ADVERTISEMENT

ಬದಲಾಗದ ಬಡ್ಡಿ ದರ: ತಗ್ಗದ ‘ಇಎಂಐ’

ಆರ್‌ಬಿಐ’ ಮೊದಲ ದ್ವೈಮಾಸಿಕ ಹಣಕಾಸು ನೀತಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2014, 19:30 IST
Last Updated 1 ಏಪ್ರಿಲ್ 2014, 19:30 IST

ಮುಂಬೈ(ಪಿಟಿಐ): ಸಗಟು ಹಣದುಬ್ಬರ (ಡಬ್ಲ್ಯುಪಿಐ) ‘ಹಿತಕರ’  ಮಟ್ಟಕ್ಕೆ  ತಗ್ಗಿ­ದ್ದರೂ, ಚಿಲ್ಲರೆ ಹಣದುಬ್ಬರ ದರ ನಿರೀಕ್ಷಿತ ಮಟ್ಟಕ್ಕೆ ಇಳಿಕೆಯಾಗದ ಹಿನ್ನೆಲೆ­ಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಂಗಳವಾರ ಪ್ರಕಟಿಸಿದ ಹಣಕಾಸು ನೀತಿ ಪರಾಮರ್ಶೆಯಲ್ಲಿ  ಅಲ್ಪಾವಧಿ ಬಡ್ಡಿ (ರೆಪೊ) ದರದಲ್ಲಿ ಮತ್ತೆ ಯಥಾಸ್ಥಿತಿಯನ್ನೇ ಕಾಯ್ದುಕೊಂಡಿದೆ.

‘ಆರ್‌ಬಿಐ’ ಹಣಕಾಸು ನೀತಿಯನ್ನು ಕೇವಲ ಹಣದುಬ್ಬರ ತಗ್ಗಿಸುವ ಅಸ್ತ್ರ­ವಾಗಿ ಮಾತ್ರ ಬಳಸಿಕೊಳ್ಳುತ್ತಿದೆ. ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಯಾವುದೇ ಉದ್ದೇಶ ಕೇಂದ್ರ ಬ್ಯಾಂಕ್‌ಗೆ ಇಲ್ಲ. ಇದು ಸಂಪೂರ್ಣವಾಗಿ ಹೂಡಿಕೆ ವಿರೋಧಿ  ನೀತಿ’ ಎಂದು ಪ್ರಮುಖ ವಾಣಿಜ್ಯೋದ್ಯಮ ಸಂಸ್ಥೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ತಗ್ಗದ ‘ಇಎಂಐ’
ಶೇ 8ರಷ್ಟಿದ್ದ ‘ರೆಪೊ’ ದರ (ಆರ್‌ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ) ಮತ್ತು ಶೇ 4ರಷ್ಟಿದ್ದ ನಗದು ಮೀಸಲು

ಅನುಪಾ­ತದಲ್ಲಿ (ಸಿಆರ್‌­ಆರ್‌) ಈ ಬಾರಿಯ ಪರಾಮರ್ಶೆಯಲ್ಲೂ ಯಾವುದೇ ವ್ಯತ್ಯಯ ಮಾಡಲಾಗಿಲ್ಲ. ಹೀಗಾಗಿ ಗೃಹ, ವಾಹನ, ಕಾರ್ಪೊರೇಟ್‌ ಸಾಲಗಳಿಗೆ ಸಂಬಂಧಿಸಿದ ‘ಸಮಾನ ಮಾಸಿಕ ಕಂತು’ (ಇಎಂಐ) ಪ್ರಮಾಣ ತಗ್ಗಬಹುದು ಎಂಬ ಗ್ರಾಹಕರ ನಿರೀಕ್ಷೆ ಹುಸಿಯಾಗಿದೆ. ‘ಸಿಆರ್‌ಆರ್‌’ ತಗ್ಗದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹರಿದು ಬರುವ ಬಂಡ­ವಾಳವೂ ಕಡಿಮೆ ಆಗಿದ್ದು, ಸಾಲದ್ದೇ ದೊಡ್ಡ ಸಮಸ್ಯೆಯಾಗಲಿದೆ’ ಎಂದು ಉದ್ಯಮ ವಲಯ ಪ್ರತಿಕ್ರಿಯಿಸಿದೆ.

‘ಬಡ್ಡಿ ದರ ಇಳಿಕೆಯಾಗದ ಹಿನ್ನೆಲೆ­ಯಲ್ಲಿ ಸಾಲದ ‘ಇಎಂಐ’ ಕಂತಿನಲ್ಲೂ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ ಇನ್ನೊಂದಿಷ್ಟು ದಿನ ಜೀವನ ಈಗಿರು­ವಂತೆಯೇ ಮುಂದು­­ವರಿಯಲಿದೆ’ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಅಧ್ಯಕ್ಷ ಕೆ.ಆರ್‌.ಕಾಮತ್‌ ಹೇಳಿದ್ದಾರೆ.

ಇದು ‘ಆರ್‌ಬಿಐ’ನ ಮೊದಲ ದ್ವೈಮಾಸಿಕ ಹಣಕಾಸು ನೀತಿ. 7 ಮತ್ತು 14 ದಿನಗಳ ‘ರೆಪೊ’ ಮಿತಿಯನ್ನು ಶೇ 0.50ರಿಂದ ಶೇ 0.75ಕ್ಕೆ ಹೆಚ್ಚಿಸಿರು­ವುದು ಮಾತ್ರ ಈ ನೀತಿಯ ವಿಶೇಷ.

ಹಣದುಬ್ಬರ ಪರಿಣಾಮ
‘ಸದ್ಯದ ಪರಿಸ್ಥಿತಿಯಲ್ಲಿ ಇಷ್ಟು ಮಾತ್ರ ಮಾಡಲು ‘ಆರ್‌ಬಿಐ’ನಿಂದ ಸಾಧ್ಯ. 2013ರ ಸೆಪ್ಟೆಂಬರ್‌ನಿಂದ 2014ರ ಜನವರಿವರೆಗೆ ಆಹಾರ, ಇಂಧನ ಸೇರಿದಂತೆ ಚಿಲ್ಲರೆ ಹಣದುಬ್ಬರ ದರದಲ್ಲಿ ಏರಿಕೆಯೇ ಮುಂದು­ವರಿದಿದೆ. ‘ಸಿಪಿಐ’ ಇನ್ನೂ ಹಿತಕರ ಮಟ್ಟಕ್ಕೆ ತಗ್ಗದ ಹಿನ್ನೆಲೆಯಲ್ಲಿ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದು­ಕೊಳ್ಳಲಾಗಿದೆ’ ಎಂದು ರಘುರಾಂ ರಾಜನ್‌ ತಮ್ಮ ಕ್ರಮವನ್ನು ಸಮರ್ಥಿ­ಸಿಕೊಂಡಿದ್ದಾರೆ.
ಆದರೆ, ‘ಸಿಪಿಐ’ 2015ರ ಅಂತ್ಯದ ವೇಳೆಗೆ ಶೇ 6ಕ್ಕಿಂತ ಕೆಳಮಟ್ಟಕ್ಕೆ ಇಳಿದರೆ ನಂತರ ‘ರೆಪೊ’ ದರ ಏರಿಕೆ ಮಾಡುವ ಸಾಧ್ಯತೆ ಇರುವುದಿಲ್ಲ ಎಂದೂ ಅವರು ಭರವಸೆ ನೀಡಿದ್ದಾರೆ.

ಶೇ5.5 ‘ಜಿಡಿಪಿ’ ಅಂದಾಜು
2014–15ರಲ್ಲಿ ಶೇ 5.5ರಷ್ಟು ‘ಜಿಡಿಪಿ’ ಪ್ರಗತಿಯನ್ನು ‘ಆರ್‌ಬಿಐ’ ಅಂದಾಜು ಮಾಡಿದೆ. ಚಾಲ್ತಿ ಖಾತೆ ಕೊರತೆಯು (ಸಿಎಡಿ) ‘ಜಿಡಿಪಿ’ಯ ಶೇ 2ಕ್ಕೆ ತಗ್ಗಬಹುದು ಎಂದಿದೆ.

ಸೆಪ್ಟೆಂಬ­ರ್‌ನಿಂದ ಈವರೆಗೆ ರಾಜನ್‌ ಮೂರು ಬಾರಿಯೂ ‘ರೆಪೊ’ ದರವನ್ನು ಶೇ 0.25ರಷ್ಟು (ಒಟ್ಟು ಶೇ 0.75ರಷ್ಟು) ಏರಿಕೆ ಮಾಡಿದ್ದಾರೆ.  ಎರಡನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಜೂನ್‌ 3ರಂದು ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT