ADVERTISEMENT

ಪೇಟೆ ಚೇತರಿಕೆ: ಸೂಚ್ಯಂಕ 416 ಅಂಶ ಏರಿಕೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಮುಂಬೈ(ಪಿಟಿಐ): ಕಳೆದ ಐದು ವಹಿವಾಟು ದಿನಗಳಲ್ಲಿ ಇಳಿಮುಖ­ವಾಗಿದ್ದ ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕವು ಗುರುವಾರ 416 ಅಂಶಗಳಷ್ಟು ಭಾರಿ ಜಿಗಿತ ಕಂಡಿದೆ. ಇದು ಕಳೆದ ಒಂದೂವರೆ ತಿಂಗಳಿ­ನಲ್ಲಿಯೇ ದಿನದ ವಹಿವಾಟಿನಲ್ಲಿನ ಗರಿಷ್ಠ ಏರಿಕೆಯಾಗಿದೆ.

ಕೆಲ ದಿನಗಳ ಮಟ್ಟಿಗೆ ಬಡ್ಡಿದರ ಏರಿಕೆ ಇಲ್ಲ ಎಂದು ಅಮೆರಿಕದ ಫೆಡರಲ್‌ ಬ್ಯಾಂಕ್‌ ಬುಧವಾರ ಹೇಳಿಕೆ ನೀಡಿರುವುದು ಜಾಗತಿಕ ಮಾರುಕಟ್ಟೆ ಚೇತರಿಕೆಗೆ ಕಾರಣವಾಗಿದ್ದು, ದೇಶದ ಮಾರುಕಟ್ಟೆಯಲ್ಲೂ ಗುರುವಾರ ಹೆಚ್ಚಿನ ವಹಿವಾಟು ನಡೆಯು­ವಂತಾಯಿತು.

ಇಷ್ಟೇ ಅಲ್ಲದೆ, ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆಗೆ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದ್ದು, ಚಾಲ್ತಿ­ಯಲ್ಲಿರುವ ಚಳಿಗಾಲದ ಅಧಿವೇಶನ­ದಲ್ಲಿ ಮಂಡನೆಗೆ ಹಾದಿ ಸುಗಮ­ಗೊಳಿಸಿದೆ. ಇದೂ ಕೂಡಾ ದಿನದ ವಹಿವಾಟಿನ ಮೇಲೆ ಪ್ರಭಾವ ಬೀರಿದೆ.

ರಷ್ಯಾದ ಕರೆನ್ಸಿ ಮೌಲ್ಯ ಸ್ಥಿರತೆ ಸಾಧಿಸಿದ್ದೂ ಕೂಡಾ ಜಾಗತಿಕ ಮಾರುಕಟ್ಟೆ ಚೇತರಿಸಿಕೊಳ್ಳುವಂತೆ ಮಾಡಿದ್ದು, ಸ್ಥಳೀಯ ಹಣಕಾಸು ಮಾರುಕಟ್ಟೆ ವಹಿವಾಟಿಗೆ ನೆರವಾದವು ಎಂದು ವರ್ತಕರು ಹೇಳಿದ್ದಾರೆ. ಬಿಎಸ್‌ಇನ 30 ಷೇರುಗಳು 340 ಅಂಶಗಳಷ್ಟು ಏರಿಕೆ ಕಂಡು, ದಿನಪೂರ್ತಿ ಧನಾತ್ಮಕ ರೀತಿಯಲ್ಲಿ ವಹಿವಾಟು ನಡೆಸಿದವು. ಅಂತಿಮವಾಗಿ  416 ಅಂಶಗಳ ಏರಿಕೆ ಕಂಡುಕೊಂಡು 27,1276 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿದವು.

30 ಷೇರುಗಳಲ್ಲಿ 27 ಉತ್ತಮ ವಹಿವಾಟು ನಡೆಸಿದವು. ಬಿಎಚ್‌­ಇಎಲ್‌ ಅತಿ ಹೆಚ್ಚಿನ ಶೇ 4.91ರಷ್ಟು ಗಳಿಕೆ ಕಂಡುಕೊಂಡಿತು.
ಅಮೆರಿಕದ ಫೆಡರಲ್‌ ಬ್ಯಾಂಕ್‌ನ ನಿರ್ಧಾರ ಮತ್ತು ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ಅಲ್ಲಿನ ಮಾರುಕಟ್ಟೆ ಬುಧವಾರದ ವಹಿವಾಟಿನಲ್ಲಿ ಚೇತರಿಸಿ­ಕೊಂಡಿತು. ಇದು ಗುರುವಾರದ ವಹಿವಾಟಿನಲ್ಲಿ ದೇಶದ ಮಾರುಕಟ್ಟೆ ಮತ್ತೆ ಏರುಮುಖ ಚಲನೆ ಕಾಣುವಂತೆ ಮಾಡಿದೆ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಸಂಜೀವ್‌ ಜರ್ಬೇದ್‌ ತಿಳಿಸಿದ್ದಾರೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಸೂಚ್ಯಂಕ ‘ನಿಫ್ಟಿ’  ಮತ್ತೆ 8,100 ಅಂಶಗಳ ಗಡಿ ತಲುಪಿದೆ. 129 ಅಂಶ ಏರಿಕೆ ಕಾಣುವ ಮೂಲಕ 8,159 ಅಂಶ­ಗಳಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು. ಒಟ್ಟಾರೆ 2,172 ಷೇರುಗಳ ಮೌಲ್ಯ ಏರಿಕೆ ಆಗಿದ್ದರೆ, 683 ಷೇರುಗಳ ಮೌಲ್ಯ ಕುಸಿದಿದೆ. ದಿನದ ಮಾರುಕಟ್ಟೆಯ ಒಟ್ಟಾರೆ ವಹಿವಾಟು ₨3,013 ಕೋಟಿಗಳಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.