ADVERTISEMENT

ಮರಳುಗಾಡಿನ ಹೂವು

ಎಚ್.ಎಸ್.ವೆಂಕಟೇಶ ಮೂರ್ತಿ
Published 19 ಡಿಸೆಂಬರ್ 2015, 19:30 IST
Last Updated 19 ಡಿಸೆಂಬರ್ 2015, 19:30 IST

‘ಕತಾರ್ ಕನ್ನಡ ಸಂಘ’ ನನ್ನನ್ನು ಆಹ್ವಾನಿಸಿದಾಗ ಹೋಗುವುದೇ ಬಿಡುವುದೇ ಎಂಬ ದ್ವಂದ್ವ ನನ್ನನ್ನು ಕಾಡಿತು. ಸಸ್ಯಶ್ಯಾಮಲೆಯಾದ ಭೂದೇವಿಯ ಇನ್ನೊಂದು ಮುಖ ನೋಡಬೇಕಾದರೆ ಕೊಲ್ಲಿ ರಾಷ್ಟ್ರಗಳ ಕಡೆ ಒಮ್ಮೆ ಹೋಗಿಬರಬೇಕು ಎಂದು ಪ್ರವಾಸಪ್ರಿಯರಾದ ಗೆಳೆಯರು ಹೇಳಿದ ಮೇಲೆ ಕತಾರಿಗೆ ಹೋಗಿಬರುವುದೆಂದು ನಿಶ್ಚಯಿಸಿಯಾಯಿತು. ‘ಕತಾರ್ ಕನ್ನಡ ಸಂಘ’ದ ಅಧ್ಯಕ್ಷರಾದ ಮಧು ಮತ್ತು ಅವರ ಶ್ರೀಮತಿ ಲಕ್ಷ್ಮಿ ಬೆಂಗಳೂರಿಗೆ ಬಂದಾಗ ನಮ್ಮ ಮನೆಗೂ ಬಂದು ಅಧಿಕೃತ ಆಹ್ವಾನ ನೀಡಿದ್ದೂ ಆಯಿತು. ಕತಾರ್ ಪ್ರವಾಸದ ದಿನಗಳು ಹತ್ತಿರ ಬಂದವು.

ವೀಸಾ–ಟಿಕೆಟ್ಟು ಎಲ್ಲವೂ ಬಂದವು. ನನ್ನೊಂದಿಗೆ ಮಗನೂ ಇದ್ದ. ಅವಿನಾಶ್, ಮಾಲವಿಕ ಇನ್ನಿಬ್ಬರು ಅತಿಥಿಗಳು. ಪ್ರಭಾತ್ ಕಲಾವಿದರಿಂದ ‘ಕರ್ನಾಟಕ ವೈಭವ’ ಬ್ಯಾಲೆ. ಹಾಗಾಗಿ ಹೇಮಾ ಅವರ ನೇತೃತ್ವದಲ್ಲಿ ಪ್ರಭಾತ್ ಕಲಾವಿದರ ತಂಡವೂ ನಮ್ಮೊಂದಿಗಿತ್ತು. ಆ ತಂಡದಲ್ಲಿ ಹರೀಶ್, ದೀಪಶ್ರೀ ಮೊದಲಾದ ಕಲಾವಿದರೂ ಇದ್ದರು. ನಾಲಕ್ಕು ಗಂಟೆಗೆ ಬೆಂಗಳೂರಿನ ವಿಮಾನ ನಿಲ್ದಾಣದಿಂದ ಕೊಚ್ಚಿಯ ಮೂಲಕ ಕತಾರಿಗೆ ನಾವು ಪ್ರಯಾಣ ಬೆಳೆಸಿದೆವು.

ನಾವು ಕತಾರ್ ಕ್ಯಾಪಿಟಲ್ ದೋಹಾ ನಗರವನ್ನು ತಲುಪಿದಾಗ ರಾತ್ರಿ ಹತ್ತೂವರೆ ಸಮಯ. ಕನ್ನಡಸಂಘದ ಅಧ್ಯಕ್ಷ ಮಧು ಅವರೊಂದಿಗೆ ಸಂಘದ ಪದಾಧಿಕಾರಿಗಳೆಲ್ಲ ನಮ್ಮನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ನನಗೋ ಹಾಸಿಗೆ ಕಂಡರೆ ಸಾಕು ಅನ್ನಿಸಿತ್ತು. ಆದರೆ ಆತಿಥ್ಯಕ್ಕೆ ಖ್ಯಾತರಾದ ಕತಾರ್ ಕನ್ನಡಿಗರು ನಮ್ಮನ್ನು ಬರಿಹೊಟ್ಟೆಯಲ್ಲಿ ಮಲಗಲಿಕ್ಕೆ ಬಿಟ್ಟಾರೆಯೆ? ಕನ್ನಡಿಗರೇ ನಡೆಸುತ್ತಿದ್ದ ಸೊಗಸಾದ ಹೋಟೆಲ್ಲಿಗೆ ನಮ್ಮನ್ನು ಬಸ್ಸಿನಲ್ಲಿ ಕರೆದೊಯ್ದರು. ಸೊಗಸಾದ ಊಟ. ತಡವಾದರೂ ಚಿಂತೆಯಿಲ್ಲ...

ಸ್ವಲ್ಪ ಹಿಂಜರಿದಿದ್ದರೆ ಇಂಥ ರುಚಿಕಟ್ಟಾದ ಊಟ ತಪ್ಪಿಹೋಗುತ್ತಿತ್ತಲ್ಲ ಎಂದುಕೊಳ್ಳುತ್ತಾ ಸಾವಧಾನವಾಗಿಯೇ ಊಟ ಮುಗಿಸಿ, ‘ಗೋಕುಲ್ ಪಾರ್ಕ್’ ಎಂಬ ದೊಡ್ಡ ಹೋಟೆಲ್ ಕಂ ವಸತಿಗೃಹಕ್ಕೆ ನಾವು ಬಂದಾಗ ಮಧ್ಯರಾತ್ರಿ. ಕತಾರ್ ನಾನು ಅಂದುಕೊಂಡಂತೆ ಬೆಂದ ಕಾವಲಿಯಂತೇನೂ ಇರಲಿಲ್ಲ. ರಭಸವಾಗಿ ಬೀಸುವ ತಣ್ಣನೆಗಾಳಿ. ನಮಗೆ ನೀಡಿದ್ದ ವಿಶಾಲವಾದ ಕೊಠಡಿ ಏರ್ ಕಂಡೀಷನ್ ವ್ಯವಸ್ಥೆಯಿಂದಾಗಿ ತಣ್ಣಗೆ ಕೊರೆಯುತ್ತಾ ಇತ್ತು! ‘ಏಸಿ ಬೇಡ’ ಎಂದು ನಿರ್ಧರಿಸಿ ಫ್ಯಾನ್ ಮಾತ್ರ ಆನ್ ಮಾಡಿಕೊಂಡು ನಾನು ಮತ್ತು ಸಂಜಯ್ ನಿದ್ದೆಗೆ ಜಾರಿದೆವು.

ನನಗೆ ಎಚ್ಚರವಾದಾಗ ಬೆಳಕಿನ ಪ್ರಖರತೆ ಕಣ್ಣು ಚುಚ್ಚುವಂತಿತ್ತು. ನಾನೀಗ ಬೆಂಗಳೂರಲ್ಲಿ ಇಲ್ಲ. ದೂರದ ಕೊಲ್ಲಿ ಸೀಮೆಯಲ್ಲಿ ಇದ್ದೇನೆ ಎಂಬುದು ಅರಿವಿಗೆ ಬರುವುದಕ್ಕೇ ಕೆಲವು ನಿಮಿಷಗಳು ಬೇಕಾದವು. ಕತಾರಿನ ಸಮಯ ಆಗ ಬೆಳಗಿನ ಜಾವ ಆರು ಗಂಟೆ. ಸುಮಾರು ಎರಡೂವರೆ ಗಂಟೆ ನಮಗಿಂತ ಹಿಂದಿದ್ದಾರೆ ಅವರು! ಕೊಠಡಿಯ ವಿಶಾಲವಾದ ಕಿಟಕಿಯನ್ನು ಆವರಿಸಿದ್ದ ಸ್ಕ್ರೀನ್ ಸರಿಸಿ ಹೊರಗೆ ನೋಡಿದರೆ ದೋಹಾ ಜಿಗಿಜಿಗಿ ಒಡವೆ ದುಕಾನೇ! ಯಥಾಪ್ರಕಾರ ರಭಸದಿಂದ ಬೀಸುವ ತಂಗಾಳಿ. ನಮ್ಮ ಲಾಜ್ಜಿನ ಮುಂದೆ ಇದ್ದ ಮೋಟು ಖರ್ಜೂರದ ಮರ ಬಣ್ಣದ ದೀಪಗಳ ಅಲಂಕರಣದಿಂದ ಕಂಗೊಳಿಸುತ್ತಾ ಇತ್ತು. ಬೀದಿಯಲ್ಲಿ ಜನಸಂಚಾರವೂ ಪ್ರಾರಂಭವಾಗಿತ್ತು.

ಪಾರಿವಾಳ, ಗುಬ್ಬಿಗಳನ್ನು ಹೋಲುವ ಬೂದುಬಣ್ಣದ ಹಕ್ಕಿಗಳ ಹಾರಾಟ ಪ್ರಾರಂಭವಾಗಿತ್ತು. ಬಿಳಿಯ ಗೌನಿನ ಅರಬ್ಬರು ಅಲ್ಲೊಬ್ಬರು ಇಲ್ಲೊಬ್ಬರು ಕಂಡರು. ಕತಾರಿನ ರಾಜಧಾನಿಯಾದ ಈ ದೋಹಾ ನಗರ ಮುಂಬರುವ ವಿಶ್ವ ಫುಟ್‌ಬಾಲ್‌ ಪಂದ್ಯಾವಳಿಗೆ ತುರ್ತಿನಿಂದ ಸಿದ್ಧವಾಗುತ್ತಿದ್ದ ಕಾಲದಲ್ಲಿ ನಾವು ಆ ನಗರಕ್ಕೆ ಬಂದಿದ್ದೇವೆ. ರೋಡುಗಳ ವೈಡನೀಕರಣ, ಅದಕ್ಕಾಗಿ ಅನೇಕ ಭವ್ಯ ಅಪಾರ್ಟ್ಮೆಂಟುಗಳನ್ನು ಭೂಪತನಗೊಳಿಸುವ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗುತ್ತಾ ಇದೆ! ನಮ್ಮ ಲಾಜ್ಜಿನ ಪಕ್ಕದಲ್ಲಿಯೇ ಅರೆಬರೆ ಭೂಶಾಯಿಯಾಗಿದ್ದ ಭಾರಿ ಎತ್ತರದ ಗಗನಚುಂಬಿ ಸೌಧ. ಬಿರುಗಾಳಿಗೆ ಧರೆಗುರುಳಿ ಬೇರು ಚೆಲ್ಲಿಕೊಂಡ ಮಹಾವೃಕ್ಷದಂತೆ ಕಾಂಕ್ರೆಟ್ಟಿನ ಸರಳುಗಳನ್ನು ತಿರುಪಿದ ಅವಸ್ಥೆಯಲ್ಲಿ ಬಯಲಿಗೆ ಒಡ್ಡಿನಿಂತ ಸೌಧ!

ಆ ರಸ್ತೆಯ ತುದಿಯಲ್ಲಿ ‘ಮರಳುಗಾಡಿನ ಹೂವು’ ಎಂಬ ಹೆಸರಿನ ಮ್ಯೂಜಿಯಮ್ಮೊಂದರ ರಚನೆ... ಕೆಲವೇ ತಿಂಗಳಲ್ಲಿ ಈ ಕಟ್ಟಡ ಸಿದ್ಧವಾಗಲಿಕ್ಕಿದೆ ಎಂದು ಮಧು ಹೇಳಿದ್ದು ನೆನಪಾಯಿತು. ತಲೆಗೆ ಹೆಲ್ಮೆಟ್ ಹಾಕಿಕೊಂಡ ಹಸಿರು ಉಡುಪಿನ ಕಾರ್ಮಿಕರು ಕಟ್ಟಡದ ಬಳಿ ಆಗಲೇ ಜಮಾಯಿಸತೊಡಗಿದ್ದರು. ರಸ್ತೆಯಲ್ಲಿ ಒಂದಾದರೂ ದ್ವಿಚಕ್ರವಾಹನ ಕಾಣಿಸಲಿಲ್ಲ. ಹವಾಸೇವನೆಗೆ ಹೋಗುವ ಜನ ಕಾಲ್ನಡಿಗೆಯಲ್ಲಿದ್ದರೆ, ಕೆಲಸ ಕಾರ್ಯಗಳಿಗೆ ಹೋಗುವವರು ಉದ್ದುದ್ದನೆಯ ಕಾರುಗಳಲ್ಲಿ ಧಾವಿಸುತ್ತಾ ಇದ್ದರು. ಸೂರ್ಯನ ಹೊಂಗಿರಣಗಳು ಆಕಾಶದಲ್ಲಿ ಹರಡುತ್ತಾ ಭೂಮಭವ್ಯ ವರ್ಣಚಿತ್ರಿಕೆಯನ್ನು ಕಾಣದ ಕೈಯೊಂದು ರಚಿಸತೊಡಗಿತ್ತು.

ಕಿಟಕಿಯಲ್ಲಿ ನೋಡುವುದು ಸಾಕು ಎನ್ನಿಸಿ ಮತ್ತೆ ಹಾಸಿಗೆಯಲ್ಲಿ ಒರಗಿ ಟೀವಿ ಹಚ್ಚಿದೆ. ಸಂಗೀತಕ್ಕೇ ಮೀಸಲಾದ ಒಂದು ಚಾನಲ್. ಅಲ್ಲಿ ಕಲಾವಿದರು ಅಭಿನಯಿಸುತ್ತಾ ಹಾಡುವ ಆಲ್ಬಮ್ಮುಗಳು. ಮತ್ತೆ ಅದೇ ಬಿಳೀ ಗೌನಿನ ಚೂಪು ಮುಖದ ಸುಂದರಾಂಗರು. ಅವರೊಂದಿಗೆ ಬಣ್ಣಬಣ್ಣದ ಉಡುಪಿನಲ್ಲಿ ತಮ್ಮ ದೇಹದ ಸೌಭಾಗ್ಯವನ್ನು ಮೆರೆಸುತ್ತಾ ಕಂಗೊಳಿಸುವ ಚೆಲುವೆಯರು. ಹೆಚ್ಚಿನ ಹಾಡುಗಳು ಮೇಳಗೀತೆಗಳೇ. ಗಾಯಕ ಅಥವಾ ಗಾಯಕಿ ಶುರು ಹಚ್ಚಿದ ಗೀತೆಗೆ ಚರಣದ ತುದಿಯಲ್ಲಿ ಮೇಳದವರ ಸಣ್ಣ ದನಿಯ ಪುನರಾವರ್ತಿತ ಸಾಮೂಹಿಕ ಪಲ್ಲವಿ! ಹೆಚ್ಚಿನ ಚಿತ್ರಗಳಲ್ಲಿ ಪುರುಷನ ಕೈಯಲ್ಲಿ ಪಿಸ್ತೂಲು.

ಗುಂಡು ಹಾರಿಸುವುದು. ನಾಯಕಿ ವಿಷಾದದಿಂದ ಹಾಡುತ್ತಾ ಕಣ್ಣೀರ್ಗರೆಯುವುದು. ಮತ್ತೆ ಯಥಾಸ್ಥಿತಿಯಲ್ಲಿ ಹಾಡುತ್ತಾ ಬರುವ ನಾಯಕ. ತುಂಬ ಕಲಾತ್ಮಕವಾದ ಚಿತ್ರೀಕರಣ. ಚಿತ್ರಿಕೆಗೆ ವೇಗವನ್ನು ಪ್ರದಾನ ಮಾಡುವ ಧೃತಗತಿಯ ಎಡಿಟಿಂಗ್. ಆಲ್ಬಮ್ಮನ್ನು ನೋಡುತ್ತಾ ಯಾವ ಮಾಯದಲ್ಲೋ ಮತ್ತೆ ನಿದ್ದೆಗೆ ಜಾರಿದ್ದೇನೆ. ‘ಅಣ್ಣ ಏಳಿ... ಎಂಟುಗಂಟೆ ಆಯಿತು’ ಎಂದು ಮಗ ಕೂಗಿದಾಗಲೇ ಎಚ್ಚರ. ‘ಎಂಟುಗಂಟೆಗೆ ನಮ್ಮವರು ಯಾರಾದರೂ ಬಂದು ನಿಮ್ಮನ್ನು ಸ್ವಾಗತ್ ಹೋಟೆಲ್ಲಿಗೆ ತಿಂಡಿಗೆ ಕರೆತರುವರು. ದಯವಿಟ್ಟು ಸಿದ್ಧವಾಗಿರಿ’ ಎಂದು ಮಧು ಹೇಳಿದ್ದರಲ್ಲ! 

ಒಂಬತ್ತಾಯಿತು. ಹತ್ತಾಯಿತು. ಕಾರ್ಯಕರ್ತರ ಸುದ್ದಿಸುಳಿವಿಲ್ಲ. ಸ್ವಾಗತದಲ್ಲಿ ಬೆಳಿಗ್ಗೆ ಮಸಾಲೆ ದೋಸೆ ಎಂದು ಮೆನೂ ಕೂಡ ಹೇಳಿದ್ದರಲ್ಲ! ನಮ್ಮ ಮೊಬೈಲುಗಳಲ್ಲಿ ಅವರನ್ನು ಸಂಪರ್ಕಿಸಲು ಆಗುತ್ತಿಲ್ಲ. ಏನೋ ಎಡವಟ್ಟಾಗಿದೆ ಎಂದುಕೊಂಡು ಇಲ್ಲೇ ತಿಂಡಿಯ ವ್ಯವಸ್ಥೆ ಇದೆಯೋ ನೋಡಿಕೊಂಡು ಬರುತ್ತೇನೆ ಎಂದು ಮೂರನೇ ಅಂತಸ್ತಿಗೆ ಹೋಗಿ ಮಗ ವಿಚಾರಿಸಿಕೊಂಡು ಬಂದ. ಹತ್ತೂವರೆವರೆಗೆ ಕಾಂಪ್ಲಿಮೆಂಟರಿ ಬ್ರೇಕ್‌ಫಾಸ್ಟ್ ಉಂಟೆಂದು ಹೇಳಿ ನನ್ನನ್ನು ಹೋಟೆಲ್ಲಿಗೆ ಕರೆದುಕೊಂಡುಹೋದ. ಮುಗುಳ್ನಗೆಯೊಂದಿಗೆ ನಮ್ಮನ್ನು ಸ್ವಾಗತಿಸಿದ ಉಪಹಾರಭವನದ ಮುಖ್ಯಸ್ಥೆ ತನ್ನ ಲಿಸ್ಟಿನಲ್ಲಿ ಚೆಕ್ ಮಾಡಿ, ಡೈನಿಂಗ್ ವಿಭಾಗಕ್ಕೆ ನಮ್ಮನ್ನು ಕರೆದೊಯ್ದಳು.

ಉತ್ತಪ್ಪವನ್ನು ಹೋಲುವ ದೋಸೆ... ವಡೆ... ರುಚಿಯಾಗಿದ್ದ ಗಟ್ಟಿ ಸಾಂಬಾರು ನಮಗೆ ಸಾಕಾದವು. ಜೊತೆಗೆ ಸಿಹಿಯಾದ ಹಣ್ಣು ಹಂಪಲನ್ನೂ ಕಬಳಿಸಿದ್ದಾಯಿತು. ಬಿಸಿಬಿಸಿ ಕಾಫಿಯೂ ದೊರೆಯಿತು. ‘ಇನ್ನು ಪರವಾಗಿಲ್ಲ... ಕಾರ್ಯಕರ್ತರು ಯಾವಾಗಲಾದರೂ ಬರಲಿ’ ಎಂದುಕೊಂಡು ನಮ್ಮ 508ರ ಸಂಖ್ಯೆಯ ಕೋಣೆಗೆ ಹಿಂದಿರುಗಿದೆವು. ‘ನಾನು ಸ್ವಲ್ಪ ಸುತ್ತುಹಾಕಿಬರುತ್ತೇನೆ’ ಎಂದು ಮಗ ಹೊರಗೆ ಹೋದ. ನಾನು ಮ್ಯೂಜಿಕ್ ಚಾನಲ್ ಸಾಕು ಎಂದುಕೊಂಡು ನ್ಯೂಸ್ ಚಾನಲ್ಲಿಗೆ ಹೋದರೆ ಪ್ಯಾರಿಸ್ಸಿನಲ್ಲಾದ ಉಗ್ರರ ದಾಳಿಯ ಬಗ್ಗೆ ಅಲ್ಲಿ ಗಹನವಾದ ಚರ್ಚೆಯೊಂದು ಶುರುವಾಯಿತು.

ಸುಮಾರು ಹನ್ನೆರಡು ಗಂಟೆಯ ಸಮಯ! ಮಧು ಅವರ ಫೋನ್. ಅವರು ಆಫೀಸ್ ಕೆಲಸಕ್ಕೆ ಹೋಗಿದ್ದರಂತೆ. ಲಾಜ್ಜಿನಿಂದ ನಮ್ಮನ್ನು ಕೊಂಡೊಯ್ಯಲು ಬಂದಿದ್ದ ಕಾರ್ಯಕರ್ತರು ನಾವು ಪ್ರಾಯಃ ಇಲ್ಲೇ ಬ್ರೇಕ್‌ಫಾಸ್ಟ್ ಮಾಡುತ್ತೇವೆಂದುಕೊಂಡು, ಬೆಳಿಗ್ಗೆ ಎಂಟೂವರೆಗೇ ಉಳಿದವರನ್ನೆಲ್ಲಾ ಮಸಾಲೆದೋಸೆಗೆ ಕರೆದೊಯ್ದುಬಿಟ್ಟಿದ್ದಾರೆ. ಹನ್ನೆರಡಕ್ಕೆ ಅಧ್ಯಕ್ಷರು ಕಾರ್ಯಕರ್ತರನ್ನು ಸಂಪರ್ಕಿಸಿ ನಾವು ಎಲ್ಲಿದ್ದೇವೆ ಎಂದು ವಿಚಾರಿಸಿದಾಗಲೇ ಅವರಿಗೆ ನಾವು ಲಾಜ್ಜಲ್ಲೇ ಉಳಿದಿರುವುದು ತಿಳಿದಿರುವುದು. ‘ಅಯ್ಯೋ..! ಎಂಥ ತಪ್ಪಾಯಿತು’ ಎಂದು ಅವರು ಪೇಚಾಡಿಕೊಂಡಿದ್ದೂ ಪೇಚಾಡಿಕೊಂಡಿದ್ದೇ.

‘ಹತ್ತೇ ನಿಮಿಷದಲ್ಲಿ ಸಂಘದ ಹಿರಿಯ ಪದಾಧಿಕಾರಿಗಳು ನಿಮ್ಮಲ್ಲಿಗೆ ಬರುತ್ತಾರೆ! ಅವರೊಂದಿಗೆ ಹೊರಟು ದಯಮಾಡಿ ಊಟಕ್ಕೆ ಸ್ವಾಗತ್ ಹೋಟೆಲ್ಲಿಗೆ ಬನ್ನಿ... ನಾನೂ ಅಲ್ಲಿಗೆ ಬಂದು ನಿಮ್ಮನ್ನು ಸೇರಿಕೊಳ್ಳುತ್ತೇನೆ’– ಎಂದು ಮಧು ಹೇಳುತ್ತಿದ್ದಾರೆ. ಆಮೇಲೆ ಇಡೀ ದಿನ ಕಂಡವರೆಲ್ಲಾ ನಮ್ಮ ಕೈ ಹಿಡಿದು ಹೀಗಾಯಿತಲ್ಲಾ ಎಂದು ಪೇಚಾಡಿಕೊಳ್ಳುವವರೇ! ಅಯ್ಯೋ... ನಾವು ಲಾಜ್ಜಿನಲ್ಲೇ ಪೊಗಡದಸ್ತಾಗಿ ಬ್ರೇಕ್‌ಫಾಸ್ಟ್ ಮಾಡಿಯಾಗಿದೆ! ಯಾಕೆ ಬೇಸರಪಟ್ಟುಕೊಳ್ಳುವಿರಿ ಎಂದು ನಾವೇ ಅವರನ್ನು ಸಮಾಧಾನಪಡಿಸಬೇಕಾಯಿತು! ಆದರೂ ಅವರಿಗೆ ಸಮಾಧಾನವಾಗಲೊಲ್ಲದು.

ನಮಗೇ ಅನುಕಂಪ ಉಕ್ಕಿಸಿದ ದೃಶ್ಯ ಇದು! ಕತಾರ್ ಕನ್ನಡಿಗರ ಪ್ರೀತಿ, ವಿಶ್ವಾಸ, ಕಾಳಜಿಗೆ ಅವರ ಈ ಚಡಪಡಿಕೆ ಕನ್ನಡಿ ಹಿಡಿದ ಹಾಗಿತ್ತು. ಮಾರನೆ ದಿನ ಮಧು ತಮ್ಮ ಮನೆಯಲ್ಲಿ ದೋಸೆ ಆತಿಥ್ಯ ಮಾಡಿಯೇ ಕೊಂಚ ಸಮಾಧಾನಪಟ್ಟರು ಎನ್ನಬೇಕು. ಲಕ್ಷ್ಮಿ ಅವರು ಹೊಟ್ಟೆ ತುಂಬ ಬಲವಂತದಿಂದ ಬಡಿಸಿದ ಗರಿಗರಿ ದೋಸೆಯ ರುಚಿ ನಾನು ಎಂದೂ ಮರೆಯಲಾಗದ್ದು. ಆ ರುಚಿಯ ಹಿಂದೆ ಒಂದು ವಿಶೇಷವಾದ ಕಾಳಜಿ, ವಿಶ್ವಾಸ ಆವರಿಸಿದಂತಿತ್ತು. ಚಂದ್ರನ ಸುತ್ತ ಗುಡಿಕಟ್ಟುವ ಬೆಳಕಿನ ವೃತ್ತದಂತೆ! ಈಗ ಇನ್ನೊಂದು ಬೆರಗಿನ ಸಂಗತಿಯನ್ನು ತಮ್ಮಲ್ಲಿ ನಿವೇದಿಸಬೇಕಾಗಿದೆ. ನಲವತ್ತು ವರ್ಷಗಳ ಹಿಂದೆ ಸೇಂಟ್ ಜೋಸೆಫ್ಸ್‌ ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ ಸತೀಶ್ ಬಿ.ಆರ್. ನನ್ನನ್ನು ಹುಡುಕಿಕೊಂಡು ಮಧು ಮನೆಗೆ ತಮ್ಮ ಸ್ನೇಹಿತರ ಸಮೇತ ಬಂದರು.

ಅವರ ಮುಖವನ್ನು ನೋಡಿದ್ದೇ ‘ಇವರನ್ನು ನಾನು ನೋಡಿದ್ದೇನೆ’ ಎನ್ನಿಸಿತು. ಸ್ವಲ್ಪ ಹೊತ್ತಲ್ಲೇ ಈತ ‘ಕನ್ನಡಸಂಘ’ದಲ್ಲಿ ಕೆಲಸ ಮಾಡಿದ ನನ್ನ ನಚ್ಚಿನ ಸತೀಶ್ ಅಲ್ಲವೇ ಎಂದುಕೊಂಡೆ! ಸತೀಶ್ ಕೂಡ ಹಳೆಯ ನೆನಪುಗಳನ್ನೆಲ್ಲಾ ಕೆದಕಿದರು. ಪ್ರೀತಿಯ ಕಾಣಿಕೆ ಎಂದು ಬೆಲೆಬಾಳುವ ವಾಚೊಂದನ್ನು ನನಗೆ ಕೊಡುಗೆಯಾಗಿ ನೀಡಿದರು. ಈ ಸ್ನೇಹಪರ ಪ್ರೀತಿಯ ಮನುಷ್ಯ ನಲವತ್ತು ವರ್ಷಗಳ ನಂತರ ನನ್ನನ್ನು ಭೆಟ್ಟಿ ಮಾಡಿದ್ದು, ಈ ಪಾಟಿ ವಿಶ್ವಾಸ ತೋರಿಸುತ್ತಿರುವುದು ಮೇಷ್ಟ್ರುಗಳಿಗೆ ಮಾತ್ರ ಲಭ್ಯವಾಗುವ ಭಾಗ್ಯವಲ್ಲವೇ!?

ಮಧು ತಮ್ಮ ಶ್ರೀಮತಿ ಲಕ್ಷ್ಮಿಯವರೊಂದಿಗೆ ಬಹು ಹಳೆಯದೆಂದು ತೋರುವ ಅಪಾರ್ಟ್ಮೆಂಟಿನ ಮೊದಲ ಮಹಡಿಯ ಈ ಮನೆಯಲ್ಲಿ ವಾಸವಾಗಿದ್ದಾರೆ. ಅವರ ಮಗಳು ಬೆಂಗಳೂರಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ. ಬಾಡಿಗೆಗೆ ಹಿಡಿದ ಮನೆ. ಕತಾರಲ್ಲಿ ಸ್ವಂತ ಮನೆ ಕೊಳ್ಳುವಂತಿಲ್ಲ. ಮನೆಯ ಎಲ್ಲ ಕಿಟಕಿಗಳಿಗೂ ದಪ್ಪ ತೆರೆಗಳನ್ನು ಹಾಕಿದ್ದರಿಂದ ಮಸಕು ಮಸಕು ಬೆಳಕು. ‘ಕಿಟಕಿ ತೆರೆದು ಇಲ್ಲಿ ಬದುಕುವಂತಿಲ್ಲ’ ಎಂದರು ಲಕ್ಷ್ಮಿ. ‘ಯಾಕೆ’ ಅಂದರೆ, ‘ಸೂರ್ಯನ ಪ್ರಖರವಾದ ಬೆಳಕು... ಕಣ್ಣುಬಿಡಲಾಗುವುದಿಲ್ಲ... ಅದಕ್ಕೇ ತೆರೆ ಹಾಕಿಕೊಂಡೇ ಇರಬೇಕು’ ಎಂದು ವಿವರಿಸಿದರು! ಗೋಡೆಯ ಮೇಲೆ ಅಭಯಹಸ್ತದ ಮಧ್ವಾಚಾರ್ಯರ ಫೋಟೊ ಕಂಗೊಳಿಸುತ್ತಾ ಇತ್ತು.

ಎರಡು ಬೆರಳು ಎತ್ತಿ ತೋರಿಸುವ ಆಚಾರ್ಯರ ಫೋಟೋ ನಾನು ಹೆಚ್ಚಾಗಿ ನೋಡಿದ್ದೆ. ಇದು ಬನ್ನಂಜೆ ಗೋವಿಂದಾಚಾರ್ಯರು ಹೊಸದಾಗಿ ರೂಪಿಸಿರುವುದಂತೆ. ಎತ್ತಿದ ಎರಡು ಬೆರಳ ಬದಲಾಗಿ ಅಭಯ ಹಸ್ತದ ಆಚಾರ್ಯರ ಭಂಗಿ. ಒಳಗೆ ಅಡುಗೆ ಮನೆಯಲ್ಲೇ ಪೂಜಾಗೃಹವೂ ಇತ್ತು. ‘ಪರವಾಗಿಲ್ಲ.. ಪೂಜೆ ಪುರಸ್ಕಾರ ಇನ್ನೂ ಉಳಿಸಿಕೊಂಡಿದ್ದೀರಿ’ ಎಂದಾಗ ಮಧು ‘ಮನೆಯ ಒಳಗೆ ಇದೆಲ್ಲಾ ನಡೆಯುತ್ತದೆ... ಆದರೆ ಜೋರಾಗಿ ಗಂಟೆಯ ಸದ್ದೂ ಮಾಡುವಂತಿಲ್ಲ. ಪಕ್ಕದ ಮನೆಯವರು ಕಂಪ್ಲೇಂಟ್ ಮಾಡಿದರೆ ತೊಂದರೆಯಾಗುತ್ತದೆ. ಅದು ಅಪರಾಧ.

ನಮ್ಮ ನಮ್ಮ ಮನೆಯಲ್ಲೇ ನಾವು ಧಾರ್ಮಿಕ ಆಚರಣೆ ನಡೆಸಿಕೊಂಡರೆ ಅಡ್ಡಿಯಿಲ್ಲ. ಒಂದು ನಿಶ್ಚಿತ ಗೆರೆ ದಾಟದೆ ನಮ್ಮ ಪಾಡಿಗೆ ನಾವು ಇರುವುದಾದರೆ ಇದಕ್ಕಿಂತ ಕ್ಷೇಮ ರಾಷ್ಟ್ರ ಇನ್ನೊಂದಿಲ್ಲ. ಗೆರೆ ದಾಟಿದರೆ ಮಾತ್ರ ಕಷ್ಟ....’. ಈ ಮಾತನ್ನು ಕತಾರಲ್ಲಿ ನೆಲೆಸಿರುವ ಬಹಳ ಜನ ಕನ್ನಡ ಬಂಧುಗಳು ನನಗೆ ಹೇಳಿದ್ದುಂಟು. ‘ನೀವು ನಾಳೆ ಪಬ್ಲಿಕ್ ಪ್ಲೇಸಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದೀರಲ್ಲಾ... ಹೇಗೆ ಮತ್ತೆ?’ ಎಂದೆ. ‘ಅದಕ್ಕೆ ನಾವು ವಿಶೇಷ ಪರ್ಮಿಷನ್  ತೆಗೆದುಕೊಂಡಿದ್ದೇವೆ. ಪೊಲೀಸ್ ಅಧಿಕಾರಿಗಳೂ ಕಾರ್ಯಕ್ರಮಕ್ಕೆ ಬರುತ್ತಾರೆ. ನಮ್ಮ ಅಂಬೆಸ್ಸಿಯ ಮುಖ್ಯ ಅಧಿಕಾರಿಯೂ ಕಾರ್ಯಕ್ರಮದ ವಿಶೇಷ ಅತಿಥಿಗಳು. ಕಣ್ಣಲ್ಲಿ ಕಣ್ಣಿಟ್ಟು ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮ ವೀಕ್ಷಿಸುತ್ತಾರೆ. ನಾವು ಎಚ್ಚರದಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಸ್ವಾಭಾವಿಕವಾಗಿಯೇ ಇಲ್ಲಿಯ ಜನ ಒಳ್ಳೆಯವರು. ಸುಮ್ಮಸುಮ್ಮನೆ ಯಾರ ತಂಟೆಗೂ ಬರುವವರಲ್ಲ. ಅವರ ಧಾರ್ಮಿಕ ಭಾವನೆಗಳನ್ನು ನಂಬಿಕೆಗಳನ್ನು ನಾವು ಕೆಣಕದಿದ್ದರೆ ಸರಿ! ನಮ್ಮ ಪಾಡಿಗೆ ನಾವು ಆರಾಮಾಗಿ ಇರಬಹುದು... ಇಲ್ಲಿ ಯಾರೂ ನೆಲೆಸಲು ಬಂದವರಲ್ಲ. ನಮ್ಮ ಬದುಕು ನಮ್ಮನ್ನು ಇಲ್ಲಿಗೆ ಎಳೆದು ತಂದಿದೆ. ಕೈತುಂಬ ಕಾಸು ಸಿಗುತ್ತದೆ. ಅದಕ್ಕೆ ಟ್ಯಾಕ್ಸ್ ಕಟ್ಟುವ ಅಗತ್ಯ ಕೂಡ ಇಲ್ಲ. ತೆರಿಗೆ ಮುಕ್ತ ದೇಶ ಇದು. ಸಂಪಾದಿಸಿದ್ದನ್ನು ಭಾರತಕ್ಕೆ ಕಳಿಸುವುದಕ್ಕೆ ಅಡ್ಡಿಯಿಲ್ಲ. ಹಾಗಾಗಿ ಭಾರತ, ಬಾಂಗ್ಲ, ಪಾಕಿಸ್ತಾನ, ಮಲೇಸಿಯ– ಎಲ್ಲ ಕಡೆಯಿಂದಲೂ ವಲಸೆಗಾರರು ಇಲ್ಲಿಗೆ ಬರುತ್ತಾರೆ. ಇಪ್ಪತ್ತು ಮೂವತ್ತು ವರ್ಷಗಳಿಂದ ಇಲ್ಲೇ ನೆಲೆಸಿರುವ ಕನ್ನಡಿಗರು ಇದ್ದಾರೆ. ಒಳ್ಳೆ ಸ್ಥಾನಮಾನಗಳಲ್ಲಿ ಇರುವವರೂ ಇದ್ದಾರೆ. ಅರವಿಂದ ಪಾಟೀಲ್, ಬಿ.ಆರ್.ಸತೀಶ್, ಪ್ರಭಾಕರ್, ವೆಂಕಟರಾವ್ ಮೊದಲಾದವರಂತೆ.

ದಶಕಗಳಿಂದ ಕನ್ನಡಸಂಘ ಅಸ್ತಿತ್ವದಲ್ಲಿದೆ. ನಾಟಕ, ಸಂಗೀತ, ಅತಿಥಿಗಳನ್ನು ಭಾರತದಿಂದ ಕರೆಸುವುದು, ಕಾರ್ಯಕ್ರಮಗಳನ್ನು ಏರ್ಪಡಿಸುವುದು ನಡೆಸುತ್ತಾ ಬಂದಿದ್ದೇವೆ. ಕನ್ನಡದ ಬಹಳಷ್ಟು ಮಂದಿ ಹಿರಿಯ ಲೇಖಕರು, ಸಂಗೀತ ಕಲಾವಿದರು, ರಂಗಭೂಮಿ – ಚಲನಚಿತ್ರ ಕಲಾವಿದರು ಕತಾರಿಗೆ ಬಂದು ಹೋಗಿದ್ದಾರೆ. ಮಕ್ಕಳಿಗೆ ಕನ್ನಡ ಕಲಿಸುವ ವ್ಯವಸ್ಥೆಯೂ ಇದೆ. ನಾವೆಲ್ಲಾ ಸೇರಿದಾಗ ಕನ್ನಡದಲ್ಲೇ ವ್ಯವಹರಿಸುತ್ತೇವೆ. ನಮ್ಮ ಮಕ್ಕಳು ಸೊಗಸಾಗಿ ಕನ್ನಡ ಮಾತಾಡುತ್ತಾರೆ. ಇಲ್ಲಿ ಶಿಕ್ಷಣ ತುಂಬ ದುಬಾರಿ. ಸಾಮಾನ್ಯವಾಗಿ ನಮ್ಮ ಮಕ್ಕಳು ತಮ್ಮ ಕಾಲೇಜು ವ್ಯಾಸಂಗಕ್ಕೆ ಬೆಂಗಳೂರಿಗೆ ಹೋಗುತ್ತಾರೆ. ಇಂಡಿಯಾದ ಶಿಕ್ಷಣ ಮಟ್ಟ ಚೆನ್ನಾಗಿದೆ ಎಂದು ನಾವೆಲ್ಲಾ ನಂಬಿದ್ದೇವೆ’ ಎಂದವರು ಹೇಳಿದರು.

ಸತೀಶರ ಕಾರಿನಲ್ಲಿ ನಾವೆಲ್ಲಾ ನಗರ ವೀಕ್ಷಣೆಗೆ ಹೊರಟೆವು. ಜೊತೆಗೆ ಮಧು ಸಹಾ ಇದ್ದರು. ಇಲ್ಲಿ ಅಮೆರಿಕಾದಂತೆ ಲೆಫ್ಟ್ ಹ್ಯಾಂಡ್ ಡ್ರೈವ್. ಮುಂದೆ ಕೂಡುವವರು ಸೇಫ್ಟಿ ಬೆಲ್ಟ್ ಧರಿಸಲೇ ಬೇಕು. ಟ್ರಾಫಿಕ್ ನಿಯಮಗಳನ್ನು ಸ್ಟ್ರಿಕ್ಟ್ ಆಗಿ ಅನುಸರಿಸಬೇಕು. ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಕಟ್ಟಬೇಕಾಗುವುದು. ದಾರಿಯಲ್ಲಿ ಪೋಲೀಸರು ಕಾಣುವುದೇ ಅಪರೂಪ. ಆದರೆ ಎಲ್ಲೆಲ್ಲೂ ‘ಸಿ ಸಿ ಟೀವಿ’ ಕ್ಯಾಮರಗಳ ಅಗೋಚರ ಕಣ್ಣುಗಳು. ನಮ್ಮ ಪುರಾಣದ ದೇವೇಂದ್ರನಿಗಿರುವಂತೆ ಕತಾರೂ ಸಹಸ್ರಾಕ್ಷ! ವೆಹಿಕಲ್ ಓಡಿಸುವವರು ನಿಯಮ ಮುರಿದರೆ ತಕ್ಷಣ ಅವರಿಗೆ ನೋಟೀಸ್ ಜಾರಿಯಾಗುವುದು. ಪ್ರತಿ ತಪ್ಪಿಗೆ ಕೆಲವು ಪಾಯಿಂಟ್‌ಗಳು. ಅದು ನಿಗದಿತ ಸಂಖ್ಯೆ ಮೀರಿದರೆ ವಾಹನ ಚಲಾವಣೆಯ ಲೈಸೆನ್ಸನ್ನೇ ಕಳೆದುಕೊಳ್ಳಬೇಕಾಗುವುದು.

ಆಕ್ಸಿಡೆಂಟ್ ಮಾಡಿದರೆ ಕತ್ತಲವಾಸ ಗ್ಯಾರಂಟಿ. ಅರಸರು ಮತ್ತು ಅರಸು ಮನೆತನದವರು ವಾಸಿಸುವ ಪ್ರದೇಶಕ್ಕೆ ಪ್ರವೇಶವೇ ಇಲ್ಲ. ಅಲ್ಲಿ ಹೋಗುವುದು, ಫೋಟೋ ಇತ್ಯಾದಿ ತೆಗೆಯುವುದು ಗುರುತರವಾದ ಅಪರಾಧ. ಈಗೀಗ ಕತಾರಲ್ಲಿ ನಿಗದಿತ ಪ್ರದೇಶಗಳಲ್ಲಿ ಹೈರೈಜ್ಡ್ ಬಿಲ್ಡಿಂಗುಗಳು ಬರುತ್ತಿವೆ. ಸಮುದ್ರದ ಬೀಚಿನ ಉದ್ದಕ್ಕೂ ಕಟ್ಟಲಾಗಿರುವ ಗಗನ ಚುಂಬಿಗಳು ತಮ್ಮ ವಿಶಿಷ್ಟ ವಿನ್ಯಾಸ, ಮತ್ತು ಬೃಹದ್ ಗಾತ್ರದಿಂದ ನಮ್ಮನ್ನು ವಿಸ್ಮಿತಗೊಳಿಸುವಂತಿವೆ. ಎಲ್ಲೆಲ್ಲೂ ಖರ್ಜೂರದ ಮರಗಳು. ಅಲ್ಲಲ್ಲಿ ಸಣ್ಣಸಣ್ಣ ಕುರುಚಲು ಗಿಡಗಳು. ಬೇರೆ ಜಾತಿಯ, ಎತ್ತರದ ಮರಗಳು ಇಲ್ಲಿ ಕಾಣವು. ಖರ್ಜೂರ ತನ್ನದೇ ಸೀಜನ್ನಲ್ಲಿ ಹಣ್ಣು ಬಿಡುತ್ತದೆ.

ಯಾರು ಬೇಕಾದರೂ ಅವನ್ನು ಕಿತ್ತು ತಿನ್ನಬಹುದು. ಆದರೆ ಮರಕ್ಕೆ ಯಾವುದೇ ರೀತಿಯ ಘಾಸಿ ಮಾಡುವಂತಿಲ್ಲ. ಅದು ಶಿಕ್ಷಾರ್ಹ ಅಪರಾಧ. ಮರಗಳನ್ನೇ ತರಿಸಿ ಬೇಕಾದಲ್ಲಿ ಅವನ್ನು ನಟ್ಟು ಬೆಳೆಸಲಾಗುವುದಂತೆ. ಹಾಗೇ ರಸ್ತೆ ಬದಿಯ ಹೂಗಿಡಗಳನ್ನು, ಆಯಾ ಕಾಲಕ್ಕೆ ತಕ್ಕಂತೆ ಬೆಳೆಸಲಾಗುವುದಂತೆ. ಇನ್ನು ಮರಗಿಡಗಳಿಗೆ ವಿದ್ಯುತ್ ಅಲಂಕಾರ ಸಾಮಾನ್ಯ. ಇಲ್ಲಿ ವಿದ್ಯುತ್ತಿಗೆ ಬರವಿಲ್ಲ. ಗ್ಯಾಸ್ ಮತ್ತು ಪೆಟ್ರೋಲ್ ತೀರ ಅಗ್ಗ. ಪೆಟ್ರೋಲಿಗಿಂತ ಕುಡಿಯುವ ನೀರಿನ ಬೆಲೆ ಹೆಚ್ಚು! ಅವರು ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಿ ಜನಕ್ಕೆ ಒದಗಿಸಬೇಕಾಗಿರುವುದರಿಂದ ಆ ಪ್ರಾಸೆಸ್ಸಿಗೆ ತಗಲುವ ಖರ್ಚು ಹೆಚ್ಚು. ಸಿದ್ಧಪಡಿಸಿದ ನೀರು ಮಾತ್ರ ತುಂಬ ರುಚಿ! ಅದನ್ನು ಸಮುದ್ರದ ನೀರೆಂದು ಕಲ್ಪಿಸುವುದೇ ಸಾಧ್ಯವಿಲ್ಲ!

ರಸ್ತೆಗಳೋ ದೇಶೋವಿಶಾಲ. ಈಗ ಬೆಂಗಳೂರಲ್ಲಿ ಆಗುತ್ತಿರುವಂತೆ ಕತಾರಿನಲ್ಲೂ ಮೆಟ್ರೋ ಕೆಲಸ ತ್ವರಿತ ಗತಿಯಲ್ಲಿ ನಡೆಯುತ್ತಾ ಇದೆ. ಆದರೆ ಕೆಲಸ ಹೆಚ್ಚು ಶಿಸ್ತುಬದ್ಧವಾಗಿ! ಇನ್ನು ಎರಡು ವರ್ಷಗಳಲ್ಲಿ ಮೆಟ್ರೋ ಕೆಲಸ ಪೂರ್ಣವಾಗುತ್ತದೆ. ಇದೆಲ್ಲಾ ವಿಶ್ವ ಫುಟ್ಬಾಲಿಗೆ ನಡೆಯುತ್ತಿರುವ ಸಿದ್ಧತೆ. ‘ಎರಡು ವರ್ಷಗಳ ನಂತರ ನೀವು ಕತಾರಿಗೆ ಬಂದರೆ ಹೊಸಾ ನಗರವನ್ನೇ ನೋಡುವಿರಿ!’ ಎನ್ನುತ್ತಾರೆ ಸತೀಶ್. ಅವರು ತಮ್ಮ ಕಂಪನಿಯಿಂದಲೇ ಅನೇಕ ಗಗನ ಚುಂಬಿಗಳನ್ನು ಕಟ್ಟಿದ್ದಾರೆ.

ಬೆಹರೆನ್ನಿಗೆ ಸೇತುವೆ ಮಾರ್ಗ ನಿರ್ಮಿಸುವ ಯೋಜನೆಯೂ ಇತ್ತಂತೆ! ಆದರೆ ಈಗ ಬಹಳ ದುಬಾರಿಯ ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಅದಕ್ಕೆ ಕಾರಣ ವಿಶ್ವ ಮಾರುಕಟ್ಟೆಯಲ್ಲಿ ಎಣ್ಣೆ ಬೆಲೆಯ ಕುಸಿತ. ಅಮೆರಿಕಾ ಮೊದಲಾದ ದೇಶಗಳು ಗ್ಯಾಸ್‌ ನಿರ್ಮಾಣದ ಬೃಹದ್ ಯೋಜನೆಗಳನ್ನು ಕೈಗೊಂಡಿವೆ. ಇದು ತೈಲ ರಾಷ್ಟ್ರಗಳನ್ನು ಸ್ವಲ್ಪ ವಿಚಲಿತಗೊಳಿಸಿದೆ. ಈಗಲೂ ಕತಾರಲ್ಲಿ ತೈಲನಿಧಿಗಳು ಕಮ್ಮಿಯಾಗಿಲ್ಲ. ಸಮುದ್ರದಲ್ಲಿ ಭೂಮಿಯನ್ನು ಕೊರೆದು ಎಣ್ಣೆ ತೆಗೆಯಲಾಗುತ್ತದೆ. ಇನ್ನೂ ಕನಿಷ್ಠಪಕ್ಷ ನೂರು ವರ್ಷ ತೈಲಧಾರೆಗೆ ಬರ ಬರಲಾರದು ಎಂಬುದು ಕೆಲವರ ಅಂಬೋಣ! ಸರಿ! ಆನಂತರದ ಕಥೆ?

ರಸ್ತೆಗಳಲ್ಲಿ ಅಷ್ಟೊಂದು ವೆಹಿಕಲ್ ಸಂಚರಿಸುತ್ತವೆ! ಆದರೆ ಟ್ರಾಫಿಕ್ ಜಾಮ್ ಎಂಬುದಿಲ್ಲ. ಪ್ರಾಣಿಗಳು ರಸ್ತೆಗೆ ಅಡ್ಡಬರುವ ಸಾಧ್ಯತೆಯೂ ಇಲ್ಲ. ಅಸಲಿ ಮಾತೆಂದರೆ ನಗರದ ಒಳಗೆ ಪ್ರಾಣಿಗಳಿಗೆ ಪ್ರವೇಶವೇ ಇಲ್ಲ. ಕತಾರಲ್ಲಿ ಹುಟ್ಟಿ ಬೆಳೆದ ಒಂದು ಕನ್ನಡ ಮಗು ಬೆಂಗಳೂರಿಗೆ ಮೊದಲ ಬಾರಿ ಬಂದಾಗ ರಸ್ತೆಯಲ್ಲಿ ಒಂದು ಹಸುವನ್ನು ನೋಡಿ ‘...ಅಮ್ಮಾ! ಜೀವಂತ ಹಸುವನ್ನು ನೋಡು’ ಎಂದು ಸಂಭ್ರಮಾಶ್ಚರ್ಯದಿಂದ ಗಟ್ಟಿಯಾಗಿ ಕಿರುಚಿಕೊಂಡಿತ್ತಂತೆ! ಇನ್ನು ನಾಯಿಗಳ ಸಮಾಚಾರ! ಒಂದಾದರೂ ಹಡಬೆ ನಾಯಿ ಬೀದಿಗಳಲ್ಲಿ ಕಂಡಿದ್ದರೆ ಕೇಳಿ! ಕಾಗೆಗಳಂತೂ ಇಲ್ಲಿ ಬದುಕಲಿಕ್ಕೇ ಸಾಧ್ಯವಿಲ್ಲ! ಗುಬ್ಬಿಗಳ ಜಾತಿಯ ಹಕ್ಕಿಗಳು ಆಗಾಗ ಒಮ್ಮೊಮ್ಮೆ ಕಂಡಾವು.

ಪಾರಿವಾಳಗಳು ಮಾತ್ರ ದಂಡಿಯಾಗಿವೆ. ನಾಯಿ ಇಲ್ಲದ ಊರಲ್ಲಿ ಬೆಕ್ಕುಗಳ ಸಮೃದ್ಧಿಯೇ ಸಮೃದ್ಧಿ! ಎಲ್ಲೆಲ್ಲೂ ಬೆಕ್ಕುಗಳು. ಜನ ತಿಂದು ಚೆಲ್ಲಿದ ಆಹಾರವನ್ನು ಮೆದ್ದು ನಗರವನ್ನು ಶುಚಿಯಾಗಿಡಲು ಈ ಬೆಕ್ಕುಗಳು ಉಪಯೋಗಕ್ಕೆ ಬೀಳುತ್ತವೆ! ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ನಮ್ಮಲ್ಲಿ ಕಾಣುವಂತೆ ರಸ್ತೆ ಬದಿಯಲ್ಲಿ ಕಸದ ರಾಶಿ ಕತಾರಲ್ಲಿ ಕಾಣಲಾರದು! ವಿಶ್ವದ ಬೆರಳೆಣಿಕೆಯ ಶ್ರೀಮಂತ ರಾಷ್ಟ್ರಗಳಲ್ಲಿ ಕತಾರ್ ಒಂದು! ಆದರೆ ಇಲ್ಲಿಯೂ ಬಡವರು ದಂಡಿಯಾಗಿ ಇದ್ದಾರೆ. ಅವರೆಲ್ಲಾ ವಲಸಿಗರೇ! ಕತಾರ್ ಮೂಲನಿವಾಸಿಗಳ ಲೆಕ್ಕ ಹಿಡಿದು ತಲಾವರಮಾನ ಲೆಕ್ಕ ಹಾಕುವುದರಿಂದ ಕತಾರ್ ಶ್ರೀಮಂತ ರಾಷ್ಟ್ರ!

ಸ್ಥಳೀಯರದ್ದು ತುಂಬ ಅದ್ದೂರಿಯ ಸುಖೀಲೋಲುಪ್ತ ಜೀವನ! ಇಲ್ಲಿ ಗಂಡನ್ನು ಹೆಣ್ಣು ಒಪ್ಪಿ ಮದುವೆಯಾಗಬೇಕೆಂದರೆ ಹುಡುಗಿಗೆ ಮೈ ತುಂಬ ಚಿನ್ನದ ಆಭರಣ ಹೇರಬೇಕು. ಮೇಲೆ ಕನ್ಯಾಶುಲ್ಕ ಬೇರೆ ಕೊಡಬೇಕು! ಆದರೆ ಗಂಡಸರು ಮಾತ್ರ ಬಂಗಾರ ಧರಿಸುವುದಿಲ್ಲ. ವಧುಗಳ ಡಿಮ್ಯಾಂಡ್ ಹೆಚ್ಚಾಗಿರುವುದರಿಂದ ಇಲ್ಲಿಯ ತರುಣರಿಗೆ ಪಾಕಿಸ್ತಾನ್, ಬಾಂಗ್ಲ ಮೊದಲಾದ ಹೊರದೇಶಗಳಿಂದ ಹೆಣ್ಣುಗಳನ್ನು ತರುವುದು ಅನಿವಾರ್ಯವಾಗಿದೆಯಂತೆ. ಬಹುಪತ್ನಿತ್ವ ಈ ದೇಶದಲ್ಲಿ ನಿಷಿದ್ಧವಲ್ಲ. ಒಂದೇ ಬಂಗಲೆಯಲ್ಲಿ ಪತಿ ತನ್ನ ಪತ್ನಿಯರನ್ನು ಬೇರೆ ಬೇರೆ ಅಂತಸ್ತುಗಳಲ್ಲಿ ಇರಿಸಿ ಸಂಸಾರ ತೂಗಿಸುವನಂತೆ! ಮನೆಯಲ್ಲಿ ಕನಿಷ್ಠ ಇಬ್ಬರು ಮನೆಕೆಲಸಗಾರರು ಪ್ರತಿಯೊಬ್ಬ ಹೆಂಡತಿಗೂ ಇರಲೇ ಬೇಕು! ಮದುವೆಯ ಒಪ್ಪಂದಗಳಲ್ಲಿ ಅದೂ ಒಂದು!

ರಸ್ತೆಯ ಇಕ್ಕೆಲದಲ್ಲೂ ಅರಾಬಿಕ್ ಮತ್ತು ಇಂಗ್ಲಿಷ್ ಭಾಷೆಯ ನಾಮಫಲಕಗಳನ್ನು ನೋಡಬಹುದು. ಹೆಚ್ಚಿನ ಹೆಸರುಗಳು ‘ಅಲ್’ ಇಂದ ಶುರು ಆಗುತ್ತವೆ. ಆರ್ಟಿಕಲ್ ‘ದ’ ಇದ್ದಂತೆ ಅದು! ನಮ್ಮ ಕನ್ನಡಿಗರಾದರೋ ತಮ್ಮತಮ್ಮಲ್ಲಿ ಕನ್ನಡ ಬಳಸುವರಾದರೂ ಅರಾಬಿಕ್, ತಮಿಳು, ಮಲಯಾಳಂ, ಇಂಗ್ಲಿಷ್, ಹಿಂದಿ, ಉರ್ದು– ಹೀಗೆ ಬಹುಭಾಷಾ ಪರಿಣತರೇ! ಇನ್ನು ಅರಾಬಿಕ್ ಕೇಳುವುದೇ ಒಂದು ವಿಶೇಷ ಅನುಭವ. ಕ್ಯಾಕರಿಸಿದಂತೆ ಉಚ್ಚಾರಣೆ ಬರುವ ಅರಾಬಿಕ್ ಕಿವಿಗೆ ತನ್ನ ಪಲುಕುಗಳಿಂದ ಬಹು ಇಂಪು. ಭಾವಾಭಿವ್ಯಕ್ತಿಗೆ ಲಾಯಕ್ಕಾದ ಭಾಷೆ. ಒಂದು ತೃಣ ಅರ್ಥವಾಗದಿದ್ದರೂ ಭಾಷೆಯ ಏರಿಳಿತ, ಘಾತ, ಉಚ್ಚಾರಣ ಕ್ರಮದಿಂದ ಅನ್ಯಭಾಷಿಕರಿಗೂ ತಕ್ಕಮಟ್ಟಿಗೆ ತೆರೆದುಕೊಳ್ಳುವಂತಿರುತ್ತದೆ. ಈ ಮಾತುಗಾರಿಕೆಯನ್ನೇ ಸ್ವಲ್ಪ ನಯ ಮಾಡಿದಂತೆ ಅವರ ಹಾಡುಗಳಿವೆ!

ಬಾಯಿತುಂಬ ಉಸಿರುತುಂಬಿ ಸ್ವರವಾದ್ಯ ನುಡಿಸಿದಂತೆ ಕಿವಿಗೆ ಹಾಡಿನ ಮಧುರ ವಿತಾನಗಳು ಇಂಪಾಗಿ ಕೇಳುತ್ತವೆ. ಚಿತ್ರವಿಚಿತ್ರ ಚರ್ಮವಾದ್ಯಗಳನ್ನು ನುಡಿಸುತ್ತಾ, ತಂತಿ ವಾದ್ಯಗಳನ್ನು ನುಡಿಸುತ್ತಾ, ಸ್ವರ ವಾದ್ಯಗಳನ್ನು ನುಡಿಸುತ್ತಾ ಅವರು ಹಾಡುವ ಅನೇಕ ಆಲ್ಬಂಗಳನ್ನು  ನಾನು ಎಡೆಬಿಡದೆ ನೋಡಿದೆ. ಕೋರಸ್ ಇಲ್ಲಿನ ಗಾಯನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ನಾಯಕ, ನಾಯಕಿ ತೆರೆಯ ಮೇಲೆ ಕಾಣುವರು. ಪ್ರಧಾನ ಗಾಯನ ಅವರದ್ದೇ. ಕೆಲವೊಮ್ಮೆ ಒಬ್ಬೊಬ್ಬರೇ ಹಾಡುವ ಸೋಲೋ. ಆದರೆ ಮೆಲ್ದನಿಯ ಗುಂಪಿನ ಪಲ್ಲವಿಯ ಅನುರಣನ ಬಹಳ ಹಾಡುಗಳಿಗೆ. ಅಬ್ಬರವಿಲ್ಲದ ಕಾಲು ಕುಣಿಸುವ ರಿದಮ್. ಕಾರ್ಯಕ್ರಮಗಳಲ್ಲಿ ಕೀಬೋರ್ಡ್ ಕಾಣಿಸಿದ್ದು ಕಡಿಮೆ.

ಕತಾರಿಗೆ ಶುಕ್ರವಾರ ರಜಾದಿನ. ನಮ್ಮಲ್ಲಿ ಭಾನುವಾರ ಇದ್ದ ಹಾಗೆ. ಹಾಗಾಗಿ ರಾಜ್ಯೋತ್ಸವದ ಕಾರ್ಯಕ್ರಮ ಶುಕ್ರವಾರ. ಬೆಳಿಗ್ಗೆ ಎದ್ದು ವಾಕಿಂಗಿಗೆ ರಸ್ತೆಗೆ ಇಳಿದಾಗ ಅಂಗಳ ಒದ್ದೆ ಆಗಿದ್ದ ಕಂಡು ಸಂಜಯ ‘ಅಣ್ಣಾ... ರಾತ್ರಿ ಯಾವಾಗಲೋ ಮಳೆ ಆದಂತಿದೆ’ ಎಂದಾಗ ನನಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ನನಗೆ ಸ್ನೇಹಿತರು ಹೇಳಿದಂತೆ ಕತಾರಿನಲ್ಲಿ ಇಡೀ ವರ್ಷಕ್ಕೆ ಒಂದು ಬಾರಿ, ಅಮಮಾ ಎಂದರೆ ಎರಡು ಬಾರಿ ಮಳೆಯಾಗಬಹುದು! ಅಷ್ಟೆ. ಅಂಗಳವನ್ನು ಒದ್ದೆಮಾಡಿದ್ದ ನೀರು ಖರ್ಜೂರವೃಕ್ಷಕ್ಕೆ ಹಾಕಿದ್ದು! ಮಳೆಯ ನೀರಲ್ಲ. (ಮಳೆ ಬಂದಾಗ ಒಳಚರಂಡಿಯ ವ್ಯವಸ್ಥೆ ಅಷ್ಟೊಂದು ಸಮರ್ಪಕವಾಗಿ ಇಲ್ಲದಿರುವುದರಿಂದ ರಸ್ತೆಗಳಲ್ಲಿ ನೀರು ನಿಲ್ಲುವುದು ಸಾಮಾನ್ಯವಂತೆ).

ಬ್ರೇಕ್‌ಫಾಸ್ಟ್ ಮುಗಿಸಿಕೊಂಡು ನಾವು ರೂಮಿಗೆ ಹಿಂದಿರುಗಿದರೆ ದೂರದರ್ಶನದ ಚಾನಲ್ ಒಂದರಲ್ಲಿ ‘ಕ್ಯಾಮಲ್ ರೇಸ್’ ನಡೆಯುತ್ತಾ ಇತ್ತು. ನಮ್ಮಲ್ಲಿ ಹಾರ್ಸ್ ರೇಸ್ ನಡೆಯುವುದಲ್ಲ ಹಾಗೆ! ಆದರೆ ಇಲ್ಲಿ ಜಾಕಿ ಇರುವುದಿಲ್ಲ. ಒಂಟೆಯ ಬೆನ್ನಮೇಲೆ ಸವಾರನ ಬದಲು ಬೊಂಬೆಯಂಥದ್ದು ಏನೋ ಇರುತ್ತದೆ. ಒಂಟೆಗಳನ್ನು ನಿಯಂತ್ರಿಸುವುದು ಹೇಗೋ ತಿಳಿಯದು. ಮರಳ ಟ್ರಾಕ್‌ನಲ್ಲಿ ಕಾಲು ಕಿತ್ತು ಕಿತ್ತು ಓಡುವ ಒಂಟೆಗಳ ದೇಹದ ದೃಢವಾದ ಸ್ನಾಯುಗಳ ಚಲನೆ ತನ್ನಷ್ಟಕ್ಕೇ ಆಕರ್ಷಕ. ರೇಸಿನಲ್ಲಿ ಮಾತ್ರವಲ್ಲ ಸಂಗೀತದ ಆಲ್ಬಂಗಳಲ್ಲೂ ಒಂಟೆ ಒಂದು ಆಕರ್ಷಕ ಪ್ರಾಪರ್ಟಿ.

ಬಿಳೀಗೌನಿನ ಯುವಕನೊಬ್ಬ ಒಂಟೆಯ ಸಮೇತ ಬಂದು ಅದನ್ನು ಖರ್ಜೂರದ ಮರದ ಮಧ್ಯಕ್ಕೆ ಕಟ್ಟಿ ಹಾಡಲಿಕ್ಕೆ ಶುರು ಮಾಡುತ್ತಾನೆ. ಪಾಳುಬಿದ್ದ ಕೋಟೆಯಂಥ ಒಂದು ಲೊಕೇಷನ್. ಕೋಟೆಯ ಬತೇರಿಯ ಎತ್ತರದಲ್ಲಿ ತೊಡೆಗಾಣ್ಕೆಯ ಚೆಲುವೆಯೊಬ್ಬಳು ಕಾಣುತ್ತಾಳೆ. ಒಂಟೆ, ಕೊರಳು ನಿಮಿರಿಸಿ ಖರ್ಜೂರದ ಗರಿಗಳಿಗೆ ಬಾಯಿ ಹಾಕಲು ಯತ್ನಿಸುತ್ತದೆ. ಗಾಯಕ ಈಗ ದಮಡಿಯಂಥ ವಾದ್ಯವನ್ನು ಬಡಿಯುತ್ತಾ ಅಲುಗುಕಂಠದಲ್ಲಿ ತನ್ನ ವಿರಹವನ್ನು ತೋಡಿಕೊಳ್ಳತೊಡಗುತ್ತಾನೆ. ಹಾಡು ಮುಗಿಯುವ ವೇಳೆಗೆ ನಾಯಕ – ನಾಯಕಿ ಮುಖಾಮುಖಿಯಾಗುತ್ತಾರೆ. ಅಸೀಮವಾದ ಮರಳುಗಾಡಲ್ಲಿ ಅವರ ಒಂಟೆ ಸವಾರಿ ಕಾಣುತ್ತಾ ನಿಧಾನಕ್ಕೆ ಮರಳದಿಣ್ಣೆಯ ಹಿಂದೆ ಮರೆಯಾಗಿ ಹೋಗುತ್ತದೆ.

ಇನ್ನೊಂದು ಆಲ್ಬಂನಲ್ಲಿ ನಾಯಕಿ ನದಿಯೊಂದರ ದಂಡೆಯ ಮೇಲೆ ನಿಂತಿದ್ದಾಳೆ! ಮರಳುಗಾಡಿನಲ್ಲಿ ನದಿಯೇ? ಅದು ಮರಳಿನ ನದಿ. ಮರಳ ನದಿಯಲ್ಲಿ ಮರಳ ಅಲೆಗಳು. ಮರಳ ಕಣ ಮರಳ ಕಣಕ್ಕೆ ಉಜ್ಜುವುದರಿಂದ ಉಂಟಾಗುವ ಸರ್ರ್ ಎಂಬ ಸದ್ದು. ಭಯ ಹುಟ್ಟಿಸುವಂಥ ದೃಶ್ಯ ಅದು. ಮಧ್ಯಾಹ್ನ ನಾವು ಕಾರ್ಯಕ್ರಮ ನಡೆಯಬೇಕಾಗಿದ್ದ ಹಯ್ಸ್ಕೂಲಿನ ಆಡಿಟೋರಿಯಮ್ಮಿನಲ್ಲಿ ಸೇರಿದೆವು. ಅರ್ಧಗಂಟೆಯಲ್ಲಿ ಥಿಯೇಟರ್ ಭರ್ತಿ. ಬಾಲ್ಕನಿಯಲ್ಲಿ ಪೊಲೀಸ್ ಮಂದಿ ಹದ್ದಿನ ಕಣ್ಣು ಬಿಟ್ಟು ಕಾರ್ಯಕ್ರಮ ನೋಡಲು ಬಂದಿದ್ದಾರೆ. ಕತಾರಿನ ಬೇರೆ ಬೇರೆ ಕೂಟಗಳು ಕಾರ್ಯಕ್ರಮ ನಡೆಸಿಕೊಟ್ಟವು. ಸದಭಿರುಚಿಯ ಸುಂದರ ಪ್ರದರ್ಶನಗಳು. ಆಮೇಲೆ ವೇದಿಕೆಯ ಕಾರ್ಯಕ್ರಮ. ಒಂದು ಗಂಟೆಯಲ್ಲಿ ವೇದಿಕೆಯ ಕಾರ್ಯಕ್ರಮ ಮುಗಿದು ಪ್ರಭಾತ್ ಕಲಾವಿದರ ‘ಕರ್ನಾಟಕ ವೈಭವ’ಕ್ಕೆ ವೇದಿಕೆ ತೆರವು ಮಾಡಿಕೊಡಲಾಯಿತು.

ನೃತ್ಯ, ನಾಟಕ, ಬ್ಯಾಲೆಗಳನ್ನು ನೋಡಿದಷ್ಟೇ ಆಸ್ಥೆಯಿಂದ ಕತಾರ್ ಕನ್ನಡಿಗರು ನಮ್ಮ ಭಾಷಣಗಳನ್ನೂ ಕೇಳಿದರು! ಅವರ ಅಭಿಮಾನ ನಮ್ಮ ಎದೆಗಳನ್ನು ಬೆಚ್ಚಗೆ ಮಾಡಿದ್ದರಲ್ಲಿ ಏನೇನೂ ಆಶ್ಚರ್ಯವಿಲ್ಲ. ನಾವು ಕತಾರಿನಿಂದ ಹೊರಟಾಗ ವಿಮಾನ ನಿಲ್ದಾಣಕ್ಕೆ ನಮ್ಮನ್ನು ಬೀಳ್ಕೊಡಲು ಸಂಘದ ಹಿರಿಯ, ಯುವ ಸದಸ್ಯರೆಲ್ಲಾ ತಮ್ಮ ಕುಟುಂಬ ಸಮೇತ ಆಗಮಿಸಿದ್ದರು. ಕ್ಯಾಮರಾಗಳ ಕಣ್ಕ್ಲಿಕ್ಕಿಗೆ ಇತಿಮಿತಿ ಇಲ್ಲ. ಭಾಷೆ ಎಂಥ ಬಾಂಧವ್ಯ ಸೃಷ್ಟಿಸಬಲ್ಲದು ಎಂಬುದು ಆಗ ನನ್ನ ಅನುಭವಕ್ಕೆ ಬಂತು. ನಮ್ಮ ಜೆಟ್ ಏರ್ವೇಸ್ ವಿಮಾನ ಆಕಾಶಕ್ಕೆ ಉಡ್ಡಯಿಣಿಸಿದಾಗ ರತ್ನಖಚಿತಾಭರಣಗಳಿಂದ ಅಲಂಕೃತಳಾದ ಅರಬ್ಬೀ ಸುಂದರಿಯಂತೆ ದೋಹಾನಗರ ಆಳದಲಿ ಕಂಗೊಳಿಸುತ್ತಿತ್ತು. ‘ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ’ ಎಂಬ ಕೆ.ಎಸ್.ನ. ಸಾಲು, ನನಗೆ ಅದೇಕೋ ಥಟ್ಟನೆ ನೆನಪಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT