ADVERTISEMENT

ಪುಷ್ಪೋದ್ಯಮ ಜೋರು ವ್ಯಾಪಾರ

ಸಚ್ಚಿದಾನಂದ ಕುರಗುಂದ
Published 7 ಫೆಬ್ರುವರಿ 2017, 19:30 IST
Last Updated 7 ಫೆಬ್ರುವರಿ 2017, 19:30 IST
ಪುಷ್ಪೋದ್ಯಮ ಜೋರು ವ್ಯಾಪಾರ
ಪುಷ್ಪೋದ್ಯಮ ಜೋರು ವ್ಯಾಪಾರ   

ಪ್ರೇಮಿಗಳು ಫೆಬ್ರುವರಿ 14ರಂದು ವಿಶ್ವದಾದ್ಯಂತ ‘ವ್ಯಾಲೆಂಟೈನ್ಸ್‌ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮಧುರವಾದ ಪ್ರೇಮದ ಭಾವನೆಗಳಿಗೆ ಸಾಂಕೇತಿಕ ಚೌಕಟ್ಟು ನೀಡುವ ಈ ದಿನದ ಆಕರ್ಷಣೆಯೇ ಕೆಂಪು ಗುಲಾಬಿ ಹೂವು. ‘ವ್ಯಾಲೆಂಟನ್ಸ್‌ ಡೇ’ ದಿನ ವಿಶ್ವದಾದ್ಯಂತ ಈ ಹೂವಿನ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ.

ಫೆ. 8ರಿಂದ 13ರವರೆಗಿನ ಅವಧಿಯನ್ನು ವ್ಯಾಲೆಂಟೈನ್ಸ್‌ ದಿನಗಳೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಪ್ರತಿ ದಿನ 3.5 ಲಕ್ಷದಿಂದ 4.5 ಲಕ್ಷ ಗುಲಾಬಿಗಳು ಮಾರಾಟವಾಗುತ್ತವೆ. 

‘ಪ್ರೇಮಿಗಳ ದಿನ’ದ ಬಳಕೆಗೆಂದೇ 40ರಿಂದ 45 ಲಕ್ಷ ಕಾಂಡಗಳು (ಹೂವುಗಳು) ಬೆಂಗಳೂರಿನಿಂದ ರಫ್ತಾಗುತ್ತವೆ.  ಕೊಲ್ಲಿ ರಾಷ್ಟ್ರಗಳು, ಸಿಂಗಪುರ, ಮಲೇಷ್ಯಾ, ಆಸ್ಟ್ರೇಲಿಯಾ, ಬ್ರಿಟನ್‌, ನ್ಯೂಜಿಲೆಂಡ್‌ ಸೇರಿದಂತೆ ವಿವಿಧ ದೇಶಗಳಿಗೆ ಹೂವುಗಳು  ರವಾನೆಯಾಗುತ್ತವೆ.

ಜನವರಿ ಕೊನೆಯ ವಾರದಿಂದ ಫೆಬ್ರುವರಿ 14ರವರೆಗೆ ರಫ್ತು ವಹಿವಾಟು ಅಪಾರ ಪ್ರಮಾಣದಲ್ಲಿ ನಡೆಯುತ್ತದೆ. ಗುಣಮಟ್ಟದ ಗುಲಾಬಿ ಹೂವುಗಳ ರಫ್ತಿನಿಂದಾಗಿ ಪುಷ್ಪೋದ್ಯಮದಲ್ಲಿಯೂ  ಬೆಂಗಳೂರು ವಿಶೇಷ ಸ್ಥಾನ ಪಡೆದಿದ್ದು,  ‘ಪ್ರೀತಿ ಅರಳಿಸುವ ನಗರ’ ಎನ್ನುವ ಖ್ಯಾತಿ ಪಡೆಯುತ್ತಿದೆ.

ಪುಷ್ಪೋದ್ಯಮದ ಕೇಂದ್ರ ಐಎಫ್‌ಎಬಿ
ಬೆಂಗಳೂರಿನ ಹೆಬ್ಬಾಳದಲ್ಲಿರುವ ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಪುಷ್ಪ ಕೃಷಿಗೊಂದು ಹೊಸ ಆಯಾಮ ನೀಡಿದೆ.

ಬೆಳೆಗಾರರು ಮತ್ತು ಖರೀದಿದಾರರ ನಡುವೆ ಈ ಕೇಂದ್ರ ಕೊಂಡಿಯಾಗಿದೆ. ಪುಷ್ಪೋದ್ಯಮಿಗಳಿಗೆ ನೇರ ಮಾರುಕಟ್ಟೆ ಒದಗಿಸುವ ಸದಾಶಯದೊಂದಿಗೆ ಈ ಕೇಂದ್ರ 2002ರಲ್ಲಿ ಆರಂಭವಾಯಿತು. ರಾಜ್ಯ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾದ ಈ ಕೇಂದ್ರದಿಂದ ಅಂತರರಾಷ್ಟ್ರೀಯ ಮತ್ತು ದೇಶಿಯ ಮಾರುಕಟ್ಟೆಗೆ ಹೂವುಗಳು ಪೂರೈಕೆಯಾಗುತ್ತವೆ.

ಹರಾಜು ಕೇಂದ್ರಕ್ಕೆ ಬರುವ ಹೂವುಗಳ ತಾಜಾತನ ಕಾಪಾಡುವ ಮತ್ತು ದುಡಿಮೆಗೆ ತಕ್ಕ ಬೆಲೆ ನೀಡುವುದು ಈ ಕೇಂದ್ರದ ಉದ್ದೇಶಗಳಲ್ಲಿ ಒಂದು. ಬೆಳೆಗಾರರು ತರುವ ಹೂವುಗಳ ವಿಂಗಡಣೆ ಮತ್ತು ಸಂರಕ್ಷಣೆ ಕಾರ್ಯ ಹಾಗೂ ದಲ್ಲಾಳಿರಹಿತ ಮಾರುಕಟ್ಟೆ ವ್ಯವಸ್ಥೆ ಇದಾಗಿದೆ.

ಪಾರದರ್ಶಕವಾಗಿ ಹರಾಜು ನಡೆಸಲು  ಡಿಜಿಟಲ್‌ ಹರಾಜು ಗಡಿಯಾರವನ್ನು ಇಲ್ಲಿ ಅಳವಡಿಸಲಾಗಿದೆ. ‘ಟ್ಯಾಬ್ಲೆಟ್‌’ ಮೂಲಕ ಖರೀದಿ ಪ್ರಕ್ರಿಯೆ ಇಲ್ಲಿ ನಡೆಯುತ್ತದೆ. ಅದೇ ದಿನ ಖರೀದಿದಾರರು ಹಣ ನೀಡಬೇಕು. ರೈತರಿಗೆ ವಾರಕ್ಕೊಮ್ಮೆ ತಪ್ಪದೇ ಹಣ ಪಾವತಿಸಲಾಗುತ್ತದೆ.

ಗುಲಾಬಿ, ಕಾರ್ನೆಸಿಯನ್‌, ಅಂಥೋನಿಯಂ, ಟ್ಯೂಬ್‌ರೋಸ್‌ ಮುಂತಾದ ಹೂವುಗಳ ವಹಿವಾಟು ಇಲ್ಲಿ ನಡೆಯುತ್ತಿದೆ.  ಪುಷ್ಪ ವಿಂಗಡಣೆಯ ಕಾಲದಲ್ಲಿ ಕಾಂಡದ ಉದ್ದ ಹಾಗೂ ಆಕಾರ ಪರಿಗಣಿಸಿ ಗ್ರೇಡ್‌ಗಳನ್ನು ನೀಡಲಾಗುತ್ತದೆ. ಗ್ರೇಡ್‌ ಆಧರಿಸಿ ಬೆಲೆಯೂ ನಿಗದಿಯಾಗುತ್ತದೆ. ಹೂವುಗಳ ತಾಜಾತನ ಮತ್ತು ಸಂರಕ್ಷಣೆಗಾಗಿ ನಾಲ್ಕು ಅತ್ಯಾಧುನಿಕ ಶೇತ್ಯಾಗಾರಗಳ ಸೌಲಭ್ಯ ಇಲ್ಲಿದೆ.

ಇಲ್ಲಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಹಾಗೂ ದೇಶದ ನಾನಾ ಭಾಗಗಳಿಗೆ ಹೂ ರವಾನೆಯಾಗುತ್ತದೆ. ಈ ಕೇಂದ್ರಕ್ಕೆ ಚಿಕ್ಕಬಳ್ಳಾಪುರ, ಆನೇಕಲ್‌, ಕೋಲಾರ, ಹಾಸನ, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ರೈತರು ಹೂವು ಪೂರೈಸುತ್ತಾರೆ. 365 ದಿನವೂ ಕಾರ್ಯನಿರ್ವಹಿಸುವ ಈ ಕೇಂದ್ರದಲ್ಲಿ ಪ್ರತಿ ದಿನ 1.5 ಲಕ್ಷ ಹೂವುಗಳ ಹರಾಜು ನಡೆಯುತ್ತದೆ. ವ್ಯಾಲೆಂಟೈನ್ಸ್‌ ದಿನ 4 ಲಕ್ಷಗಳ ಹೂವುಗಳ ಹರಾಜಾಗುತ್ತವೆ. ಪ್ರಸ್ತುತ 160 ರೈತರು ಮತ್ತು 140 ಖರೀದಿದಾರರು ಇಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಕೇಂದ್ರವು ಪ್ರತಿಯೊಬ್ಬರಿಗೂ ಮುಕ್ತವಾಗಿದೆ. ಇದೀಗ ಗದಗ, ಹುಬ್ಬಳ್ಳಿ ಭಾಗದ ರೈತರು ಸಹ ಇಲ್ಲಿ ವಹಿವಾಟು ನಡೆಸಲು ಆಸಕ್ತಿ ತೋರುತ್ತಿದ್ದಾರೆ. 

***

ADVERTISEMENT

ಇಡೀ ದೇಶದಲ್ಲಿ ಇದೊಂದೇ ಪುಷ್ಪ ಹರಾಜು ಕೇಂದ್ರ. ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಈ ಕೇಂದ್ರ ಹೊಂದಿದೆ. ಇಲ್ಲಿ ಪಾರದರ್ಶಕ ಹರಾಜು ನಡೆಯುತ್ತಿದೆ
–ವಿಜಯ್‌ ಆರ್‌. ಕುಲಕರ್ಣಿ, ಪ್ರಧಾನ ವ್ಯವಸ್ಥಾಪಕರು,ಐಎಫ್‌ಎಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.