ADVERTISEMENT

ಆರ್‌ಬಿಐ ಕಿವಿ ಹಿಂಡಿದ ‘ಸುಪ್ರೀಂ’

ಬ್ಯಾಂಕ್‌ಗಳ ₹85 ಸಾವಿರ ಕೋಟಿ ಬಾಕಿ ಉಳಿಸಿಕೊಂಡ 57 ಸುಸ್ತಿದಾರರು

ಪಿಟಿಐ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
ಆರ್‌ಬಿಐ ಕಿವಿ ಹಿಂಡಿದ ‘ಸುಪ್ರೀಂ’
ಆರ್‌ಬಿಐ ಕಿವಿ ಹಿಂಡಿದ ‘ಸುಪ್ರೀಂ’   

ನವದೆಹಲಿ : ತಲಾ ₹500 ಕೋಟಿಗಿಂತ ಹೆಚ್ಚು ಸಾಲ ಪಡೆದ  ಇನ್ನೂ 57 ಸುಸ್ತಿದಾರರಿಂದ ಬ್ಯಾಂಕ್‌ಗಳಿಗೆ ಒಟ್ಟು ₹85 ಸಾವಿರ ಕೋಟಿ ಸಾಲ ಮರು ಪಾವತಿಯಾಗಬೇಕಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಸಾಲ ಮರುಪಾವತಿಸದ ಸುಸ್ತಿದಾರರ ಪಟ್ಟಿಯಲ್ಲಿರುವವರು ಯಾರ್‍್ಯಾರು?ಅವರ ಹೆಸರನ್ನು ಏಕೆ ಬಹಿರಂಗಗೊಳಿಸುತ್ತಿಲ್ಲ?   ಯಾವ ಉದ್ದೇಶಕ್ಕಾಗಿ ಅವರು ಬ್ಯಾಂಕ್‌ಗಳಿಂದ ಇಷ್ಟೊಂದು ದೊಡ್ಡ ಮೊತ್ತದ ಸಾಲ ಪಡೆದಿದ್ದಾರೆ? ಸಾಲ ಮರು ಪಾವತಿಸದಿರಲು ಅವರು ನೀಡಿದ ಕಾರಣಗಳೇನು? ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್ ನೇತೃತ್ವದ ಮೂವರು ಸದಸ್ಯರ ಪೀಠ ಆರ್‌ಬಿಐ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಗೈದಿದೆ.

ಜನರಿಗೆ ಏನು ಹೇಳುತ್ತೀರಿ?: ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಜನರು ಸುಸ್ತಿದಾರರ ಸಮಗ್ರ ಮಾಹಿತಿ ನೀಡುವಂತೆ ಕೋರಿದರೆ ಏನು ಹೇಳುತ್ತೀರಿ? ಸುಸ್ತಿದಾರರ ಹೆಸರು ಒದಗಿಸಿ ಎಂದರೆ ಏನಂಥ ಉತ್ತರ ಕೊಡುತ್ತೀರಿ?  ಸುಸ್ತಿದಾರರ ಹೆಸರನ್ನು ಬಹಿರಂಗಗೊಳಿಸಲು ಯಾಕಿಷ್ಟು ಮೀನಮೇಷ ಎಣಿಸುತ್ತೀರಿ? ಎಂದು ನ್ಯಾಯಪೀಠವು  ಆರ್‌ಬಿಐ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.

‘ಪಟ್ಟಿಯಲ್ಲಿರುವ ಎಲ್ಲರೂ ಉದ್ದೇಶಪೂರ್ವಕ ಸುಸ್ತಿದಾರರಲ್ಲ. ಬ್ಯಾಂಕ್‌ ಹಿತ ದೃಷ್ಟಿಯಿಂದ ಸುಸ್ತಿದಾರರ ಹೆಸರು ಬಹಿರಂಗಪಡಿಸುವುದು ಸಾಧುವಲ್ಲ.  ನಿಯಮಾವಳಿ ಪ್ರಕಾರ ಸುಸ್ತಿದಾರರ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ’   ಎಂದು ಆರ್‌ಬಿಐ ಪರ ವಕೀಲರು ನ್ಯಾಯಪೀಠಕ್ಕೆ ಸಮಜಾಯಿಷಿ ನೀಡಲು ಯತ್ನಿಸಿದರು.

ಕೆರಳಿದ ನ್ಯಾಯಮೂರ್ತಿಗಳು: ಸಿಬಿಐ ವಕೀಲರ ಈ ವಾದ ಮೊದಲೇ ಕೆರಳಿದ್ದ ನ್ಯಾಯಮೂರ್ತಿಗಳನ್ನು ಮತ್ತಷ್ಟು ಕೆರಳಿಸಿತು. ‘ನಿಮಗೆ(ಆರ್‌ಬಿಐ) ದೇಶದ ಹಿತ ಮುಖ್ಯವೋ? ಇಲ್ಲಾ  ಯಾವುದೋ ಒಂದು ಬ್ಯಾಂಕ್‌ ಹಿತ ಮುಖ್ಯವೋ?’ ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

‘ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ನ 2015ರಲ್ಲಿ ನೀಡಿದ ತೀರ್ಪಿನ ಅನ್ವಯ  ಬ್ಯಾಂಕ್‌ಗಳ ಬಾಕಿ ಸಾಲಕ್ಕೆ ಸಂಬಂಧಿಸಿದ ಸಾರ್ವಜನಿಕರಿಗೆ ಎಲ್ಲ ಮಾಹಿತಿ ಒದಗಿಸುವುದು ಆರ್‌ಬಿಐ ಹೊಣೆಗಾರಿಕೆಯಾಗಿರುತ್ತದೆ’ ಎಂದು  ಸರ್ಕಾರೇತರ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕೇಂದ್ರದ (ಸಿಪಿಐಎಲ್‌) ಪರ ವಕೀಲ ಪ್ರಶಾಂತ್‌ ಭೂಷಣ್‌ ವಾದಿಸಿದರು. ಸುಸ್ತಿದಾರರ ಹೆಸರು ಬಹಿರಂಗಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಟೋಬರ್‌ 28ರಂದು ಮತ್ತೆ ವಿಚಾರಣೆ ಮುಂದುವರೆಸುವುದಾಗಿ ನ್ಯಾಯಾಲಯ ಹೇಳಿತು.

ಬಡವರ ಸಾಲ: ನ್ಯಾಯಮೂರ್ತಿಗಳ ಕಳವಳ
ಬ್ಯಾಂಕ್‌ಗಳಿಂದ ಪಡೆದ ಕೋಟ್ಯಂತರ ರೂಪಾಯಿ ಸಾಲವನ್ನು ಹಿಂದಿರುಗಿಸಿದ ಕಾರಣ ವಸೂಲಾಗದ ಸಾಲದ ಪ್ರಮಾಣ ಬೃಹದಾಕಾರವಾಗಿ ಬೆಳೆದಿದೆ ಎಂದು  ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದರು.

‘ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ಹಣ ಸಾಲ ಪಡೆದವರು ಅದನ್ನು ಹಿಂದಿರುಗಿಸದೆ, ತಮ್ಮ ಕಂಪೆನಿ ದಿವಾಳಿಯಾಗಿದೆ ಎಂದು ಘೋಷಿಸಿ ರಾಜಾರೋಷವಾಗಿ ನುಣುಚಿಕೊಳ್ಳುತ್ತಾರೆ.  ಆದರೆ, ಕೇವಲ ₹ 15 ರಿಂದ 20   ಸಾವಿರ ಸಾಲ ಪಡೆದ ಬಡವರು, ರೈತರು  ಹಿಂದಿರುಗಿಸಲಾಗದೆ ಸಮಸ್ಯೆಗೆ  ಸಿಲುಕುತ್ತಾರೆ’ ಎಂದು ನ್ಯಾಯಮೂರ್ತಿಗಳು  ಕನಿಕರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT