ADVERTISEMENT

ಐ.ಟಿ ದೂರುಗಳ ಇತ್ಯರ್ಥಕ್ಕೆ ಗಡುವು

ಪಿಟಿಐ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST

ನವದೆಹಲಿ: ಆದಾಯ ತೆರಿಗೆ ಇಲಾಖೆ ಹೊಸ ವರ್ಷದಲ್ಲಿ ತೆರಿಗೆದಾರರಿಗೊಂದು  ಸಿಹಿ ಸುದ್ದಿ ನೀಡಿದೆ. ತೆರಿಗೆದಾರರ ದೂರುದುಮ್ಮಾನುಗಳನ್ನು 30 ದಿನಗಳ ಒಳಗಾಗಿ ಇತ್ಯರ್ಥಪಡಿಸುವಂತೆ ಆದಾಯ ತೆರಿಗೆ ಇಲಾಖೆ ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತೆರಿಗೆ ಪಾವತಿದಾರರ ಸೇವಾ ನಿರ್ದೇಶನಾಲಯ ಇಲಾಖೆಯ ಎಲ್ಲ ಪ್ರಾದೇಶಿಕ ಕಚೇರಿ ಮುಖ್ಯಸ್ಥರಿಗೆ ಈ ಕುರಿತು ಪತ್ರ ಬರೆದಿದೆ. ಮರು ಪಾವತಿ, ಪ್ಯಾನ್‌ ಸಮಸ್ಯೆ ಸೇರಿದಂತೆ ಆದಾಯ ತೆರಿಗೆಗೆ ಸಂಬಂಧಿಸಿದ ತೆರಿಗೆದಾರರ ಯಾವುದೇ  ಕುಂದುಕೊರತೆ ಪ್ರಕರಣಗಳು ಎಂಥ ಸಂದರ್ಭದಲ್ಲೂ 30 ದಿನಗಳಿಗಿಂತ  ಹೆಚ್ಚು ಕಾಲ ಬಾಕಿ ಉಳಿಸಿಕೊಳ್ಳುವಂತಿಲ್ಲ ಎಂದು ತಾಕೀತು ಮಾಡಿದೆ.

ತೆರಿಗೆದಾರರ ದೂರು ಯಾವ ವಿಷಯಕ್ಕೆ ಸಂಬಂಧಿಸಿದೆ ಎಂದು ಗುರುತಿಸಿ ಸರಿಯಾದ ವಿಭಾಗ ಮತ್ತು ವ್ಯಕ್ತಿಗೆ ವರ್ಗಾಯಿಸಬೇಕು. ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಗೆ ಸಂಬಂಧಿಸಿದ ದೂರುಗಳನ್ನು ಬೆಂಗಳೂರಿನ ಸಿಪಿಸಿ ಘಟಕಕ್ಕೂ, ಮೂಲದಲ್ಲಿ ತೆರಿಗೆ ಕಡಿತಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಗಾಜಿಯಾಬಾದ್‌ ಕಚೇರಿಗೂ ರವಾನಿಸುವಂತೆ ತಿಳಿಸಿದೆ.

ತೆರಿಗೆದಾರರ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಪ್ರತ್ಯೇಕ ವಿಭಾಗ ರಚಿಸಿದ ನಂತರ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.