ADVERTISEMENT

ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಖರ್ಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಖರ್ಗೆ ಮನವಿ
ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಖರ್ಗೆ ಮನವಿ   
ನವದೆಹಲಿ: ತೊಗರಿಗೆ ಮಾರುಕಟ್ಟೆಯಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಪ್ರಮಾಣದ ಬೆಲೆ ನಿಗದಿ ಮಾಡಿರುವುದರಿಂದ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
 
ಮಂಗಳವಾರ ಶೂನ್ಯವೇಳೆಯಲ್ಲಿ ಈ ವಿಷಯ ಕುರಿತು ಪ್ರಸ್ತಾಪಿಸಿದ ಅವರು, ‘ಸರ್ಕಾರವು ಪ್ರತಿ ಕ್ವಿಂಟಲ್‌ಗೆ ₹ 10,114 ದರ ನೀಡಿ ವಿದೇಶಗಳಿಂದ 55 ಲಕ್ಷ ಟನ್‌ ತೊಗರಿಯನ್ನು ಕಳೆದ ವರ್ಷ ಆಮದು ಮಾಡಿಕೊಂಡಿದೆ. ಈ ವರ್ಷವೂ ಅದೇ ದರ ನೀಡಿ 27 ಲಕ್ಷ ಟನ್‌ ತೊಗರಿ ಆಮದು ಮಾಡಿಕೊಳ್ಳುತ್ತಿದೆ.

ಆದರೆ, ಸ್ಥಳೀಯ ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ’ ಎಂದರು. ‘ಪ್ರತಿ ಕ್ವಿಂಟಲ್‌ ತೊಗರಿಗೆ ₹ 5,050 ಕನಿಷ್ಠ ಬೆಂಬಲಬೆಲೆ ನಿಗದಿ ಮಾಡಲಾಗಿದೆ. ಕರ್ನಾಟಕ ಸರ್ಕಾರ ಪ್ರತಿ ಕ್ವಿಂಟಲ್‌ಗೆ  ₹ 450 ಹೆಚ್ಚುವರಿ ಬೋನಸ್‌ ನೀಡಿ ತೊಗರಿ ಖರೀದಿಸುತ್ತಿದೆ.

ಆದರೆ, ಕರ್ನಾಟಕ ಕೃಷಿ ಬೆಲೆ ಆಯೋಗವೇ ತಿಳಿಸಿರುವಂತೆ ಪ್ರತಿ ಕ್ವಿಂಟಲ್‌ ತೊಗರಿ ಬೆಳೆಯುವುದಕ್ಕೆ ರೈತರಿಗೆ ₹ 6,403 ವೆಚ್ಚವಾಗುತ್ತಿದೆ. ಇದನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ತೊಗರಿಗೆ ₹ 7,000 ನಿಗದಿ ಮಾಡಬೇಕು’ ಎಂದು  ಆಗ್ರಹಿಸಿದರು.
 
‘ತೀವ್ರ ಬರಗಾಲದ ನಡುವೆಯೂ ಕರ್ನಾಟಕದಲ್ಲಿ ಈ ವರ್ಷ 12.50 ಲಕ್ಷ ಹೆಕ್ಟೆರ್‌ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. ಅಂದಾಜು 7.1 ಲಕ್ಷ ಟನ್‌ ತೊಗರಿ ಆವಕದ ನಿರೀಕ್ಷೆ ಇದೆ. ಆದರೆ, ಕನಿಷ್ಠ ಬೆಂಬಲಬೆಲೆ ಅಡಿ ಕೇವಲ ಶೇ 35ರಷ್ಟು ತೊಗರಿ ಖರೀದಿಸಲಾಗುತ್ತಿದೆ. ಸರ್ಕಾರ ಮಧ್ಯಪ್ರವೇಶಿಸುವ ಮೂಲಕ ರೈತರು ಬೆಳೆದಿರುವ ತೊಗರಿಯನ್ನು ಪೂರ್ಣ ಪ್ರಮಾಣದಲ್ಲಿ ಖರೀದಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಕೋರಿದರು.
 
ಪ್ರಧಾನಿ ಜತೆ ಚರ್ಚಿಸಿ ನಿರ್ಧಾರ
‘ರೈತರ ಸಮಸ್ಯೆ ಬಗ್ಗೆ ಸರ್ಕಾರ ಗಮನ ಹರಿಸುತ್ತಿದೆ. ಕನಿಷ್ಠ ಬೆಂಬಲಬೆಲೆ ಹೆಚ್ಚಿಸುವ ಕುರಿತು ಕೃಷಿ ಮತ್ತು ಹಣಕಾಸು ಸಚಿವರೊಂದಿಗೆ ಹಾಗೂ ಪ್ರಧಾನಿ ಜತೆ ಚರ್ಚಿಸಲಾಗುವುದು’ ಎಂದು  ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌  ವಿಪಕ್ಷ ಸದಸ್ಯರಿಗೆ ಭರವಸೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.