ADVERTISEMENT

ಹಳೆ ಕಾರಿಗೆ ಹೊಸ ಲುಕ್?

ನೇಸರ ಕಾಡನಕುಪ್ಪೆ
Published 18 ಮೇ 2016, 19:30 IST
Last Updated 18 ಮೇ 2016, 19:30 IST
-  ­ಚಿತ್ರಗಳು ಹಳೆಯ ಮಾದರಿಯ ಆಲ್ಟೊ 800ಕಾರಿನದ್ದು
- ­ಚಿತ್ರಗಳು ಹಳೆಯ ಮಾದರಿಯ ಆಲ್ಟೊ 800ಕಾರಿನದ್ದು   

ರೆನೊ ‘ಕ್ವಿಡ್‌’ ಹಾಗೂ ಡಟ್ಸನ್ ‘ರೆಡಿ ಗೋ’ ಕಾರ್‌ಗಳು ಬಿಡುಗಡೆಯಾದ ಮೇಲೆ, ಭಾರತದ ನಂಬರ್ ಒನ್ ಕಾರು ಮಾರುತಿ ಸುಜುಕಿ ‘ಆಲ್ಟೊ’ ಮಾರಾಟಕ್ಕೆ ಕೊಂಚ ಹಿನ್ನೆಡೆಯಾಗಿರುವುದಂತೂ ನಿಜ. ಹಾಗಾಗಿ, ‘ಆಲ್ಟೊ 800’ ಕಾರನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ನಡೆದಿದೆ.

ಆದರೆ, ಈ ಮೇಲ್ದರ್ಜೆ ಒಳ್ಳೆಯ ಗುಣಮಟ್ಟದ್ದೇ? ಅಥವಾ ಹಳೆಯ ಕಾರಿಗೆ ಹೊಸ ಬಣ್ಣ ಹಚ್ಚುವ ಕೆಲಸ ಮಾತ್ರ ಆಗಿದೆಯೇ? ಹೀಗೊಂದು ಅವಲೋಕನ ಇಲ್ಲಿದೆ.

ಶ್ರೀಸಾಮಾನ್ಯನ ಕಾರು ಮಾರುತಿ ಸುಜುಕಿ. ಮಾರುತಿಯ ಯಾವುದೇ ಕಾರನ್ನು ಕೊಂಡರೂ ಅದು ವಿಶ್ವಾಸನೀಯ ಹಾಗೂ ಅತಿ ಸುರಕ್ಷಿತ ವಾಹನ. ಯಾವುದೇ ಕಾರಣಕ್ಕೂ ಈ ಕಾರು ಕೈಕೊಡುವುದಿಲ್ಲ. ಕೊಟ್ಟರೂ ದುರಸ್ತಿ ದುಬಾರಿಯಲ್ಲ. ಕಾರು ಹಳೆಯದಾಗಿ ಬೇಜಾರಾಗಿ ಮಾರಿದರೂ ಒಳ್ಳೆಯ ಹಣ ವಾಪಸು ಸಿಗುತ್ತದೆ. ಆದರೆ, ಆಧುನಿಕ ಮಾರುಕಟ್ಟೆಯ ವಿವಿಧ ಅಡೆತಡೆಗಳಿಂದಾಗಿ ಇಂತಹ ವಿಶ್ವಾಸನೀಯ ಕಾರಿಗೂ ಸ್ಪರ್ಧೆ ಏರ್ಪಟ್ಟಿದೆ.

ಇದೇ ಕಾರಣಕ್ಕಾಗಿ ಮಾರುತಿಯು ತನ್ನೆಲ್ಲ ಕಾರುಗಳನ್ನೂ ಮೇಲ್ದರ್ಜೆಗೆ ಏರಿಸಿ, ಉತ್ತಮ ಸ್ಪರ್ಧೆ ನೀಡಲು ಸಿದ್ಧವಾಗಿದೆ. ತನ್ನ ಪ್ರಸಿದ್ಧ ಕಾರುಗಳಾದ ‘ಸ್ವಿಫ್ಟ್’, ‘ಸ್ವಿಫ್ಟ್‌ ಡಿಸೈರ್‌’ ಕಾರುಗಳನ್ನು ಮೂರು ನಾಲ್ಕು ಬಾರಿ ಮೇಲ್ದರ್ಜೆಗೆ ಏರಿಸಿ, ವಿನ್ಯಾಸದಲ್ಲೂ ಅಲ್ಪಸ್ವಲ್ಪ ಬದಲಾವಣೆಗಳನ್ನು ತಂದು, ಸೈ ಅನ್ನಿಸಿಕೊಂಡಿದೆ.

ಈಚೆಗಷ್ಟೇ ಮೇಲ್ದರ್ಜೆಗೆ ಏರಿಸಲಾದ ‘ಸ್ವಿಫ್ಟ್ ಡಿಸೈರ್‌’ ಕಾರು, ಪ್ರತಿಸ್ಪರ್ಧಿಗಳಾದ ಟಾಟಾ ‘ಜೆಸ್ಟ್‌’, ಹೋಂಡಾ ‘ಅಮೇಜ್‌’ ಕಾರುಗಳಿಗೆ ಒಂದು ಹೆಜ್ಜೆ ಹೆಚ್ಚು ಎನ್ನುವಂತೆ ಸೌಲಭ್ಯ ನೀಡಿದೆ. ಅಂತೆಯೇ, ತನ್ನ ‘ರಿಟ್ಸ್‌’, ‘ಎರ್ಟಿಗಾ’ ಹಾಗೂ ‘ವ್ಯಾಗನ್‌ಆರ್‌’ ಕಾರುಗಳನ್ನೂ ಮೇಲ್ದರ್ಜೆಗೆ ಏರಿಸಿ, ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ಪ್ರಯತ್ನಿಸಿದೆ. ಈಗ ಪ್ರಸಿದ್ಧ ‘ಆಲ್ಟೊ 800’ ಸರದಿ.

ಅತಿ ಹೆಚ್ಚು ಮಾರಾಟವಾಗುವ ಈ ಕಾರು, ಈಗಲೂ ನಂಬರ್ ಒನ್ ಸ್ಥಾನದಲ್ಲೇ ಇದೆ. ಆದರೆ, ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಏನೇನು ಬದಲಾವಣೆ ಆಗಿದೆ ಎಂಬುದನ್ನು ಇಲ್ಲಿ ನೋಡಿ.

ಕಾರಿನ ಮೂಲ ವಿನ್ಯಾಸ, ದಪ್ಪನೆಯ ‘ಸಿ ಪಿಲ್ಲರ್‌’, ಕೊಂಚವೇ ಉಬ್ಬಿದ ಚಕ್ರಗಳ ಮೇಲಿನ ಕಮಾನುಗಳು ಈಗಲೂ ಹಳೆಯ ಸ್ವರೂಪದಲ್ಲೇ ಇವೆ. ಹಿಂಭಾಗವೂ ಹೆಚ್ಚೂ ಕಡಿಮೆ ಅದೇ ವಿನ್ಯಾಸ ಉಳಿಸಿಕೊಂಡಿವೆ. ಹಾಗಾದರೆ, ಬದಲಾವಣೆಯೇನು?

ಕಾರಿನ ಮುಂಭಾಗಕ್ಕೆ ಅತಿ ದೊಡ್ಡ ಬದಲಾವಣೆ ಮಾಡಲಾಗಿದೆ. ‘ಎಂಜಿನ್‌ ಗ್ರಿಲ್‌’ ಭಾಗವನ್ನು ವಿಶಾಲವಾಗಿ ವಿಸ್ತರಿಸಲಾಗಿದೆ. ಹೆಚ್ಚು ಗಾಳಿ ಒಳಪ್ರವೇಶಿಸುವಂತೆ, ಕಪ್ಪು ಫೈಬರ್‌ ಭಾಗ ಎದ್ದು ಕಾಣುವಂತೆ ವಿನ್ಯಾಸ ಮಾಡಲಾಗಿದೆ.

ಕೊಂಚ ಸ್ಪೋರ್ಟಿ ನೋಟವನ್ನು ಇದು ಕಾರಿಗೆ ತಂದುಕೊಡುತ್ತದೆ. ಜತೆಗೆ, ಇದೀಗ ಕಾರಿಗೆ ‘ಫಾಗ್‌’ ದೀಪಗಳನ್ನು ಅಳವಡಿಸುವ ಅವಕಾಶ ನೀಡಲಾಗಿದೆ. ಇದು ಮುಂಚೆ ಇರಲಿಲ್ಲ. ಇದರಿಂದಾಗಿ ಕಾರಿಗೆ ಕೊಂಚ ಲಕ್ಷುರಿ ವಿನ್ಯಾಸ ಸಿಕ್ಕಂತಾಗುತ್ತದೆ.

3,430 ಮಿಲಿಮೀಟರ್‌ ಉದ್ದವಿದ್ದ ಕಾರನ್ನು ಕೊಂಚ ದೊಡ್ಡದು ಮಾಡಿ, 3,395 ಮಿಲಿ ಮೀಟರ್‌ಗೆ ಏರಿಸಲಾಗಿದೆ. ಇಷ್ಟನ್ನು ಬಿಟ್ಟರೆ ಆಕಾರದಲ್ಲಿ ಅಂತಹ ದೊಡ್ಡ ಬದಲಾವಣೆಯೇನೂ ಇಲ್ಲ. ಕಾರು ಕೊಂಚ ಉದ್ದವಾಗುವ ಕಾರಣ, ಕಾರಿನೊಳಗೆ ಲೆಗ್‌ ಸ್ಪೇಸ್‌ ಹೆಚ್ಚಾಗುತ್ತದಷ್ಟೇ.
ಒಳಭಾಗದಲ್ಲಿ ಕಾರಿಗೆ ಬಟ್ಟೆಯ ವಿನ್ಯಾಸವನ್ನು ಬಾಗಿಲುಗಳಿಗೆ ನೀಡಲಾಗಿದೆ.

ಅಂದರೆ ಇದು ಸಹ ಲಕ್ಷುರಿ ಸೌಲಭ್ಯ. ಮುಂಚೆ ಇಲ್ಲಿ ಕೇವಲ ಪ್ಲಾಸ್ಟಿಕ್‌ ಇತ್ತು. ಆದರೂ ಒಳಭಾಗ ಇನ್ನೂ ಕೊಂಚ ಇಕ್ಕಟ್ಟಾಗೇ ಇದೆ. ಹಿಂಭಾಗದಲ್ಲಿ ಕೂರುವವರಿಗೆ ಇದು ಹೆಚ್ಚು ಇಕ್ಕಟ್ಟೇ ಸರಿ. ಆದರೆ, ಚೈಲ್ಡ್‌ ಲಾಕ್‌, ರಿಮೋಟ್ ಎಂಟ್ರಿ ಹೊಸ ಸೌಲಭ್ಯಗಳ ಸೇರ್ಪಡೆಯಾಗಿದೆ. ಎಂದಿನಂತೆ, ಮುಂಭಾಗದ ಕಿಟಕಿಗಳಲ್ಲಿ ಪವರ್‌ ವಿಂಡೋಸ್‌, ಹಿಂಭಾಗಕ್ಕೆ ಸ್ಪಾಯ್ಲರ್‌, ಸೆಂಟರ್‍ ಲಾಕಿಂಗ್‌, ಫುಲ್‌ ವ್ಹೀಲ್‌ ಕ್ಯಾಪ್‌ಗಳು ಇವೆ.

‘ಕ್ವಿಡ್‌’ ಹಾಗೂ ‘ರೆಡಿ ಗೋ’ ನಂತೆ ಆಲ್ಟೊದಲ್ಲೂ ಈಗ ಏರ್‌ ಬ್ಯಾಗ್‌ ನೀಡಲು ನಿರ್ಧರಿಸಲಾಗಿದೆ. ಮುಂಚೆಯೂ ಈ ಸೌಲಭ್ಯವು ಟಾಪ್‌ ಎಂಡ್‌ ಅವತರಣಿಕೆಯಲ್ಲಿ ಇತ್ತು. ಆದರೆ ಎಬಿಎಸ್‌ ಸೌಲಭ್ಯ ಇಲ್ಲದೇ ಇರುವುದು ದೊಡ್ಡ ಕೊರತೆ.

‘ಆಟೊಮ್ಯಾಟಿಕ್‌ ಮ್ಯಾನ್ಯುಯಲ್‌ ಗಿಯರ್‌ ಟ್ರಾನ್ಸ್‌ಮಿಷನ್‌’ (ಎಎಂಟಿ) ಸೌಲಭ್ಯ ಇಲ್ಲ. ಇದು ಬೇಕಾದರೆ ‘ಆಲ್ಟೊ ಕೆ-10’ ಕಾರಿಗೆ ಹೋಗಬೇಕು. ಈ ಸೌಲಭ್ಯವನ್ನು ‘ಆಲ್ಟೊ 800’ಗೂ ನೀಡಬೇಕಿತ್ತು. ಜತೆಗೆ, ಎಂಜಿನ್‌ನಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಲಾಗಿಲ್ಲ. ಹಾಗಾಗಿ, ಇದು ಕೇವಲ ಕಾಸ್ಮೆಟಿಕ್‌ ಬದಲಾವಣೆಯಷ್ಟೇ.

ಈ ಕಡಿಮೆ ಬದಲಾವಣೆಗಳಿಗೆ ಮಾರುತಿ ಸುಜುಕಿ ಬೆಲೆಯನ್ನೇನೂ ಏರಿಸಿಲ್ಲ ಎನ್ನುವುದೇ ಸಂತಸದ ಸಂಗತಿ. ಆದರೂ, ‘ಕ್ವಿಡ್‌’ನಲ್ಲಿ ಇರುವಂತೆ ‘ಟಚ್‌ ಸ್ಕ್ರೀನ್‌ ಮನರಂಜನಾ ವ್ಯವಸ್ಥೆ’, ‘ಬ್ಲೂಟೂತ್‌’ ಸೌಲಭ್ಯ ‘ಆಲ್ಟೊ’ದಲ್ಲಿ ಇಲ್ಲದೇ ಇರುವುದು ದೊಡ್ಡ ಕೊರತೆಯಂತೆ ಎದ್ದು ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.