ADVERTISEMENT

ಪೆಟ್ರೋಲಿಯಂ ಉತ್ಪನ್ನ, ರಿಯಲ್‌ ಎಸ್ಟೇಟ್‌ ಜಿಎಸ್‌ಟಿ ವ್ಯಾಪ್ತಿಗೆ

ಪಿಟಿಐ
Published 23 ಮಾರ್ಚ್ 2017, 19:46 IST
Last Updated 23 ಮಾರ್ಚ್ 2017, 19:46 IST
ಪೆಟ್ರೋಲಿಯಂ ಉತ್ಪನ್ನ, ರಿಯಲ್‌ ಎಸ್ಟೇಟ್‌ ಜಿಎಸ್‌ಟಿ ವ್ಯಾಪ್ತಿಗೆ
ಪೆಟ್ರೋಲಿಯಂ ಉತ್ಪನ್ನ, ರಿಯಲ್‌ ಎಸ್ಟೇಟ್‌ ಜಿಎಸ್‌ಟಿ ವ್ಯಾಪ್ತಿಗೆ   

ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ, ಇದಕ್ಕೆ ಜಿಎಸ್‌ಟಿ ಮಂಡಳಿ ಒಪ್ಪಿಗೆ ನೀಡುವವರೆಗೂ ಸದ್ಯ ಇರುವ ತೆರಿಗೆ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

ಜಿಎಸ್‌ಟಿ ಮಂಡಳಿಯಲ್ಲಿ ಎಲ್ಲ ರಾಜ್ಯಗಳೂ ಒಪ್ಪಿಗೆ ನೀಡುವವರೆಗೆ ಪೆಟ್ರೋಲಿಯಂ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ವಿಧಿಸುವುದಿಲ್ಲ ಎಂದು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಮದ್ಯ ಉದ್ಯಮದಿಂದ ರಾಜ್ಯಕ್ಕೆ ಹೆಚ್ಚು ವರಮಾನ ಬರುತ್ತಿದೆ. ಸದ್ಯ, ಇರುವಂತಹ ತೆರಿಗೆ ವ್ಯವಸ್ಥೆಯಲ್ಲಿ ಪೆಟ್ರೋಲಿಯಂ ಮತ್ತು ಮದ್ಯದಿಂದ ಬರುವ ವರಮಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತಿವೆ. ಜಿಎಸ್‌ಟಿ ಜಾರಿಯಿಂದ ಉತ್ಪನ್ನಗಳಿಗೆ ತೆರಿಗೆ ವಿಧಿಸುವ ಸ್ವಾತಂತ್ರ್ಯವನ್ನು ರಾಜ್ಯಗಳು ಕಳೆದುಕೊಳ್ಳಲಿವೆ ಮತ್ತು ವರಮಾನ ನಷ್ಟವಾಗಲಿದೆ ಎನ್ನುವ ಆತಂಕ ಎದುರಾಗಿದೆ ಎಂದೂ ಹೇಳಿದ್ದಾರೆ.

ರಿಯಲ್ ಎಸ್ಟೇಟ್: ರಿಯಲ್‌ ಎಸ್ಟೇಟ್‌ ವಲಯವನ್ನೂ ಜಿಎಸ್‌ಟಿ ಅಡಿ ತರಲಾಗುವುದು ಎಂದು ಜೇಟ್ಲಿ ತಿಳಿಸಿದ್ದಾರೆ. ಜಿಎಸ್‌ಟಿ ಜಾರಿಯಾದ ವರ್ಷದೊಳಗೆ ರಿಯಲ್‌ ಎಸ್ಟೇಟ್‌ ವಲಯವನ್ನು ಈ ತೆರಿಗೆ ಅಡಿ ತರುವ ಪ್ರಸ್ತಾವನೆಯನ್ನು ಜಿಎಸ್‌ಟಿ ಮಂಡಳಿ ಪರಿಶೀಲಿಸಲಿದೆ ಎಂದರು.

ಸಂಸತ್‌ನಲ್ಲಿ ಇಂದು ಮಸೂದೆ
ನವದೆಹಲಿ:
ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು ಶುಕ್ರವಾರ ಸಂಸತ್‌ನಲ್ಲಿ ಮಂಡಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಸೋಮವಾರದಿಂದ ಮಸೂದೆ ಮೇಲೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್‌ ರಾಂ ಮೇಘ್ವಾಲ್‌ ಅವರು ಗುರುವಾರ  ಸುದ್ದಿಗಾರರಿಗೆ ತಿಳಿಸಿದರು.

ಜಿಎಸ್‌ಟಿ ಜಾರಿಗೆ ಪೂರಕವಾದ ನಾಲ್ಕು ಮಸೂದೆಗಳಿಗೆ ಸೋಮವಾರ ಕೇಂದ್ರ ಸಂಪುಟ ಒಪ್ಪಿಗೆ ನೀಡಿತ್ತು. ಈ ನಾಲ್ಕು ಮಸೂದೆಗಳನ್ನು ಒಳಗೊಂಡ ‘ಹಣಕಾಸು ಮಸೂದೆ’ಯನ್ನು ಅನುಮೋದನೆಗಾಗಿ ಶುಕ್ರವಾರ ಸಂಸತ್‌  ಮುಂದಿಡಲಾಗುವುದು ಎಂದು  ಅವರು  ತಿಳಿಸಿದರು.

ಜುಲೈ 1ರಿಂದ ದೇಶದಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ (ಜಿಎಸ್‌ಟಿ) ಜಾರಿ ಮಾಡುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT