ADVERTISEMENT

ತ್ರೈಮಾಸಿಕ ಫಲಿತಾಂಶದ ಪ್ರಭಾವ

ಷೇರುಪೇಟೆ ವಹಿವಾಟು: ತಜ್ಞರ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST
ತ್ರೈಮಾಸಿಕ ಫಲಿತಾಂಶದ ಪ್ರಭಾವ
ತ್ರೈಮಾಸಿಕ ಫಲಿತಾಂಶದ ಪ್ರಭಾವ   

ನವದೆಹಲಿ (ಪಿಟಿಐ): ವಿಪ್ರೊ, ಎಚ್‌ಸಿಎಲ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಸೇರಿದಂತೆ ಇನ್ನೂ ಕೆಲವು ಕಂಪೆನಿಗಳ 4ನೇ ತ್ರೈಮಾಸಿಕ ಫಲಿತಾಂಶ ಸೋಮವಾರದಿಂದ ಪ್ರಕಟಗೊಳ್ಳಲಿವೆ. ಈ ಫಲಿತಾಂಶಗಳು ವಾರದ ಷೇರುಪೇಟೆ ವಹಿವಾಟಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ ಎಂದು ಪರಿಣತರು ವಿಶ್ಲೇಷಿಸಿದ್ದಾರೆ.

ವಿದೇಶಿ ಹೂಡಿಕೆ ಪ್ರಮಾಣ, ಡಾಲರ್ ಎದುರು ರೂಪಾಯಿ ಮೌಲ್ಯ ವ್ಯತ್ಯಯ ಹಾಗೂ ಕಚ್ಚಾತೈಲ ಬೆಲೆಯೂ ಷೇರು ಮಾರುಕಟ್ಟೆ ವಹಿವಾಟಿನ ದಿಕ್ಕನ್ನು ನಿರ್ಧರಿಸಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ವಾರ ಪ್ರಮುಖ ಕಂಪೆನಿಗಳಾದ ಹಿಂದೂಸ್ತಾನ್‌ ಜಿಂಕ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ವಿಪ್ರೊ ಮತ್ತು ಎಚ್‌ಡಿ ಎಫ್‌ಸಿ ಬ್ಯಾಂಕ್‌ ತ್ರೈಮಾಸಿಕ ಫಲಿತಾಂಶದ ಮೇಲೆ ಮಾರುಕಟ್ಟೆಯು ಬಹಳ ಕುತೂಹಲ ತಳೆದಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ರಿಟೇಲ್‌ ವಿಭಾಗದ ಅಧ್ಯಕ್ಷ ಜಯಂತ್‌ ಮಾಂಗ್ಲಿಕ್‌ ಹೇಳಿದ್ದಾರೆ.

ಸೋಮವಾರದಿಂದ ಆರಂಭವಾ ಗಲಿರುವ ಸಂಸತ್ ಅಧಿವೇಶನದಲ್ಲಿ ಭೂಸ್ವಾಧೀನ ಮಸೂದೆ, ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಮಸೂದೆಗಳಿಗೆ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಹಾಗಾಗಿಯೇ ಷೇರುಪೇಟೆ ಪಾಲುದಾರರು ಮತ್ತು ಹೂಡಿಕೆದಾರರು ಸಂಸತ್‌ ಅಧಿವೇಶನವನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಿಲಯನ್ಸ್‌ ಫಲಿತಾಂಶ ಪ್ರಭಾವ: ಶುಕ್ರವಾರ ಮಾರುಕಟ್ಟೆ ವಹಿವಾಟು ಅವಧಿ ಮುಗಿದ ಬಳಿಕ ರಿಲಯನ್ಸ್‌ ತ್ರೈಮಾಸಿಕ ಫಲಿತಾಂಶ ಪ್ರಕಟವಾಗಿದೆ. ಹೀಗಾಗಿ ಸೋಮವಾರದ ವಹಿವಾಟಿನಲ್ಲಿ ರಿಲಯನ್ಸ್‌ ಷೇರುಗಳ ಮೇಲೆ ಅದರ ಫಲಿತಾಂಶ ಪ್ರಭಾವ ಬೀರಲಿದೆ.
ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ ವಾರದ ವಹಿವಾಟಿನಲ್ಲಿ 437 ಅಂಶಗಳಷ್ಟು ಕುಸಿದು, 28,442 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.

4ನೇ ತ್ರೈಮಾಸಿಕ ಫಲಿತಾಂಶದಲ್ಲಿ ಟಿಸಿಎಸ್‌ ಲಾಭ ಶೇ 27ರಷ್ಟು ಕುಸಿತ ಕಂಡಿದ್ದರಿಂದ ಗುರುವಾರ ಷೇರುಪೇಟೆ ವಹಿವಾಟು ಇಳಿಕೆಯಾಗಿತ್ತು.

ಜನವರಿ–ಮಾರ್ಚ್‌ ಅವಧಿಯ ಕಂಪೆನಿ ಗಳ ತ್ರೈಮಾಸಿಕ ಫಲಿತಾಂಶಗಳನ್ನು ಆಧರಿಸಿ ಈ ವಾರದ ವಹಿವಾಟು ಏರಿಳಿತ ಕಾಣಲಿದೆ
ಹಿತೇಶ್‌ ಅಗರ್ವಾಲ್‌, ರಿಲಯನ್ಸ್‌ ಸೆಕ್ಯುರಿಟೀಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.