ADVERTISEMENT

ಕ್ಷೀರೋತ್ಪಾದನೆ ವೃದ್ಧಿಯಲ್ಲಿ ಆಂಧ್ರ ನಂ.1

ಒಟ್ಟು ಕೊಡುಗೆ ಉತ್ತರ ಪ್ರದೇಶ ಉತ್ತಮ; ಕರ್ನಾಟಕ ಪ್ರಗತಿ ಶೇ 24

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 19:30 IST
Last Updated 22 ಏಪ್ರಿಲ್ 2014, 19:30 IST
ಕ್ಷೀರೋತ್ಪಾದನೆ ವೃದ್ಧಿಯಲ್ಲಿ ಆಂಧ್ರ ನಂ.1
ಕ್ಷೀರೋತ್ಪಾದನೆ ವೃದ್ಧಿಯಲ್ಲಿ ಆಂಧ್ರ ನಂ.1   

ಹೈದರಾಬಾದ್‌(ಪಿಟಿಐ): ಕ್ಷೀರೋತ್ಪಾ­ದನೆಯಲ್ಲಿ ವರ್ಷದಿಂದ ವರ್ಷಕ್ಕೆ  ವೃದ್ಧಿಯಲ್ಲಿ  ಆಂಧ್ರಪ್ರ­ದೇಶ ದೇಶದಲ್ಲೇ ನಂ.1 ಸ್ಥಾನದಲ್ಲಿದೆ. 2006ರಿಂದ 2010ರ ವರೆಗಿನ ಐದು ವರ್ಷಗಳ ಅವಧಿಯಲ್ಲಿ ಆಂಧ್ರದಲ್ಲಿ ಕ್ಷೀರೋತ್ಪಾದನೆ ಅಭಿವೃದ್ಧಿ ಆಗುತ್ತಲೇ ಇದೆ ಎಂದು ಭಾರ­ತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

2006ರಿಂದ 2010ರ ನಡುವೆ ಆಂಧ್ರಪ್ರದೇಶದಲ್ಲಿ ಕ್ಷೀರೋತ್ಪಾದನೆ ಮತ್ತು ತಲಾ ಒಬ್ಬ ವ್ಯಕ್ತಿಗೆ ಹಾಲಿನ ಲಭ್ಯತೆ ಕ್ರಮವಾಗಿ ಶೇ 41ರಷ್ಟು ಮತ್ತು  ಶೇ 36ರಷ್ಟು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ದೇಶದ ಒಟ್ಟಾರೆ ಹಾಲಿನ ಉತ್ಪಾದನೆ ಶೇ 19ರಷ್ಟು ಹೆಚ್ಚಿದ್ದು, ಒಟ್ಟು 1,211 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ.

ಒಟ್ಟಾರೆ ಉತ್ಪಾದನೆ
ಆದರೆ, ವಾರ್ಷಿಕವಾಗಿ ಒಟ್ಟಾರೆ ಕ್ಷೀರೋತ್ಪಾದನೆ ಪ್ರಮಾಣವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಆಂಧ್ರಪ್ರ­ದೇಶ ಮೂರನೇ ಸ್ಥಾನದಲ್ಲಿದೆ. ಅಲ್ಲಿ ವಾರ್ಷಿಕ 11 ಲಕ್ಷ ಟನ್‌ ಹಾಲು ಉತ್ಪಾ­ದನೆ ಆಗುತ್ತಿದೆ. ದೇಶದ ಒಟ್ಟಾರೆ ಕ್ಷೀರೋತ್ಪಾದನೆಗೆ ಶೇ 17ರಷ್ಟು ಕೊಡುಗೆ ನೀಡುತ್ತಿರುವ ಉತ್ತರ ಪ್ರದೇಶದ ಮೊದಲ ಸ್ಥಾನದಲ್ಲಿದೆ.

‘ಪ್ರತಿ ದಿನ ಒಬ್ಬ ವ್ಯಕ್ತಿಗೆ ಲಭಿಸುವ ಹಾಲಿನ ಪ್ರಮಾಣ ಭಾರತದಲ್ಲಿ 252 ಗ್ರಾಂಗಳಷ್ಟಿದೆ. ಆದರೆ, ಇದು ಜಾಗತಿಕ ಸರಾಸರಿ 279 ಗ್ರಾಂಗಳಿಗಿತಲೂ ಕಡಿಮೆ ಇದೆ’ ಎಂದೂ ಈ ಅಧ್ಯಯನ ಗಮನ ಸೆಳೆದಿದೆ.

ನ್ಯೂಜಿಲೆಂಡ್‌ನಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ದಿನ 9,773 ಗ್ರಾಂ, ಐರ್ಲೆಂಡ್‌ನಲ್ಲಿ 3,260 ಗ್ರಾಂ , ಡೆನ್ಮಾರ್ಕ್‌ನಲ್ಲಿ 2,411 ಗ್ರಾಂಗಳಷ್ಟು ಹಾಲು ಲಭಿಸುತ್ತಿದೆ. ಪಂಜಾಬ್‌ನಲ್ಲಿ ತಲಾ ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ 937 ಗ್ರಾಂಗಳಷ್ಟು ಹಾಲು ಲಭಿಸುತ್ತಿದ್ದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.

ಕ್ಷೀರೋತ್ಪಾದನೆಯಲ್ಲಿ ವರ್ಷದಿಂದ ವರ್ಷಕ್ಕೆ ಆಂಧ್ರಪ್ರದೇಶ ಮತ್ತು ರಾಜಸ್ತಾನದಲ್ಲಿ ತಲಾ ಶೇ 28ರಷ್ಟು, ಕೇರಳದಲ್ಲಿ ಶೇ 24.8ರಷ್ಟು ಕರ್ನಾ­ಟಕದಲ್ಲಿ ಶೇ 24ರಷ್ಟು ಮತ್ತು ಗುಜರಾ­ತ್‌ನಲ್ಲಿ ಶೇ 23.7ರಷ್ಟು ಪ್ರಗತಿ ಕಂಡು­ಬಂದಿದೆ. ಉತ್ಪಾದನೆ ವೆಚ್ಚ ತಗ್ಗಿರುವುದು ಮತ್ತು ಕಂಟಕ ರಹಿತ ಸಾಲಸೌಲಭ್ಯ ಲಭಿಸು­ತ್ತಿರು­ವುದು ದೇಶದ ಕ್ಷೀರೋ­ತ್ಪಾದನೆ ವೃದ್ಧಿಗೆ ಸಹಕಾರಿಯಾಗಿದೆ.

ಆದರೆ, ಗುಣಮಟ್ಟದ ಕೊರತೆಯಿಂದ ಮತ್ತು ಸಾಗಾಣಿಕೆ ವೆಚ್ಚದ ಏರಿಕೆಯಿಂದ ಹಾಲಿನ ಉತ್ಪನ್ನಗಳು ಮಾರು­ಕಟ್ಟೆಯಲ್ಲಿ ಅಷ್ಟೊಂದು ಯಶಸ್ವಿಯಾ­ಗಿಲ್ಲ  ಎಂದೂ ‘ಅಸೋಚಾಂ’ ವಿಶ್ಲೇಷಿಸಿದೆ. 2019–20ರ ವೇಳೆಗೆ ದೇಶದ ಕ್ಷೀರೋತ್ಪಾದನೆ 1,770 ಲಕ್ಷ ಟನ್‌­ಗಳಿಗೆ ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ‘ಅಸೋಚಾಂ’ ಪ್ರಧಾನ ಕಾರ್ಯದ­ರ್ಶಿ ಡಿ.ಎಸ್‌.ರಾವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.