ADVERTISEMENT

ಹಾಲು ಇಳಿಸಲು ಇಂಜೆಕ್ಷನ್!

ಭಾವಸೇತು

ಸಹನಾ ಕಾಂತಬೈಲು
Published 11 ಫೆಬ್ರುವರಿ 2017, 19:30 IST
Last Updated 11 ಫೆಬ್ರುವರಿ 2017, 19:30 IST
ಚಿತ್ರ: ಮದನ್‌ ಸಿ.ಪಿ.
ಚಿತ್ರ: ಮದನ್‌ ಸಿ.ಪಿ.   
ಈಚೆಗೆ ಕೋಲ್ಕತ್ತದಲ್ಲಿರುವ ಸೋದರಮಾವನ ಮನೆಗೆ ಹೋಗಿದ್ದೆ. ಅವರ ಮನೆ ಇರುವುದು ಕೋಲ್ಕತ್ತದ ಹೃದಯ ಭಾಗದಲ್ಲಿರುವ ‘ನ್ಯಾಚುರಲ್ ಗ್ರೀನ್’ ಹೆಸರಿನ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ.
 
ಹೆಸರೇನೋ ‘ನ್ಯಾಚುರಲ್ ಗ್ರೀನ್’; ಅಲ್ಲಿ ಒಂದು ಮರವೂ ಇರಲಿಲ್ಲ! ವಿಷಯ ಅದಲ್ಲ. ಆ ಅಪಾರ್ಟ್‌ಮೆಂಟ್‌ಗೆ ಬೆಳಿಗ್ಗೆ ಮತ್ತು ಸಂಜೆ ಒಬ್ಬ ಸೈಕಲ್ ಮೇಲೆ ದೊಡ್ಡ ಅಲ್ಯುಮಿನಿಯಂ ಕ್ಯಾನ್‌ನಲ್ಲಿ ಹಾಲು ತರುತ್ತಿದ್ದ. ನನಗೆ ಆ ಹಾಲು ಎಲ್ಲಿಂದ ಬರುತ್ತದೆ ಎಂಬ ಕುತೂಹಲ ಮತ್ತು ಈ ಮಹಾನಗರದಲ್ಲೂ ಹಸು ಸಾಕುವವರು ಇದ್ದಾರಲ್ಲ ಎಂದು ಆಶ್ಚರ್ಯ! ಈ ಬಗ್ಗೆ ಅತ್ತೆಯಲ್ಲಿ ವಿಚಾರಿಸಿದೆ. ಅದಕ್ಕೆ ಅವರು ‘ಇಲ್ಲೇ ಪಕ್ಕದ ಇನ್ನೊಂದು ಬೀದಿಯಲ್ಲಿ ಹಸುಗಳನ್ನು ಸಾಕುತ್ತಾರೆ. ನೀನು ಅಲ್ಲಿಗೆ ಹೋಗಬಹುದು. ಬೇಕಾದರೆ ಕರೆದುಕೊಂಡು ಹೋಗುತ್ತೇನೆ’ ಎಂದರು. ಸ್ವತಃ ಹೈನುಗಾರಳಾದ ನನಗೆ ಹಸು ಸಾಕಾಣಿಕೆ ಎಂದರೆ ಮಕ್ಕಳನ್ನು ಸಲಹುವಷ್ಟೇ ಪ್ರೀತಿ. ‘ಈಗಲೇ ಹೋಗೋಣ’ ಎಂದು, ಅತ್ತೆ ಜೊತೆ ಅಲ್ಲಿನ ವಿಶೇಷ ವಾಹನವಾದ ಸೈಕಲ್‌ರಿಕ್ಷಾ ಏರಿ ಹೊರಟೆ.
 
ಹಸು ಇರುವ ಆ ಊರಿನ ಹೆಸರು ಜಗತ್‌ಪುರ. ಅಲ್ಲಿ ಮುಖ್ಯರಸ್ತೆಯ ಉದ್ದಕ್ಕೆ ಒಂದು ಬದಿಯಲ್ಲಿ ಬಹು ಸಂಖ್ಯೆಯಲ್ಲಿ ಹಟ್ಟಿಗಳಿದ್ದವು. ನೆಲದಿಂದ ಕೆಳಗೆ ಗೂಡಿನಂತೆ ಕಟ್ಟಲಾದ ಆ ಹಟ್ಟಿಗಳು ರೋಡಿನಲ್ಲಿ ನಡೆದು ಹೋಗುವವರಿಗೆ ಕಾಣುವುದಿಲ್ಲ. ಮಾರ್ಗದ ಬದಿಯಲ್ಲಿ ಒಣಗಿಸಲು ಇಟ್ಟ ಬೆರಣಿಯಿಂದಷ್ಟೇ ಅಲ್ಲಿ ಹಟ್ಟಿ ಇದೆ ಎಂದು ನಾವು ತಿಳಿಯಬಹುದು. ನಾವು ಅಲ್ಲಿಗೆ ತಲುಪಿದಾಗ ಮಧ್ಯಾಹ್ನ ಮೂರೂವರೆ ಗಂಟೆಯಾಗಿತ್ತು. 
 
ಅದು ಹಾಲು ಕರೆಯುವ ಸಮಯವಾಗಿತ್ತು. ಹಸು ಸಾಕುವವರು ಬಕೆಟ್ ಹಿಡಿದು ಹೊರಟಿದ್ದರು. ಎಲ್ಲವೂ ಊರ ಹಸುಗಳು. ‘ಇಲ್ಲಿನವರು ಪುಣ್ಯವಂತರು. ನಗರದಲ್ಲಿದ್ದರೂ ನಾಟಿ ಹಸುಗಳ ಹಾಲು ಕುಡಿಯುವ ಭಾಗ್ಯ’ ಎಂದು ಅಂದುಕೊಂಡೆ. ಆದರೆ ಹಾಲು ಕರೆಯುವ ಮೊದಲು ಹಸುಗಳಿಗೆ ಸುಮ್ಮನೆ ನಿಲ್ಲುವಂತೆ ಕೋಲಿನಿಂದ ಹೊಡೆದು ಇಂಜೆಕ್ಷನ್ ಚುಚ್ಚುತ್ತಿದ್ದರು. ಅವು ವೇದನೆಯಿಂದ ಕೊಸರಾಡುತ್ತಿದ್ದವು. ನಂತರ ಹಸುವಿನ ಎರಡು ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಲು ಹಿಂಡುತ್ತಿದ್ದರು. 
 
ಪ್ರತಿ ಹಸುವಿಗೆ ಹಾಲು ಕರೆಯುವ ಮೊದಲು ಯಾಕೆ ಇಂಜೆಕ್ಷನ್ ಕೊಡುತ್ತಾರೆ ಎಂದು ಗೊತ್ತಾಗಲಿಲ್ಲ. ಅತ್ತೆಯ ಹತ್ತಿರ ಕೇಳಿದಾಗ ಗೊತ್ತಿಲ್ಲ ಎಂದರು. ಹಸು ಸಾಕುವವರನ್ನೇ ಕೇಳಿದೆ, ಅವರು ಹೇಳಿದರು: ‘ಇಂಜೆಕ್ಷನ್ ಕೊಟ್ಟರೆ ಹಸು ತಕ್ಷಣ ಹಾಲು ಇಳಿಸುತ್ತದೆ. ಬಕೆಟ್ ಹಿಡಿದು ಮೊಲೆಗೆ ಕೈ ಹಾಕಿದರೆ ಸಾಕು ಹಾಲು ದರದರನೆ ಬಂದುಬಿಡುತ್ತದೆ. ಮೊಲೆ ಎಳೆಯುವ ಶ್ರಮ ಇರುವುದಿಲ್ಲ. ಕರುವೂ ಬೇಕಾಗುವುದಿಲ್ಲ. ಕರುವನ್ನು ಹುಟ್ಟಿದ ಕೆಲವು ದಿನಗಳಲ್ಲಿಯೇ ಮಾರಿಬಿಡುತ್ತೇವೆ. ಕರು ಇದ್ದರೆ ನಮಗೆ ಹಾಲು ಮಾರಲು ಸಿಗುವ ಪ್ರಮಾಣ ಕಡಿಮೆಯಾಗುತ್ತದೆ. ಏಕೆಂದರೆ ಅದಕ್ಕೆ ಕೊಡಬೇಕಲ್ಲ?’
 
ಇಂಜೆಕ್ಷನ್ ಚುಚ್ಚಿಸಿಕೊಂಡ ಜಾನುವಾರು ಮೂರ್ನಾಲ್ಕು ಕರು ಆಗುವಷ್ಟರಲ್ಲಿ ಬಂಜೆಯಾಗಿ ಬಿಡುತ್ತದಂತೆ. ನಂತರ ಅದನ್ನು ಮಾರುಕಟ್ಟೆಗೆ ರವಾನಿಸುತ್ತಾರಂತೆ. ಹಸು ಹಾಗೂ ಎಮ್ಮೆಗಳ ಸ್ಥಿತಿ ನೆನೆದು ನನಗೆ ತುಂಬ ದುಃಖವಾಯಿತು. ಅಲ್ಲಿ ಇದ್ದಷ್ಟೂ ದಿನ ನಾನು ಹಾಲು ಮತ್ತು ಹಾಲಿನ ಉತ್ಪನ್ನವಾದ ಮೊಸರು, ಮಜ್ಜಿಗೆ, ತುಪ್ಪ ಮುಟ್ಟಲಿಲ್ಲ.
–ಸಹನಾ ಕಾಂತಬೈಲು, ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.