ADVERTISEMENT

ಉದ್ಯೋಗ ಕಡಿತ ಇಲ್ಲ: ಕಾಗ್ಮಿಜಂಟ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಉದ್ಯೋಗ ಕಡಿತ ಇಲ್ಲ: ಕಾಗ್ಮಿಜಂಟ್‌ ಭರವಸೆ
ಉದ್ಯೋಗ ಕಡಿತ ಇಲ್ಲ: ಕಾಗ್ಮಿಜಂಟ್‌ ಭರವಸೆ   
ನವದೆಹಲಿ: ‘ಸಂಸ್ಥೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಉದ್ಯೋಗಗಳನ್ನು ಕಡಿತ ಮಾಡಲಾಗುತ್ತಿಲ್ಲ’ ಎಂದು  ಅಮೆರಿಕ ಮೂಲದ ಐ.ಟಿ ಸಂಸ್ಥೆ ಕಾಗ್ನಿಜಂಟ್‌ನ ಅಧ್ಯಕ್ಷ ರಾಜೀವ್‌ ಮೆಹ್ತಾ ಅವರು ತಮ್ಮ ಸಿಬ್ಬಂದಿಗೆ ಭರವಸೆ ನೀಡಿದ್ದಾರೆ.
 
‘ಉದ್ಯೋಗಿಗಳು ಸ್ವಇಚ್ಛೆಯಿಂದ ಸಂಸ್ಥೆ ತೊರೆಯುವ (ವಿಎಸ್‌ಪಿ) ನೀತಿಯನ್ನು ಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ತರಲಾಗಿದೆ.  ಭಾರತ ಮತ್ತು ಅಮೆರಿಕದಲ್ಲಿ ಏಕಕಾಲಕ್ಕೆ ಇದನ್ನು ಅನ್ವಯಿಸಲಾಗಿದೆ.  ಇತರ ಐ.ಟಿ ಸಂಸ್ಥೆಗಳು ಇದನ್ನು ನಿಯಮಿತವಾಗಿ ಪಾಲಿಸಿಕೊಂಡು ಬಂದಿವೆ’ ಎಂದು ಅವರು ಹೇಳಿದ್ದಾರೆ.
 
‘ನಿರ್ದೇಶಕರು, ಹಿರಿಯ ಉಪಾಧ್ಯಕ್ಷರು  6 ರಿಂದ 9 ತಿಂಗಳ ವೇತನ ಪಡೆದು ಸಂಸ್ಥೆ ತೊರೆಯಲು ‘ವಿಎಸ್‌ಪಿ’ ಕೊಡುಗೆ ನೀಡಲಾಗಿದೆ. ಈ ಮೂಲಕ ಹೊಸಬರು ಉನ್ನತ ಹುದ್ದೆಗೆ ಏರಲು ಅನುವು ಮಾಡಿಕೊಡಲಾಗಿದೆ. ಹೆಸರೇ ಸೂಚಿಸುವಂತೆ ಇದೊಂದು ಸ್ವಇಚ್ಛೆಯ ಯೋಜನೆಯಾಗಿದೆ’ ಎಂದು ಸಿಬ್ಬಂದಿಗೆ ಬರೆದ ಇ–ಮೇಲ್‌ನಲ್ಲಿ ತಿಳಿಸಿದ್ದಾರೆ.
 
‘ಸಂಸ್ಥೆಯು ಯಾವುದೇ ಉದ್ಯೋಗಿಯನ್ನು ಮನೆಗೆ ಕಳಿಸಿಲ್ಲ. ಸಾಫ್ಟ್‌ವೇರ್‌ ಉದ್ದಿಮೆಯಲ್ಲಿ ಜಾರಿಯಲ್ಲಿ ಇರುವಂತೆ ಪ್ರತಿ ವರ್ಷ ಸಿಬ್ಬಂದಿಯ ಕಾರ್ಯಕ್ಷಮತೆ ಪರಾಮರ್ಶೆ ನಡೆಸುತ್ತೇವೆ.  ಅರ್ಹರನ್ನು ಉಳಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.
 
ಸಂಸ್ಥೆಯಲ್ಲಿ ಕೆಲವರನ್ನು ಒತ್ತಾಯದಿಂದ ಮನೆಗೆ ಕಳಿಸಲಾಗುತ್ತಿದೆ ಎಂದು ಅನೇಕ ಸಿಬ್ಬಂದಿ  ದೂರಿದ್ದಾರೆ. ಉದ್ಯೋಗಿಗಳ ಸಂಘಟನೆಗಳು ಕಾರ್ಮಿಕ ಆಯುಕ್ತರಿಗೆ ಈ ಸಂಬಂಧ ದೂರು ನೀಡಿವೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ಒತ್ತಾಯಿಸಿವೆ.
 
ಮಧ್ಯಮ ಹಂತದ ಹಿರಿಯ ಕಾರ್ಯನಿರ್ವಾಹಕರು ಸ್ವ ಇಚ್ಛೆಯಿಂದ ಕೆಲಸ ತೊರೆಯುವಂತೆ ಸಂಸ್ಥೆಯು, ಒತ್ತಾಯಿಸುತ್ತಿದೆ. ಇದರಿಂದಾಗಿ ಭಾರತದಲ್ಲಿನ 6 ಸಾವಿರದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. 
 
ಅಮೆರಿಕದಲ್ಲಿ ಹೆಚ್ಚಿನ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಉದ್ದೇಶಕ್ಕೆ ಭಾರತದಲ್ಲಿ ನೌಕರರನ್ನು ಮನೆಗೆ ಕಳಿಸಲಾಗುತ್ತಿದೆ ಎನ್ನುವ ಊಹಾಪೋಹಗಳನ್ನೂ ಸಂಸ್ಥೆಯು ತಳ್ಳಿ ಹಾಕಿದೆ. ವಿಶ್ವದಾದ್ಯಂತ ಸ್ಥಳೀಯವಾಗಿ ನಿರಂತರವಾಗಿ ನೇಮಕ ಮಾಡಿಕೊಳ್ಳುತ್ತಿದೆ ಎಂದೂ  ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.