ADVERTISEMENT

ಇಂದಿನಿಂದ ಜಿಎಸ್‌ಟಿ ನೋಂದಣಿ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ನೋಂದಣಿ ಪ್ರಕ್ರಿಯೆ ಭಾನುವಾರದಿಂದ ಪುನರಾರಂಭವಾಗಲಿದೆ. 
ಹೊಸ ವ್ಯವಸ್ಥೆಗೆ ವಲಸೆ ಹೋಗುವವರಿಗೆ ಜಿಎಸ್‌ಟಿ ನೆಟ್‌ವರ್ಕ್‌  ಅಂತರ್ಜಾಲ ತಾಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಾಲಿ ತೆರಿಗೆದಾರರು ಜೂನ್‌ 25 ರಿಂದ 3 ತಿಂಗಳ ಒಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಎಸ್‌ಟಿಎನ್‌ ಪ್ರಕಟಣೆ ತಿಳಿಸಿದೆ.

ಇ–ಕಾಮರ್ಸ್‌ ಕಂಪೆನಿಗಳು ಮತ್ತು ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್‌) ಆಗುವವರು ಹಾಗೂ ಹಾಲಿ ತೆರಿಗೆದಾರರು ನೋಂದಣಿ ಮಾಡಿಕೊಳ್ಳಬಹುದು.

ವ್ಯಾಪರ–ವಹಿವಾಟು ನಡೆಸಲು ಜಿಎಸ್‌ಟಿಎನ್‌ನಲ್ಲಿ ನೋಂದಣಿ ಕಡ್ಡಾಯವಾಗಿದೆ. ವಹಿವಾಟುದಾರರು ಈ ಜಾಲತಾಣದಲ್ಲಿ ಪ್ರತಿ ತಿಂಗಳು ತಮ್ಮ ವಹಿವಾಟಿನ ಮತ್ತು ರಿಟರ್ನ್‌ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ADVERTISEMENT

80.91 ಲಕ್ಷ ತೆರಿಗೆದಾರರ ಪೈಕಿ 65.6 ಲಕ್ಷದಷ್ಟು ತೆರಿಗೆದಾರರು (ಶೇ 81) ಈಗಾಗಲೇ ಜಿಎಸ್‌ಟಿಎನ್‌ಗೆ ವರ್ಗಾವಣೆಗೊಂಡಿದ್ದಾರೆ.

ರಫ್ತು ವ್ಯಾಪಾರದಲ್ಲಿ ಸ್ಪರ್ಧಾತ್ಮಕತೆ: ಜಿಎಸ್‌ಇಟಿ ವ್ಯವಸ್ಥೆಯಿಂದ ರಫ್ತು ವಹಿವಾಟು ಮತ್ತಷ್ಟು ಸ್ಪರ್ಧಾತ್ಮಕವಾಗಲಿದೆ’ ಎಂದು ವಾಣಿಜ್ಯ ಕಾರ್ಯದರ್ಶಿ ರೀಟಾ ಟಿಯೋಟಿಯಾ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ರಫ್ತುದಾರ ಸಂಘಟನೆಗಳ ಒಕ್ಕೂಟ (ಎಫ್‌ಐಇಒ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಿಎಸ್‌ಟಿಯಿಂದ ಭಾರತದಲ್ಲಿ ಒಂದೇ ಮಾರುಕಟ್ಟೆ ಇದೆ ಎನ್ನುವ ಭಾವನೆ ಮೂಡುತ್ತದೆ. ವ್ಯಾಪಾರ ನಡೆಸಲು ರಾಜ್ಯಗಳ ಮಧ್ಯೆ ಇರುವ ಅಡೆತಡೆ ನಿವಾರಣೆಯಾಗಲಿವೆ’ ಎಂದು ಹೇಳಿದರು.

‘ದೇಶದೊಳಗೆ ಸರಕು ಸಾಗಣೆಗೆ ಯಾವುದೆ ತೊಡಕುಗಳಿರುವುದಿಲ್ಲ.  ಹಲವು ವಿಧದ ತೆರಿಗೆ ಪಾವತಿ ಸಮಸ್ಯೆ ಇರುವುದಿಲ್ಲ.  ಸ್ಪರ್ಧಾತ್ಮಕವಾಗಿ ಹೆಚ್ಚು ವೆಚ್ಚವಿಲ್ಲದೇ ರಫ್ತು ವಹಿವಾಟು ನಡೆಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.