ADVERTISEMENT

ಜಿಎಸ್‌ಟಿ: ಲೋಕಸಭೆಯಲ್ಲಿ ಇಂದು ನಾಲ್ಕು ಪೂರಕ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 10:22 IST
Last Updated 27 ಮಾರ್ಚ್ 2017, 10:22 IST
ಜಿಎಸ್‌ಟಿ: ಲೋಕಸಭೆಯಲ್ಲಿ ಇಂದು  ನಾಲ್ಕು ಪೂರಕ ಮಸೂದೆ ಮಂಡನೆ
ಜಿಎಸ್‌ಟಿ: ಲೋಕಸಭೆಯಲ್ಲಿ ಇಂದು ನಾಲ್ಕು ಪೂರಕ ಮಸೂದೆ ಮಂಡನೆ   

ನವದೆಹಲಿ : ಸರಕು ಮತ್ತು ಸೇವಾ ತೆರಿಗೆಗೆ  (ಜಿಎಸ್‌ಟಿ) ಸಂಬಂಧಿಸಿದ ಪೂರಕ ನಾಲ್ಕು ಮಸೂದೆಗಳನ್ನು ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸುವ ನಿರೀಕ್ಷೆ ಇದೆ.

ಕೇಂದ್ರ ಸರ್ಕಾರದ (ಸಿ–ಜಿಎಸ್‌ಟಿ), ಸಮಗ್ರ (ಐ–ಜಿಎಸ್‌ಟಿ), ಕೇಂದ್ರಾಡಳಿತ ಪ್ರದೇಶ (ಯುಟಿ–ಜಿಎಸ್‌ಟಿ) ಮತ್ತು ರಾಜ್ಯಗಳಿಗೆ ನೀಡುವ ಪರಿಹಾರ ಮಸೂದೆಗಳನ್ನು ಮಂಡಿಸಲಾಗುತ್ತಿದೆ.  ಇದೇ 28ರ ಒಳಗೆ ಈ ಮಸೂದೆಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಾಗುವುದು. ಜತೆಗೆ, ಹಲವಾರು ಸೆಸ್‌ ರದ್ದುಪಡಿಸಲು ಅಬಕಾರಿ ಮತ್ತು ಸೀಮಾ ಸುಂಕ ಕಾಯ್ದೆ ತಿದ್ದುಪಡಿ, ಜಿಎಸ್‌ಟಿ ವ್ಯವಸ್ಥೆಯಡಿ ಆಮದು ಮತ್ತು ರಫ್ತು ವಹಿವಾಟಿಗೆ ಪೂರಕವಾದ ಮಸೂದೆಗಳನ್ನೂ   ಮಂಡಿಸಲಾಗುವುದು.

ಸಂಸತ್ತಿನ ಕಲಾಪ ಸಲಹಾ ಸಮಿತಿಯು ಸೋಮವಾರ ಬೆಳಿಗ್ಗೆ ಸಭೆ ಸೇರಿ, ಈ ಮಸೂದೆಗಳ ಮೇಲಿನ ಚರ್ಚೆಯ ಕಾಲಾವಧಿ ನಿಗದಿಪಡಿಸಲಿದೆ. ಜಿಎಸ್‌ಟಿ ಮಸೂದೆಗಳನ್ನು ಇದೇ 29 ಇಲ್ಲವೆ 30ರ ಒಳಗೆ ಅಂಗೀಕರಿಸುವುದು ಸರ್ಕಾರದ ಉದ್ದೇಶವಾಗಿದೆ. ಆನಂತರ ಈ ಮಸೂದೆಗಳನ್ನು ರಾಜ್ಯಸಭೆಯ ಪರಿಶೀಲನೆಗೆ ಕಳಿಸಿಕೊಡಲಾಗುವುದು.  ಮೇಲ್ಮನೆ ಸದಸ್ಯರು ಸೂಚಿಸುವ ತಿದ್ದುಪಡಿಗಳನ್ನು ಲೋಕಸಭೆಯು ಅಳವಡಿಸಿಕೊಳ್ಳಬಹುದು  ಅಥವಾ ತಿರಸ್ಕರಿಸಬಹುದಾಗಿದೆ.

ADVERTISEMENT

ಇವುಗಳನ್ನು ಹಣಕಾಸು ಮಸೂದೆ ರೂಪದಲ್ಲಿ ಮಂಡಿಸುತ್ತಿದ್ದರೂ, ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆ ನಡೆಯಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಅಬಕಾರಿ, ಮೌಲ್ಯವರ್ಧಿತ, ಸೇವಾ  ಮತ್ತು ಸ್ಥಳೀಯ ತೆರಿಗೆಗಳನ್ನು ರದ್ದುಪಡಿಸಿ ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆಯನ್ನು ಜುಲೈ 1ರಿಂದ  ಜಾರಿಗೆ ತರಲು ಸರ್ಕಾರ ಗಡುವು ನಿಗದಿಪಡಿಸಿದೆ.

ಒಂದೊಮ್ಮೆ ಈ ಮಸೂದೆಗಳನ್ನು ಸಂಸತ್ತು ಅಂಗೀಕರಿಸಿದ ನಂತರ, ರಾಜ್ಯ ಸರ್ಕಾರಗಳ ವಿಧಾನಸಭೆಗಳು  ‘ಎಸ್‌–ಜಿಎಸ್‌ಟಿ’  ಮಸೂದೆ  ಅಂಗೀಕರಿಸಬೇಕಾಗುತ್ತದೆ. ಇದನ್ನು  ‘ಸಿ–ಜಿಎಸ್‌ಟಿ’ಯ  ಮಾದರಿಯಲ್ಲಿ ರೂಪಿಸಲಾಗಿದೆ. ಇದರಲ್ಲಿ ಪ್ರತಿಯೊಂದು ರಾಜ್ಯವು, ರಾಜ್ಯಕ್ಕೆ ಅನ್ವಯವಾಗುವ ವಿನಾಯ್ತಿಗಳನ್ನು ಅಳವಡಿಸಿಕೊಳ್ಳಬಹುದು.

ಸಂಸತ್ತಿನ ಈ ಬಜೆಟ್‌ ಅಧಿವೇಶನವು ಏಪ್ರಿಲ್‌ 12ಕ್ಕೆ ಕೊನೆಗೊಳ್ಳಲಿದೆ.

ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟವನ್ನು 5 ವರ್ಷಗಳವರೆಗೆ ತುಂಬಿಕೊಡುವುದಕ್ಕೆ ಸಂಬಂಧಿಸಿದೆ.

ಮಸೂದೆ ವಿವರ

ಕೇಂದ್ರೀಯ ಜಿಎಸ್‌ಟಿ (ಸಿ–ಜಿಎಸ್‌ಟಿ): ಕೇಂದ್ರ ಸರ್ಕಾರದ ತೆರಿಗೆ
ಸಮಗ್ರ ಜಿಎಸ್‌ಟಿ (ಐ–ಜಿಎಸ್‌ಟಿ):  ಸರಕು ಮತ್ತು ಸೇವೆಗಳ  ಅಂತರರಾಜ್ಯ ಸಾಗಣೆ ಮೇಲಿನ ತೆರಿಗೆ
ಯುಟಿ–ಜಿಎಸ್‌ಟಿ ಕೇಂದ್ರಾಡಳಿತ ಪ್ರದೇಶಗಳಲ್ಲಿನ ತೆರಿಗೆ ಪರಿಹಾರ ಮಸೂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.