ADVERTISEMENT

ಬಂಡವಾಳ ಸಂಗ್ರಹಕ್ಕೆ ಮಹೀಂದ್ರ ಫೈನಾನ್ಸ್‌ ಎನ್‌ಸಿಡಿ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST

ಬೆಂಗಳೂರು: ಮಹೀಂದ್ರ ಪೈನಾನ್ಸ್‌ ಕಂಪೆನಿಯು ಇದೇ ಮೊದಲ ಬಾರಿಗೆ ಷೇರುಗಳಾಗಿ ಪರಿವರ್ತಿಸಲಾಗದ ಸಾಲಪತ್ರಗಳ (ಎನ್‌ಸಿಡಿ) ವಿತರಣೆ ಮೂಲಕ ದೀರ್ಘಾವಧಿಗೆ ಬಂಡವಾಳ ಸಂಗ್ರಹಿಸಲು  ಮುಂದಾಗಿದೆ.

ಕಂಪೆನಿಯು ₹1000 ಮುಖಬೆಲೆಯ ‘ಎನ್‌ಸಿಡಿ’ಗಳನ್ನು ಬಿಡುಗಡೆ ಮಾಡಿದ್ದು, ಒಟ್ಟು ₹1000 ಕೋಟಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಸಾರ್ವಜನಿಕ ವಿತರಣೆ ಬುಧವಾರದಿಂದ ಆರಂಭವಾಗಲಿದ್ದು, ಜೂನ್‌ 10 ಕೊನೆ ದಿನವಾಗಿದೆ. ಇಲ್ಲಿ ಸಂಗ್ರಹಿಸುವ ಹಣವನ್ನು ದೀರ್ಘಾವಧಿಯ ಸಾಲ ಮತ್ತು ಮರು ಸಾಲಕ್ಕೆ ಬಳಸಿಕೊಳ್ಳಲಾಗುವುದು ಎಂದು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ  ವಿ. ರವಿ ಅವರು ಮಾಹಿತಿ ನೀಡಿದರು. ಸಾಲಪತ್ರಗಳನ್ನು ಕಾಗದ ಅಥವಾ ಕಾಗದ ರಹಿತ  (ಡಿಮ್ಯಾಟ್‌ ಖಾತೆ) ರೂಪದಲ್ಲಿ ಇಟ್ಟುಕೊಳ್ಳಬಹುದಾಗಿದೆ.

ಒಂಬತ್ತು ರೀತಿಯಲ್ಲಿ ಎನ್‌ಸಿಡಿಗಳ ವಿತರಣೆ ಮಾಡಲಿದ್ದು, ಬಡ್ಡಿದರವುಶೇ 8.34 ರಿಂದ ಶೇ 9ರವರೆಗಿದೆ. ಎರಡು ವಿಧ: ಎನ್‌ಸಿಡಿಯಲ್ಲಿ ಸುರಕ್ಷಿತ ಮತ್ತು ಸುರಕ್ಷಿತವಲ್ಲದ ಎಂದು ಎರಡು ವಿಧಗಳಿವೆ. ಕಂಪೆನಿಯು ವಿತರಣೆ ಮಾಡಲು ಹೊರಟಿರುವುದು ಸುರಕ್ಷಿತವಲ್ಲದ ಸಾಲಪತ್ರಗಳನ್ನು. ಆದರೆ, ಹಣಕಾಸು ಸಂಸ್ಥೆಗಳ ಸುರಕ್ಷತೆಯ ಬಗ್ಗೆ ಖಾತರಿ ನೀಡುವ ರೇಟಿಂಗ್ ಸಂಸ್ಥೆಗಳಾದ ಇಂಡಿಯಾ ರೇಟಿಂಗ್ಸ್‌ ಮತ್ತು ಕೇರ್‌ ರೇಟಿಂಗ್ಸ್‌, ಕ್ರಮವಾಗಿ ‘ಇಂಡ್‌ ಎಎಎ’ ಮತ್ತು ‘ಕೇರ್‌ ಎಎಎ’ ಮಾನದಂಡ ನೀಡಿವೆ. ಹೀಗಾಗಿ ಸಾಲಪತ್ರಗಳ ಖರೀದಿಗೆ ಯಾವುದೇ ಭಯ ಬೇಡ ಎಂದು ಕಂಪೆನಿ  ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.