ADVERTISEMENT

ಸಮಾಜ ಭೈರವ

ಮೌನೇಶ ಎಲ್.ಬಡಿಗೇರ
Published 11 ಏಪ್ರಿಲ್ 2015, 19:30 IST
Last Updated 11 ಏಪ್ರಿಲ್ 2015, 19:30 IST
ಸಮಾಜ ಭೈರವ
ಸಮಾಜ ಭೈರವ   

ಅಸ್ಪೃಶ್ಯತೆ, ಅಸಮಾನತೆ, ಮುಂತಾದ ಶಬ್ದಗಳನ್ನು ಕೇಳುತ್ತಿದ್ದಂತೆ ಅದರ ಅಂತರಾತ್ಮದಲ್ಲೆಲ್ಲೋ ಅಮೂರ್ತವಾಗಿ ಅಂಬೇಡ್ಕರರು ಇದ್ದಾರೆ ಎಂದೇ ನನಗೆ ಅನಿಸುತ್ತದೆ. ನಾನು ಹುಟ್ಟಿದ್ದು ತಾಯಿಯ ಊರಾದ ಹುಬ್ಬಳ್ಳಿಯಲ್ಲೇ ಆದರೂ ನನ್ನ ಬಾಲ್ಯ, ಓದು, ಎಲ್ಲವೂ ಬೆಂಗಳೂರಿನಲ್ಲೇ ಕಳೆದಿದೆ. ನಾನು ಓದಿದ್ದು ಕ್ರೈಸ್ತ ಸಮುದಾಯದ ಕನ್ನಡಶಾಲೆಯಲ್ಲಿ.

ಆ ಕಾರಣದಿಂದಲೋ ಏನೋ ಈ ಜಾತಿಸರ್ಪದ ಭುಸುಗುಟ್ಟುವಿಕೆ ನನಗೆ ಅಷ್ಟಾಗಿ ತಟ್ಟಿಲ್ಲ. ಅಥವಾ ಅವೆಲ್ಲ ಇದ್ದಿದ್ದರೂ ಅವುಗಳ ಬಗ್ಗೆ ಗಮನ ಹರಿಸುವಂಥ, ನನ್ನ ಅಸ್ತಿತ್ವವನ್ನೇ ಅಲ್ಲಾಡಿಸುವಂಥ ಯಾವ ಅನುಭವವೂ ನನಗೆ ಆಗಿಲ್ಲ ಎಂದೇ ಹೇಳಬೇಕು. ಹಾಗಾಗಿ ಅಂಬೇಡ್ಕರರೂ ನನ್ನ ಒಳಗನ್ನು ಅಷ್ಟು ಆವರಿಸಿಲ್ಲ ಎಂದು ಹೇಳಿದರೆ ಅದು ನನ್ನ ಅಪ್ರಾಮಾಣಿಕವಾದ ಮಾತಾಗುವುದಿಲ್ಲ. (ಹೀಗೆ ಹೇಳುವುದೂ ಇಂದು ಎಷ್ಟು ದೊಡ್ಡ ಪೊಲಿಟಿಕಲ್ ಇನ್‌ಕರೆಕ್ಟ್‌ನೆಸ್ ಅಥವಾ ಪೊಲಿಟಿಕಲ್ ಫೂಲಿಶ್‌ನೆಸ್ ಆದೀತು ಎಂಬ ಅರಿವಿದ್ದೂ ನಾನು ನನ್ನ ಒಳಗಿನ ಪ್ರಾಮಾಣಿಕತೆಗೇ ಜೋತುಬಿದ್ದು ಹೇಳುತ್ತಿದ್ದೇನೆ).

ಅಂಬೇಡ್ಕರ್ ನನ್ನ ಭಾವ ಮತ್ತು ಭವ ಕೋಶವನ್ನು ಪ್ರವೇಶಿಸಿದ್ದು ಶಾಲೆಯ ಇತಿಹಾಸದ ಪುಸ್ತಕಗಳ ಮೂಲಕವೇ. ಆ ದಿನಗಳಲ್ಲೇ

ನಾನು ದೂರದರ್ಶನದಲ್ಲಿ ನೋಡಿದ ಅಂಬೇಡ್ಕರರ ಜೀವನಗಾಥೆಯು ನನ್ನನ್ನು ಬಹುವಾಗಿ ಕಾಡಿದೆ. ಶಾಲೆಯಲ್ಲಿ ಸವರ್ಣೀಯರಿಂದ ನೀರನ್ನು ಮೇಲಿನಿಂದ ಹನಿಸಿಕೊಂಡು ಬೊಗಸೆಯೊಡ್ಡಿ ಕುಡಿಯುವ ಅಂಬೇಡ್ಕರ್, ಗಾಡಿಯಿಂದ ಕೆಳಗೆ ದಬ್ಬಿಸಿಕೊಂಡ ಅಂಬೇಡ್ಕರ್, ಬೀದಿ ದೀಪಗಳಲ್ಲಿ ಕುಳಿತು ಓದುತ್ತಿರುವ ಅಂಬೇಡ್ಕರ್– ಈ ತುಣುಕು ತುಣುಕು ಚಿತ್ರಗಳು ಮನಸ್ಸಿನಲ್ಲಿ ಉಳಿದುಬಿಟ್ಟಿವೆ.

ಚಿಕ್ಕಂದಿನಲ್ಲಿ ಬೇಸಿಗೆ ರಜೆಗೆ ತಾಯಿಯ ಊರಾದ ಹುಬ್ಬಳ್ಳಿಗೆ ಹೋಗುತ್ತಿದ್ದೆವು. ಹುಬ್ಬಳ್ಳಿಯಿಂದ ಏಳೆಂಟು ಕಿಲೋಮೀಟರ್ ಅಂತರದ ಒಂದು ಸಣ್ಣ ಹಳ್ಳಿ ನಮ್ಮ ತಾಯಿಯ ಊರು. ಒಮ್ಮೆ ನನ್ನ ಅಮ್ಮನಿಗೆ ಜ್ವರ ಬಂದಿತ್ತು. ಅದಾಗಲೇ ರಾತ್ರಿ ಹತ್ತು ಗಂಟೆ ಸುಮಾರು. ಊರಿನಲ್ಲಿದ್ದ ಡಾಕ್ಟರರ ಮನೆಗೇ ಹೋಗುವುದು ಅನಿವಾರ್ಯವಾಗಿ ಅಮ್ಮನನ್ನು ಕರೆದುಕೊಂಡು ಹೋದರು; ಆಗ ನಾನೂ ಜೊತೆಯಲ್ಲಿಯೇ ಇದ್ದೆ. ಆ ದೃಶ್ಯ ನನ್ನ ಒಳಬಾಳಿನಲ್ಲಿ ತುಂಬ ಅಸ್ಪಷ್ಟವಾಗಿ, ಅಪ್ರಿಯವಾಗಿ, ಸಣ್ಣ ಕೊರೆಯುವ ಸೂಜಿಯಂತೆ ಈಗಲೂ ಕುಳಿತುಕೊಂಡುಬಿಟ್ಟಿದೆ.

ಬಾಗಿಲು ತಟ್ಟುತ್ತಿದ್ದಂತೆ ಆ ಡಾಕ್ಟರ್ ಮನೆಯವರು ನಮ್ಮನ್ನು ಪಶುಗಳಂತೆ, ಎಲ್ಲಿ ಒಳಗೇ ಬಂದುಬಿಡುತ್ತಾರೋ ಎಂಬಂತೆ, ಅಲ್ಲಿಯೇ ತಡೆದುನಿಲ್ಲಿಸಿದರು. ದೂರ, ಕಾಂಪೌಂಡಿನಲ್ಲಿ ಕೂರಲು ಹೇಳಿದರು. ಡಾಕ್ಟರು ಬಂದು ಅಮ್ಮನನ್ನು ಮುಟ್ಟದೆ ಪರೀಕ್ಷಿಸಿ ಮಾತ್ರೆ ಕೊಟ್ಟಿದ್ದ!
ಈ ಘಟನೆ ನನ್ನನ್ನು ತೀವ್ರವಾಗಿ ಅಲ್ಲಾಡಿಸಿಬಿಟ್ಟಿತು. ಆವರೆಗೂ ನಾನೂ ಕೂಡ ಈ ಸಮಾಜದಲ್ಲಿ ಉತ್ತಮ ಕುಲಸಂಜಾತ ಎಂದೇ ಅಂದುಕೊಂಡಿದ್ದೆ. ಸಾಲದ್ದಕ್ಕೆ ನನಗೆ ಮುಂಜಿಯೂ ಆಗಿ ಜನಿವಾರವನ್ನೂ ಹಾಕಿದ್ದರು. (ಆ ಜನಿವಾರವನ್ನು ಕಿತ್ತೊಗೆದು ಹದಿನೈದು ವರ್ಷಗಳಾದವು ಆ ಮಾತು ಬೇರೆ).

ಅರೆ! ಇದೆಲ್ಲ ಏನು? ಎಂಬ ವಿಚಿತ್ರ ಮುಜುಗರ, ಗೊಂದಲ, ಅವಮಾನ ಎಲ್ಲವನ್ನೂ ಆ ವಯಸ್ಸಿನ ಸಂವೇದನೆಗೆ ತಕ್ಕಂತೆ ಅನುಭವಿಸಿದ್ದೆ. ಬೆಳೆಯುತ್ತ ಬೆಳೆಯುತ್ತ ಲೋಕದ ನೊಂದವರ ಅನುಭವಗಳ ಮುಂದೆ ಮೇಲಿನ ನನ್ನ ಸಣ್ಣ ಅನುಭವ ಯಾವ ದೊಡ್ಡದೂ ಅಲ್ಲ ಎನಿಸಿ ಅದನ್ನು ಮರೆತೇ ಬಿಟ್ಟಿದ್ದೆ. ಇಂದು ಸರ್ಕಾರ ಜಾತಿಗಣತಿ ಮಾಡಲು ಮುಂದಾಗಿದೆ. ಸಾಮಾಜಿಕವಾಗಿ ಇದು ತುಂಬ ಒಳ್ಳೆಯ ನಡೆಯೇ. ಆದರೆ ರಾಜಕೀಯಾತ್ಮಕವಾಗಿ ಓಟುಕೇಂದ್ರಿತ ಜಾತಿವಾರು ಗುಂಪುಗಳು ಹುಟ್ಟಿಕೊಳ್ಳುತ್ತವೆ ಎಂಬುದೂ ಅಷ್ಟೇ ಸತ್ಯ.

ಗಂಗಾ ಶುದ್ಧೀಕರಣ, ಸ್ವಚ್ಛ ಭಾರತ ಅಭಿಯಾನ, ಘರ್‌ವಾಪಸೀ ಮೊದಲಾದ ಜನಪ್ರಿಯ ‘ಮೋಡಿ’ಯ ಕಾಲದಲ್ಲಿ ‘ಬಾಬಾಸಾಹೇಬರಂಥ ಸಮಾಜ ಭೈರವ ಇಂದು ಇದ್ದಿದ್ದರೆ’ ಎಂದು ನೆನಪಿಸಿಕೊಳ್ಳುವುದೇ ಒಂದು ಅಪ್ಯಾಯಮಾನದ ಹಾಗೂ ಆತ್ಮಸ್ಥೈರ್ಯದ ಸಂಗತಿ ಎನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT