ADVERTISEMENT

ತೆಂಗು ಖರೀದಿ ಕೇಂದ್ರದತ್ತ ಸುಳಿಯದ ರೈತರು

ಕೆ.ಎಸ್.ಸುನಿಲ್
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
ತೆಂಗು ಖರೀದಿ ಕೇಂದ್ರದತ್ತ ಸುಳಿಯದ ರೈತರು
ತೆಂಗು ಖರೀದಿ ಕೇಂದ್ರದತ್ತ ಸುಳಿಯದ ರೈತರು   

ಹಾಸನ:  ತೆಂಗಿನಧಾರಣೆ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ ಬೆಳೆಗಾರರ ನೆರವಿಗಾಗಿ ಸರ್ಕಾರ ಆರಂಭಿಸಿರುವ ತೆಂಗಿನ ಕಾಯಿ ಖರೀದಿ ಕೇಂದ್ರಗಳತ್ತ ರೈತರು ಬರುತ್ತಿಲ್ಲ.

ಹಾಸನ, ಚಾಮರಾಜನಗರ, ತುಮಕೂರು, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಕನಿಷ್ಠ ಬೆಂಬಲ ಬೆಲೆ  (ಕೆ.ಜಿ.ಗೆ ₹ 16ರಂತೆ) ಯೋಜನೆ ಅಡಿ ಸುಲಿದ ತೆಂಗಿನಕಾಯಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಇದಕ್ಕಾಗಿ ಪ್ರತಿ ಕೇಂದ್ರಕ್ಕೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಅಂದಾಜು 60 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಈ ಪೈಕಿ ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಕ್ರಮವಾಗಿ 25 ಹಾಗೂ 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಅರಸೀಕೆರೆ ತಾಲ್ಲೂಕಿನ ಗಂಡಸಿ, ಚನ್ನರಾಯಪಟ್ಟಣ, ಹಾಸನ ಎಪಿಎಂಸಿ ಪ್ರಾಂಗಣದಲ್ಲಿ ಖರೀದಿ ಕೇಂದ್ರ ಆರಂಭಿಸಿ ಎರಡು ವಾರ ಕಳೆದರೂ ಈವರೆಗೆ ಯಾವುದೇ ರೈತರು ಹೆಸರು ನೋಂದಣಿ ಮಾಡಿಕೊಂಡಿಲ್ಲ.

ಸಾಗಣೆ ವೆಚ್ಚ, ನಿಗದಿತ ಸಮಯಕ್ಕೆ ಹಣ ನೀಡುವುದಿಲ್ಲ ಹಾಗೂ ಬೆಂಬಲ ಬೆಲೆ ಕಡಿಮೆ ಎಂಬ ಕಾರಣಕ್ಕೆ ರೈತರು ಖರೀದಿ ಕೇಂದ್ರಗಳಿಗೆ ತೆಂಗಿನಕಾಯಿ ತರದೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಖರೀದಿ ಕೇಂದ್ರದ ಸಿಬ್ಬಂದಿ ಮಧ್ಯಾಹ್ನದವರೆಗೂ ಬಾಗಿಲು ತೆರೆದು ನಂತರ ಬಂದ್‌ ಮಾಡಿಕೊಂಡು ಹೋಗುತ್ತಿದ್ದಾರೆ.

‘ರೈತರು ಕೆ.ಜಿ.ಗೆ ₹ 20 ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸಾಕಷ್ಟು ಪ್ರಚಾರ ಮಾಡಿದರೂ ರೈತರ ಸುಳಿವು ಇಲ್ಲ. ಈವರೆಗೂ ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಒಬ್ಬರೂ ಹೆಸರು ನೋಂದಾಯಿಸಿಲ್ಲ. ಚೆಕ್‌ ವಿಳಂಬವಾಗುತ್ತದೆ ಎನ್ನುವುದಕ್ಕೆ ಈ ಬಾರಿ ಆರ್‌ಟಿಜಿಎಸ್‌ ಮೂಲಕ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.

ಆದರೆ ಆ ಹಣವನ್ನು ಬ್ಯಾಂಕ್‌ನವರು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ರೈತರು ಖರೀದಿ ಕೇಂದ್ರಗಳಿಗೆ ಕಾಯಿ ತರದಿರುವ ಸಾಧ್ಯತೆಯೂ ಇದೆ’ ಎಂದು ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಶ್ರೀಹರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿಯೊಬ್ಬ ರೈತರಿಂದ ಅವರು ಹೊಂದಿರುವ ಒಂದು ತೆಂಗಿನ ಮರಕ್ಕೆ 15 ಕೆ.ಜಿ.ಯಂತೆ ಗರಿಷ್ಠ 30 ಕ್ವಿಂಟಲ್‌ ಸುಲಿದ ತೆಂಗಿನಕಾಯಿ ಖರೀದಿಸಲಾಗುವುದು. ಗುಣಮಟ್ಟ ಕಾಪಾಡಲು ತೋಟಗಾರಿಕಾ ಇಲಾಖೆಯ ಇಬ್ಬರು ನುರಿತ ಗ್ರೇಡರ್‌ಗಳನ್ನು ನೇಮಿಸಲಾಗಿದ್ದು,

ಅವರು ದೃಢೀಕರಿಸಿದ, ಸುಲಿದ ತೆಂಗಿನಕಾಯಿ ಮಾತ್ರ ಖರೀದಿಸಲಾಗುವುದು. ಆಯಾ ದಿನದಂದು ರೈತರಿಗೆ ನೀಡಬೇಕಾದ ಮೊತ್ತವನ್ನು ಆರ್‌ಟಿಜಿಎಸ್‌ ಮೂಲಕ ಪಾವತಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆ ತೀರಾ ಕಡಿಮೆ. ಸಾಗಣೆ ವೆಚ್ಚವೇ ಹೆಚ್ಚಾಗುತ್ತದೆ. ಆದ್ದರಿಂದ ಕ್ವಿಂಟಲ್‌ಗೆ ₹ 2,500 ನೀಡಬೇಕು. ಗಂಡಸಿಯಲ್ಲಿ ಕೇಂದ್ರ ತೆರೆಯುವ ಬದಲು ಬಾಣಾವರ ಅಥವಾ ಅರಸೀಕೆರೆಯಲ್ಲಿ ಆರಂಭಿಸಿದ್ದರೆ ಸಾಗಣೆ ವೆಚ್ಚ ಉಳಿಯುತ್ತಿತ್ತು.

ಸದ್ಯ ಮಾರುಕಟ್ಟೆಯಲ್ಲಿ ತೆಂಗಿನ ಧಾರಣೆ ಕ್ವಿಂಟಲ್‌ಗೆ ₹ 1,400–1,500 ಇದೆ. ಅಲ್ಲಿ ವ್ಯಾಪಾರವಾಗುತ್ತಿದ್ದಂತೆ ಕೈಗೆ ತಕ್ಷಣ ಹಣ ಸಿಗುತ್ತದೆ. ಕೇಂದ್ರಕ್ಕೆ ಮಾರಾಟ ಮಾಡಿದರೆ ನಿಗದಿತ ಸಮಯಕ್ಕೆ ಹಣ ನೀಡುವುದಿಲ್ಲ. ಹೀಗಾಗಿ ರೈತರು ಕೇಂದ್ರದತ್ತ ಹೋಗುತ್ತಿಲ್ಲ’ ಎನ್ನುತ್ತಾರೆ ಅರಸೀಕೆರೆ ತಾಲ್ಲೂಕು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ದೇವರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.