ADVERTISEMENT

ತೆರಿಗೆ ಇಲಾಖೆ ಅಧಿಕಾರಿಗಳನ್ನೂ ಪೇಚಿಗೆ ಸಿಲುಕಿಸಿದ ‘ಕಪ್ಪಡೈರಿ’..!

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಬೆಂಗಳೂರು: ತೆರಿಗೆ ಸಂಗ್ರಹ  ಬಗ್ಗೆ ಮಾಹಿತಿ ನೀಡಲು ಕೇಂದ್ರ ಆದಾಯ ತೆರಿಗೆ ಇಲಾಖೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ, ಕಪ್ಪ ನೀಡಿದ್ದಕ್ಕೆ ಸಂಬಂಧಿಸಿದೆ ಎನ್ನಲಾದ ಕಾಂಗ್ರೆಸ್‌ ಶಾಸಕ ಗೋವಿಂದರಾಜ ಅವರ ಡೈರಿ ಪ್ರಕರಣ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿತು. 
 
ಆದಾಯ ತೆರಿಗೆ ಇಲಾಖೆ ಬಳಿಯಿದ್ದ ಡೈರಿಯಲ್ಲಿಯ ಮಾಹಿತಿ ಸೋರಿಕೆಯಾದದ್ದು ಹೇಗೆ ಎಂಬ ಮಾಧ್ಯಮ ಪ್ರತಿನಿಧಿಗಳ ಅನಿರೀಕ್ಷಿತ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬಾದರು. 
 
‘ಕೇವಲ ಕಾಂಗ್ರೆಸ್‌ ಶಾಸಕರು, ನಾಯಕರ ಮನೆಗಳ ಮೇಲೆ ಮಾತ್ರ ಐ.ಟಿ ದಾಳಿಗಳು ನಡೆಯುತ್ತಿವೆ. ಬಿಜೆಪಿ ನಾಯಕರ ಮನೆ ಮೇಲೆ ದಾಳಿ ನಡೆಯುತ್ತಿಲ್ಲ. ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಇಲಾಖೆ ಕೆಲಸ ಮಾಡುತ್ತಿದೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪವನ್ನು  ಪತ್ರಕರ್ತರು ಅಧಿಕಾರಿಗಳ ಗಮನಕ್ಕೆ ತಂದರು.
 
ಈ ಪ್ರಶ್ನೆಗೂ ಉತ್ತರಿಸಲು ಅಧಿಕಾರಿಗಳು ತಡವರಿಸಿದರು. ‘ಅಂಥವರ ಬಗ್ಗೆ ಮಾಹಿತಿ ನೀಡಿದರೆ ಅವರ ಮನೆಗಳ ಮೇಲೂ ದಾಳಿ ನಡೆಸಲಾಗುವುದು’ ಎಂದಷ್ಟೇ ಚುಟುಕಾಗಿ ಹೇಳಿ ನುಣುಚಿಕೊಂಡರು. 
 
‘ಆದಾಯ ತೆರಿಗೆ ಇಲಾಖೆ ಕಾರ್ಯವೈಖರಿಯ ಬಗ್ಗೆ ಸಂಶಯ ಮೂಡಿಸುವ ಆರೋಪಗಳು ಕೇಳಿ ಬರುತ್ತಿವೆ. ಇದೇ ಮೊದಲ ಬಾರಿಗೆ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಇಲಾಖೆ ಏಕೆ ಮೌನ ವಹಿಸಿದೆ? ಯಾಕೆ  ಸ್ಪಷ್ಟನೆ ನೀಡುತ್ತಿಲ್ಲ’ ಎಂದು ಸುದ್ದಿಗಾರರು ಪ್ರಶ್ನಿಸಿದರು.

ಅನಿರೀಕ್ಷಿತ ಪ್ರಶ್ನೆಗಳಿಂದ ವಿಚಲಿತರಾದ ಅಧಿಕಾರಿಗಳು ಉತ್ತರಕ್ಕಾಗಿ ತಡವರಿಸಿದರು. ಪರಸ್ಪರ ಮುಖ ನೋಡಿಕೊಂಡು ಗುಸುಗುಸು ಮಾತನಾಡಿಕೊಂಡರು. ‘ನೀವು ಉತ್ತರಿಸಿ. ಇಲ್ಲಿಲ್ಲ,ನೀವೇ ಉತ್ತರಿಸಿ’ ಎಂದು ತಮ್ಮಲ್ಲಿಯೇ ಸನ್ನೆ ಮಾಡಿಕೊಂಡರು. 
 
ಆಗ ಅವರ ನೆರವಿಗೆ ಧಾವಿಸಿದ ಕಿರಿಯ ಅಧಿಕಾರಿಗಳು ಕಿವಿಯಲ್ಲಿ ಸಲಹೆ ನೀಡಿದರು.  ‘ಸದ್ಯ ತೆರಿಗೆ ಸಂಗ್ರಹ ಮತ್ತು ಇನ್ನಿತರ ವಿಷಯ ಕುರಿತು ಚರ್ಚಿಸೋಣ. ಉಳಿದ ವಿಷಯಗಳ ಬಗ್ಗೆ ಚರ್ಚಿಸಲು ಈ ವೇದಿಕೆ ಸೂಕ್ತವಲ್ಲ’ ಎಂದರು. 
 
ಪತ್ರಕರ್ತರು ಪಟ್ಟು ಬಿಡದಿದ್ದಾಗ ಅಧಿಕಾರಿಗಳು ಬಾಯ್ಬಿಡಬೇಕಾಯಿತು. ‘ಡೈರಿಯಲ್ಲಿಯ ಮಾಹಿತಿ ಇಲಾಖೆಯಿಂದ ಸೋರಿಕೆಯಾಗಿಲ್ಲ’ ಎಂದು ತನಿಖಾ ವಿಭಾಗದ ಮಹಾ ನಿರ್ದೇಶಕ ಬಾಲಕೃಷ್ಣನ್‌ ಅವರು ಒಂದು ವಾಕ್ಯದ ಸ್ಪಷ್ಟನೆ ನೀಡಿದರು.  
 
‘ಹಾಗಾದರೆ,ದಾಳಿಯ ವೇಳೆ ಡೈರಿ ದೊರೆತಿದ್ದು ಮತ್ತು ಅದು ನಿಮ್ಮ ಬಳಿ ಇದ್ದದ್ದು ನಿಜ ಎಂದಂತಾಯಿತು’ ಎಂದು ಮಾಧ್ಯಮದವರು ಮರು ಪ್ರಶ್ನೆ ಎಸೆದರು. 
 
‘ಇದು ಅತ್ಯಂತ ಗೌಪ್ಯ ವಿಷಯ. ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದರೂ ಇದಕ್ಕೆ ಉತ್ತರಿಸಲಾಗದು’ ಎಂದು ಮತ್ತೊಬ್ಬ ಅಧಿಕಾರಿ ಅವರ ನೆರವಿಗೆ ಬಂದರು. ಮತ್ತೊಬ್ಬ ಅಧಿಕಾರಿ ತರಾತುರಿಯಲ್ಲಿ ಪತ್ರಿಕಾಗೋಷ್ಠಿಗೆ ತೆರೆ ಎಳೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.