ADVERTISEMENT

ಕಾಫಿ ಬೀಜ ಹುರಿಯಲು ಸುಧಾರಿತ ಯಂತ್ರ

ನೇಸರ ಕಾಡನಕುಪ್ಪೆ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ಕಾಫಿ ಬೀಜ ಹುರಿಯುವ ಯಂತ್ರ
ಕಾಫಿ ಬೀಜ ಹುರಿಯುವ ಯಂತ್ರ   

ಮೈಸೂರು: ಬಿಸಿ ಗಾಳಿಯನ್ನು ಬಳಸಿಕೊಂಡು ಕಾಫಿ ಬೀಜವನ್ನು ಹುರಿಯುವ ತಂತ್ರಜ್ಞಾನವನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಆವಿಷ್ಕರಿಸಿದೆ.

ಕೆಲವೇ ನಿಮಿಷಗಳಲ್ಲಿ ಕೆ.ಜಿ ಗಟ್ಟಲೇ ಬೀಜವನ್ನು ಈ ಯಂತ್ರ ಹುರಿದುಕೊಡುತ್ತದೆ. ಜತೆಗೆ, ಕಾಫಿ ಹುರಿದಾಗ ಅದರಲ್ಲಿರುವ ಸುವಾಸನೆ ಹಾಳಾಗದಂತೆ, ಅತಿಯಾದ ಉಷ್ಣಾಂಶದಿಂದ ಸೀದುಹೋಗದಂತೆಯೂ ಈ ಸಾಧನ ನೋಡಿಕೊಳ್ಳುತ್ತದೆ.

ಯಾರಿಗಾಗಿ ಈ ಸಾಧನ?:
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವರದಾನವಾಗಲಿದೆ. ಭಾರತದಲ್ಲಿ ಈಗ ‘ಡ್ರಂ ಮಾದರಿಯಲ್ಲಿ ಬೀಜ ಹುರಿಯುವ ಯಂತ್ರ’ ಬಳಕೆಯಲ್ಲಿದೆ. ಸದಾ ತಿರುಗುತ್ತಿರುವ ಈ ಡ್ರಂನಲ್ಲಿ ಕಾಫಿ ಬೀಜವನ್ನು ಹಾಕಿದ ನಂತರ, ಡ್ರಂನ ಕೆಳಗಿರುವ ವಿದ್ಯುತ್‌ತಂತು ಬಿಸಿಯಾಗುತ್ತದೆ. ಈ ವಿಧಾನದಲ್ಲಿ ಕಾಫಿ ಬೀಜ ಸಮಾನವಾಗಿ ಹುರಿಯದೇ, ಸೀದು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ, ಬೀಜ ನೇರವಾಗಿ ಡ್ರಂನ ಕಾದಿರುವ ಲೋಹಕ್ಕೆ ಸಂಪರ್ಕ ಪಡೆಯುವ ಕಾರಣ, ಸುವಾಸನೆ ಹಾಳಾಗುತ್ತದೆ.

ADVERTISEMENT

ಈ ನಷ್ಟವನ್ನು ಸಿಎಫ್‌ಟಿಆರ್‌ಐ ತಯಾರಿಸಿರುವ ಯಂತ್ರ ತಪ್ಪಿಸುತ್ತದೆ. ‘ಸ್ಪೌಟೆಡ್‌ ಬೆಡ್‌ ರೋಸ್ಟರ್’ ಹೆಸರಿನ ಈ ಯಂತ್ರದಲ್ಲಿ, ಗಾಜಿನ ಡಬ್ಬಿಯ ಮೂಲಕ ಬಿಸಿ ಗಾಳಿಯನ್ನು ನಿರ್ದಿಷ್ಟ ವೇಗದಲ್ಲಿ ಹಾಯಿಸಲಾಗುತ್ತದೆ. ಗಾಳಿಯಲ್ಲಿರುವ ಉಷ್ಣಾಂಶಕ್ಕೆ 360 ಡಿಗ್ರಿಯಲ್ಲಿ ಸಮಾನವಾಗಿ ಹುರಿಯುತ್ತವೆ. ಅಲ್ಲದೇ, ಈ ಗಾಜಿನ ಡಬ್ಬಿಯಿಂದ ಗಾಳಿಯು ಆಚೆ ಹೋಗದಂತೆ ನಿರ್ಮಿಸಿರುವ ಕಾರಣ, ಸುವಾಸನೆ ಉಳಿಯುತ್ತದೆ ಎಂದು ಸಂಸ್ಥೆಯ ಯಂತ್ರವಿನ್ಯಾಸ ಮತ್ತು ತಯಾರಿಕಾ ಘಟಕದ ಹಿರಿಯ ಮುಖ್ಯ ವಿಜ್ಞಾನಿ ಡಾ.ವಿ.ಡಿ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾರುಕಟ್ಟೆಯಲ್ಲಿ ಬೃಹತ್‌ ಕೈಗಾರಿಕೆಗಳಿಗೆ ಪೈಪೋಟಿ ನೀಡಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕಷ್ಟ. ಈ ಸಾಧನದ ಮೂಲಕ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಕಾಫಿ ಬೀಜ ಹುರಿಯಬಹುದು. ಈ ಬೀಜವನ್ನು ಪುಡಿಮಾಡಿದರೆ ಉತ್ಕೃಷ್ಟ ಗುಣಮಟ್ಟದ, ಸುವಾಸನೆ ಭರಿತ ಕಾಫಿ ಸಿಗುತ್ತದೆ ಎನ್ನುತ್ತಾರೆ.

ಸಿಎಫ್‌ಟಿಆರ್‌ಐ ಮೂಲಕ ತಂತ್ರಜ್ಞಾನವನ್ನು ಪಡೆಯಬಹುದು. ಅದಕ್ಕಾಗಿ ಸಂಸ್ಥೆಗೆ ಶುಲ್ಕ ಪಾವತಿಸಬೇಕು. ಒಮ್ಮೆ ತಂತ್ರಜ್ಞಾನ ಪಡೆದರೆ ಎಷ್ಟು ಬೇಕಾದರೂ ಯಂತ್ರಗಳನ್ನು ನಿರ್ಮಿಸಿಕೊಳ್ಳಬಹುದು. ಪ್ರತಿ ಯಂತ್ರಕ್ಕೆ ಶೇ 2ರಷ್ಟು ಗೌರವಧನವನ್ನು ಸಂಸ್ಥೆಗೆ ನೀಡಬೇಕು ಎಂದು ಅವರು ಮಾಹಿತಿ ನೀಡಿದರು.

ಒಂದೇ ಯಂತ್ರ, ಹಲವು ಕೆಲಸ
ಒಂದೇ ಯಂತ್ರದ ಮೂಲಕ ಹಲವು ಕೆಲಸಗಳನ್ನು ಮಾಡಿಕೊಳ್ಳಬಹುದು. ಕಾಫಿ ಬೀಜ ಹುರಿಯುವ ಜತೆಗೆ, ಕಸವನ್ನು ತೆಗೆಯುವ ವ್ಯವಸ್ಥೆಯೂ ಇದೆ. ಕಡಿಮೆ ಸಮಯದಲ್ಲಿ ಕೆಲಸವಾಗುವ ಕಾರಣ ವಿದ್ಯುತ್ ಉಳಿಯುತ್ತದೆ. ಇತರೆ ಕಾಳುಗಳನ್ನು ಸಹ ಇದರಲ್ಲಿ ಹುರಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.