ADVERTISEMENT

ಕರೆ ಸಂಪರ್ಕ ಶುಲ್ಕ ಇಳಿಕೆ ಮಾಡಿದ ಟ್ರಾಯ್; ಮೊಬೈಲ್ ಕರೆ ದರದಲ್ಲಿ ಇಳಿಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 6:16 IST
Last Updated 20 ಸೆಪ್ಟೆಂಬರ್ 2017, 6:16 IST
ಸಾಂದರ್ಭಿಕ ಚಿತ್ರ  ಕೃಪೆ: ರಾಯಿಟರ್ಸ್
ಸಾಂದರ್ಭಿಕ ಚಿತ್ರ ಕೃಪೆ: ರಾಯಿಟರ್ಸ್   

ನವದೆಹಲಿ: ಮೊಬೈಲ್ ಸೇವಾ ಕಂಪನಿಗಳ ನಡುವೆ ಇದ್ದ ಕರೆ ಸಂಪರ್ಕ ಶುಲ್ಕವನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇಳಿಕೆ ಮಾಡಿದೆ.  ಈ ಹಿಂದೆ 14 ಪೈಸೆಯಿದ್ದ ಕರೆ ಸಂಪರ್ಕ ಶುಲ್ಕ 6 ಪೈಸೆಗೆ ಇಳಿಕೆಯಾಗಿದೆ. ಕರೆ ಸಂಪರ್ಕ ಶುಲ್ಕ ಇಳಿಕೆಯಾಗಿರುವುದರಿಂದ ಸ್ಥಳೀಯ ಕರೆಗಳ ಶುಲ್ಕದಲ್ಲಿ  ಅಲ್ಪ ಪ್ರಮಾಣದ ಇಳಿಕೆ ಸಾಧ್ಯತೆ ಇದೆ.

ಹೊಸ ದರಗಳು ಅಕ್ಟೋಬರ್ 1ರಿಂದ ಅನ್ವಯವಾಗಲಿದೆ. ಅದೇ ವೇಳೆ 2020ರ ಜನವರಿ 1ರಿಂದ ಸಂಪೂರ್ಣವಾಗಿ ಕರೆ ಸಂಪರ್ಕ ಶುಲ್ಕವನ್ನು ರದ್ದುಗೊಳಿಸುವುದಾಗಿ ಟ್ರಾಯ್‌ ತಿಳಿಸಿದೆ.

ಕರೆ ಸಂಪರ್ಕ ಶುಲ್ಕವನ್ನು  ಹೆಚ್ಚಿಸಬೇಕು ಎಂಬುದಾಗಿ ಭಾರ್ತಿ ಏರ್‌ಟೆಲ್‌, ವೊಡಾಫೋನ್ ಸೇರಿದಂತೆ ಪ್ರಮುಖ ಕಂಪನಿಗಳು ಒತ್ತಾಯಿಸಿದ್ದವು. ಆದರೆ ಈ ಶುಲ್ಕ ಇಳಿಸಬೇಕು, ಶುಲ್ಕ ಇಳಿಕೆಯಾದರೆ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ರಿಲಾಯನ್ಸ್ ಜಿಯೊ ವಾದಿಸಿತ್ತು.

ADVERTISEMENT

ಏನಿದು ಕರೆ ಸಂಪರ್ಕ ಶುಲ್ಕ
ಮೊಬೈಲ್ ಕಂಪನಿಯೊಂದರ ಗ್ರಾಹಕನು ಇನ್ನೊಂದು ಮೊಬೈಲ್ ಕಂಪನಿಯ ಗ್ರಾಹಕನಿಗೆ ಕರೆ ಮಾಡುವಾಗ ಈ ಕಂಪನಿಗಳ ನಡುವಿನ ಕರೆಗೆ ನಿರ್ದಿಷ್ಟ ಶುಲ್ಕವೊಂದನ್ನು ಮೊಬೈಲ್ ಕಂಪನಿ ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ ವೊಡಾಫೋನ್ ಮೊಬೈಲ್ ಗ್ರಾಹಕನು ಏರ್‍‍ಟೆಲ್ ಗ್ರಾಹಕನ ಸಂಖ್ಯೆಗೆ ಕರೆ ಮಾಡಿದರೆ ಈ ಕರೆ ಕನೆಕ್ಟ್ ಆಗುವುದಕ್ಕಾಗಿ ವೊಡಾಫೋನ್ ಕಂಪನಿ ಏರ್‍‌‍ಟೆಲ್ ಕಂಪನಿಗೆ ನಿರ್ದಿಷ್ಚ ಶುಲ್ಕವೊಂದನ್ನು ಪಾವತಿ ಮಾಡುತ್ತದೆ. ಈ ಶುಲ್ಕವೇ ಕರೆ ಸಂಪರ್ಕ ಶುಲ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.