ADVERTISEMENT

ಈರುಳ್ಳಿ ಬೆಳೆಗಾರರಿಂದ ಪ್ರತಿಭಟನೆ

ಷರತ್ತುಬದ್ಧ ಖರೀದಿಗೆ ವಿರೋಧ: ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ರೈತರು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
ರೋಣ ತಾಲ್ಲೂಕಿನ ರೈತರು ಶನಿವಾರ ಗದಗ–ಬೆಟಗೇರಿ ಹೊರ ವಲಯದಲ್ಲಿ ರಸ್ತೆಗೆ ಅಡ್ಡವಾಗಿ ಮುಳ್ಳುಕಂಟಿ ಇಟ್ಟು ಪ್ರತಿಭಟಿಸಿದರು.
ರೋಣ ತಾಲ್ಲೂಕಿನ ರೈತರು ಶನಿವಾರ ಗದಗ–ಬೆಟಗೇರಿ ಹೊರ ವಲಯದಲ್ಲಿ ರಸ್ತೆಗೆ ಅಡ್ಡವಾಗಿ ಮುಳ್ಳುಕಂಟಿ ಇಟ್ಟು ಪ್ರತಿಭಟಿಸಿದರು.   

ಗದಗ: ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಯನ್ನು ಹಲವು ಷರತ್ತುಗಳೊಂದಿಗೆ ಇದೇ 7ರವರೆಗೆ ವಿಸ್ತರಿಸಿರುವುದಕ್ಕೆ ಜಿಲ್ಲೆಯ ರೋಣ ತಾಲ್ಲೂಕಿನ ರೈತರು ಶನಿವಾರ ರಸ್ತೆ ತಡೆ ನಡೆಸಿ ತೀವ್ರವಾಗಿ ವಿರೋಧಿಸಿದರು.

ಯಾವುದೇ ಷರತ್ತು ಇಲ್ಲದೆ ರೈತರಿಂದ ಈರುಳ್ಳಿ ಖರೀದಿಸಬೇಕು ಎಂದು ಆಗ್ರಹಿಸಿದ ಅವರು, ಗದಗ–ಬೆಟಗೇರಿ ರಾಜ್ಯ ಹೆದ್ದಾರಿಯಲ್ಲಿ ಮುಳ್ಳುಕಂಟಿ ಇಟ್ಟು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ರೋಣದಿಂದ ಗದುಗಿನ ಖರೀದಿ ಕೇಂದ್ರಕ್ಕೆ ಈರುಳ್ಳಿ ತಂದರು ಜಿಲ್ಲಾಡಳಿತ ಅದನ್ನು ಖರೀದಿಸುತ್ತಿಲ್ಲ. ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೋಣ ತಹಶೀಲ್ದಾರರು ಈರುಳ್ಳಿಯನ್ನು ಗದಗ ಎಪಿಎಂಸಿಗೆ ತೆಗೆದುಕೊಂಡು ಹೋಗಿ ಎಂದಿದ್ದರು. ಅದರಂತೆ 2 ದಿನಗಳ ಹಿಂದೆಯೇ ಇಲ್ಲಿಗೆ ಬಂದಿದ್ದೇವೆ. ಆದರೆ ಗದುಗ ಖರೀದಿ ಕೇಂದ್ರದ ಅಧಿಕಾರಿಗಳು ಖರೀದಿ ಪ್ರಕ್ರಿಯೆ ಮುಗಿದಿದೆ ಎನ್ನುತ್ತಿದ್ದಾರೆ. ಟ್ರ್ಯಾಕ್ಟರ್ ಬಾಡಿಗೆ ಮಾಡಿಕೊಂಡು ಬಂದಿದ್ದೇವೆ.

ಈರುಳ್ಳಿ ಖರೀದಿಸದಿದ್ದರೇ ಆರ್ಥಿಕವಾಗಿ ಇನ್ನಷ್ಟು ಹೊರೆಯಾಗುತ್ತದೆ’ ಎಂದು ರೈತರು ಅಳಲು ತೋಡಿಕೊಂಡರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

*
ಬೆಂಬಲ ಬೆಲೆ ಯೋಜನೆಯಡಿ ಈರುಳ್ಳಿ ಮಾರಾಟ ಮಾಡಲು ಖರೀದಿ ಕೇಂದ್ರಕ್ಕೆ ಬರುವ ರೈತರು ಗ್ರಾಮ ಲೆಕ್ಕಾಧಿಕಾರಿಯಿಂದ ಬೆಳೆ ಪ್ರಮಾಣ ಪತ್ರ ಪಡೆದುಕೊಂಡು ಬರುವುದು ಕಡ್ಡಾಯ.
-ಎನ್‌.ಎಸ್‌. ಪ್ರಸನ್ನಕುಮಾರ
ಗದಗ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT