ADVERTISEMENT

ತೆರಿಗೆ: ಬಜೆಟ್‌ ಅಂದಾಜು ಪರಿಷ್ಕರಣೆ?

ಪಿಟಿಐ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ನೇರ ತೆರಿಗೆ ಸಂಗ್ರಹದಲ್ಲಿ ಭಾರಿ ಕೊರತೆ ಕಂಡು ಬರುವ ಸಾಧ್ಯತೆ ಇರುವುದರಿಂದ ₹ 9.8 ಲಕ್ಷ ಕೋಟಿ ಸಂಗ್ರಹಿಸುವ ಬಜೆಟ್‌ ಅಂದಾಜನ್ನು ಕೇಂದ್ರ ಸರ್ಕಾರವು ಪರಿಷ್ಕರಿಸುವ ಸಾಧ್ಯತೆ ಇದೆ.

ಮಂದಗತಿಯ ಆರ್ಥಿಕತೆ ಮತ್ತು ಜಿಎಸ್‌ಟಿ ಜಾರಿ ಫಲವಾಗಿ ಇದುವರೆಗಿನ ತೆರಿಗೆ ವರಮಾನ ಸಂಗ್ರಹವೂ ಕಡಿಮೆಯಾಗಿದೆ. ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ತೆರಿಗೆ ಮರುಪಾವತಿಯೂ ತೆರಿಗೆ ಸಂಗ್ರಹದ ಬಜೆಟ್‌ ಅಂದಾಜಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಕಾರಣಕ್ಕೆ ನೇರ ತೆರಿಗೆ ಬಜೆಟ್‌ ಅಂದಾಜನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವಾಲಯದ ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜುಲೈ – ಸೆಪ್ಟೆಂಬರ್‌ ಅವಧಿಯಲ್ಲಿನ ಆರ್ಥಿಕ ಬೆಳವಣಿಗೆ ದರ ಕುರಿತ ಅಂಕಿ ಅಂಶಗಳನ್ನು ಸರ್ಕಾರ ನವೆಂಬರ್‌ 30ರಂದು ಪ್ರಕಟಿಸಲಿದೆ. ಇದೇ ಸಂದರ್ಭದಲ್ಲಿ ತೆರಿಗೆ ಸಂಗ್ರಹದ ಬಜೆಟ್‌ ಅಂದಾಜನ್ನೂ ಪರಿಷ್ಕರಿಸುವ ಸಾಧ್ಯತೆ ಇದೆ.

ADVERTISEMENT

ಜಿಎಸ್‌ಟಿ ಜಾರಿ ಮೊದಲು ಉದ್ದಿಮೆ ಸಂಸ್ಥೆಗಳು ಉತ್ಪಾದನೆ ಕಡಿಮೆ ಮಾಡಿದ್ದವು. ವರ್ತಕರೂ ತಮ್ಮ ದಾಸ್ತಾನನ್ನು ತಗ್ಗಿಸಿದ್ದರು.  ಇದರಿಂದ ಪರೋಕ್ಷ ತೆರಿಗೆ ಸಂಗ್ರಹದ ಮೇಲೆ ಮತ್ತು ಉದ್ದಿಮೆ ಸಂಸ್ಥೆಗಳ ಮುಂಗಡ ತೆರಿಗೆ ಸಂಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟ

‘ತೆರಿಗೆ ಸಂಗ್ರಹ ಹೆಚ್ಚಿಸಲು, ಗರಿಷ್ಠ ಮೊತ್ತದ ಪ್ರಕರಣಗಳನ್ನು ಇತ್ಯರ್ಥಪಡಿಸಲು, ಶೋಧ ಮತ್ತು ವಶಪಡಿಸಿಕೊಳ್ಳುವ ಕ್ರಮಗಳನ್ನು ತೀವ್ರಗೊಳಿಸಿ ವರಮಾನ ಹೆಚ್ಚಿಸುವ ಬಗ್ಗೆ ತೆರಿಗೆ ಇಲಾಖೆ ಮೇಲೆ ಒತ್ತಡ ಹೆಚ್ಚಿದೆ. ಆದರೆ, ದ್ವಿತೀಯಾರ್ಧದಲ್ಲಿ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಮರು ಪಾವತಿ ಮಾಡುವುದು, ತೆರಿಗೆ ಸಂಗ್ರಹದ ಗುರಿ ತಲುಪುವುದಕ್ಕೆ ಅಡ್ಡಿಯಾಗಲಿದೆ’ ಎಂದು ಅಧಿಕಾರಿಯು ತಿಳಿಸಿದ್ದಾರೆ.

ದ್ವಿತೀಯಾರ್ಧದಲ್ಲಿ ತೆರಿಗೆ ಮರು ಪಾವತಿ ಮೊತ್ತವು ಮೊದಲಾರ್ಧದ ₹ 79,660 ಕೋಟಿಗಳಿಗಿಂತ ಹೆಚ್ಚಿಗೆ ಇರುವ ನಿರೀಕ್ಷೆ ಇದೆ.

ಮುಂಗಡ ತೆರಿಗೆ ಸಂಗ್ರಹ ಪ್ರಮಾಣವೂ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಕೇಂದ್ರೋದ್ಯಮಗಳ ಮುಂಗಡ ತೆರಿಗೆ ಪಾವತಿಯೂ ಕಡಿಮೆಯಾಗಿದೆ. ತೆರಿಗೆ ಸಂಗ್ರಹ ಪ್ರಮಾಣವು ಸಾಮಾನ್ಯವಾಗಿ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ  ಚೇತರಿಸಿಕೊಳ್ಳುತ್ತದೆ. ಆದರೆ, ಗರಿಷ್ಠ ಪ್ರಮಾಣದ ತೆರಿಗೆ ವಾಪಸಾತಿಯ ಕಾರಣಕ್ಕೆ ಒಟ್ಟಾರೆ ವರಮಾನ ಕಡಿಮೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.