ADVERTISEMENT

ಪೇಟೆಯ ಮೇಲೆ ಯೋಗಿ ಪ್ರಭಾವ?

ಜಾಗತಿಕ ಮಾರುಕಟ್ಟೆ ಬೆಳವಣಿಗೆ ಮೇಲೆ ದೃಷ್ಟಿ ನೆಟ್ಟ ಹೂಡಿಕೆದಾರರು

ಪಿಟಿಐ
Published 19 ಮಾರ್ಚ್ 2017, 19:56 IST
Last Updated 19 ಮಾರ್ಚ್ 2017, 19:56 IST
ಪೇಟೆಯ ಮೇಲೆ ಯೋಗಿ ಪ್ರಭಾವ?
ಪೇಟೆಯ ಮೇಲೆ ಯೋಗಿ ಪ್ರಭಾವ?   

ಮುಂಬೈ: ದೇಶೀಯ ಮಾರುಕಟ್ಟೆಯಲ್ಲಿ ಈ ವಾರ ಮಹತ್ವದ ಘಟನೆಗಳು ನಡೆಯುತ್ತಿಲ್ಲ. ಹೂಡಿಕೆದಾರರು ಜಾಗತಿಕ ಮಾರುಕಟ್ಟೆ ಬೆಳವಣಿಗೆ ಮೇಲೆ ದೃಷ್ಟಿ ನೆಟ್ಟಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಅವರ ನೇಮಕವು  ಕೇಂದ್ರ ಸರ್ಕಾರದ  ಆರ್ಥಿಕ ಸುಧಾರಣಾ ಕ್ರಮಗಳ  ಮೇಲೆ ಬೀರಬಹುದಾದ ಪ್ರಭಾವದ ಬಗ್ಗೆ  ಹೂಡಿಕೆದಾರರು ಚಿಂತಿತರಾಗಿದ್ದಾರೆ. 

ಪೇಟೆಯಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಷೇರುಗಳ ಖರೀದಿ ಮತ್ತು ಮಾರಾಟದ ನಿರ್ಧಾರಕ್ಕೆ ಬರಲಿದ್ದಾರೆ.ದೇಶದಲ್ಲಿನ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು ಮಾರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ.

ಈ ವಾರ ಷೇರುಪೇಟೆಯಲ್ಲಿ   ಮಾರಾಟವೇ ಪ್ರಮುಖವಾಗಿ ನಡೆದು ಲಾಭ ಮಾಡಿಕೊಳ್ಳುವ  ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ADVERTISEMENT

ಮಂಗಳವಾರ ನಡೆಯಲಿರುವ ಜಪಾನ್‌  ಕೇಂದ್ರೀಯ ಬ್ಯಾಂಕ್‌ನ ಹಣಕಾಸು ನೀತಿ ಸಭೆ  ಮತ್ತು ಚೀನಾದ ಫೆಬ್ರುವರಿ ತಿಂಗಳ ಆರ್ಥಿಕ ಪ್ರಗತಿ ದರ ಪ್ರಕಟಣೆಯನ್ನೂ ಹೂಡಿಕೆದಾರರು ಎದುರು ನೋಡುತ್ತಿದ್ದಾರೆ. ಐರೋಪ್ಯ ಒಕ್ಕೂಟದ ಕೈಗಾರಿಕಾ ಪ್ರಗತಿ ದರದ ಅಂಕಿ, ಅಂಶ, ಅಮೆರಿಕದ ಉದ್ಯೋಗ ವರದಿ ಕೂಡ ಪರಿಣಾಮ ಬೀರಲಿವೆ.

**

₹6.80 ಲಕ್ಷ ಸಂಗ್ರಹ ಸಾಮರ್ಥ್ಯ
ನವದೆಹಲಿ: ಭಾರತದ ಷೇರುಪೇಟೆಗಳು ಪ್ರತಿವರ್ಷ ₹6.80 ಲಕ್ಷ ಕೋಟಿ  ಬಂಡವಾಳ ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ ಎಂದು ಮುಂಬೈ ಷೇರುಪೇಟೆಯ (ಬಿಎಸ್‌ಇ) ಸಿಇಒ ಆಶೀಷ್‌ ಚವ್ಹಾಣ್‌ ಹೇಳಿದ್ದಾರೆ.

‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುಂಬೈ ಷೇರುಪೇಟೆಯೊಂದೇ ₹2 ಲಕ್ಷ ಕೋಟಿ ಸಂಗ್ರಹಿಸುವ ನಿರೀಕ್ಷೆ ಇದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಮುಂದಿನ 10 ವರ್ಷದಲ್ಲಿ ದೇಶದ ಮೂಲಸೌಲಭ್ಯ, ಉದ್ಯೋಗ ಸೃಷ್ಟಿ, ಕೈಗಾರಿಕಾ ಪ್ರಗತಿ ಸೇರಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಹಣಕಾಸಿನ ನೆರವಿನ ಅರ್ಧ ಮೊತ್ತವನ್ನು ಪೂರೈಸುವ ಶಕ್ತಿ ದೇಶದ ಷೇರು ಮಾರುಕಟ್ಟೆಗೆ ಇದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.