ADVERTISEMENT

ಎನ್‌ಪಿಎಸ್‌ ಹೂಡಿಕೆಯಲ್ಲಿನ ಲಾಭ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2017, 19:30 IST
Last Updated 4 ಏಪ್ರಿಲ್ 2017, 19:30 IST
ಎನ್‌ಪಿಎಸ್‌  ಹೂಡಿಕೆಯಲ್ಲಿನ ಲಾಭ
ಎನ್‌ಪಿಎಸ್‌ ಹೂಡಿಕೆಯಲ್ಲಿನ ಲಾಭ   
ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ಎಂಬ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ.   ವೈದ್ಯಕೀಯ ವಿಜ್ಞಾನದ ಪ್ರಗತಿ, ಜೀವರಕ್ಷಕ ಔಷಧಗಳು ಹಾಗೂ ಅತ್ಯಾಧುನಿಕ ಆಸ್ಪತ್ರೆಗಳಿಂದಾಗಿ ಮಾನವನ ಸರಾಸರಿ ಆಯುಷ್ಯ ಪ್ರಮಾಣ 52 ರಿಂದ 67ಕ್ಕೆ ಏರಿದೆ. ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ದುಡಿಯಲು ಒಂದು ಹಂತವಿರುತ್ತದೆ.

ಯಾವುದೇ ವ್ಯಕ್ತಿ ಯಾವುದೇ ಉದ್ಯೋಗದಲ್ಲಿ ತೊಡಗಿಸಿಕೊಂಡರೂ, ಆತ ಒಂದಲ್ಲಾ ಒಂದು ದಿವಸ ತನ್ನ ವೃತ್ತಿಯಿಂದ ನಿವೃತ್ತನಾಗಲೇ ಬೇಕು. ನಿವೃತ್ತಿ ಎಂದಾಕ್ಷಣ ಒಬ್ಬ ವ್ಯಕ್ತಿ  ವಯಸ್ಸಿನ ಮಿತಿಯಿಂದ ನಿವೃತ್ತನಾಗಬಹುದು ಎನ್ನುವ ಅಭಿಪ್ರಾಯ ಹಲವರ ಮನಸ್ಸಿನಲ್ಲಿ ಬೇರೂರಿದೆ. ಈ ವಿಚಾರ ಹೊರನೋಟಕ್ಕೆ ಸರಿ ಎಂಬ ಕಂಡರೂ, ಇಂದಿನ ವಾತಾವರಣ, ಪ್ರತಿಕೂಲ ಸನ್ನಿವೇಶ ಹಾಗೂ ನೌಕರಿಯಲ್ಲಿ ಅಭದ್ರತೆ ಇವುಗಳಿಂದಾಗಿ ಎಲ್ಲರೂ ವಯಸ್ಸಿನ ಮಿತಿಯಿಂದಲೇ ನಿವೃತ್ತನಾಗಬಹುದು ಎನ್ನುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ವಯಸ್ಸಾಗದಿದ್ದರೂ ನಿವೃತ್ತಿ ಹೊಂದಲು ಹಲವಾರು ದಾರಿಗಳಿವೆ.
 
lಗುತ್ತಿಗೆ ಆಧಾರದ ಉದ್ಯೋಗ, ವಿಶಿಷ್ಟ  ಉದ್ದೇಶದ ನೇಮಕಾತಿ, ಸೇವೆಯಿಂದ  ವಜಾ, ಸ್ವಯಂ ನಿವೃತ್ತಿ, ಹೀಗೆ ಹತ್ತು ಹಲವು ಕಾರಣಗಳಿಂದಾಗಿ ನಿರ್ದಿಷ್ಟ ಅವಧಿಗೂ ಮುಂಚೆಯೇ ಅನೇಕರು ಉದ್ಯೋಗದಿಂದ ನಿವೃತ್ತರಾಗುತ್ತಾರೆ. ಜೀವನದ ಮಧ್ಯ ಭಾಗದಲ್ಲಿ ಅಥವಾ ಸಂಜೆಯಲ್ಲಿ ದುಡಿಯಲು ಅಸಮರ್ಥರಾದಾಗ ಆರ್ಥಿಕ ಮುಗ್ಗಟ್ಟನ್ನು ಎದುರಿಸಲು ಪ್ರತಿಯೊಬ್ಬ ವ್ಯಕ್ತಿಯೂ, ಜೀವನದ ಪ್ರಾರಂಭದಿಂದಲೇ ಸರಿಯಾದ ಆರ್ಥಿಕ ಶಿಸ್ತು ಹಾಗೂ ಯೋಜನೆ  ಅಳವಡಿಸಿಕೊಳ್ಳುವ ಅವಶ್ಯವಿದೆ.
 
ಸೇವೆಯಲ್ಲಿ ಇರುವವರ ಸಂಖ್ಯೆಗಿಂತ ನಿವೃತ್ತರಾಗಿ ಜೀವನ ಸಾಗಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪಿಂಚಣಿ ಎನ್ನುವ ಪರಿಕಲ್ಪನೆ ಸರ್ಕಾರಿ ಹಾಗೂ ಖಾಸಗಿ ಕಂಪೆನಿಗಳಲ್ಲಿ ಮಾಯವಾಗುತ್ತಿದೆ.  2004 ರಿಂದಲೇ ಸರ್ಕಾರಿ ನೌಕರರಿಗೂ ಪಿಂಚಣಿ ಸೌಲಭ್ಯ ಇಲ್ಲವಾಗಿದೆ.  ಜನರು ಆರ್ಥಿಕ ಮುಗ್ಗಟ್ಟಿನಿಂದ ಹೊರ ಬಂದು, ಜೀವನದ ಸಂಜೆಯಲ್ಲಿ ಸುಖವಾಗಿ ಬಾಳಿ ಬದುಕಲು ಸಾಮಾಜಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ರಾಷ್ಟ್ರೀಯ ಪಿಂಚಣಿ ಯೋಜನೆ  ಆರಂಭಿಸಿದೆ.
 
ಎನ್‌.ಪಿ.ಎಸ್‌. ಯಾರು ಮಾಡಬಹುದು
ಅನಿವಾಸಿ  ಭಾರತೀಯರೂ ಸೇರಿದಂತೆ ಪ್ರತಿಯೊಬ್ಬರೂ  ಇಲ್ಲಿ ಹಣ ತೊಡಗಿಸಬಹುದು. ಇಲ್ಲಿ ಹಣ ತೊಡಗಿಸುವ ವ್ಯಕ್ತಿಗಳು 18–60 ವರ್ಷದ ಒಳಗಿನವರು ಇರಬೇಕು. 
 
ಯೋಜನೆಯ ವೈಶಿಷ್ಟ್ಯತೆಗಳು
lಖಾತೆ ತೆರೆಯುವ ವಿಧಾನ ತುಂಬಾ ಸರಳ ಹಾಗೂ ಖಾತೆ ತೆರೆದ ತಕ್ಷಣ ಶಾಶ್ವತ ಪಿಂಚಣಿ ಖಾತೆ ಸಂಖ್ಯೆ ದೊರೆಯುತ್ತದೆ. 
lಹೂಡಿಕೆ ಹಾಗೂ ಫಂಡ್‌ ಮ್ಯಾನೇಜರ್‌ ಅವರನ್ನು ಹೂಡಿಕೆದಾರರೇ  ಆರಿಸಿಕೊಳ್ಳಬಹುದು
lಉದ್ಯೋಗ ಬದಲಿಸಿದರೂ, ಅಥವಾ ಈಗ ವಾಸವಾಗಿರುವ ಸ್ಥಳ ಬದಲಿಸಿದರೂ,  ಈ ಖಾತೆ ಯಥಾಸ್ಥಿತಿಯಲ್ಲಿ ಮುಂದುವರಿಸಬಹುದು
lಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಈ ಯೋಜನೆಯನ್ನು ನಿರ್ವಹಿಸುತ್ತದೆ.
lಇದೊಂದು ತುಂಬಾ ಸರಳ ಯೋಜನೆಯಾಗಿದೆ. ಜನಸಾಮಾನ್ಯರೂ  ಭಾಗವಹಿಸಬಹುದು.
ಖಾತೆದಾರರು ತಮಗೆ ಒದಗಿಸಿದ ಪಿನ್‌  ಹಾಗೂ ಪಾಸ್‌ವರ್ಡ್‌ ಮುಖಾಂತರ  ಖಾತೆಯ ಸಂಪೂರ್ಣ ವಿವರ ಪಡೆಯಬಹುದು. 
 ಈ ಯೋಜನೆಯ ಬ್ಯಾಂಕ್‌ ಆಗಿ ಬ್ಯಾಂಕ್‌ ಆಫ್‌ ಇಂಡಿಯಾ  ಕರ್ತವ್ಯ ನಿರ್ವಹಿಸುತ್ತಿದೆ. 
 ಐಸಿಐಸಿಐ ಪ್ರುಡೆನ್ಶಿಯಲ್‌ ಪೆನ್ಶನ್‌ ಫಂಡ್‌, ಐಡಿಎಫ್‌ಸಿ ಪೆನ್ಶನ್‌  ಫಂಡ್‌, ಕೋಟಕ್‌ ಮಹೀಂದ್ರಾ  ಪೆನ್ಶನ್‌ ಫಂಡ್‌, ರಿಲಯನ್‌್ಸ ಕ್ಯಾಪಿಟಲ್‌  ಪೆನ್ಶನ್‌  ಫಂಡ್‌, , ಎಸ್‌ಬಿಐ  ಪೆನ್ಶನ್‌  ಫಂಡ್‌,ಯುಟಿಐ ರಿಟೈರ್‌ಮೆಂಟ್‌ ಸೊಲುಷನ್ಸ್‌  ಪೆನ್ಶನ್‌  ಫಂಡ್‌ ಹೀಗೆ ಇವುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬಹುದು.
 
ಇದೇ ವೇಳೆ ಖಾತೆದಾರರು ಒಂದು ಫಂಡ್‌ನಿಂದ ಇನ್ನೊಂದು ಫಂಡ್‌ಗೆ ಪ್ರತೀ ವರ್ಷ ಮೇ ತಿಂಗಳಲ್ಲಿ ಹೂಡಿಕೆ  ಬದಲಾಯಿಸುವ ಸೌಲಭ್ಯ ಹೊಂದಿರುತ್ತಾರೆ.
ಈ ಯೋಜನೆಯಲ್ಲಿ ಖಾತೆ ಹೊಂದಿದವರು ವಾರ್ಷಿಕ ಕನಿಷ್ಠ ₹ 6,000 ತುಂಬಬೇಕು. ವರ್ಷದಲ್ಲಿ ನಾಲ್ಕು ಬಾರಿ ಹಣ ಕಟ್ಟಬಹುದು. ಹಾಗೆ ಕಟ್ಟುವಾಗ ಕನಿಷ್ಠ ₹ 500 ಕಟ್ಟಬೇಕು. ಇಲ್ಲಿ ಹಣ ತೊಡಗಿಸಲು ಗರಿಷ್ಠ ಮಿತಿ ಎನ್ನುವುದಿಲ್ಲ.  

ಗ್ರಾಹಕರು ಕಾಲ ಕಾಲಕ್ಕೆ ತೊಡಗಿಸುವ ಹಣವನ್ನು, ಮೇಲೆ ನಮೂದಿಸಿದ ಆರು ಪಿಂಚಣಿ ನಿಧಿ  ಸಂಸ್ಥೆಗಳು, ಷೇರು ಮಾರುಕಟ್ಟೆ, ಸರ್ಕಾರಿ ಸಾಲ ಪತ್ರ  ಹಾಗೂ ಸರ್ಕಾರೇತರ ನಿಶ್ಚಿತ ವರಮಾನ ಬರುವ ಕಂಪೆನಿಗಳಲ್ಲಿ ಹೂಡಲಾಗುತ್ತದೆ. ಹೂಡಿಕೆದಾರರ ವಯಸ್ಸಿಗನುಗುಣವಾಗಿ ಈ ಮೂರು ವಿಧಾನಗಳಲ್ಲಿ ಶೇಕಡವಾರು ನಿರ್ಧರಿಸಿ ಹಣ ತೊಡಗಿಸುತ್ತಾರೆ.
 
ಇದೊಂದು ಕೇಂದ್ರ ಸರ್ಕಾರದ ದೀರ್ಘಾವಧಿ ಉಳಿತಾಯ ಯೋಜನೆ. ಷೇರು ಮಾರುಕಟ್ಟೆಯಲ್ಲಿ ಏರಿಳಿತ ಕಂಡರೂ, ಪ್ರತಿ ವರ್ಷ ಶೇಕಡಾವಾರು ಪ್ರಮಾಣದಲ್ಲಿ ಇಲ್ಲಿ ಹಣ  ತೊಡಗಿಸುವುದರಿಂದ, ಇದೊಂದು ಕ್ರಮಬದ್ಧವಾದ ಹೂಡಿಕೆ (ಎಸ್‌ಐಪಿ) ಎಂದರೆ ತಪ್ಪಾಗಲಾರದು.  ಷೇರು ಸೂಚ್ಯಾಂಕಕ್ಕೆ ಅನುಗುಣವಾಗಿ ಸರಾಸರಿ ಉತ್ತಮ ಫಲಿತಾಂಶ ಪಡೆಯಬಹುದು. ಷೇರು ಮಾರುಕಟ್ಟೆ ಹೊರತಾಗಿ ಕೂಡಾ ಬೇರೆ ಎರಡು ನಿಶ್ಚಿತ ವರಮಾನ ಬರುವ ಯೋಜನೆಗಳಲ್ಲಿ ಹಣ ತೊಡಗಿಸುವುದರಿಂದ, ದೀರ್ಘಾವಧಿಯಲ್ಲಿ ಉತ್ತಮ ವರಮಾನ ಪಡೆಯಬಹುದು.
 
 ಆದಾಯ ತೆರಿಗೆ ವಿನಾಯತಿ
ಕೇಂದ್ರ ಸರ್ಕಾರ ಕಳೆದ ವರ್ಷ  ಬಜೆಟ್‌ ಮಂಡಿಸುವಾಗ ಆದಾಯ ತೆರಿಗೆದಾರರಿಗೆ, ಒಂದು ಉತ್ತಮ ಉಳಿತಾಯದ ಯೋಜನೆ ಅಡಿಯಲ್ಲಿ ಹಣ ಹೂಡಿ, ಗಣನೀಯವಾದ ತೆರಿಗೆ ವಿನಾಯತಿ ಪಡೆಯಲು ಸೆಕ್ಷನ್‌ 80ಸಿಸಿಡಿ (ಐ.ಬಿ) ಅಡಿಯಲ್ಲಿ ಬಂಪರ್‌ ಕೊಡುಗೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
 
ಈ ಯೋಜನೆಯನ್ವಯ ಹೂಡಿಕೆದಾರರು ವರ್ಷಕ್ಕೆ ಗರಿಷ್ಠ ₹ 50,000  ಎನ್‌.ಪಿ.ಎಸ್‌.ನಲ್ಲಿ ತೊಡಗಿಸಿ, ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಸೆಕ್ಷನ್‌ 80ಸಿ ಆಧಾರದ ಮೇಲೆ, ಗರಿಷ್ಠ್ಟ ₹ 1.50 ಲಕ್ಷ (ಎಲ್‌.ಐ.ಸಿ. ಪ್ರೀಮಿಯಮ್‌, ಪಿ.ಎಫ್‌., ಪಿ.ಪಿ.ಎಫ್‌., ಎನ್‌.ಎಸ್‌.ಸಿ., ಇ.ಎಲ್‌.ಎಸ್‌.ಎಸ್‌., ಮ್ಯೂಚುವಲ್‌ ಫಂಡ್‌ ಯುನಿಟ್ಟುಗಳು, ಎರಡು ಮಕ್ಕಳ ಟ್ಯೂಷನ್‌ ಫೀ, ಗೃಹಸಾಲ ಕಂತು, ಬ್ಯಾಂಕ್‌ ಠೇವಣಿ, ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌ ಅಂಚೆ ಕಚೇರಿ ಅವಧಿ ಠೇವಣಿ) ಹೊರತುಪಡಿಸಿ, ಎನ್‌ಪಿಎಸ್‌ನಲ್ಲಿ ₹ 50,000 ಹಣ ಇರಿಸಿ ಒಟ್ಟಿನಲ್ಲಿ ₹ 2 ಲಕ್ಷಗಳ ತನಕ (ಸೆಕ್ಷನ್‌ 80ಸಿ ₹ 1.50 ಲಕ್ಷ+80ಸಿಸಿಡಿ(ಐ.ಬಿ) ₹ 50,000) ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.
 
ಶೇ 20 ಹಾಗೂ ಶೇ 30ರಷ್ಟು ಆದಾಯ ತೆರಿಗೆ ಪಾವತಿಸುವವರಿಗೆ  ಎನ್‌ಪಿಎಸ್‌ ಒಂದು ದೊಡ್ಡ ವರದಾನವಾಗಿದೆ. ಈ ವರ್ಗದ ಜನರು ಈ ಯೋಜನೆ ಅಳವಡಿಸಿಕೊಂಡು ಕ್ರಮವಾಗಿ ವಾರ್ಷಿಕ ₹ 10,000 ಹಾಗೂ 15,000 ವಿನಾಯ್ತಿ ಪಡೆಯಬಹುದು. ಇದೊಂದು ಸಾಮಾಜಿಕ ಭದ್ರತೆಯುಳ್ಳ ದೀರ್ಘಾವಧಿಯ ಉತ್ತಮ ಉಳಿತಾಯ ಯೋಜನೆ ಕೂಡಾ. 
 
ಕಡ್ಡಾಯ ಉಳಿತಾಯಕ್ಕೆ ಇದಕ್ಕಿಂತ ಮಿಗಿಲಾದ ಉತ್ತಮ ಉಳಿತಾಯ ಯೋಜನೆ ಬೇರೊಂದಿಲ್ಲ.   ಎನ್‌.ಪಿ.ಎಸ್‌. ನಿಂದಾಗಿ ಕ್ರೋಡೀಕರಣಗೊಂಡ ಮೊತ್ತದಿಂದ ಇಳಿವಯಸ್ಸಿನಲ್ಲಿ ಪ್ರತೀ ತಿಂಗಳೂ ಒಂದಿಷ್ಟು ಹಣ ಪಿಂಚಣಿ ರೂಪದಲ್ಲಿ ಪಡೆದು ನೆಮ್ಮದಿಯಿಂದ ಇರಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.