ADVERTISEMENT

‘ನಿಫ್ಟಿ’ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆ

ಪಿಟಿಐ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST

ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು. ಇದರ ಪ್ರಭಾವಕ್ಕೆ ಒಳಗಾಗಿ ದೇಶದ ಷೇರುಪೇಟೆಗಳಲ್ಲಿಯೂ ಸೋಮವಾರ ಸೂಚ್ಯಂಕಗಳು ಏರಿಕೆ ಕಂಡವು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 68 ಅಂಶ ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 10,153 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

10,133 ಅಂಶಗಳಲ್ಲಿ ವಹಿವಾಟು ಆರಂಭವಾಯಿತು. ನಂತರ 10,171ರ ಗರಿಷ್ಠ ಮಟ್ಟ ಮತ್ತು 10,131ರ ಕನಿಷ್ಠ ಮಟ್ಟ ತಲುಪಿತು. ದಿನದ ವಹಿವಾಟಿನ ಅಂತ್ಯದ ವೇಳೆಗೆ 68 ಅಂಶ ಹೆಚ್ಚಾಗಿ 10,153 ಅಂಶಗಳನ್ನು ತಲುಪಿತು.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 153 ಅಂಶ ಹೆಚ್ಚಾಗಿ, 32,423 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಜಾಗತಿಕ ರಾಜಕೀಯ ಬಿಕ್ಕಟ್ಟು ತಗ್ಗಿರುವುದರಿಂದ ಹೂಡಿಕೆ ಚಟುವಟಿಕೆ ಹೆಚ್ಚಾಗುತ್ತಿದೆ. ಇದರಿಂದ ಯೂರೋಪ್‌ ಷೇರುಪೇಟೆಗಳಲ್ಲಿ ಏರುಮುಖ ವಹಿವಾಟು ನಡೆಯಿತು. ಏಷ್ಯಾದ ಷೇರುಪೇಟೆಗಳಲ್ಲಿಯೂ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ.

ಇನ್ಫ್ರಾಟೆಕ್‌, ಬಜಾಜ್ ಆಟೊ, ಇಂಡಸ್‌ಇಂಡ್‌ ಬ್ಯಾಕ್‌, ಹಿಂದೂಸ್ತಾನ್‌ ಯೂನಿಲಿವರ್, ಏಸರ್‌ ಮೋಟಾರ್ ಗರಿಷ್ಠ ಏರಿಕೆ ಕಂಡಿವೆ.

ನಗದು ವಿಭಾಗದಲ್ಲಿನ ವಹಿವಾಟು ₹34,741 ಕೋಟಿಗಳಿಂದ ₹28,780 ಕೋಟಿಗಳಿಗೆ ಇಳಿಕೆಯಾಗಿದೆ. ಮಾರುಕಟ್ಟೆ ಬಂಡವಾಳ ಮೌಲ್ಯ ₹1.35 ಲಕ್ಷ ಕೋಟಿಗಳಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.