ADVERTISEMENT

ನೋಟು ರದ್ದು ಪರಿಣಾಮ ವಾಹನದ ಬುಕಿಂಗ್‌ ಇಳಿಕೆ

ಪಿಟಿಐ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
ನೋಟು ರದ್ದು ಪರಿಣಾಮ ವಾಹನದ ಬುಕಿಂಗ್‌ ಇಳಿಕೆ
ನೋಟು ರದ್ದು ಪರಿಣಾಮ ವಾಹನದ ಬುಕಿಂಗ್‌ ಇಳಿಕೆ   

ನವದೆಹಲಿ: ಗರಿಷ್ಠ ಮುಖಬೆಲೆಯ ನೋಟು ರದ್ದಾಗಿರುವುದು ವಾಹನ ವಲಯದ ಮೇಲೆಯೂ ಅಲ್ಪಮಟ್ಟಿನ ಪ್ರಭಾವ ಬೀರಿದೆ. ಮುಂಗಡ ಬುಕಿಂಗ್‌ ತಗ್ಗಿದೆ. ಕೆಲವು ಕಂಪೆನಿಗಳಿಗೆ ನಿಗದಿತ ಅವಧಿಗೆ ವಾಹನವನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಗಿಲ್ಲ.

ಮಾರುತಿ ಸುಜುಕಿ, ಟೊಯೊಟಾ ಮತ್ತು ರೆನೊ ಕಂಪೆನಿಗಳು ನವೆಂಬರ್‌ ತಿಂಗಳಿನಲ್ಲಿ ಎರಡಂಕಿ ಮಾರಾಟ ಪ್ರಗತಿ ಸಾಧಿಸಿವೆ. ಆದರೆ, ಮಹೀಂದ್ರ, ಫೋರ್ಡ್‌ ಮತ್ತು ಹೋಂಡಾ ಕಂಪೆನಿ ವಾಹನ ಮಾರಾಟದಲ್ಲಿ ಇಳಿಕೆಯಾಗಿದೆ.

ಮಾರುತಿ ಸುಜುಕಿ ಇಂಡಿಯಾ ಕಂಪೆನಿಯ ದೇಶಿ ಮಾರಾಟ ಶೇ 14 ರಷ್ಟು ಏರಿಕೆ ಕಂಡುಬಂದಿದೆ. ಆಲ್ಟೊ, ವ್ಯಾಗನ್‌ಆರ್‌ ಸೇರಿದಂತೆ ಮಧ್ಯಮ ಗಾತ್ರದ ಕಾರುಗಳ ಮಾರಾಟ ಶೇ 8 ರಷ್ಟು ಏರಿಕೆ ಕಂಡುಬಂದಿದೆ.

ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪೆನಿ 11,309 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳಿಗಿಂತಲೂ ಶೇ 10 ಪ್ರಗತಿ ಸಾಧಿಸಿದೆ. ಟಾಟಾ ಮೋಟಾರ್ಸ್‌ ಕಂಪೆನಿ ದೇಶಿ ಮಾರಾಟ ಶೇ 22 ಭಾರಿ ಏರಿಕೆ ಕಂಡಿದೆ. ನಮ್ಮ ವಾಹನಗಳಿಗೆ ಉತ್ತಮ ಬೇಡಿಕೆ ಇದೆ. ಫೋಕ್ಸ್‌ವ್ಯಾಗನ್‌ ಇಂಡಿಯಾದ ಮಾರಾಟ 1,942 ರಿಂದ 4,014ಕ್ಕೆ ಏರಿಕೆಯಾಗಿದೆ. ರೆನೊ ಇಂಡಿಯಾ ಶೇ 23 ಮಾರಾಟ ಪ್ರಗತಿ ದಾಖಲಿಸಿದೆ.

ಮಾರಾಟ ಇಳಿಕೆ: ಯುಟಿಲಿಟಿ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಮಹೀಂದ್ರ ಆ್ಯಂಡ್‌ ಮಹೀಂದ್ರ ವಾಹನ ಮಾರಾಟ ಶೇ 24 ರಷ್ಟು ಕುಸಿತ ಕಂಡಿದೆ. ಗರಿಷ್ಠ ಮುಖಬೆಲೆಯ ನೋಟುಗಳು ರದ್ದಾಗಿರುವುದರಿಂದ ನಗದು ಕೊರತೆ ಎದುರಾಗಿದೆ. ಇದು ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಕಂಪೆನಿ ತಿಳಿಸಿದೆ. ಹೋಂಡಾ ಕಾರ್ಸ್‌ ಇಂಡಿಯಾದ ದೇಶಿ ಮಾರಾಟ ಶೇ 45 ರಷ್ಟು ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.