ADVERTISEMENT

ಮಳೆ ಬಂದು ನಿಂತಾಗ

ವಿ.ಪ್ರಾಣೇಶರಾವ್
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
ಮಳೆ ಬಂದು ನಿಂತಾಗ
ಮಳೆ ಬಂದು ನಿಂತಾಗ   

ಮಳೆ ಬಂದು ನಿಂತಾಗ

ಹಸಿರುಕ್ಕಿ ಹರಿವಾಗ

ಹಸಿರುಟ್ಟು ಭೂರಮೆಯ

ADVERTISEMENT

ನೋಡಲೆನಿತು ಸೊಗಸು!

ತಂಪಾದ ಹವೆಯಲ್ಲಿ

ಪಶ್ಚಿಮದ ಬಾನಲ್ಲಿ

ಬಣ್ಣಬಣ್ಣದ ತುಣುಕು

ಇಂದ್ರ ಧನಸ್ಸು!

ತಂಗಾಳಿ ಬೀಸುತಿರೆ

ಜೋಗುಳವ ಹಾಡುತಿರೆ

ಗಿಳಿಮರಿಗೆ ಕುಳಿತಲ್ಲೇ

ನಿದ್ದೆ ಜೋಂಪು!

ತೆಂಗು ಗರಿಗಳ ನಡುವೆ

ಕುಳಿತ ಕೋಗಿಲೆ ಹಾಡು

ದಾರಿಹೋಕರ ಕಿವಿಗೆ

ಎನಿತು ಇಂಪು!

ಕೂಗಳತೆ ದೂರದಲ್ಲಿ

ಮಾಂದಳಿರ ತೋಪಿನಲಿ

ನೀಲಿ ಹರಿಸಿನ ನವಿಲ

ಕೇಕೆ ಕೂಗು!

ಹುಲ್ಲುಗರಿಗಳ ಮೇಲೆ

ನೀರಹನಿ ಮಿನುಗಿರಲು

ಸಗ್ಗವೇ ಧರೆಗಿಳಿದ

ಊರ ಬಯಲು!

ಹಸಿರು ಎಲೆಗಳ ನಡುವೆ

ಹಸಿರು ಹಾವದು ಹರಿದು

ಬಿದ್ದ ಬಿಸಿಲಿಗೆ

ಫಳಫಳನೆ ಹೊಳೆಯುತಿದೆ!

ಮಳೆನಿಂತು ಎಳೆಬಿಸಿಲು

ಎಲ್ಲೆಡೆಗೆ ಸುರಿದಿರಲು

ಚಂಗನೆಯ ಎಳೆಗರು

ನೆಗೆದಾಡಿದೆ!

ಸುರಿದ ಮಳೆಯದು

ನಿಂತುದನು ಕಾಣುತ್ತ

ಹಿಡಿದ ಕೊಡೆಗಳ ಮುದುರಿ

ನಡೆದಿರುವ ಜನರು

ಗುಡಿಸಿಲೊಳಗೆಲ್ಲ

ನಿಂತ ನೀರನು

ಜನರು ಮೊಗೆಮೊಗೆದು

ಮನೆ ಹೊರಗೆ ಚೆಲ್ಲುತಿಹರು

ಮಳೆ ನಿಂತುದನು ಕಂಡು

ಮನೆಯಲ್ಲಿ ಗಡಿಬಿಡಿ

ಮಕ್ಕಳನ್ನು ಶಾಲೆಗೆ

ಕಳಿಸಿಕೊಡಲೆಂದು

ಹತ್ತಿರದ ಶಾಲೆಯಲಿ

ಮೊಳಗೊ ಗಂಟೆಯ ಸದ್ದು

ಕಿರಿಕಿರಿಯ ಮೊಮ್ಮಗುವಿಗೆ

ಬಿತ್ತು ಬೆನ್ನಿಗೆ ಗುದ್ದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.