ADVERTISEMENT

ಕಾರು ಮಾರಾಟ ಏರಿಕೆ

ಮಾರುತಿ ಸುಜುಕಿ: 1 ಲಕ್ಷ ಕಾರು ಮಾರಾಟ

​ಪ್ರಜಾವಾಣಿ ವಾರ್ತೆ
Published 2 ಮೇ 2015, 19:30 IST
Last Updated 2 ಮೇ 2015, 19:30 IST
ಕಾರು ಮಾರಾಟ ಏರಿಕೆ
ಕಾರು ಮಾರಾಟ ಏರಿಕೆ   

ನವದೆಹಲಿ (ಪಿಟಿಐ): ಮಾರುತಿ ಸುಜುಕಿ, ಹ್ಯುಂಡೈ ಮತ್ತು ಹೋಂಡಾ ಕಂಪೆನಿಗಳು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಲ್ಲಿ ಉತ್ತಮ ಮಾರಾಟ ಪ್ರಗತಿ ದಾಖಲಿಸಿವೆ.

ಇನ್ನೊಂದೆಡೆ, ಮಹೀಂದ್ರ ಅಂಡ್‌ ಮಹೀಂದ್ರ ಶೇ 1ರಷ್ಟು ಅಲ್ಪ ಮಾರಾಟ ಪ್ರಗತಿ ಸಾಧಿಸಿದ್ದರೆ, ಜನರಲ್ ಮೋಟಾರ್ಸ್‌ ಇಂಡಿಯಾ ಮಾರಾಟದಲ್ಲಿ ಇಳಿಕೆಯಾಗಿದೆ.

ಸರ್ಕಾರ ತೆಗೆದುಕೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳು, ಇಂಧನ ದರ ಕಡಿಮೆ ಆಗಿರುವುದು ಹಾಗೂ ಆರ್‌ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ ಇಳಿಸಿರುವು ದರಿಂದ ವಾಹನ ಉದ್ಯಮ ಚೇತರಿಕೆ ಕಂಡುಕೊಂಡಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಮಾರುತಿ ಸುಜುಕಿ ಇಂಡಿಯಾ ಮಾರಾಟದಲ್ಲಿ ಶೇ 27ರಷ್ಟು ಏರಿಕೆ ಯಾಗಿದ್ದು, 1 ಲಕ್ಷ ಕಾರುಗಳನ್ನು ಮಾರಿದೆ.  ಹ್ಯುಂಡೈ  ಮಾರಾಟವು 35,248ರಿಂದ 38,601ಕ್ಕೆ ಏರಿಕೆ ಯಾಗಿದೆ. ಅಂದರೆ,  ಶೇ 9.5ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ.
ಹೋಂಡಾ ಕಾರ್ಸ್‌ ಇಂಡಿಯಾ ಮಾರಾಟ ಕೂಡಾ ಏಪ್ರಿಲ್‌ನಲ್ಲಿ ಶೇ 14ರಷ್ಟು ಏರಿಕೆಯಾಗಿದೆ.

ಫೋರ್ಡ್‌ ಇಂಡಿಯಾ 14,215 ಕಾರುಗಳನ್ನು ಮಾರಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 7ರಷ್ಟು ಮಾರಾಟ ಪ್ರಗತಿ ಸಾಧಿಸಿದೆ. ಟಾಟಾ ಮೊಟರ್ಸ್‌ ಮಾರಾಟ ಶೇ 7ರಷ್ಟು ಹೆಚ್ಚಿದ್ದು,36,205 ಕಾರುಗಳನ್ನು ಮಾರಿದೆ.

ಮಾರಾಟ ಕುಸಿತ: ಯುಟಿಲಿಟಿ ವಾಹನ ಗಳನ್ನು ತಯಾರಿಸುವ ಮಹೀಂದ್ರ ಅಂಡ್‌ ಮಹೀಂದ್ರ ಕಂಪೆನಿಯ ಏಪ್ರಿಲ್‌ ತಿಂಗಳ ಮಾರಾಟ ಶೇ 1ರಷ್ಟು ಅಲ್ಪ ಏರಿಕೆ ಕಂಡಿದೆ. ಇನ್ನೊಂದೆಡೆ, ಜನರಲ್‌ ಮೋಟಾರ್ಸ್‌ ಇಂಡಿಯಾ ಮಾರಾಟ 5,302 ರಿಂದ 3,612ಕ್ಕೆ ಇಳಿಕೆ ಯಾಗಿದ್ದು, ಶೇ 32ರಷ್ಟು ಕುಸಿದಿದೆ.

ದ್ವಿಚಕ್ರ ವಾಹನ: ದ್ವಿಚಕ್ರ ವಾಹನ ಮಾರಾಟಕ್ಕೆ ಸಂಬಂಧಿಸಿದಂತೆ, ಹೋಂಡಾ ಮೊಟಾರ್‌ಸೈಕಲ್‌ ಅಂಡ್‌ ಸ್ಕೂಟರ್‌ ಇಂಡಿಯಾದ ಒಟ್ಟು ಮಾರಾಟ ಶೇ 8.56ರಷ್ಟು ಹೆಚ್ಚಾಗಿದೆ. ರಾಯಲ್‌ ಎನ್‌ಫೀಲ್ಡ್‌ 33,118 ದ್ವಿಚಕ್ರವಾಹನ ಮಾರಿದ್ದು,  ಮಾರಾಟದಲ್ಲಿ ಶೇ 43ರಷ್ಟು ಏರಿಕೆಯಾಗಿದೆ.  ಟಿವಿಎಸ್‌ ಮೊಟರ್‌ 1.95 ಲಕ್ಷ ದ್ವಿಚಕ್ರವಾಹನಗಳನ್ನು ಮಾರಿದ್ದು, ಶೇ 14ರಷ್ಟು ಮಾರಾಟ ಪ್ರಗತಿ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.