ADVERTISEMENT

ಜಿಎಸ್‌ಟಿ ತೆರಿಗೆ ಪಾವತಿ ಕ್ಲಿಷ್ಟಕರವಲ್ಲ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST

ನವದೆಹಲಿ :  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಹೆಚ್ಚು ಕ್ಲಿಷ್ಟಕರವಾಗಿದೆ  ಎಂದು ಭಾವಿಸುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

‘ತೆರಿಗೆದಾರರು ಸದ್ಯಕ್ಕೆ ಅನುಸರಿಸುತ್ತಿರುವಂತೆ ಪ್ರತಿ ತಿಂಗಳೂ ಒಂದೇ ಲೆಕ್ಕಪತ್ರ ವಿವರ (ರಿಟರ್ನ್‌) ಸಲ್ಲಿಸಿದರೆ ಸಾಕು. ಪ್ರತಿ ತಿಂಗಳೂ ಮೂರು ರಿಟರ್ನ್ಸ್‌ ಸಲ್ಲಿಸಬೇಕಾಗಿಲ್ಲ’  ಎಂದು ರೆವೆನ್ಯೂ ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ತಿಳಿಸಿದ್ದಾರೆ.

‘ಗ್ರಾಹಕರ ಜತೆ ವ್ಯವಹರಿಸುವ ವರ್ತಕರು (ಬಿಟುಸಿ)  ಪ್ರತಿ ತಿಂಗಳೂ ಸರಕುಗಳ ಬೆಲೆಪಟ್ಟಿ (ಇನ್‌ವೈಸ್‌) ಅನ್ವಯ ವಿವರಗಳನ್ನು ನೀಡಬೇಕಾದ ಅಗತ್ಯ ಇಲ್ಲ.  ಶೇ 80ರಷ್ಟು ಉದ್ದಿಮೆ ವಹಿವಾಟುದಾರರು ಒಟ್ಟಾರೆ ವಹಿವಾಟಿನ ವಿವರಗಳನ್ನು ರಿಟರ್ನ್‌ನಲ್ಲಿ ಸಲ್ಲಿಸಿದರೆ ಸಾಕು.  ಲೆಕ್ಕಪತ್ರ ಸಲ್ಲಿಕೆ ಪ್ರಕ್ರಿಯೆ ಕೂಡ ತುಂಬ ಸರಳವಾಗಿದೆ.  ರಿಟನ್ಸ್‌ಗಳನ್ನು ಸಲ್ಲಿಸುವ ಬಗ್ಗೆ ಯಾರೊಬ್ಬರೂ ಚಿಂತಿಸಬೇಕಾಗಿಲ್ಲ.  ಅದೆಲ್ಲವೂ ಪಾರದರ್ಶಕವಾಗಿದ್ದು, ಸ್ವಯಂಚಾಲಿತ ಪ್ರಕ್ರಿಯೆಯಾಗಿರುತ್ತದೆ.

ADVERTISEMENT

‘ಸರಕುಗಳ ಪೂರೈಕೆದಾರನೊಬ್ಬ ತನ್ನ ಮಾರಾಟದ ವಿವರಗಳನ್ನು   ದಾಖಲಿಸುತ್ತಿದ್ದಂತೆ ಮುಂದಿನ ತಿಂಗಳ ದಿನಾಂಕ 10ರಂದು ‘ಜಿಎಸ್‌ಟಿ ರಿಟರ್ನ್‌–1’ ಸಿದ್ಧಗೊಳ್ಳುತ್ತದೆ. ಪೂರೈಕೆದಾರರ ‘ಜಿಎಸ್‌ಟಿಆರ್‌–1’, ಖರೀದಿದಾರರ ‘ಜಿಎಸ್‌ಟಿಆರ್‌–2’ ರಲ್ಲಿ ದಾಖಲಾಗುತ್ತದೆ.  ‘ಜಿಎಸ್‌ಟಿಆರ್‌–2’ ಅನ್ನು ಯಾರೊಬ್ಬರೂ ಭರ್ತಿ ಮಾಡಬೇಕಾಗಿಲ್ಲ.  ವರ್ತಕರ ಖಾತೆಯ ವಿವರಗಳು ಕಂಪ್ಯೂಟರ್‌ನಲ್ಲಿ  ಮೂಡಿದಾಗ  ಅದನ್ನು ಖಚಿತಪಡಿಸಬೇಕಷ್ಟೆ. ಖರೀದಿಯಲ್ಲಿ ಯಾವುದೇ ಮಾಹಿತಿ ಬಿಟ್ಟು ಹೋಗಿದ್ದರೆ, ಕಂಪ್ಯೂಟರ್‌ನಲ್ಲಿ ಅದು ಪ್ರತಿಫಲನಗೊಳ್ಳುವುದಿಲ್ಲ.  ಸರಕು ಮಾರಾಟ ಮಾಡಿದವರು ಆ ಮಾಹಿತಿ ಭರ್ತಿ ಮಾಡಲು ಮರೆತಿದ್ದರೆ, ಸರಕು ಖರೀದಿಸಿದವರು ಅದನ್ನು ಭರ್ತಿ ಮಾಡಬೇಕು’ ಎಂದು ಆಧಿಯಾ ವಿವರಿಸಿದ್ದಾರೆ.
‘ರಿಟೇಲರ್‌್ ಮತ್ತು ‘ಬಿಟುಸಿ’ ಪೂರೈಕೆದಾರರು ರಿಟರ್ನ್‌್ ಸಲ್ಲಿಕೆ ಕುರಿತು ಕಿಂಚಿತ್ತೂ ಆತಂಕ ಪಡಬೇಕಾಗಿಲ್ಲ.  ತಮ್ಮ ವಹಿವಾಟು ಆಧರಿಸಿ ‘ಜಿಎಸ್‌ಟಿಆರ್‌–1’ರಲ್ಲಿ ಮಾಹಿತಿ ಭರ್ತಿ ಮಾಡಿದರೆ ಸಾಕು.

‘ಸರಕು ಪೂರೈಕೆದಾರರು ಮತ್ತು ಸರಕು ಖರೀದಿಸಿದವರು  ಸರಕು ಬೆಲೆಪಟ್ಟಿ ವಿವರಗಳನ್ನು ಒಗ್ಗೂಡಿಸಿ ತಿಂಗಳ 20ಕ್ಕೆ ‘ಜಿಎಸ್‌ಟಿಆರ್‌–3’ ಸಲ್ಲಿಸಬೇಕು.  ಇದು ಒಟ್ಟಾರೆ ತೆರಿಗೆ ಪಾವತಿಸುವ ವಿವರ ನೀಡಲಿದೆ. 
‘ಮೂರು ರಿಟರ್ನ್ಸಗಳ ಪೈಕಿ, ಚಿಲ್ಲರೆ ವಹಿವಾಟುದಾರರು ಒಂದು ರಿಟರ್ನ್‌ ಮಾತ್ರ ಸಲ್ಲಿಸಬೇಕು.  ಉಳಿದ ಎರಡು ರಿಟರ್ನ್ಸ್‌ಗಳು ಕಂಪ್ಯೂಟರ್‌ನಲ್ಲಿ ಸ್ವಯಂಚಾಲಿತವಾಗಿ ಸಿದ್ಧಗೊಳ್ಳುತ್ತವೆ. ಅಲ್ಲಿ ತಪ್ಪುಗಳೇನಾದರೂ ಇದ್ದರೆ ತೆರಿಗೆದಾರರು ಅವುಗಳನ್ನು  ಸರಿಪಡಿಸಲು ಅವಕಾಶ ನೀಡಲಾಗಿದೆ’ ಎಂದು ಆಧಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.