ADVERTISEMENT

ಫೋರ್ಟಿಸ್‌ ಷೇರು ಖರೀದಿ ತೀವ್ರ ಪೈಪೋಟಿ

ಪಿಟಿಐ
Published 24 ಏಪ್ರಿಲ್ 2018, 19:30 IST
Last Updated 24 ಏಪ್ರಿಲ್ 2018, 19:30 IST

ನವದೆಹಲಿ: ಫೋರ್ಟಿಸ್‌ ಹೆಲ್ತ್‌ಕೇರ್‌ ಸಂಸ್ಥೆಯ ಷೇರು ಖರೀದಿ ವಿಷಯವು ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಂಸ್ಥೆಗಳು ಹೂಡಿಕೆ ಮೊತ್ತವನ್ನು ಹೆಚ್ಚಿಸುತ್ತಲೇ ಇವೆ.

ಮಲೇಷ್ಯಾದ ಐಎಚ್‌ಎಚ್‌ ಹೆಲ್ತ್‌ಕೇರ್‌ ಸಂಸ್ಥೆಯು ತಕ್ಷಣವೇ ₹ 650 ಕೋಟಿ ಹೂಡಿಕೆ ಮಾಡಲು ಸಿದ್ಧವಿರುವುದಾಗಿ ಫೋರ್ಟಿಸ್‌ ಹೆಲ್ತ್‌ಕೇರ್‌ಗೆ ಪತ್ರ ಬರೆದಿದೆ.

ಯಾವುದೇ ಷರತ್ತುಗಳಿಲ್ಲದೇ ₹ 4 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಈ ಮೊದಲೇ ಹೇಳಿತ್ತು. ಆದರೆ, ಇದೀಗ ಹೊಸ ಕೊಡುಗೆಯಲ್ಲಿ ಇಬ್ಬರು ನಿರ್ದೇಶಕರನ್ನು ಆಡಳಿತ ಮಂಡಳಿಗೆ ಸೇರಿಸಿಕೊಳ್ಳುವಂತೆ ಬೇಡಿಕೆ ಇಟ್ಟಿದೆ.

ADVERTISEMENT

ಉಳಿದಂತೆ ₹ 3,350 ಕೋಟಿಯನ್ನು ಹೂಡಿಕೆ ಮಾಡಲು ಯಾವುದೇ ಷರತ್ತು ವಿಧಿಸುವುದಿಲ್ಲ ಎಂದು ತಿಳಿಸಿದೆ.

ವಿವಿಧ ಸಂಸ್ಥೆಗಳ ಹೂಡಿಕೆ ಕೊಡುಗೆಯನ್ನು ಪರಿಶೀಲನೆ ನಡೆಸಿ ಸಲಹಾ ಸಮಿತಿಯು ಶುಕ್ರವಾರ ವರದಿ ನೀಡಲಿದೆ. ಅದರ ಆಧಾರದ ಮೇಲೆ ಯಾವ ಹೂಡಿಕೆಗೆ ಅನುಮತಿ ನೀಡಬೇಕು ಎನ್ನುವುದನ್ನು ಫೋರ್ಟಿಸ್‌ ಆಡಳಿತ ಮಂಡಳಿ ತೀರ್ಮಾನಕ್ಕೆ ಬರಲಿದೆ.

ಆಡಳಿ ಮಂಡಳಿ ಸಭೆ ಸೇರುವು ದಕ್ಕೂ ಎರಡು ದಿನ ಮುಂಚಿತವಾಗಿಯೇ ಐಎಚ್‌ಎಚ್‌ ಸಂಸ್ಥೆ ಈ ಹೊಸ ಕೊಡುಗೆ ಮುಂದಿಟ್ಟಿದೆ. ಈ ಕೊಡುಗೆಯು ಮೇ 4ರವರೆಗೆ ಇರಲಿದೆ ಎಂದೂ ಅದು ಹೇಳಿದೆ.

ಹೂಡಿಕೆಗೆ ಪೈಪೋಟಿ: ಹೀರೊ ಎಂಟರ್‌ಪ್ರೈಸಸ್‌ ಇನ್‌ವೆಸ್ಟ್‌ಮೆಂಟ್‌ ಮತ್ತು ಬರ್ಮನ್‌ ಫ್ಯಾಮಿಲಿ ಹೋಲ್ಡಿಂಗ್ಸ್‌ ಸಂಸ್ಥೆಗಳು ಹೊಸ ಹೂಡಿಕೆ ಕೊಡುಗೆ ಮುಂದಿಟ್ಟಿವೆ.

ನೇರವಾಗಿ ₹ 1,500 ಕೋಟಿ ಹೂಡಿಕೆ ಮಾಡುವುದಾಗಿ  ಹೇಳಿವೆ. ಪ್ರತಿ ಷೇರಿಗೆ ₹ 156 ರಂತೆ ಒಟ್ಟಾರೆ ₹ 1,250 ಕೋಟಿಗಳನ್ನು ಜಂಟಿಯಾಗಿ ಹೂಡಿಕೆ ಮಾಡುವುದಾಗಿ ಈ ಸಂಸ್ಥೆಗಳು ಇದಕ್ಕೂ ಮೊದಲು ಹೇಳಿದ್ದವು.

ಯಾವುದೇ ಷರತ್ತುಗಳಿಲ್ಲದೆ ಪ್ರತಿ ಷೇರಿಗೆ ₹ 156 ರಂತೆ ₹ 2,295 ಕೋಟಿ ಹೂಡಿಕೆ ಮಾಡಲು ಸಿದ್ಧವಿರುವುದಾಗಿ ಚೀನಾದ ಫೋಸನ್‌ ಹೆಲ್ತ್ ಹೋಲ್ಡಿಂಗ್ಸ್‌ ಲಿಮಿಟೆಡ್‌ ತಿಳಿಸಿದೆ.

ಮಣಿಪಾಲ್‌/ಟಿಪಿಜಿ ಒಕ್ಕೂಟವು ಪ್ರತಿ ಷೇರಿಗೆ ₹ 155 ರಂತೆ ಹೂಡಿಕೆ ಕೊಡುಗೆ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.