ADVERTISEMENT

ತೆಂಗಿನಕಾಯಿ: ವ್ಯವಸ್ಥಿತ ಹರಾಜು ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2017, 19:30 IST
Last Updated 4 ಏಪ್ರಿಲ್ 2017, 19:30 IST
ತೆಂಗಿನಕಾಯಿ: ವ್ಯವಸ್ಥಿತ ಹರಾಜು ಮಾರುಕಟ್ಟೆ
ತೆಂಗಿನಕಾಯಿ: ವ್ಯವಸ್ಥಿತ ಹರಾಜು ಮಾರುಕಟ್ಟೆ   
ಕೆಂಪೇಗೌಡ ಎನ್‌.
ದೇವನಹಳ್ಳಿಯ ವಿಜಯಪುರ ಹೋಬಳಿ ತೆಂಗಿನಕಾಯಿ ಮಾರುಕಟ್ಟೆಗೆ ಹೆಸರುವಾಸಿ. ಇದು ಸುತ್ತಲಿನ ಜಿಲ್ಲೆಗಳಿಗಷ್ಟೇ ಅಲ್ಲದೆ ಹೊರ ರಾಜ್ಯಗಳ ರೈತರಿಗೂ ಪ್ರಮುಖ ಮಾರಾಟ ಕೇಂದ್ರವಾಗಿದೆ.
 
ಇಲ್ಲಿ ಪ್ರತಿ ವಾರಕ್ಕೊಮ್ಮೆ ಮಂಗಳವಾರ ತೆಂಗಿನಕಾಯಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ಕೇವಲ 10 ಕಾಯಿ ತಂದರೂ ಇಲ್ಲಿ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರುವುದು ಇದರ ವಿಶೇಷತೆ.
 
ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರಪ್ರದೇಶದಿಂದ ಹೆಚ್ಚು ಕಾಯಿ ಬರುತ್ತದೆ.
 
ಮೊದಲು ಸ್ಥಳೀಯ ರೈತರೇ ಬೀದಿ ಬದಿಯಲ್ಲಿ ತೆಂಗಿನ ಕಾಯಿ ಖರೀದಿ ಮತ್ತು ಮಾರಾಟ ನಡೆಸುತ್ತಿದ್ದರು. ಈಗ ವಿಜಯಪುರ ವರ್ತಕರ ಸಂಘದ ವ್ಯಾಪಾರಿಗಳು ಇಲ್ಲಿನ ಗಾಂಧಿ ಚೌಕ ಮತ್ತು ಗಿರಿಜಾ ಶಂಕರ ಕಲ್ಯಾಣ ಮಂಟಪದ ಮುಂಭಾಂಗ ಇರುವ ಬಯಲಿನಲ್ಲಿ ವ್ಯವಸ್ಥಿತವಾಗಿ ಹರಾಜು ನಡೆಯುತ್ತಿದೆ.
 
ನಸುಕಿನ ಐದು ಗಂಟೆಗೆ ವಹಿವಾಟು ಆರಂಭವಾಗಿ 10 ಗಂಟೆಗೆ ಮುಕ್ತಾಯವಾಗುತ್ತದೆ. ರೈತರು ತಂದಿರುವ ತೆಂಗಿನಕಾಯಿಯನ್ನು ಗಾತ್ರದ ಆಧಾರದ ಮೇಲೆ ವಿಂಗಡಿಸಿ ಚಿಕ್ಕ ಚಿಕ್ಕ ರಾಶಿಗಳನ್ನು ಮಾಡಲಾಗುತ್ತದೆ.
 
ಕಾಯಿಯ ಗಾತ್ರ ಮತ್ತು  ಗುಣಮಟ್ಟದ ಆಧಾರದ ಮೇಲೆ ಮಾರುಕಟ್ಟೆಯ ಮಾಲೀಕರು  ಮೊದಲಿಗೆ ಹರಾಜು ಕೂಗುತ್ತಾರೆ. ನಂತರ ಖರೀದಿಗಾರರು ತಮ್ಮ ಬಿಡ್‌ (ಹರಾಜು) ಮಾಡುತ್ತಾರೆ. ಆ ಬೆಲೆ ರೈತರಿಗೆ ಹೊಂದಾಣಿಕೆ ಆದರೆ ಮಾರಾಟ ಮಾಡುತ್ತಾರೆ.
 
ರೈತರಿಂದ ಕಮಿಷನ್ ಇಲ್ಲ
ರೈತರಿಂದ ಯಾವುದೇ ಕಮಿಷನ್‌ ಇರುವುದಿಲ್ಲ. ಆದರೆ,   ಖರೀದಿದಾರರು ಮಾರುಕಟ್ಟೆ ಮಾಲೀಕರಿಗೆ ಕಡ್ಡಾಯವಾಗಿ ₹100 ಕ್ಕೆ ₹5 ಕಮಿಷನ್‌ ನಿಗದಿಪಡಿಸಲಾಗಿದೆ.
ಮಾರುಕಟ್ಟೆ  ಮಾಲೀಕರು ವಹಿವಾಟಿಗೂ ಮುನ್ನವೇ ಖರೀದಿದಾರರಿಂದ ಮುಂಗಡವಾಗಿ ಹಣ ಪಡೆದಿರುತ್ತಾರೆ.

ಖರೀದಿದಾರ ರೈತರಿಂದ ಕಾಯಿ ಪಡೆಯುವಾಗ ಅದರ ಹಣವನ್ನು ಮಾಲೀಕರೇ ನೇರವಾಗಿ ರೈತರಿಗೆ ಸಂದಾಯ ಮಾಡುತ್ತಾರೆ. ನಂತರ  ಮುಂಗಡ ಹಣದಲ್ಲಿ ತಮ್ಮ ಕಮಿಷನ್‌ ಮುರಿದುಕೊಂಡು ಖರೀದಿದಾರರಿಗೆ ಉಳಿದ ಹಣ ನೀಡುತ್ತಾರೆ.  

ಹೀಗೆ ಮಾಡುವುದರಿಂದ ಖರೀದಿದಾರರು ಕಮಿಷನ್‌ ಕೊಡದೇ ಅಥವಾ ಮಾರಾಟದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಮಾಡಿ ಕಡಿಮೆ ಕಮಿಷನ್‌ ಕೊಡುವ ಪ್ರಮೇಯವೇ ಎದುರಾಗುವುದಿಲ್ಲ  ಎನ್ನುವುದು ಮಾರಾಟ ಸಂಘದ ವ್ಯಾಪಾರಿಗಳ ಅಭಿಮತ.
 
ಸ್ಥಳೀಯರಿಗೆ ಪೈಪೋಟಿ 
ಸ್ಥಳೀಯ ರೈತರು ಸಾಮಾನ್ಯವಾಗಿ ಜೂನ್‌ ತಿಂಗಳಿನಿಂದ ಡಿಸೆಂಬರ್‌ ತಿಂಗಳ ಅವಧಿಯಲ್ಲಿ ಮಾರುಕಟ್ಟೆಗೆ  ಹೆಚ್ಚು ತೆಂಗಿನ ಕಾಯಿ ತರುತ್ತಾರೆ. ಆದರೆ ಇದೇ ಅವಧಿಯಲ್ಲಿ ಕೇರಳ, ತಮಿಳುನಾಡು, ಮತ್ತು ಆಂಧ್ರಪ್ರದೇಶದಿಂದ   ಹೆಚ್ಚು  ಕಾಯಿ ಆವಕವಾಗುತ್ತದೆ. ಈ ಅವಧಿಯಲ್ಲಿ, ಪ್ರತಿ ವಾರ 50 ಸಾವಿರದಿಂದ 1.50  ಲಕ್ಷ ಕಾಯಿ ಹೊರ ರಾಜ್ಯದಿಂದ ಮಾರುಕಟ್ಟೆಗೆ   ಬರುತ್ತದೆ. ಹೀಗಾಗಿ ಸ್ಥಳೀಯ ರೈತರು ನಿರೀಕ್ಷೆ ಮಾಡಿದಷ್ಟು ಬೆಲೆ ಸಿಗದಂತಾಗಿದೆ. 
 
ಕುಸಿದ ಬೆಲೆ
ಒಂದೂವರೆ ವರ್ಷದಿಂದ ಕಾಯಿ ಬೆಲೆಯಲ್ಲಿ ಹೆಚ್ಚು ಕುಸಿತ ಕಂಡಿತ್ತು. ಒಂದು ಕಾಯಿ ಬೆಲೆ ಕನಿಷ್ಠ ₹4 ರಿಂದ ಗರಿಷ್ಠ ₹13ರಷ್ಟಿತ್ತು. ಆದರೆ, ಸಾಮಾನ್ಯವಾಗಿ ಹೊರ ರಾಜ್ಯಗಳ ಕಾಯಿ ಬೆಲೆ ಇದಕ್ಕಿಂತಲೂ ₹ 3 ರಿಂದ ₹5 ರಷ್ಟು ಕಡಿಮೆ ಇರುವುದರಿಂದ ಸ್ಥಳೀಯ ರೈತರ ತಂದ ಕಾಯಿಯನ್ನು ಕೊಳ್ಳುವವರು ಇಲ್ಲದೆ, ಕೇಳಿದ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿತ್ತು. ನೋಟು ರದ್ದತಿ ನಂತರ ಕಾಯಿ ಬೆಲೆಯಲ್ಲಿ ಮತ್ತಷ್ಟು ಕುಸಿತ ಕಂಡಿದ್ದು,  ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ.
 
ಬೆಲೆ ಏರಿಕೆ
ದಿನಬಳಕೆ, ಶುಭಸಮಾರಂಭಗಳಲ್ಲಿ ಕಾಯಿಗೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಏರಿಕೆ ಸಹಜ. ಆದರೆ ಇಂತಹ ಸಂದರ್ಭದಲ್ಲಿ ಬೇಸಿಗೆ ಬೇಗೆಗೆ ಕಾಯಿ ಸೀಳುತ್ತದೆ, ನೀರು ಬೇಗನೆ ಇಂಗಿ ಹೋಗುವುದರಿಂದ ಹೆಚ್ಚು ದಿನಗಳವರೆಗೆ ಸಂಗ್ರಹ ಮಾಡಿ ಇಟ್ಟುಕೊಳ್ಳುವುದು ಕಷ್ಟ. ಈ ಕಾರಣದಿಂದ ಬೆಲೆಯಲ್ಲಿ ಏರಿಕೆಯಾಗುತ್ತದೆ. ಸದ್ಯ, ಒಂದು ಕಾಯಿ ₹ 13 ರಿಂದ ₹28 ರವರೆಗೆ ಹರಾಜಾಗುತ್ತಿದೆ.
 
ಹೆಚ್ಚು ಬೇಡಿಕೆ ಇರುವ ಸಂದರ್ಭಗಳಲ್ಲಿ ಸ್ಥಳೀಯ ರೈತರು ತರುವ ಕಾಯಿ ಸಾಕಾಗುವುದಿಲ್ಲ. ಆದರೆ ಈ ಸಮಯದಲ್ಲಿ ಹೊರರಾಜ್ಯಗಳಿಂದಲೂ ಬರುವ ಕಾಯಿ ಪ್ರಮಾಣವೂ ಕಡಿಮೆ ಇರುತ್ತದೆ. ಇದರಿಂದ ನಿತ್ಯದ ಬಳಕೆಯ ಕಾಯಿ ಬೆಲೆ ದುಬಾರಿಯಾಗುತ್ತಿದೆ.
 
ಎಳನೀರು ಮಾರಾಟವೇ ಉತ್ತಮ
ಸದ್ಯದ ಪರಿಸ್ಥಿತಿ ನೋಡಿದರೆ ತೆಂಗಿನಕಾಯಿ ಮತ್ತು ಒಣ ಕೊಬ್ಬರಿಯನ್ನು  ಮಾರಾಟ ಮಾಡುವ ಬದಲು  ಎಳನೀರು ಮಾರುವುದರಿಂದ ಹೆಚ್ಚು ಲಾಭ ಗಳಿಸಬಹುದು ಎಂದು ಕೆಲವು ರೈತರು ಅಭಿಪ್ರಾಯಪಡುತ್ತಾರೆ.
 
‘ಬೇಸಿಗೆಯಲ್ಲಿ ಹೆಚ್ಚು ಎಳನೀರಿಗೆ ಬೇಡಿಕೆ ಇರುವುದರಿಂದ ತಮ್ಮ ತೋಟದ ಬಳಿಯೇ ಖರೀದಿ ಮಾಡುತ್ತಾರೆ. ಇದರಿಂದ ತೆಂಗಿನ ಫಸಲು ಕೂಡ ಹೆಚ್ಚಾಗುತ್ತದೆ.  ಬೆಲೆಯಲ್ಲಿ ಏರಿಳಿತವಾಗುವುದಿಲ್ಲ, ಕಡಿಮೆ ಖರ್ಚು ಹಾಗೂ ಹೆಚ್ಚು ಲಾಭ ಗಳಿಸಬಹುದು.

ಒಣ ಕೊಬ್ಬರಿ ಮಾಡಲು ಹೆಚ್ಚು ದಿನಗಳು ಕಾಯಬೇಕು ಹಾಗೂ ಹೆಚ್ಚು ಕಾರ್ಮಿಕರ ಅವಶ್ಯಕವಾಗಿರುವುದರಿಂದ  ಎಳನೀರನ್ನು ಮಾರಾಟ ಮಾಡುವುದು ಉತ್ತಮ’ ಎನ್ನುತ್ತಾರೆ ರೈತ ಮುಖಂಡ ಮುನೇಗೌಡ ಅವರು. 
 
ಪ್ರತ್ಯೇಕ ಮಾರುಕಟ್ಟೆ ಅಗತ್ಯ
ವಿಜಯಪುರ ಪಟ್ಟಣ ವಿಸ್ತರಣೆಯಾಗುತ್ತಿರುವುದರಿಂದ ಮಾರುಕಟ್ಟೆಯನ್ನು ಇನ್ನಷ್ಟು ವ್ಯವಸ್ಥಿತಗೊಳಿಸುವ ಅಗತ್ಯವಿದೆ.  ಹೀಗಾಗಿ ಸರ್ಕಾರ ಮಾರುಕಟ್ಟೆಗೆ ಪ್ರತ್ಯೇಕ ಸ್ಥಳ ನೀಡಿದರೆ ವಹಿವಾಟಿಗೆ ಅನುಕೂಲವಾಗುತ್ತದೆ ಎನ್ನುವುದು ಸ್ಥಳೀಯ ರೈತರ ಅಭಿಪ್ರಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.