ADVERTISEMENT

ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹ

ಮೂರನೇ ದಿನಕ್ಕೆ ಲಾರಿ ಮುಷ್ಕರ; ಸರಕು – ಸಾಗಣೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ವಾರ್ಷಿಕ  ಸುಂಕ (ಟೋಲ್‌) ಪಾವತಿ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್‌ (ಎಐಎಂಟಿಸಿ) ದೇಶದಾದ್ಯಂತ ನೀಡಿರುವ ಮುಷ್ಕರವು ಮೂರನೇ ದಿನಕ್ಕೆ ಕಾಲಿಟ್ಟಿದೆ.

ತರಕಾರಿ, ಹಾಲು ಹಾಗೂ ಔಷಧ   ಮುಂತಾದ ಅಗತ್ಯ ವಸ್ತುಗಳ ಸಾಗಣೆ ಲಾರಿ ಸೇರಿದಂತೆ ಸರಕು ಸಾಗಣೆ ಲಾರಿಗಳು ಶನಿವಾರ ಸಂಚರಿಸದೇ ಇರುವುದರಿಂದ  ದೇಶದ  ವಿವಿಧ ಭಾಗಗಳಲ್ಲಿ ಮುಷ್ಕರದ ಬಿಸಿ  ತಟ್ಟಿದೆ.

ತಮಿಳುನಾಡು, ರಾಜಸ್ತಾನ, ಪಂಜಾಬ್‌, ಹರಿಯಾಣ, ಬಿಹಾರ ಹಾಗೂ ಉತ್ತರ ಪ್ರದೇಶ ಸೇರಿದಂತೆ ವಿವಿಧ ಭಾಗಗಲ್ಲಿ ಸರಕು ಸಾಗಣೆ ಸ್ಥಗಿತಗೊಂಡಿದೆ.

ಕೇಂದ್ರ ಸರ್ಕಾರ ನಮ್ಮ ಸಮಸ್ಯೆಗೆ ಪರ್ಯಾಯ  ಕಂಡುಕೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಎಐಎಂಟಿಸಿ ಹೇಳಿದೆ. ಟೋಲ್‌ ಸಂಗ್ರಹಕ್ಕೆ ನಮ್ಮ ವಿರೋಧವಿಲ್ಲ. ಆದರೆ ವಾರ್ಷಿಕ ಟೋಲ್‌ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಎಐಎಂಟಿಸಿ ಅಧ್ಯಕ್ಷ ಭೀಮ್‌ ವಾಧ್ವಾ ಆಗ್ರಹಿಸಿದ್ದಾರೆ.

ಈ ಸಂಬಂಧ ನಾವು ಸೋಮವಾರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ನಾವು ಆಗ್ರಹಿಸಿದ್ದೇವೆ. ಈ ಸಂಬಂಧ ಪ್ರಧಾನಿ ಕಚೇರಿಗೆ ಮನವಿಪತ್ರವನ್ನೂ ಸಲ್ಲಿಸಿದ್ದೇವೆ ಎಂದು ವಾಧ್ವಾ ಹೇಳಿದ್ದಾರೆ.

ಇ–ಟೋಲ್‌ ಸಂಗ್ರಹ ವ್ಯವಸ್ಥೆಯನ್ನು   ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ  ಭರವಸೆ ನೀಡಿದೆ. ಆದರೆ ಇ–ಟೋಲ್‌ ವ್ಯವಸ್ಥೆ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂದು ವಾಧ್ವಾ ದೂರಿದ್ದಾರೆ. ಮುಷ್ಕರಕ್ಕೆ ಬೆಂಬಲ ಸೂಚಿಸಿ 87 ಲಕ್ಷ ಟ್ರಕ್‌ಗಳು ಹಾಗೂ 20 ಲಕ್ಷ ಬಸ್‌ಗಳು ಸಂಚಾರ ನಡೆಸಿಲ್ಲ ಎಂದು ಎಐಎಂಟಿಸಿ   ಹೇಳಿದೆ.

ಅಖಿಲ ಭಾರತ ಟ್ರಾನ್ಸ್‌ಪೋರ್ಟ್‌ ವೆಲ್‌ಫೇರ್‌ ಅಸೋಸಿಯೇಷನ್‌ (ಎಐಟಿಡಬ್ಲುಎ) ಮುಷ್ಕರದಿಂದ ದೂರ ಉಳಿದಿದೆ. ಸುಂಕ ವಸೂಲಾತಿ ವ್ಯವಸ್ಥೆಯಿಂದ ಹಿಂದೆ ಸರಿಯದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರತಿಭಟನೆ ಬೇಕಿದ್ದರೆ ಮುಂದುವರಿಸಿಕೊಳ್ಳಿ ಆದರೆ ಸುಂಕ ವಸೂಲು ವ್ಯವಸ್ಥೆಯನ್ನು ಬದಲಿಸುವುದಿಲ್ಲ  ಎಂದು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.