ADVERTISEMENT

ಆತ್ಮಹತ್ಯೆ ತಡೆಗೆ ಫೇಸ್‌ಬುಕ್‌ನಲ್ಲಿ ಕೃತಕ ಬುದ್ಧಿಮತ್ತೆ

ಪೃಥ್ವಿರಾಜ್ ಎಂ ಎಚ್
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST
ಆತ್ಮಹತ್ಯೆ ತಡೆಗೆ ಫೇಸ್‌ಬುಕ್‌ನಲ್ಲಿ ಕೃತಕ ಬುದ್ಧಿಮತ್ತೆ
ಆತ್ಮಹತ್ಯೆ ತಡೆಗೆ ಫೇಸ್‌ಬುಕ್‌ನಲ್ಲಿ ಕೃತಕ ಬುದ್ಧಿಮತ್ತೆ   

ಆನ್‌ಲೈನ್‌ ವಂಚನೆ, ಅಪರಾಧ  ಪ್ರಕರಣಗಳು ಈಚೆಗೆ ಹೆಚ್ಚಾಗುತ್ತಿವೆ. ಹೀಗಾಗಿ ಫೇಸ್‌ಬುಕ್‌ ಸಂಸ್ಥೆ ಅಳವಡಿಸಿಕೊಂಡಿರುವ ‘ಎಐ (Artificial Intelligence) ಆಲ್ಗಾರಿದಮ್’ ತಂತ್ರಾಂಶವನ್ನು ಮೇಲ್ದರ್ಜೆಗೆ ಏರಿಸುತ್ತಿದ್ದು, ಒತ್ತಡಕ್ಕೆ ಒಳಗಾಗಿರುವ ಫೇಸ್‌ಬುಕ್‌ ಬಳಕೆದಾರರ ಮನಸ್ಥಿತಿ, ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿರುವ ಸಂಭಾಷಣೆ, ಸಂದೇಶಗಳನ್ನು ಪತ್ತೆ ಮಾಡುವಂತಹ ಕೆಲಸಗಳನ್ನು ಕೃತಕ ಬುದ್ಧಿಮತ್ತೆಗೆ ವಹಿಸಲು ಪ್ರಯತ್ನಗಳನ್ನು ನಡೆಸುತ್ತಿದೆ.

ಕೇವಲ ಯುವ ಸಮುದಾಯವಷ್ಟೇ ಅಲ್ಲ, ಎಲ್ಲ ವಯೋಮಾನದವರೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಬಾಹ್ಯ ಪ್ರಪಂಚಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳನ್ನೇ ಉತ್ತಮ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಫೇಸ್‌ಬುಕ್‌ ಅನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.

ಖಾಸಗಿತನವನ್ನೂ ಬದಿಗಿಟ್ಟು ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಅಳು,ನೋವು, ಸಂತೋಷ, ವಿಷಾದ ಹೀಗೆ ಎಲ್ಲ ಭಾವನೆಗಳನ್ನೂ ಪೇಸ್‌ಬುಕ್‌ ಗೋಡೆ ಮೇಲೆ ಬರೆದು ಪ್ರಪಂಚಕ್ಕೆ ಗೊತ್ತಾಗುವ ಹಾಗೆ ತಿಳಿಸುತ್ತಿದ್ದಾರೆ. ಬಳಕೆದಾರರ ಈ ವರ್ತನೆಗಳನ್ನು ದುರುಪಯೋಗ ಮಾಡಿಕೊಳ್ಳಲು ಹವಣಿಸುತ್ತಿರುವವರೂ ಅವರ ಪ್ರಯತ್ನದಲ್ಲಿ ಮಗ್ನರಾಗಿದ್ದಾರೆ. ಹೀಗಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿರುವವರ ಮತ್ತು ಮಾನಸಿಕವಾಗಿ ಕುಗ್ಗಿರುವವರ ವರ್ತನೆಯನ್ನು ಪತ್ತೆಹಚ್ಚಲು ಫೇಸ್‌ಬುಕ್ ಮುಂದಾಗಿದೆ.

ADVERTISEMENT

ಎಫ್‌ಬಿ ಗೋಡೆಯ ಮೇಲೆ ಯಾರಾದರೂ ಫೀಲಿಂಗ್ ಸ್ಯಾಡ್‌, ವಾಂಟ್‌ ಟು ಡೈ, ಸೆಲ್ಫ್‌ ಹಾರ್ಮ್‌, ಫೀಲಿಂಗ್ ಲೋನ್ಲಿ ಅಂತಹ ಬರಹಗಳನ್ನು ಬರೆದಿದ್ದರೆ ಅವರನ್ನು  ಗುರುತಿಸಿ ಅವರ ಪ್ರೊಫೈಲ್ ಮೇಲೆ ನಿಗಾ ಇಡಲು ಈ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.  ಇಂತಹ ವ್ಯಕ್ತಿಗಳ ಪ್ರೊಫೈಲ್‌ಗಳನ್ನು ಜಾಲಾಡಿ, ಸಂಬಂಧಿತ ವಿಭಾಗವನ್ನು ಎಚ್ಚರಿಸಿ, ಸ್ನೇಹಿತರಿಗೆ, ಆಪ್ತರಿಗೆ ಸಂದೇಶ ರವಾನಿಸುವಂತಹ ಕೆಲಸವನ್ನು ಈ ತಂತ್ರಜ್ಞಾನ ಮಾಡುವಂತೆ ಫೇಸ್‌ಬುಕ್ ಪ್ರಯತ್ನಿಸುತ್ತಿದೆ.

ಬಳಕೆದಾರನ ಮಾನಸಿಕ ಸ್ಥಿತಿ ತೀರಾ ದಾರುಣವಾಗಿದ್ದರೆ, ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ರವಾನಿಸುವಂತೆಯೂ ಮಾಡಲಾಗುತ್ತಿದೆ. ಈಗಾಗಲೇ ಇದರ ಪ್ರಾಯೋಗಿಕ ಪರೀಕ್ಷೆಗಳನ್ನೂ ಅಮೆರಿಕದ ಕೆಲವು ಪ್ರಾಂತ್ಯಗಳಲ್ಲಿ ಫೇಸ್‌ಬುಕ್ ನಡೆಸಿದೆ.

ನಿತ್ಯ ಕ್ರಿಯಾಶೀಲನಾಗಿರುವ ಬಳಕೆದಾರ ಇದ್ದಕ್ಕಿದ್ದಂತೇ ಬಳಕೆ ನಿಲ್ಲಿಸಿದರೆ, ಖಾತೆಯನ್ನು ನಿಷ್ಕ್ರಿಯಗೊಳಿಸಿದರೆ ಈ ತಂತ್ರಜ್ಞಾನ ಕೂಡಲೇ ಪತ್ತೆಹಚ್ಚಿ ಅದಕ್ಕೆ ಕಾರಣಗಳನ್ನು ಹುಡುಕುವ ಪ್ರಯತ್ನಗಳನ್ನು ‘ಎಐ’ ಮಾಡುತ್ತದೆ.

ಇನ್ನುಮುಂದೆ ಫೇಸ್‌ಬುಕ್‌ ಗೋಡೆಯ ಮೇಲೆ ನಾವು ಬರಹಗಳನ್ನು ಪ್ರಕಟಿಸುವಾಗ, ‘ಎಐ’ ಕಣ್ಣು ನಿಮ್ಮ ಮೇಲೆ ನೆಟ್ಟಿರುತ್ತದೆ. ಇಂತಹ ಸಾಧ್ಯತೆಗಳನ್ನು ಹಗುರವಾಗಿ ನೋಡುವ ಅಗತ್ಯ ಇಲ್ಲ ಎಂದು ಫೇಸ್‌ಬುಕ್‌ ಹೇಳುತ್ತಿದೆ.

ಇದಷ್ಟೇ ಅಲ್ಲ, ಕೆಲವು ವಿಶೇಷ ಸಾಧನಗಳು ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ನಾವು ಬಳಸುತ್ತಿರುವ ಮೊಬೈಲ್‌ ಮೇಲೂ ನಿಗಾ ಇರಿಸಬಹುದು ಎಂದು ಸೈಬರ್ ತಜ್ಞರು ಹೇಳುತ್ತಿದ್ದಾರೆ.

ಇದೊಂದು ಸಾಧನವಷ್ಟೇ
ಕೃತಿಕ ಬುದ್ಧಿಮತ್ತೆ ಎಂಬುದು ಒಂದು ಸಾಧನವಾಗಿ ಬಳಕೆಯಾಗುವ ತಂತ್ರಜ್ಞಾನವಷ್ಟೇ ಎಂದು ತಜ್ಞರು ಹೇಳುತ್ತಿದ್ದಾರೆ. ಸಂಸ್ಥೆಗಳು ಅಥವಾ ವ್ಯಕ್ತಿ ಅಗತ್ಯಕ್ಕೆ ತಕ್ಕಂತೆ ಹೇಗೆ ಕೆಲಸ ಮಾಡುವರೋ ಹಾಗೆಯೇ ಇದು ಕೆಲಸ ಮಾಡುತ್ತದೆ ಎಂದು ವಿಶ್ಲೇಷಿಸುತ್ತಿದ್ದಾರೆ.

ತಂತ್ರಜ್ಞಾನ ಈಗ ಮನುಷ್ಯನ ವರ್ತನೆಯನ್ನೂ ವಿಶ್ಲೇಷಿಸುವ ಮಟ್ಟಕ್ಕೆ ಬೆಳೆದಿದೆ. ಕೇವಲ ಸಂದೇಶಗಳಷ್ಟೇ ಅಲ್ಲ, ಮಾತಾಡುವಾಗ ಧ್ವನಿಯಲ್ಲಿನ ವ್ಯತ್ಯಾಸ, ಚಹರೆಯಲ್ಲಾಗುವ ಬದಲಾವಣೆಗಳು, ಕುಳಿತುಕೊಂಡಿರುವ, ನಿಂತಿರುವ ಭಂಗಿಯನ್ನೂ ಆಧರಿಸಿ ಮನುಷ್ಯನ ಭಾವನೆಗಳನ್ನು ಪತ್ತೆಹಚ್ಚುವ ಶಕ್ತಿ ಅದಕ್ಕೆ ಬಂದಿದೆ ಎಂದು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.