ADVERTISEMENT

ಆರ್ಥಿಕ ವರ್ಷ:ಡಿಸೆಂಬರ್‌ಗೆ ವರದಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2016, 19:30 IST
Last Updated 26 ಆಗಸ್ಟ್ 2016, 19:30 IST

ನವದೆಹಲಿ (ಪಿಟಿಐ): ಸದ್ಯಕ್ಕೆ ಜಾರಿಯಲ್ಲಿ ಇರುವ ಆರ್ಥಿಕ ವರ್ಷವನ್ನು (ಏಪ್ರಿಲ್‌ 1 ರಿಂದ ಮಾರ್ಚ್‌ 31ರವರೆಗೆ) ಬದಲಾಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಸಾರ್ವಜನಿಕರ ತಮ್ಮ ಸಲಹೆ ನೀಡಲು ಸೆಪ್ಟೆಂಬರ್‌ 30ರವರೆಗೆ ಅವಕಾಶ ನೀಡಿದೆ. ಬಜೆಟ್‌ ಪ್ರಕ್ರಿಯೆ ಉತ್ತಮಪಡಿಸಲು ಮತ್ತು ನಗದು ನಿರ್ವಹಣೆಗೆ ಅನುಕೂಲ ಆಗುವಂತೆ ಆರ್ಥಿಕ ವರ್ಷವನ್ನು ಬದಲಾಯಿಸಬೇಕು ಎನ್ನುವ ಚಿಂತನೆ ನಡೆಯುತ್ತಿದೆ.

ಪರ, ವಿರೋಧ: ಆರ್ಥಿಕ ವರ್ಷವನ್ನು ಬದಲಾಯಿಸುವ ಕುರಿತು ಈಗಾಗಲೇ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಸರ್ಕಾರದ ವರಮಾನ ಮತ್ತು ವೆಚ್ಚ, ಬಜೆಟ್‌ ಮುನ್ನೋಟದ ಮೇಲೆ ಮುಂಗಾರಿನ ಪ್ರಭಾವ, ಕೆಲಸದ ಅವಧಿ, ಬಜೆಟ್‌ಗೆ ಸಂಬಂಧಿಸಿದಂತೆ ಶಾಸನಾತ್ಮಕ ವ್ಯವಸ್ಥೆ ರೂಪಿಸಲು ಇರುವ ಅವಧಿಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಹೊಸ ಹಣಕಾಸು ವರ್ಷ ರೂಪಿಸುವ ಬಗ್ಗೆ ಸರ್ಕಾರ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಶಂಕರ್‌ ಆಚಾರ್ಯ ಅವರ ನೇತೃತ್ವದ ಸಮಿತಿಯೊಂದನ್ನು ಈಗಾಗಲೇ ರಚನೆ ಮಾಡಿದೆ. ಡಿಸೆಂಬರ್‌ನಲ್ಲಿ ಸಮಿತಿ ತನ್ನ ವರದಿ ಸಲ್ಲಿಸಲಿದೆ. ಆ ಬಳಿಕ ಸರ್ಕಾರ ಅಂತಿಮ ನಿರ್ಧಾರಕ್ಕೆ ಬರಲಿದೆ.

ಹಣಕಾಸು ವರ್ಷವನ್ನು ಜನವರಿ 1 ರಿಂದ ಡಿಸೆಂಬರ್ 31ರವರೆಗೆ (ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ) ನಿಗದಿ ಮಾಡಬಹುದು ಎಂದು ಈ ಹಿಂದೆ 1985ರಲ್ಲಿ ಎಲ್‌.ಕೆ.ಜಾ ಸಮಿತಿಯು ಶಿಫಾರಸು ಸಲ್ಲಿಸಿತ್ತು. ಆದರೆ, ಅದನ್ನು ಅಂದಿನ ಸರ್ಕಾರ ಒಪ್ಪಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.