ADVERTISEMENT

ಅನ್ನ ಬ್ರಹ್ಮ-ಬತ್ತ ವೈವಿಧ್ಯ

ಡಾ.ಸುಲೋಚನಾ, ವಿಜ್ಞಾನಿ, ತಂಜಾವೂರು
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

`ಅನ್ನಕ್ಕಿಂತ ಮಿಗಿಲಾದ ದೇವರಿಲ್ಲ, ಅನ್ನವೇ ಬ್ರಹ್ಮ' ಎನ್ನುತ್ತಾರೆ ಬಲ್ಲವರು. ಹೊಟ್ಟೆ ಬಿರಿಯುವಷ್ಟು ಏನೇ ತಿಂದರೂ, ಒಂದು ತುತ್ತು ಅನ್ನ ಉಂಡರೆ ಆಗುವಷ್ಟು ಸಮಾಧಾನ ಮತ್ತೊಂದಿಲ್ಲ ಎನ್ನುತ್ತಾರೆ ಅನ್ನಪ್ರಿಯರು. ಹಾಗಾಗಿ, ಅಮ್ಮ ನೀಡುವ ಕೈತುತ್ತಿನಲ್ಲೂ ಅನ್ನದ ಮುಟ್ಟಿಗೆಯೇ ರುಚಿಯಲ್ಲೂ ಮೇಲುಗೈ ಸಾಧಿಸುತ್ತದೆ. ಈ ಅನ್ನದ ಹಿಂದಿರುವವರು ಬತ್ತ ಬೆಳೆಯುವ ರೈತರು ಮತ್ತು ಬತ್ತವನ್ನು ಅಕ್ಕಿಯಾಗಿಸುವ ಅಕ್ಕಿ ಗಿರಣಿ ಮಾಲೀಕರು.
ಚೀನಾ ಹೊರತುಪಡಿಸಿದರೆ ಭಾರತ ವಿಶ್ವದಲ್ಲಿ ಅತಿಹೆಚ್ಚು ಬತ್ತ ಬೆಳೆಯುವ ರಾಷ್ಟ್ರವಾಗಿದೆ. ಜತೆಗೆ ಪ್ರಮುಖ ರಫ್ತು ರಾಷ್ಟ್ರ ಎನಿಸಿದೆ. ಬತ್ತ ಬೆಳೆಯಲ್ಲಿ ದೇಶದಲ್ಲಿ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 4ನೇ ಸ್ಥಾನದಲ್ಲಿದೆ.

ಕ್ಷೇತ್ರವಾರು ಹಾಗೂ ಉತ್ಪಾದನೆ ವಿಷಯದಲ್ಲೂ ಬತ್ತದ ಬೆಳೆ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕದ ಮುಖ್ಯ ಬೆಳೆಗಳಲ್ಲಿ ಬತ್ತವೂ ಒಂದು.
ಮೂಲತಃ ಬತ್ತ ಹುಲ್ಲಿನ ಜಾತಿಗೆ ಸೇರಿದ ಸಸ್ಯ. ರಾಜ್ಯದಲ್ಲಿ 30ಕ್ಕೂ ಅಧಿಕ ಬತ್ತದ ತಳಿ ಗುರುತಿಸಬಹುದು. ಆದರೆ, ಬಹಳಷ್ಟು ರೈತರ ಚಿತ್ತ `ಸೋನಾ ಮಸೂರಿ' ತಳಿ ಬೆಳೆಯತ್ತಲೇ ಕೇಂದ್ರೀಕೃತ. ಹಾಗಾಗಿ, ದಪ್ಪ ಬತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ರಾಜ್ಯದ ಕರಾವಳಿಯಲ್ಲಿ ಮಾತ್ರ ಸ್ಥಳೀಯ ತಳಿಗೇ ಆದ್ಯತೆ.

ಸಾಗಣೆ ಸಮಯದಲ್ಲೇ ಶೇ 10ರಿಂದ 15ರಷ್ಟು ಬತ್ತ ಹಾಳಾಗುತ್ತದೆ. ಕೊಯ್ಲಿನ ನಂತರ ಶೇಖರಣೆ ಸಮಯದಲ್ಲಿ ತೇವಾಂಶ ಕಡಿಮೆ ಇರಬೇಕು. ಆಗ ಮಾತ್ರವೇ ರೈತರಿಗೆ ಲಾಭ.  ಬತ್ತ-ಅಕ್ಕಿ ಬೆಲೆ, ಯಾವ ತಳಿ, ಎಷ್ಟು ಹಳೆಯದು, ಯಾವ ನೆಲದ್ದು ಎಂಬ ಅಂಶಗಳನ್ನು ಆಧರಿಸಿದೆ. ಬತ್ತದ ಕಾಳು ಒಂದೇ ಗಾತ್ರದಲ್ಲಿರಬೇಕು. ಗುಣಮಟ್ಟವಿದ್ದಲ್ಲಿ, ಸಾಕಷ್ಟು ಹಳೆಯ ಬತ್ತವಾಗಿದ್ದಲ್ಲಿ ಉತ್ತಮ ಬೆಲೆ ಲಭ್ಯ.

ಬಿಳಿ ಅಕ್ಕಿಯೇ ಬೇಕು!
ಪ್ರಮುಖ ಆಹಾರ ಪದಾರ್ಥವಾಗಿರುವ ಅಕ್ಕಿ ಕಾರ್ಬೊಹೈಡ್ರೇಟ್, ವಿಟಮಿನ್, ಖನಿಜಾಂಶ ಮತ್ತು ಶಕ್ತಿಯ ಆಕರ. ಹಾಗಾಗಿ, ಆಹಾರ ಪದಾರ್ಥವಾಗಿ ಅಕ್ಕಿಗೆ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ. ದೇಶದ ಉಳಿದೆಡೆಯೂ ಉತ್ತಮ ಬೇಡಿಕೆ ಇದೆ.

`ಫಳಗುಟ್ಟುವ ಬಿಳಿ ಅಕ್ಕಿಯೇ ಬೇಕು ಎಂಬ ಕಾರಣಕ್ಕೆ ಗಿರಣಿಯಲ್ಲಿ ಹೆಚ್ಚು ಪಾಲಿಷಿಂಗ್‌ಗೆ ಒಳಪಡಿಸಲಾಗುತ್ತದೆ. ಇದು ಹೆಚ್ಚಿನ ಪೌಷ್ಟಿಕಾಂಶವಿರುವ ಅಕ್ಕಿಯ ಮೇಲಿನ ಪದರವನ್ನೇ ಇಲ್ಲವಾಗಿಸುತ್ತದೆ. ನಂತರ `ವೈಟ್ನಿಂಗ್' ಪ್ರಕ್ರಿಯೆಯಲ್ಲಿ ಅಕ್ಕಿಯನ್ನು ಇನ್ನಷ್ಟು ಬಿಳುಪಾಗಿಸಲಾಗುತ್ತದೆ. ಆದರೆ, ಕಡಿಮೆ ಪಾಲಿಷ್ ಮಾಡಿದ ಅಕ್ಕಿಯಲ್ಲೇ ಹೆಚ್ಚಿನ ಪೌಷ್ಟಿಕಾಂಶ, ವಿಟಮಿನ್ ಇರುತ್ತವೆ. ಹಾಲಿನಷ್ಟು ಬೆಳ್ಳಗಿನ ಅಕ್ಕಿಯೇ ಬೇಕು ಎಂದು ಆಶಿಸುವ ಜನ, ಹೆಚ್ಚಿನ ಬೆಲೆ ನೀಡಿ ಪೌಷ್ಟಿಕಾಂಶ ಕಡಿಮೆಯಾದ ಅಕ್ಕಿಯನ್ನು ಖರೀದಿಸುತ್ತಾರೆ' ಎಂದು ವಿಷಾದಿಸುವ ಹಿರಿಯ ವಿಜ್ಞಾನಿ ಡಾ. ಪಿ.ಸುರೇಂದ್ರ, `ಮುಖ್ಯವಾಗಿ ಬತ್ತವನ್ನು ಯಾವುದೇ ಕಾರಣಕ್ಕೂ ಬೇರೆ ದೇಶಗಳಿಂದ ತರಿಸಿಕೊಳ್ಳಬಾರದು. ಬತ್ತದ ಜತೆಗೇ ಹೊಸ ರೋಗಗಳನ್ನೂ ಖರೀದಿಸಿದಂತಾಗುತ್ತದೆ' ಎಂದು ಎಚ್ಚರಿಸುತ್ತಾರೆ.

ದೇಶದಲ್ಲಿ 2.80 ಕೋಟಿ ಮಂದಿ ವಿಟಮಿನ್ `ಎ' ಕೊರತೆಯಿಂದ ಬಳಲುತ್ತಿದ್ದಾರೆ. ಹಾಗಾಗಿಯೇ ವಿಟಮಿನ್ `ಎ' ಅಂಶವುಳ್ಳ ಬತ್ತದ ತಳಿ ಅಭಿವೃದ್ಧಿಗಾಗಿ ವಿಜ್ಞಾನಿಗಳು ಪ್ರಯೋಗ ನಡೆಸುತ್ತಿದ್ದಾರೆ. ಅಂಥ ತಳಿ ಅಭಿವೃದ್ಧಿಯಾದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಪಾಲಿಗೆ ಅದು `ಗೋಲ್ಡನ್ ರೈಸ್' ಆಗಬಲ್ಲದು ಎಂದು ಗಮನ ಸೆಳೆವ ಸುರೇಂದ್ರ, ಪಿಜ್ಜಾ, ಬರ್ಗರ್‌ನಲ್ಲಿ ಕಳೆದುಹೋಗಿರುವ ಯುವಜನತೆಗೆ ಬತ್ತ ಮತ್ತು ಅನ್ನದ ಮೌಲ್ಯ ಪರಿಚಯಿಸುವ ಅಗತ್ಯ ಹೆಚ್ಚಿದೆ. ಹಾಗಾಗಿ, ಬತ್ತ ಮತ್ತು ಅಕ್ಕಿಯ ಉಪ ಉತ್ಪನ್ನಗಳತ್ತ ಹೆಚ್ಚು ಆದ್ಯತೆ ನೀಡಬೇಕಾಗಿದೆ ಎಂಬ ಸಲಹೆಯನ್ನೂ ನೀಡಿದ್ದಾರೆ.

`ಮಾನ್ಸೂನ್ ಸೆನ್ಸಿಸಿಟಿವ್' ಉದ್ಯಮವೆಂದೇ ಪರಿಗಣಿಸಲಾದ ಅಕ್ಕಿ ಉದ್ಯಮಕ್ಕೆ ಪ್ರಕೃತಿಯೇ ವೈರಿ. ಒಮ್ಮೆ ಮಳೆಯಾದಲ್ಲಿ, ಮತ್ತೊಮ್ಮೆ ಬರಗಾಲ.

ಸಂಗ್ರಹ-ಗುಣಮಟ್ಟ ರಕ್ಷಣೆ
ಬತ್ತದಲ್ಲಿ ತೇವಾಂಶ ಎಷ್ಟಿರಬೇಕು ಎಂಬುದೇ ಮುಖ್ಯ. ಶೇ 14ಕ್ಕಿಂತ ಹೆಚ್ಚು ತೇವಾಂಶ ಇರಬಾರದು. ಇದಕ್ಕಿಂತ ಅಧಿಕ ತೇವಾಂಶವಿದ್ದಲ್ಲಿ ಫಂಗಸ್ ದಾಳಿ ಖಚಿತ. ಬತ್ತ ತುಂಬಿದ ಚೀಲಗಳನ್ನು ಗೋಡೆಗೆ, ನೆಲಕ್ಕೆ ತಾಗಿದಂತೆ ಇಡಬಾರದು. ಮಳೆಗಾಲದಲ್ಲಿ ಕಣಜ ಅಥವಾ ಗೋದಾಮಿನ ಬಾಗಿಲು ಭದ್ರವಾಗಿ ಮುಚ್ಚಿರಬೇಕು. ಬೇಸಿಗೆಯಲ್ಲಿ ಸ್ವಲ್ಪ ಬಾಗಿಲು ತೆರೆದು ಗಾಳಿ ಆಡುವಂತೆ ಮಾಡಬೇಕು.

ಗುಣಮಟ್ಟ ರಕ್ಷಣೆ
`ಬತ್ತದ ಗುಣಮಟ್ಟವನ್ನು ಮೊದಲ ಹಂತದಿಂದಲೇ ಕಾಪಾಡಿಕೊಳ್ಳಲು ರೈತರು ಕ್ರಮ ಕೈಗೊಳ್ಳಬೇಕು. ಬಿತ್ತನೆಗೆ ಗುಣಮಟ್ಟದ ಬೀಜವನ್ನೇ ಬಳಸಬೇಕು. ಬತ್ತ ತೆನೆಗಟ್ಟಿದ ಮೇಲೆ ಬೆಳೆ ಕೊಯ್ಲಿಗೆ, ಸಂಸ್ಕರಣೆಗೆ ನುರಿತ ಕಾರ್ಮಿಕರನ್ನೇ ನೇಮಿಸಿಕೊಳ್ಳಬೇಕು. ಬತ್ತದ ಗುಣಮಟ್ಟ ಕಾಪಾಡುವಲ್ಲಿ ಈ ಅಂಶಗಳು ಪ್ರಮುಖ. ಸರಿಯಾಗಿ ಸಂಸ್ಕರಿಸಿ ಸಂಗ್ರಹಿಸಿಟ್ಟ ಬತ್ತಕ್ಕೆ ಯಾವುದೇ ಸೂಕ್ಷ್ಮಾಣು ಜೀವಿಯ ಬಾಧೆ(ಫಂಗಸ್) ಬಾರದು. ಬತ್ತ ಒಣಗಿಸುವ ಪ್ರಕ್ರಿಯೆಯಲ್ಲೂ ಎಚ್ಚರ ಅಗತ್ಯ. ಮಧ್ಯಾಹ್ನ 12ರಿಂದ 2 ಗಂಟೆವರೆಗಿನ ಸೂರ್ಯನ ಶಾಖ ಬತ್ತ ಒಣಗುವಿಕೆಗೆ ಪೂರಕ. ಅದೂ ಬತ್ತ ಶೇ 17ರಷ್ಟು ತೇವಾಂಶ ಹೊಂದಿದ್ದಾಗ ಮಾತ್ರ. ಡ್ರೈಯರ್‌ನಲ್ಲಿ ಬತ್ತ ಒಣಗಿಸುವಾಗ 55 ಡಿಗ್ರಿಗಿಂತಲೂ ಹೆಚ್ಚಿನ ಉಷ್ಣಾಂಶ ಇರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT