ADVERTISEMENT

ಚಿಲ್ಲರೆ ಹಣದುಬ್ಬರ ಭಾರಿ ಇಳಿಕೆ

ಆರ್‌ಬಿಐಗೆ ಬಡ್ಡಿದರ ಕಡಿತದ ಹಾದಿ ಸುಗಮ

ಪಿಟಿಐ
Published 12 ಜುಲೈ 2017, 19:30 IST
Last Updated 12 ಜುಲೈ 2017, 19:30 IST
ಚಿಲ್ಲರೆ ಹಣದುಬ್ಬರ ಭಾರಿ ಇಳಿಕೆ
ಚಿಲ್ಲರೆ ಹಣದುಬ್ಬರ ಭಾರಿ ಇಳಿಕೆ   

ನವದೆಹಲಿ: ಚಿಲ್ಲರೆ ಹಣದುಬ್ಬರ ಮತ್ತು ಕೈಗಾರಿಕಾ ಪ್ರಗತಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಈ ಮೂಲಕ ಬಡ್ಡಿದರ ಕಡಿತ ಮಾಡಬೇಕು ಎನ್ನುವ ಸರ್ಕಾರ ಮತ್ತು ಉದ್ಯಮದ ಬೇಡಿಕೆಗೆ ಇನ್ನಷ್ಟು ಬೆಂಬಲ ದೊರೆತಂತಾಗಿದೆ.

ಮೇ ತಿಂಗಳಿನಿಂದ ಚಿಲ್ಲರೆ ಹಣದುಬ್ಬರ ಮತ್ತು ಕೈಗಾರಿಕಾ ಪ್ರಗತಿ ಇಳಿಕೆ ಕಾಣುತ್ತಿವೆ.

ಏಪ್ರಿಲ್‌ನಲ್ಲಿ ಕೈಗಾರಿಕೆ ಮತ್ತು ಮೂಲಸೌಕರ್ಯ ವಲಯದ ಪ್ರಗತಿ ಕುಸಿತ ಕಂಡಿದ್ದರು ಸಹ ಚಿಲ್ಲರೆ ಹಣದುಬ್ಬರ ಏರಿಕೆ ಆಗಿರುವ ಕಾರಣ ನೀಡಿ, ಆರ್‌ಬಿಐ ಜೂನ್‌ನಲ್ಲಿ ನಡೆದ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ  ಅಲ್ಪಾವಧಿ ಬಡ್ಡಿದರಗಳಲ್ಲಿ ಯಥಾಸ್ಥಿತಿ  ಕಾಯ್ದುಕೊಂಡಿತ್ತು. ಈ ಬಗ್ಗೆ ಸರ್ಕಾರ ಮತ್ತು ಉದ್ಯಮ ವಲಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.

ADVERTISEMENT

ಚಿಲ್ಲರೆ ಹಣದುಬ್ಬರ: ಇದೀಗ  ತರಕಾರಿ  ಮತ್ತು  ಬೇಳೆಕಾಳು ಬೆಲೆ ಇಳಿಕೆ ತಗ್ಗಿರುವುದರಿಂದ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ  (ಸಿಪಿಐ) ಚಿಲ್ಲರೆ ಹಣದುಬ್ಬರ ಜೂನ್‌ನಲ್ಲಿ ಶೇ 1.54ಕ್ಕೆ ಇಳಿಕೆಯಾಗಿದೆ. ಮೇ ತಿಂಗಳಿನಲ್ಲಿ ಸಿಪಿಐ ಶೇ 2.18ರಷ್ಟು ದಾಖಲಾಗಿತ್ತು.

ಶೇ 1.54 ರಷ್ಟು ಸೂಚ್ಯಂಕವು ಐತಿಹಾಸಿಕ ಕನಿಷ್ಠ ಮಟ್ಟವಾಗಿದ್ದು, ದೇಶದ ಆರ್ಥಿಕತೆ ಸ್ಥಿರತೆ ಹಾದಿಗೆ ಮರಳುತ್ತಿದೆ ಎನ್ನುವುದರ ಸೂಚಕವಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ 1978 ಮತ್ತು 1999ರಲ್ಲಿ ಚಿಲ್ಲರೆ ಹಣದುಬ್ಬರ ಕನಿಷ್ಠ ಮಟ್ಟದಲ್ಲಿತ್ತು ಎಂದು ಅವರು ತಿಳಿಸಿದ್ದಾರೆ.

ಆಹಾರ ಹಣದುಬ್ಬರ: ಆಹಾರ ಹಣದುಬ್ಬರವು ಶೇ (–) 1.05 ರಿಂದ ಶೇ 2.12ಕ್ಕೆ ಇಳಿಕೆ ಕಂಡಿದೆ. ತರಕಾರಿಗಳ ಬೆಲೆ ಶೇ 21.92 ರಿಂದ ಶೇ 16.53ಕ್ಕೆ ತಗ್ಗಿದೆ.

ಕೈಗಾರಿಕಾ ಪ್ರಗತಿ ಇಳಿಕೆ:  ಗಣಿಗಾರಿಕೆ ಮತ್ತು ತಯಾರಿಕಾ ವಲಯದ ಮಂದಗತಿಯ ಬೆಳವಣಿಗೆಯಿಂದ ಕೈಗಾರಿಕಾ ಉತ್ಪಾದನಾ  ಸೂಚ್ಯಂಕ (ಐಐಪಿ) ಮೇ ತಿಂಗಳಿನಲ್ಲಿ ಶೇ 1.7 ರಷ್ಟು ಅಲ್ಪ ಪ್ರಗತಿ ಕಂಡಿದೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ಇದ್ದ ಶೇ 8ರಷ್ಟು ಗರಿಷ್ಠ ಮಟ್ಟದ ಪ್ರಗತಿಗೆ ಹೋಲಿಸಿದರೆ ಶೇ 6.3 ರಷ್ಟು ಕುಸಿತ ಕಂಡಿದೆ ಎಂದು ಕೇಂದ್ರ ಸಾಂಖಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ.

ಏಪ್ರಿಲ್‌–ಮೇ ಅವಧಿಗೂ ಕೈಗಾರಿಕಾ ಪ್ರಗತಿಯು ಶೇ 7.3 ರಿಂದ ಶೇ 2.3ಕ್ಕೆ ಭಾರಿ ಇಳಿಕೆ ಕಂಡಿದೆ.ಬಂಡವಾಳ ಸರಕುಗಳ ವಲಯದ ಪ್ರಗತಿ 2016ರ ಮೇ ತಿಂಗಳಿನಲ್ಲಿ ಶೇ 13.9ರಷ್ಟು ದಾಖಲೆ ಮಟ್ಟದಲ್ಲಿತ್ತು. ಅದು 2017ರ ಮೇ ತಿಂಗಳಿನಲ್ಲಿ ಶೇ 3.9ಕ್ಕೆ ಕುಸಿದಿದೆ.  ಗಣಿ ವಲಯದ ಪ್ರಗತಿಯೂ ಶೇ 5.7 ರಿಂದ ಶೇ 0.9ಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.