲಿಗೆಯಾಗದ, ಸಂಕರಗೊಳ್ಳದ ಶ್ರೋತ್ರೀಯ ಮನೆತನದವರು. ಹಾಗೆ ನೋಡಿದರೆ ಗೌರೀಶಂಕರರೇನು ಖುದ್ದು ಶ್ರೋತ್ರೀಯರಲ್ಲ.

ದೊಡ್ಡ ಭಾಷಾ ಸಂಶೋಧಕರು. ದ್ರಾವಿಡ ಸಂಸ್ಕೃತಿಯ ಶೋಧನೆಯಲ್ಲಿ ಹೊಸ ದಿಕ್ಕನ್ನು ತೋರಿಸಿದವರೆಂದು ಪ್ರಸಿದ್ಧಿಯಾದವರು. ಗೌರಿಯವರ ಪತ್ನಿ ಕೂಡ ಪ್ರಸಿದ್ಧ ಪ್ರಾಣಿಶಾಸ್ತ್ರಜ್ಞೆಯಾದ ಅನುಪಮಾ ಮೇಡಂ. ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ. ತುಂಬು ಕುಟುಂಬ. ಮೂರು ಹೆಣು–ಎರಡು ಗಂಡು ಮಕ್ಕಳು. ವಿಶೇಷವೆಂದರೆ ಎಲ್ಲರೂ ಕೂಡಿಕೊಂಡು ಹಿಂದಿನ ಕಾಲದ ಕೂಡು ಕುಟುಂಬಗಳಂತೆ ಒಟ್ಟಿಗೇ ಮಾತ್ರವಲ್ಲ ಒಟ್ಟೊಟ್ಟಾಗಿಯೂ ಒತ್ತೊತ್ತಾಗಿಯೂ ಬದುಕುತ್ತಿದ್ದುದು. ಹಾಗೆ ಬದುಕಿ ಕೂಡ ಆಧುನಿಕವಾದದ್ದು. ಕಾಂಪೊಂಡ್ ಒಳಗಡೆಯೇ ಟೆನಿಸ್ ಕೋರ್ಟ್.

ಮಾಂಟೇಜ್ ಗುಂಪಿನ ಬ್ಯೂಟಿ ಪಾರ್ಲರಿನ ಮೊಬೈಲ್ ವ್ಯಾನ್ ತಿಂಗಳಿಗೆ ಎರಡು ದಿವಸ ಇವರ ಕಾಂಪೊಂಡಿನಲ್ಲೇ ಕ್ಯಾಂಪು. ಮಂತ್ರ, ಹೋಮ, ಹವನ, ವ್ರತ, ಪೂಜೆಗಳು ಕೂಡ ಸಾಂಗವಾಗಿ ನಡೆಯುತ್ತಿದ್ದವು. ಇಂತಹದೊಂದು ವ್ಯವಸ್ಥೆಯನ್ನು ನೋಡಲೆಂದೇ, ಸಂದರ್ಶಿಸಲೆಂದೇ ಭಾರತದ, ಜಗತ್ತಿನ ನಾನಾ ಭಾಗಗಳಿಂದ ಪತ್ರಕರ್ತರು, ಛಾಯಾಚಿತ್ರಕಾರರು ಬರುತ್ತಿದ್ದರು. ಇಷ್ಟು ಮಾತ್ರಕ್ಕೂ ಕೇಸು ಅಪರೂಪವಾಗುವುದಿಲ್ಲ. ಮುಂದುವರಿದು ಹೇಳಬೇಕೆಂದರೆ ಕೇಸನ್ನು ಫೈಲು ಮಾಡಿದವಳು ನಿಂಗಮ್ಮ. ನಿಂಗಮ್ಮನೂ ಅಲ್ಲ ಮಹಾಸ್ವಾಮಿ, ನಿಂಗಮ್ಮನ ಪರವಾಗಿ ಸಮತಾ ವೇದಿಕೆಯವರು.

ನಿಂಗಮ್ಮನು ಮೈ ನೆರೆಯುವ ದಿನಗಳ ಮುಂಚಿನಿಂದಲೂ ಗೌರೀಶಂಕರರ ಕಾಂಪೊಂಡಿನ ಹೊರಗಡೆಯ ಸುತ್ತು ಕೆಲಸಕ್ಕೆಂದು ಸೇರಿ ಕ್ರಮೇಣವಾಗಿ ಮನೆಯ ಭಾಗವೇ ಆಗಿ ಅಲ್ಲೇ ಹಾಗೇ ಉಳಿದುಬಿಟ್ಟವಳು. ಗೌರಿ ಮನೆಯವರು ಚೆನ್ನಾಗಿ ಅಂದರೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಒಳ್ಳೆ ಸಂಬಳ, ಸಾರಿಗೆ. ಇವಳ ವಾಸಕ್ಕೆಂದೇ ಕಾಂಪೊಂಡಿನ ಕೊನೆಯಲ್ಲಿ ಪುಟ್ಟ ಮನೆ ಕಟ್ಟಿಸಲಾಯಿತು. ನಿಂಗಮ್ಮನ ಗಂಡ ರಾಮಪ್ಪನಿಗೆ ಕೆಲಸ ಕೊಡಿಸಿದ್ದು ಕೂಡ ಇದೇ ಮನೆಯವರು ಎಂಬುದು ಕೂಡ ಮುಖ್ಯ.

ಇನ್ನೂ ಹಿಂದೆ ಹೋದರೆ ನಿಂಗಮ್ಮನ ಮದುವೆಗೆ ಸಹಾಯ ಕೂಡ ಮಾಡಿದ್ದರಲ್ಲ! ನಿಂಗಮ್ಮನ ಹಿನ್ನೆಲೆ ಏನಾದರೂ ಇರಲಿ ದಿನಗಳು ಮುಂದಾದಂತೆ ಆಕೆ ಹಿಂದೆ ಮಾತ್ರ ಉಳಿಯಲಿಲ್ಲ. ಸುಸಂಸ್ಕೃತರ ಸಹವಾಸದಲ್ಲಿ ಓದು, ಬರಹ, ವಿಚಕ್ಷಣೆ, ನಾಜೂಕುತನ ಎಲ್ಲವನ್ನೂ ಕಲಿತಳು. ನಿಂಗಮ್ಮನ ಇಬ್ಬರು ಮಕ್ಕಳನ್ನು ಕೂಡ ಗೌರಿಯವರೇ ಮುತುವರ್ಜಿ ವಹಿಸಿ ಒಳ್ಳೆಯ ಸ್ಕೂಲಿಗೆ ಸೇರಿಸಿದರು. ಇವರ ಮನೆಗೆ ಹೋಗಿ ಬರುವವರು ಗಮನಿಸಿದ ಹಾಗೆ ಸ್ವತಃ ಮನೆಯ ಯಜಮಾನರೇ ನಿಂಗಮ್ಮನ ಮಕ್ಕಳ ಜೊತೆ ಕೂತಕೊಂಡು ಪದಬಂಧ ಬಿಡಿಸುತ್ತಿದ್ದರು. SPELLINGನ್ನು ಗಟ್ಟಿಯಾಗಿ ಉರು ಹಚ್ಚಿಸುತ್ತಿದ್ದರು. ಸಾರಾಂಶದಲ್ಲಿ ಎಲ್ಲವೂ ಸುಸೂತ್ರವಾಗಿತ್ತು, ಆಪ್ಯಾಯಮಾನವಾಗಿತ್ತು.

2
ಇಂತಹ ಗೌರಿಯವರು ಇದ್ದಕ್ಕಿದ್ದಂತೆ ನಿಂಗಮ್ಮನನ್ನು ಕೆಲಸದಿಂದ ವಜಾಮಾಡಿದರು. ಕಾಂಪೊಂಡ್ ಬಿಟ್ಟು ಹೊರಡಬೇಕೆಂದರು. ಒಳ್ಳೆ ಕಡೆ ಸೈಟು ಕೊಡಿಸಿ ಬೇರೆ ಮನೆ ಕಟ್ಟಿಸಿಕೊಡುವುದಾಗಿ, ಕಾಂಪೊಂಡಿನ ಮನೆಯಲ್ಲಿ ಕೆಲಸ ಮಾಡದೇ ಹೋದರೂ ಕೊಡುತ್ತಿರುವ ಸಂಬಳದಲ್ಲಿ ಅರ್ಧದಷ್ಟು ಮೊತ್ತವನ್ನು ಮುಫತ್ತೇ ನೀಡುವುದಾಗಿ, ಜೊತೆಗೆ ಇಬ್ಬರು ಮಕ್ಕಳನ್ನು ಪಿಯುಸಿ ತನಕ ಓದಿಸುವುದಾಗಿ ವಾಗ್ದಾನ ಕೊಟ್ಟು AFFIDAVIT ಕೂಡ ಮಾಡಿಸಿದರು. ಮತ್ತು ತಾವೇನಾದರೂ ಬಹು ಬೇಗ ನಿಧನರಾದರೆ ಇಷ್ಟೂ ಸಂಗತಿಗಳಿಗೆ ಯಾವ ರೀತಿಯಲ್ಲೂ ಎಂದೂ ಊನ ಬಾರದ ಹಾಗೆ ಒಂದು LIMITED WILL ಮಾಡಿಸಿ, ಮಕ್ಕಳು ಸೊಸೆಯರ ಕೈಲೆಲ್ಲ ದಸ್ಕತ್ತು ಹಾಕಿಸಿ ನೋಟರಿ ಹತ್ತಿರ ಹೋಗಿ ನೋಟಿಫೈ ಕೂಡ ಮಾಡಿಸಿಬಿಟ್ಟರು.

ಗೌರಿಯವರ ಮನೆತನದ ವಿದ್ವತ್ತು, ಇತಿಹಾಸ, ಸರಳತೆ, ಸೌಜನ್ಯ ಎಲ್ಲವೂ ಎಲ್ಲರಿಗೂ ಗೊತ್ತಿತ್ತು. ಆದರೆ ಹೀಗೇಕೆ ಮಾಡಿದರು? ಹೀಗೆಂದು ಕೇಳಿದವರು ಕೂಡ ಮನೆತನದವರು ನಿಂಗಮ್ಮನ ಕುಟುಂಬದ ಭವಿಷ್ಯಕ್ಕಾಗಿ ಮಾಡಿದ ವ್ಯವಸ್ಥೆಯನ್ನು ಮನಸಾರೆ ಮೆಚ್ಚಿದರು. ಇಷ್ಟು ಮಾತ್ರ ಸಾಕಾಗುವುದಿಲ್ಲ ಈವತ್ತಿನ ಕಾಲಧರ್ಮಕ್ಕೆ ಎಂಬುದು ಸಮತಾ ಮಂಡಳಿಯವರ ವಾದ. ಗೌರಿಯವರು ಮಂಡಳಿಯ ಮುಂದೆ ಉತ್ತರವಾಗಿ ಮಂಡಿಸಿದ್ದ ವಿವರಗಳು ಹೀಗಿದ್ದವು.

ಈಚೀಚೆಗೆ ನಿಂಗಮ್ಮನ ಮಾತಿನ ವರಸೆ, ನಗುವಿನ ಧಾಟಿ ಎಲ್ಲವೂ ತೀರಾ ಎಂದರೆ ತೀರಾ ನಮ್ಮ ಮನೆಯ ಹೆಂಗಸರ ತರಾನೇ ಆಗಿಹೋಗಿದೆ. ನಿಂಗಮ್ಮ ನಗತಾಯಿದ್ದಾಗ, ಮಾತಾಡತಾಯಿದ್ದಾಗ ಸ್ವಲ್ಪ ದೂರದಿಂದಲೋ, ಪಕ್ಕದ ರೂಮಿನಿಂದಲೋ ನಿಗವಿಟ್ಟು ಕೇಳಿಸಿಕೊಂಡರೆ ಮಾತು–ನಗು ಎಲ್ಲ ನಮ್ಮ ಮನೆಯ ಹೆಂಗಸರದೋ, ನಿಂಗಮ್ಮನದೋ ಗೊತ್ತೇ ಆಗುವುದಿಲ್ಲ. ಕೆಲಸದವಳಾದರೂ ಬಹಳ ವರ್ಷಗಳಿಂದ ನಮ್ಮ ಕಾಂಪೊಂಡಿನಲ್ಲೇ ಇದ್ದೂ ಇದ್ದೂ ಮೂಡಿ ಬಂದ ಸಲಿಗೆಯಿಂದ ತರಕಾರಿ ಹಚ್ಚುವಾಗಲಾಗಲೀ, ಮನೆ ಸಾಮಾನು ಒಪ್ಪ ಮಾಡುವಾಗಲಾಗಲೀ ಕಷ್ಟ ಸುಖ ಮಾತಾಡತಾ ಕುಳಿತುಕೊಳ್ಳುವಾಗಲಾಗಲೀ ಮನೆಯ ಹೆಂಗಸರ ಸಮಕ್ಕೂ ಕೂತುಬಿಡತಾಳೆ. ಇವರಷ್ಟೇ ಉದ್ದಕ್ಕೇ ಕಾಲು ಚಾಚತಾಳೆ.

3
ಇಷ್ಟು ವಾದ – ವಿವರಗಳಿಲ್ಲದೆ ನಿಂಗಮ್ಮನನ್ನು ಕೆಲಸದಿಂದ ವಜಾ ಮಾಡಿದ ದಿನ ಏನೇನಾಗಿತ್ತೆಂದರೆ:
ಆವತ್ತು ಆಂಜನೇಯ ರಸ್ತೆ ಕಡೆಯಿಂದ ಗೌರಿಯವರು ಬೆಳಗಿನ ವಾಕಿಂಗ್ ಮುಗಿಸಿಕೊಂಡು ಬರತಾಯಿರಬೇಕಾದರೆ ನಿಂಗಮ್ಮ ಓಡಿಯನ್ ಸಲೂನ್ ಮುಂದೆ ಕುರ್ಚಿಯಲ್ಲಿ ಕಾಲು ಮೇಲೆ ಕಾಲು ಹಾಕಿಕೊಂಡು ಪೇಪರ್ ಓದುತ್ತಾ ಕೂತಿದ್ದಾಳೆ. OF COURSE, ಇವರನ್ನು ಕಂಡ ತಕ್ಷಣವೇ ಭಯ ಭಕ್ತಿಯಿಂದ ಎದ್ದು ನಿಂತು ನಮಸ್ಕಾರ ಹೇಳಿದ್ದಾಳೆ. ಗೌರಿಯವರಿಗೇ ಮಾತು ತೊದಲಿ ನಾಲಿಗೆ ಒಣಗಿತು.

ಏನಮ್ಮ ಇಲ್ಲಿ?
ಇಬ್ಬರು ಮಕ್ಕಳಾದ ಜಯ–ವಿಜಯರು ಹೇರ್ ಕಟಿಂಗ್ ಮಾಡಿಸಿಕೊಳ್ಳೋಕೆ ಬಂದಿದಾರೆ. ಒಳಗಡೆ ಇದ್ದಾರೆ– ನಿಂಗಮ್ಮನ ಉತ್ತರ. ಉತ್ತರಿಸುತ್ತಿದ್ದರೂ ನಿಂಗಮ್ಮನ ಗಮನವೆಲ್ಲ ಓದುತ್ತಿದ್ದ ಪೇಪರ್ ಕಡೆಗೇ. ಮನಸ್ಸಿನ ತುಂಬಾ ಅರ್ಧ ಓದಿದ್ದ ವಾಚಕರ ವಾಣಿ ಪತ್ರವೇ.
ಓಡಿಯನ್ ಸಲೂನಿನ ಮುನಿಸ್ವಾಮಿಯ ವಂಶಸ್ಥರು ಗೌರೀಶಂಕರರ ಮನೆತನಕ್ಕೆ ಎಷ್ಟೋ ವರ್ಷಗಳಿಂದ ನಾಪಿತ ಸೇವೆ ಮಾಡಿಕೊಂಡು ಬಂದವರು. ಹಾಗಿರುವಾಗ...

ADVERTISEMENT

4
ಕಸಿವಿಸಿ, ವಾಕರಿಕೆಯಲ್ಲೇ ಗೌರಿ ಮನೆಗೆ ವಾಪಸ್ ಬಂದರು. ಎಷ್ಟೋ ಹೊತ್ತಾದಮೇಲೂ ಧುಮ್ ಧುಮ್ ಎಂದು ಉರಿಯುತ್ತಲೇ ಇದ್ದರು. ಒಂದೆರಡು ಗಂಟೆಯ ನಂತರ ನಿಂಗಮ್ಮ ಮನೆಗೂ ಬಂದಳು. ಗಮನಿಸಿದರೆ ಆಕೆ ಕೂಡ ಪಾರ್ಲರ್‌ಗೆ ಹೋಗಿ ಬಂದಿದ್ದುದು, ಕೂದಲನ್ನು ಚೆನ್ನಾಗಿ ಟ್ರಿಮ್ ಮಾಡಿಸಿ ಕಲರಿಂಗ್ ಮಾಡಿಸಿಕೊಂಡಿರುವುದು ಯಾರಿಗಾದರೂ ಗೊತ್ತಾಗುತ್ತಿತ್ತು. ಆಮೇಲೆ ಶ್ಯಾಂಪೂ ಕೂಡ ಮಾಡಿಸಿಕೊಂಡು ಪಾರ್ಲರ್‌ನಲ್ಲೇ ತೆಗೆಸಿಕೊಂಡಿದ್ದ ಬೈತಲೆಯ ರೀತಿಯನ್ನು ನೋಡಿದರೆ ಗೌರಿಯವರಿಗೆ ತಮ್ಮ ದೊಡ್ಡ ಸೊಸೆಯ ಹೇರ್ ಸ್ಟೈಲೇ ಕಣ್ಣು ಮುಂದೆ ಬಂತು.

5
ಗೌರಿಯವರು ಆವತ್ತು ಸಂಶೋಧನಾ ಕೇಂದ್ರಕ್ಕೆ ಹೋಗಲೇ ಇಲ್ಲ. ಕೆಲಸಕ್ಕೆ, ಕಚೇರಿಗೆ ಹೋಗಿದ್ದ ಮನೆಯವರನ್ನೆಲ್ಲ ಫೋನ್ ಮಾಡಿ, ಫೋನ್ ಮಾಡಿ ಕರೆಸಿದರು. ಅವತ್ತೇ ಅಲ್ಲೇ ನಿಂಗಮ್ಮನನ್ನು ಕೆಲಸದಿಂದ ವಜಾ ಮಾಡಿಬಿಟ್ಟರು. ಹಿಂದು ಹಿಂದುಗಡೆಯೇ ಅಫಿಡವಿಟ್ಟು, ವಿಲ್ ಮಾಡುವಿಕೆ ಇತ್ಯಾದಿ. ಮಾರನೇ ದಿನದಿಂದಲೇ ಸಮತಾ ಮಂಡಳಿಯವರ ಚಟುವಟಿಕೆ. ಕೇಸು ಫೈಲು ಮಾಡುವಿಕೆ ಎಲ್ಲವೂ...

6
ಕೇಸು ಇನ್ನೂ ಫೈಸಲ್ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.