ADVERTISEMENT

‘ಎನ್‌ಪಿಎ’ಗೆ ಶೀಘ್ರ ಪರಿಹಾರ

ಪಿಟಿಐ
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST
‘ಎನ್‌ಪಿಎ’ಗೆ ಶೀಘ್ರ ಪರಿಹಾರ
‘ಎನ್‌ಪಿಎ’ಗೆ ಶೀಘ್ರ ಪರಿಹಾರ   

ನವದೆಹಲಿ: ‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಹೆಚ್ಚುತ್ತಿರುವ ವಸೂಲಾಗದ ಸಾಲದ ಸಮಸ್ಯೆಗೆ (ಎನ್‌ಪಿಎ) ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ  ಭರವಸೆ ನೀಡಿದ್ದಾರೆ.

‘ಹೊಸ ನೀತಿಯು  ಸಾಲ ಮರು ಪಾವತಿಗೆ ಸುಸ್ತಿದಾರರ ಮೇಲೆ ತೀವ್ರ  ಒತ್ತಡ ಹೇರಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸಹಯೋಗದಲ್ಲಿ ಈ ಪರಿಹಾರ ರೂಪಿಸಲಾಗುತ್ತಿದೆ.‘ಎನ್‌ಪಿಎ’ ಮೊತ್ತ ದೊಡ್ಡದಿದ್ದರೂ, ಸಾಲ ಮರುಪಾವತಿ ಮಾಡದ ಉದ್ದಿಮೆ ಸಂಸ್ಥೆಗಳ ಸಂಖ್ಯೆ ಮಾತ್ರ ಕಡಿಮೆ ಇದೆ.  ಸಾಲ ಮರುಪಾವತಿಗೆ ಒತ್ತಡ ತರಲು ಈ ಸಂಸ್ಥೆಗಳ ಬ್ಯಾಂಕ್‌ ಖಾತೆ ಮೇಲೆ ನಿರ್ಬಂಧ ವಿಧಿಸಿದರೆ ಮರುಪಾವತಿ ಸಾಧ್ಯವಾಗಲಿದೆ’ ಎಂದು ಜೇಟ್ಲಿ ಹೇಳಿದ್ದಾರೆ.

ಖಾಸಗಿ ವಾಹಿನಿಯ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಆದರೆ, ಈ ಯೋಜನೆ ಬಗ್ಗೆ ಹೆಚ್ಚಿನ ವಿವರ ನೀಡಲು ಜೇಟ್ಲಿ ನಿರಾಕರಿಸಿದ್ದಾರೆ.
‘ಈ ಬಗ್ಗೆ ನೀವು ಕೆಲ ದಿನಗಳವರೆಗೆ ಕಾಯಬೇಕಾಗಬಹುದು.  ಸರ್ಕಾರ ಮತ್ತು ಆರ್‌ಬಿಐ ಜಂಟಿಯಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿವೆ. ಸಾಲ ಮರುಪಾವತಿ ಮಾಡುವಂತೆ ಈ ಪರಿಹಾರವು ಸುಸ್ತಿದಾರರ ಮೇಲೆ ಒತ್ತಡ ಹೇರಲಿದೆ’ ಎಂದರು.

ADVERTISEMENT

‘ಎನ್‌ಪಿಎ ಸಮಸ್ಯೆ ಬಗೆಹರಿಸಿಕೊಳ್ಳುವಾಗ  ಸಂಸ್ಥೆಗಳಲ್ಲಿನ ಪಾಲುದಾರರು ಮತ್ತು ಖರೀದಿದಾರರ ವಿವರಗಳನ್ನು  ತಿಳಿದುಕೊಂಡರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗಲಿದೆ.  ಸಾಲ ಮರು ಪಾವತಿಸಲು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಮಾರ್ಗೊಪಾಯಗಳೂ ಇವೆ’ ಎಂದರು. ವಿವಿಧ ಬ್ಯಾಂಕ್‌ಗಳು ತನ್ನ ಗಮನಕ್ಕೆ ತಂದಿರುವ ಎನ್‌ಪಿಎ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆರ್‌ಬಿಐ ಸಮಿತಿಯೊಂದನ್ನು ರಚಿಸಿದೆ.

ಜೇಟ್ಲಿ ಭರವಸೆ: ಷೇರು ಬೆಲೆ ಹೆಚ್ಚಳ
ಮುಂಬೈ (ಪಿಟಿಐ): ಎನ್‌ಪಿಎ ಕುರಿತು ಸಚಿವ ಜೇಟ್ಲಿ ನೀಡಿರುವ ಭರವಸೆಯಿಂದಾಗಿ ಮುಂಬೈ ಷೇರುಪೇಟೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಬ್ಯಾಂಕ್ ಷೇರುಗಳು ಶೇ 6.5ರವರೆಗೆ ಲಾಭ ಬಾಚಿಕೊಂಡವು. ಬ್ಯಾಂಕ್‌ ಆಫ್‌ ಇಂಡಿಯಾ ಶೇ 5.02, ಬ್ಯಾಂಕ್‌ ಆಫ್ ಬರೋಡಾ ಶೇ 4.26, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಶೇ 4.05, ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ಶೇ 3.29ರಷ್ಟು ಗರಿಷ್ಠ ಏರಿಕೆ ಕಂಡುಕೊಂಡವು. ಖಾಸಗಿ ವಲಯದ ಬ್ಯಾಂಕ್‌ಗಳ ಷೇರುಗಳಲ್ಲಿಯೂ ಏರಿಕೆ ಕಂಡುಬಂದಿತು.

ಷೇರುಪೇಟೆಗಳ ವಾರದ ವಹಿವಾಟು  ಸಕಾರಾತ್ಮವಾಗಿ ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಮತ್ತೆ 9,100ರ ಗಡಿ ತಲುಪಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಿಯಾಗದ ಸಾಲದ ಪ್ರಮಾಣ (ಎನ್‌ಪಿಎ) ತಗ್ಗಿಸಲು ಶೀಘ್ರವೇ ಪರಿಹಾ ರ ನೀಡುವುದಾಗಿ ಹಣಕಾಸು ಸಚಿವ ಅರುಣ್‌ ಜೇಟ್ಲಿ  ಹೇಳಿದ್ದಾರೆ. ಈ ಸುದ್ದಿಯಿಂದ ಬ್ಯಾಂಕಿಂಗ್‌ ವಲಯದ  ಷೇರುಗಳು ಏರಿಕೆ ಕಂಡುಕೊಂಡವು. ಇದರಿಂದ ಸಕಾರಾತ್ಮಕವಾಗಿ ವಹಿವಾಟು ಅಂತ್ಯಕಂಡಿತು.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) 89 ಅಂಶ ಏರಿಕೆ ಕಂಡು, 29,540 ಅಂಶಗಳಲ್ಲಿ ಮತ್ತು ಎನ್‌ಎಸ್‌ಇ ನಿಫ್ಟಿ 22 ಅಂಶ ಹೆಚ್ಚಾಗಿ, 9,108 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಗುರುವಾರದ ವಹಿವಾಟಿನಲ್ಲಿ ಬಿಎಸ್‌ಇ 164 ಮತ್ತು ಎನ್‌ಎಸ್‌ಇ 56 ಅಂಶಗಳಷ್ಟು ಏರಿಕೆ ಕಂಡುಕೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.