ADVERTISEMENT

ಸ್ತ್ರೀ ಶಕ್ತಿ ಗೌರಿ

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 19:30 IST
Last Updated 4 ಮಾರ್ಚ್ 2017, 19:30 IST
ಸ್ತ್ರೀ ಶಕ್ತಿ ಗೌರಿ
ಸ್ತ್ರೀ ಶಕ್ತಿ ಗೌರಿ   

ಜಾಹೀರಾತುಗಳು ಹಾಗೂ ಚಲನಚಿತ್ರಗಳ ನಿರ್ದೇಶಕಿ ಗೌರಿ ಶಿಂಧೆ. ಚಿತ್ರಕಥೆ ರೂಪಿಸುವುದರಲ್ಲೂ ಕೈಪಳಗಿಸಿಕೊಂಡವರು. ‘ಡಿಯರ್ ಜಿಂದಗಿ’ ಹಿಂದಿ ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಅವರದ್ದೇ. ಶಾರುಖ್ ಖಾನ್ ಹಾಗೂ ಆಲಿಯಾ ಭಟ್ ಆ ಚಿತ್ರದಲ್ಲಿ ಅಭಿನಯಿಸಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಆ ಸಿನಿಮಾ ತೆರೆಕಂಡಿತ್ತು. 2012ರಲ್ಲಿ ಗೌರಿ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರ ನಿರ್ದೇಶಿಸಿದ್ದರು. ಅದು ಅವರ ನಿರ್ದೇಶನದ ಮೊದಲ ಚಲನಚಿತ್ರ.

ವಿಮರ್ಶಕರೂ ಮೆಚ್ಚಿದ, ಗಲ್ಲಾಪೆಟ್ಟಿಗೆ ದೃಷ್ಟಿಯಲ್ಲೂ ಯಶಸ್ವಿಯಾದ ಈ ಸಿನಿಮಾಗಳು ವಸ್ತುವಿನ ಕಾರಣಕ್ಕೆ ಮುಖ್ಯವಾಗಿವೆ. ಎರಡೂ ಚಿತ್ರಗಳ ಪ್ರಧಾನ ಪಾತ್ರ ಮಹಿಳೆ. ಉದಯೋನ್ಮುಖ ಸಿನಿಮಾಟೊಗ್ರಾಫರ್ ಸೈರಾಳ ಕಥೆ ‘ಡಿಯರ್ ಜಿಂದಗಿ’ಯದ್ದು. ಡಾ. ಜಗ್ ಅವಳಿಗೆ ಬದುಕಿನ ಪಾಠ ಹೇಳುವ ಕಥನದ ಸಿನಿಮಾ ಅದು. ಅಡುಗೆ ಮಾಡುವುದರಲ್ಲಿ ಸೈ ಎನಿಸಿಕೊಂಡ ಶಶಿ ಎಂಬ ಗೃಹಿಣಿಯ ಸ್ಫೂರ್ತಿದಾಯಕ ಕಥೆ ಇರುವ ಚಿತ್ರ ‘ಇಂಗ್ಲಿಷ್ ವಿಂಗ್ಲಿಷ್’. ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದು ಹತ್ತಿರದವರಿಂದಲೇ ಮೂದಲಿಕೆಗೆ ಒಳಗಾಗುವ ಶಶಿ, ಆ ಭಾಷೆ ಕಲಿತು ಆತ್ಮಸ್ಥೈರ್ಯ ತುಂಬಿಕೊಳ್ಳುವ ಪ್ರಸಂಗಗಳನ್ನು ಚಿತ್ರ ಒಳಗೊಂಡಿದೆ.

ಫಿಲ್ಮ್‌ಫೇರ್ ಪ್ರಶಸ್ತಿಗೆ ಶ್ರೇಷ್ಠ ನಿರ್ದೇಶಕಿ ಹಾಗೂ ಶ್ರೇಷ್ಠ ಚೊಚ್ಚಿಲ ಚಿತ್ರ ವಿಭಾಗಗಳಲ್ಲಿ ಪರಿಗಣಿತವಾದ ಹೆಸರುಗಳಲ್ಲಿ ಗೌರಿ ಇದ್ದರು. ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರ ಅಂಥದ್ದೊಂದು ಗೌರವವನ್ನು ಅವರಿಗೆ ತಂದುಕೊಟ್ಟಿತು. 2011-12ನೇ ಸಾಲಿನ ಲಿಂಗಸೂಕ್ಷ್ಮ ಬಿಂಬಿಸುವ ಶ್ರೇಷ್ಠ ಮುಖ್ಯವಾಹಿನಿ ಚಿತ್ರವೆಂದು ‘ಇಂಗ್ಲಿಷ್ ವಿಂಗ್ಲಿಷ್’ ಪರಿಗಣಿತವಾಗಿ, ‘ಲಾಡ್ಲಿ ನ್ಯಾಷನಲ್ ಮೀಡಿಯಾ ಅವಾರ್ಡ್’ ಪಡೆದುಕೊಂಡಿತು.

ADVERTISEMENT

‘ಓ ಮ್ಯಾನ್’ (2001), ‘ವೈ ನಾಟ್’ (2004) ಎಂಬ ಕಿರುಚಿತ್ರಗಳನ್ನೂ ಗೌರಿ ನಿರ್ದೇಶಿಸಿದ್ದಾರೆ. ಅವುಗಳ ನಿರ್ಮಾಪಕಿಯೂ ಅವರೇ.

ಪುಣೆಯಲ್ಲಿ ಹುಟ್ಟಿ ಬೆಳೆದ ಗೌರಿ ಶಿಂಧೆ ‘ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್‌’ನಲ್ಲಿ ಕಲಿತರು. ಮುಂಬೈನಲ್ಲಿ ಜಾಹೀರಾತು ಮಾಧ್ಯಮದಲ್ಲಿ ಕೆಲಸ ಮಾಡಿದರು. ತಮ್ಮ ಕೌಶಲಗಳನ್ನು ಸಾಣೆಗೆ ಒಡ್ಡಿಕೊಳ್ಳಲೆಂದು ನ್ಯೂಯಾರ್ಕ್‌ಗೆ ತೆರಳಿ, ಸಿನಿಮಾ ನಿರ್ಮಾಣದ ಪಟ್ಟುಗಳನ್ನು ಅರಿತರು. ಭಾರತಕ್ಕೆ ಮರಳಿದ ಮೇಲೆ 100ಕ್ಕೂ ಹೆಚ್ಚು ಜಾಹೀರಾತು ಚಿತ್ರಗಳನ್ನು ಮಾಡಿದರು. ಆಮೇಲೆ ಚಲನಚಿತ್ರ ನಿರ್ದೇಶಕಿಯಾದರು.
ಜಾಹೀರಾತು ಹಾಗೂ ಸಿನಿಮಾಗಳ ನಿರ್ದೇಶಕ ಆರ್. ಬಾಲ್ಕಿ ಅವರ ಪತ್ನಿ ಗೌರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.