ADVERTISEMENT

ಇಂಧನ ಬೆಲೆ ದುಬಾರಿ: ವಿಶ್ವಬ್ಯಾಂಕ್‌

ಭಾರತದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ನಿರೀಕ್ಷೆ

ಪಿಟಿಐ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಇಂಧನ ಬೆಲೆ ದುಬಾರಿ: ವಿಶ್ವಬ್ಯಾಂಕ್‌
ಇಂಧನ ಬೆಲೆ ದುಬಾರಿ: ವಿಶ್ವಬ್ಯಾಂಕ್‌   

ವಾಷಿಂಗ್ಟನ್‌: ಪ್ರಸಕ್ತ ಹಣಕಾಸು ವರ್ಷದಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲಿನ ಬೆಲೆ ದುಬಾರಿಯಾಗುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ.

ಈ ಇಂಧನ ಉತ್ಪನ್ನಗಳ ಬೆಲೆಯು ಶೇ 20ರಷ್ಟು ಏರಿಕೆಯಾಗಲಿದೆ. ಭಾರತವು ಈ  ಉತ್ಪನ್ನಗಳ ಆಮದನ್ನೇ ಹೆಚ್ಚಾಗಿ ಅವಲಂಬಿಸಿರುವುದರಿಂದ ಈ ವಿದ್ಯಮಾನವು ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಬ್ಯಾಂಕ್‌ನ ಸರಕು ಮಾರುಕಟ್ಟೆಯ ಮುನ್ನೋಟ ವರದಿಯಲ್ಲಿ ತಿಳಿಸಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಸರಾಸರಿ 65 ಡಾಲರ್‌ಗಳಷ್ಟಾಗಲಿದೆ. 2017ರಲ್ಲಿ ಸರಾಸರಿ ಬೆಲೆ 53 ಡಾಲರ್‌ಗಳಷ್ಟಿತ್ತು. ಬೇಡಿಕೆ ಹೆಚ್ಚಳ ಮತ್ತು ಉತ್ಪಾದನೆ ಮೇಲಿನ ನಿರ್ಬಂಧದ ಕಾರಣಕ್ಕೆ ಬೆಲೆ ಹೆಚ್ಚಳಗೊಳ್ಳಲಿದೆ. ಲೋಹಗಳ ಬೆಲೆಗಳೂ ಶೇ 9ರಷ್ಟು ತುಟ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.

ADVERTISEMENT

‘ಬಿತ್ತನೆ ಪ್ರಮಾಣ ಕಡಿಮೆ ಇರುವುದರಿಂದ ಕೃಷಿ ಉತ್ಪನ್ನಗಳು ಶೇ 2ರಷ್ಟು ಏರಿಕೆಯಾಗಲಿವೆ. ಹವಾಮಾನ ವೈಪರೀತ್ಯ ಕನಿಷ್ಠ ಪ್ರಮಾಣದಲ್ಲಿ ಇರುವ ನಿರೀಕ್ಷೆ ಇದೆ. ಜಾಗತಿಕ ಬೆಳವಣಿಗೆಯ ಪ್ರಭಾವ ಮತ್ತು ಬೇಡಿಕೆಯಲ್ಲಿನ ಹೆಚ್ಚಳವು, ವಿವಿಧ ಸರಕುಗಳ ಬೆಲೆ ಏರಿಕೆಗೆ ಕಾರಣಗಳಾಗಲಿವೆ’ ಎಂದು ವಿಶ್ವಬ್ಯಾಂಕ್‌ನ ಹಿರಿಯ ನಿರ್ದೇಶಕ ಎಸ್‌. ದೇವರಾಜನ್‌ ಹೇಳಿದ್ದಾರೆ.

‘2016ರಲ್ಲಿ ಕುಸಿದಿದ್ದ ಕಚ್ಚಾ ತೈಲದ ಬೆಲೆ ಈಗಾಗಲೇ ಎರಡು ಪಟ್ಟು ಹೆಚ್ಚಳಗೊಂಡಿದೆ. ಪೆಟ್ರೋಲ್‌ ರಫ್ತು ದೇಶಗಳ ಸಂಘಟನೆ (ಒಪಿಇಸಿ) ಮತ್ತು ಕಚ್ಚಾ ತೈಲ ಉತ್ಪಾದಿಸುವ ಇತರ ದೇಶಗಳು ಉತ್ಪಾದನೆ ಹೆಚ್ಚಿಸದ ನಿರ್ಧಾರಕ್ಕೆ ಅಂಟಿಕೊಂಡಿರುವುದರಿಂದ ಪೂರೈಕೆಯಲ್ಲಿ ಕೊರತೆ ಕಂಡು ಬರಲಿದೆ’ ಎಂದು ಬ್ಯಾಂಕ್‌ನ ಹಿರಿಯ ಆರ್ಥಿಕತಜ್ಞ ಜಾನ್‌ ಬಫೆಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.