ADVERTISEMENT

ಎಮೊಜಿ: ಭಾವನೆಯ ಹೊಸ ಭಾಷೆ!

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 19:30 IST
Last Updated 24 ಜನವರಿ 2017, 19:30 IST
ಎಮೊಜಿ: ಭಾವನೆಯ ಹೊಸ ಭಾಷೆ!
ಎಮೊಜಿ: ಭಾವನೆಯ ಹೊಸ ಭಾಷೆ!   

ವಾಟ್ಸ್‌ಆ್ಯಪ್‌, ಹೈಕ್‌, ಫೇಸ್‌ಬುಕ್‌ ಮೆಸೆಂಜರ್‌ನಂತಹ ಸಂದೇಶ ರವಾನೆ ತಂತ್ರಾಂಶಗಳು (ಮೆಸೇಜಿಂಗ್‌ ಅಪ್ಲಿಕೇಶನ್ಸ್) ಮತ್ತು  ಇಮೇಲ್‌, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಸಂವಹನ ನಡೆಸುವ ಶೇ 90ರಷ್ಟು ಜನ ವಿಷಯ ತಿಳಿಸಲು, ತಮ್ಮ ಭಾವನೆ ವ್ಯಕ್ತಪಡಿಸಲು ಅಕ್ಷರಗಳಿಗಿಂತ ಎಮೊಜಿಗಳನ್ನೇ (ಗ್ರಾಫಿಕ್‌ ಚಿತ್ರಗಳು, ಚಿಹ್ನೆಗಳು)  ಬಳಸುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಪ್ರತಿ ವಿಷಯಕ್ಕೂ ತಮ್ಮ ಪ್ರತಿಕ್ರಿಯೆ ನೀಡಲು ಎಮೊಜಿಗಳನ್ನು ಬಳಸುತ್ತಿರುವವರ ಕುರಿತು ಸಂಶೋಧಕರು ಅಧ್ಯಯನ ನಡೆಸಿದ್ದರು. ಎಮೊಜಿಗಳಿಂದ ಜನರ ವ್ಯಕ್ತಿತ್ವ ಮತ್ತು ಅವರ ಸಾಂದರ್ಭಿಕ ಪ್ರತಿಕ್ರಿಯೆ ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಎಂದು  ಸಂಶೋಧಕರು ಹೇಳಿದ್ದಾರೆ.

ಭಿನ್ನ ಸಂಸ್ಕೃತಿಯ ಜನರ ವ್ಯಕ್ತಿತ್ವ ತಿಳಿದುಕೊಳ್ಳಲು ಎಮೊಜಿಗಳಿಂದ ಸಾಧ್ಯ ಎಂದು ಹಿಂದಿನ ಅಧ್ಯಯನಗಳು ತಿಳಿಸಿದ್ದವು. ಅಲ್ಲದೆ ಎಮೊಜಿಗಳಿಂದ ಅಕ್ಷರ ಬಳಕೆ ಕಡಿಮೆಯಾಗಿದೆ ಎಂಬುದು ತಿಳಿದು ಬಂದಿತ್ತು.

ಮುಖಾಮುಖಿ ಸಂವಹನ ನಡೆಸುವಾಗಲೂ ಶಬ್ದ ಬಳಕೆ ಜತೆಗೆ ಕೈ ಸನ್ನೆ, ಮುಖಭಾವನೆ, ಸಂಜ್ಞೆಗಳ ಮೂಲಕ ವಿಷಯ ತಿಳಿಸಿದರೆ ವಿಷಯ ಸುಲಭವಾಗಿ ಅರ್ಥವಾಗುತ್ತದೆ. ಹಾಗೆಯೇ, ಎಮೊಜಿಗಳೂ ವಿಷಯವನ್ನು ಅಕ್ಷರಕ್ಕಿಂತ ಪರಿಣಾಮಕಾರಿಯಾಗಿ ದೃಶ್ಯ ರೂಪದಲ್ಲಿ ತಿಳಿಸಲು ಸಹಾಯ ಮಾಡುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

‘ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ತಿಳಿಸಲು ಎಮೊಜಿಗಳ ಬಳಕೆ ಉತ್ತಮ ಮಾರ್ಗ’ ಎನ್ನುವುದು ಬ್ರಿಟನ್‌ನ ಎಡ್ಜ್‌ಹಿಲ್‌ ವಿಶ್ವವಿದ್ಯಾಲಯದ ಲಿಂಡಾ ಕಯೆ ಅವರ ಪ್ರತಿಪಾದನೆ.

‘ಸಂದೇಶದಲ್ಲಿ ನಗು ಮುಖ (ಸ್ಮೈಲಿ ಫೇಸ್‌) ಬಳಸುವುದರಿಂದ ನಮ್ಮ ವ್ಯಕ್ತಿತ್ವದ ಕುರಿತು ಇತರರಿಗೆ ಗೊತ್ತಾಗುತ್ತದೆ. ಇತರರ ಮೇಲೆ ನಮಗಿರುವ ಜವಾಬ್ದಾರಿ, ಇತರರನ್ನು ನಾವು ಅರ್ಥಮಾಡಿಕೊಳ್ಳುವ ರೀತಿ ಕುರಿತು   ಎಮೊಜಿಗಳಿಂದ ತಿಳಿದುಕೊಳ್ಳಬಹುದು’ ಎಂದು ಅವರು ಹೇಳಿದ್ದಾರೆ. ಅಲ್ಲದೆ, ‘ನಾವು ಎಮೊಜಿಗಳನ್ನು ಬಳಸುವ ಆಧಾರದ ಮೇಲೆಯೇ  ನಮ್ಮ ಕುರಿತು ಯೋಚಿಸುತ್ತಾರೆ’ ಎಂದು ಕಯೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮೆಸೇಜಿಂಗ್ ತಂತ್ರಾಂಶಗಳಲ್ಲಿ ಎಮೊಜಿಗಳ ಜನಪ್ರಿಯತೆ ಹೆಚ್ಚಾಗುತ್ತದೆ. ಕೇವಲ ಯುವ ಸಮುದಾಯವಷ್ಟೇ ಅಲ್ಲದೇ ಎಲ್ಲ ವಯೋಮಾನದವರೂ ವಿಷಯಕ್ಕೆ ಪ್ರತಿಕ್ರಿಯಿಸಲು  ಎಮೊಜಿಗಳನ್ನು ಬಳಸುತ್ತಿದ್ದಾರೆ.

ಸಮಾಜದ ಜೊತೆ ಜನ ಹೇಗೆ ಬೆರೆಯುತ್ತಾರೆ ಎಂಬುದನ್ನು ಅಧ್ಯಯನ ಮಾಡಲು ಮನಃಶಾಸ್ತ್ರಜ್ಞರೂ ಎಮೊಜಿ ಬಳಕೆ ದತ್ತಾಂಶ ಸಂಗ್ರಹಿಸಿ ಅಧ್ಯಯನ ಮಾಡಲು ಮುಂದಾಗಿದ್ದಾರೆ.

‘ಎಮೊಜಿಗಳು ಭಾವನೆ ವ್ಯಕ್ತಪಡಿಸಲು ನಿಜವಾಗಿಯೂ ಉಪಯೋಗ ಆಗಲಿವೆಯೇ ಎಂಬುದು ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ. ಆದರೆ, ಸೈಬರ್‌ ತಂತ್ರಜ್ಞಾನ ಯುಗದಲ್ಲಿ ನಮ್ಮಲ್ಲಿನ ಭಾವನೆಗಳನ್ನು ವ್ಯಕ್ತಪಡಿಸಲು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತೇವೆ’ ಎಂಬ ಬಗ್ಗೆ ಸಂಶೋಧಕರು ಅಧ್ಯಯನಕ್ಕೆ  ಮುಂದಾಗಿದ್ದಾರೆ.

ಅಲ್ಲದೆ, ಆನ್‌ಲೈನ್‌ ಸಂವಹನದಲ್ಲಿ ಎಮೊಜಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಇರುವ ಭಿನ್ನತೆಯನ್ನು ಎತ್ತಿ ತೋರಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಅಧ್ಯಯನವು ‘ಟ್ರೆಂಡ್ಸ್‌ ಇನ್‌ ಕಾಗ್ನೆಟಿವ್‌ ಸೈನ್ಸ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.