ADVERTISEMENT

ಓಲಾ ತೆಕ್ಕೆಗೆ ‘ಟ್ಯಾಕ್ಸಿ ಫಾರ್‌ ಶೂರ್‌’

1,237 ಕೋಟಿಗೆ ಖರೀದಿ ವ್ಯವಹಾರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ನವದೆಹಲಿ (ಪಿಟಿಐ): ಸದ್ಯ ದೇಶದಲ್ಲಿ ಟ್ಯಾಕ್ಸಿ ಸೇವೆಗಳನ್ನು ನೀಡುವುದರಲ್ಲಿ ಮುಂಚೂಣಿ­ಯಲ್ಲಿರುವ ‘ಓಲಾ ಕ್ಯಾಬ್ಸ್‌’, ತನ್ನ ಪ್ರತಿಸ್ಪರ್ಧಿ ‘ಟ್ಯಾಕ್ಸಿ ಫಾರ್‌ ಶೂರ್‌’ ಕಂಪೆನಿಯನ್ನು 20 ಕೋಟಿ ಡಾಲರ್‌ಗೆ (1,237 ಕೋಟಿ) ಖರೀದಿ ಮಾಡಿದೆ.

ದೇಶದಲ್ಲಿ ವೈಯಕ್ತಿಕ ಸಾರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಟ್ಯಾಕ್ಸಿ ಫಾರ್‌ ಶೂರ್ ಸಂಸ್ಥೆಯನ್ನು ಸ್ವಾಧೀನಪ­ಡಿಸಿಕೊಂಡಿರುವುದಾಗಿ ಓಲಾ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಓಲಾ ಮತ್ತು ಟ್ಯಾಕ್ಸಿ ಫಾರ್‌ ಶೂರ್‌ ಎರಡೂ ಬ್ರ್ಯಾಂಡ್‌ಗಳು ಪ್ರತ್ಯೇಕವಾಗಿಯೇ ಕಾರ್ಯನಿ­ರ್ವ­ಹಿಸಲಿವೆ. ಈಗಿರುವ ಮುಖ್ಯಸ್ಥರು ಮತ್ತು 1,700 ಸಿಬ್ಬಂದಿಗಳು ಟ್ಯಾಕ್ಸಿ ಫಾರ್‌ ಶೂರ್‌­ನಲ್ಲಿಯೇ ಕೆಲಸ ಮುಂದುವರಿ­ಸಲಿದ್ದಾರೆ ಎಂದು ಓಲಾ ಕ್ಯಾಬ್ಸ್‌ ಸ್ಪಷ್ಟಪಡಿಸಿದೆ. ಸದ್ಯ, ಟ್ಯಾಕ್ಸಿ ಫಾರ್‌ ಶೂರ್‌ 47 ನಗರಗಳಲ್ಲಿ 15 ಸಾವಿರ ವಾಹನಗಳನ್ನು ಹೊಂದಿದೆ.

ಸದ್ಯ ಟ್ಯಾಕ್ಸಿ ಫಾರ್‌ ಶೂರ್‌ನಲ್ಲಿ ಮುಖ್ಯ ನಿರ್ವಹಣಾಧಿಕಾರಿಯಾಗಿರುವ (ಸಿಒಒ) ಅರವಿಂದ ಸಿಂಘಾಲ್‌ ಅವರನ್ನು ಮುಖ್ಯ ಕಾರ್ಯ­ನಿರ್ವಹಣಾಧಿ­ಕಾರಿಯಾಗಿ (ಸಿಇಒ) ನೇಮಕ ಮಾಡಲಾಗಿದೆ. ಸಂಸ್ಥಾಪಕರಾದ ಎ.ರಾಧಾಕೃಷ್ಣನ್‌ ಮತ್ತು ಜಿ.ರಘುನಂದನ್‌ ಕೆಲವು ಅವಧಿವರೆಗೆ ಸಲಹೆ­ಗಾರರಾಗಿ ಕಾರ್ಯ­ನಿರ್ವಹಿಸ­ಲಿದ್ದಾರೆ ಎಂದು ಓಲಾ ತಿಳಿಸಿದೆ.

ಟ್ಯಾಕ್ಸಿ ಫಾರ್‌ ಶೂರ್‌ ಕಾರ್ಯವಿಧಾನದಲ್ಲಿ ಹಲವು ಉತ್ತಮ ಯೋಜನೆಗಳಿವೆ. ಉತ್ತಮ ಸೇವೆ ನೀಡುವುದು ಎರಡೂ ಕಂಪೆನಿಗಳ ಏಕ ಉದ್ದೇಶ­ವಾಗಿದೆ. ಈ ನಿಟ್ಟಿನಲ್ಲಿ ಹೊಸ ತಂಡದೊಂದಿಗೆ ಕೆಲಸ ಮಾಡಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದು ಓಲಾ ಸಹ ಸಂಸ್ಥಾಪಕ ಭವಿಷ್‌ ಅಗರ್‌ವಾಲ್‌ ಹೇಳಿದ್ದಾರೆ.

ಎರಡೂ ಕಂಪೆನಿಗಳು ಜತೆಗೂಡಿರು­ವುದರಿಂದ ಬಂಡವಾಳ ಸ್ಥಿತಿ ಇನ್ನಷ್ಟು ಸುಧಾರಿಸಲಿದೆ. ಇದರಿಂದ ಗ್ರಾಹಕರನ್ನು ಒಳಗೊಂಡು ನಮ್ಮೆಲ್ಲಾ ಷೇರು-­ದಾರರಿಗೂ ಉತ್ತಮ ಸೇವೆಗಳನ್ನು ನೀಡಲು ನೆರವಾಗಲಿದೆ ಎಂದು ಟ್ಯಾಕ್ಸಿ ಫಾರ್ ಶೂರ್‌ ಸಹ ಸಂಸ್ಥಾಪಕ ಜಿ.ರಘುನಂದನ್‌ ಪ್ರತಿಕ್ರಿಯಿಸಿದ್ದಾರೆ. ಓಲಾ ಕ್ಯಾಬ್ಸ್‌ಗೆ ಟೈಗರ್‌ ಗ್ಲೋಬಲ್‌, ಮ್ಯಾಟ್ರಿಕ್ಸ್‌ ಪಾರ್ಟ್ನರ್ಸ್‌, ಸೀಕ್ವಿಯಾ ಕ್ಯಾಪಿಟಲ್‌ ಮತ್ತು ಸಾಫ್ಟ್‌ಬ್ಯಾಂಕ್‌ ಬಂಡವಾಳದ ನೆರವು ನೀಡುತ್ತಿವೆ. ಇನ್ನೊಂದೆಡೆ, ಟ್ಯಾಕ್ಸಿ ಫಾರ್‌ ಶೂರ್‌ಗೆ ಆ್ಯಕ್ಸಲ್‌ ಪಾರ್ಟ್ನರ್ಸ್‌, ಬೆಸೆಮರ್‌ ವೆಂಚರ್‌ ಪಾರ್ಟ್ನರ್ಸ್‌ ಮತ್ತು ಹೆಲಿಯನ್‌ ವೆಂಚರ್‌ ಪಾರ್ಟ್ನರ್ಸ್‌ ಬಂಡವಾಳ ತೊಡಗಿಸುತ್ತಿವೆ. ಈ ಸ್ವಾಧೀನ ಪ್ರಕ್ರಿಯೆಯಿಂದ ಟ್ಯಾಕ್ಸಿ ಫರ್‌ ಶೂರ್‌ನಲ್ಲಿರುವ ಹೂಡಿಕೆ–ದಾರರು ತಮ್ಮ ಷೇರುಗಳನ್ನು ಓಲಾಗೆ ವರ್ಗಾಯಿಸಿ­ಕೊಳ್ಳಬಹು­ದಾಗಿದೆ ಎಂದು ಕಂಪೆನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.