ADVERTISEMENT

ಬಾಹ್ಯಾಕಾಶ ತ್ಯಾಜ್ಯಕ್ಕೆ ಬಲೆ ಬೀಸಿದ ಜಪಾನ್‌

ಜಕ್ಕಣಕ್ಕಿ ಎಂ ದಯಾನಂದ
Published 3 ಜನವರಿ 2017, 19:30 IST
Last Updated 3 ಜನವರಿ 2017, 19:30 IST
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ   

ತ್ಯಾಜ್ಯ... ಎಲ್ಲ ನಗರಗಳನ್ನು ಕಾಡುವ ದೊಡ್ಡ ಸವಾಲು. ಸ್ಥಳೀಯ ಆಡಳಿತವನ್ನು ಕಂಗೆಡಿಸುವ ವಿಷಯವೂ ಹೌದು. ತ್ಯಾಜ್ಯದ ವಿರುದ್ಧ ಜನರ ಆಕ್ರೋಶ ಯಾವಾಗಲೂ ಇದ್ದೇ ಇರುತ್ತದೆ.

ಭಾರತದಂತಹ ದೇಶದಲ್ಲಿ ತ್ಯಾಜ್ಯದ ಸಮಸ್ಯೆ ಹೀಗಾದರೆ ಸ್ವೀಡನ್‌ನಲ್ಲಿ ತ್ಯಾಜ್ಯ ನಿರ್ವಹಣೆಗೆ ವಿದೇಶಗಳಿಂದ ಪೂರೈಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆಯಂತೆ. ಏಕೆಂದರೆ ಅಲ್ಲಿ ಕಸವೇ ಸಿಗುತ್ತಿಲ್ಲವಂತೆ.

ಭೂಮಿಯ ಮೇಲಿನ ತ್ಯಾಜ್ಯದ ಕಥೆ ಹೀಗಾದರೆ ಇನ್ನು ಬಾಹ್ಯಾಕಾಶ ತ್ಯಾಜ್ಯದ ವ್ಯಥೆಯೇ ಬೇರೆ ರೀತಿಯದು.

ADVERTISEMENT

ಬಾಹ್ಯಾಕಾಶದಲ್ಲಿ ತೇಲುತ್ತಿರುವ ಅಪಾಯಕಾರಿ ತ್ಯಾಜ್ಯವನ್ನು ಸಂಗ್ರಹಿಸಲು ವಿಶೇಷ ಉಪಗ್ರಹವನ್ನು ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜಪಾನ್‌ ಕಳುಹಿಸಿದೆ. ಟನೆಗಶಿಮಾದ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಕಾಂಟೋರಿ ಉಪಗ್ರಹ  ಹೊತ್ತ  ಎಚ್‌–2ಬಿ’ ರಾಕೆಟ್‌ ಉಡಾವಣೆಗೊಳಿಸಿದೆ.

ಈ ಉಪಗ್ರಹ ಲೋಹದಿಂದ ತಯಾರಿಸಿದ ದೊಡ್ಡ ಬಲೆ, ಯಾಂತ್ರಿಕ ಕೈ, ಸೇರಿ ಹಲವು ಉಪಕರಣಗಳನ್ನು ಹೊಂದಿದೆ.  ಬಾಹ್ಯಾಕಾಶದಲ್ಲಿ ತೇಲುವ ತ್ಯಾಜ್ಯವನ್ನು ಇದು ಸಂಗ್ರಹಿಸುತ್ತದೆ.

ಈ ರೀತಿಯ ಯತ್ನಕ್ಕೆ ಚೀನಾ ಈ ಹಿಂದೆಯೂ ಕೈ ಹಾಕಿತ್ತು. ಆದರೆ, ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿರಲಿಲ್ಲ.   ಕಾಂಟೋರಿ ಬಾಹ್ಯಾಕಾಶ ನಿಲ್ದಾಣದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ಗಗನಯಾನಿಗಳಿಗೆ 5 ಟನ್‌ ನೀರು ಮತ್ತು ಸೌರಶಕ್ತಿ ಸಂಗ್ರಹಕ್ಕಾಗಿ ಲಿಥಿಯಂ ಬ್ಯಾಟರಿಯನ್ನೂ ಕೊಂಡೊಯ್ದಿದೆ.  

ಬಾಹ್ಯಾಕಾಶ ತ್ಯಾಜ್ಯ ಹೆಚ್ಚುವ  ಸಾಧ್ಯತೆ ಇದ್ದು, ಭವಿಷ್ಯದಲ್ಲಿ ಉಪಗ್ರಹ ಉಡಾ­ವಣೆ ಕಷ್ಟಕರ­ವಾಗಲಿದೆ ಎಂದು ವಿಜ್ಞಾನಿ­ಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಮಾನವ ನಿರ್ಮಿಸಿದ ವಸ್ತುಗಳ ತ್ಯಾಜ್ಯ  ಬಾಹ್ಯಾಕಾಶದಲ್ಲಿ ಅಪಾಯಕಾರಿ ಹಂತ ತಲುಪಲಿದೆ ಎಂದು ಯುರೋಪ್‌ ಬಾಹ್ಯಾಕಾಶ ಸಂಸ್ಥೆಯ (ಇಎಸ್‌ಎ)  ಸಂಶೋಧಕರು ತಿಳಿಸಿದ್ದಾರೆ.

ಬಾಹ್ಯಾಕಾಶದ ಕಡೆಗೆ ಮಾನವನ ಕುತೂಹಲಕ್ಕೆ 50 ವರ್ಷದ ಇತಿಹಾಸವಿದೆ. ಆಗಿನಿಂದಲೂ ಸಂಶೋಧನೆಗಳು ನಡೆಯುತ್ತಲೇ ಇವೆ.   ಬಾಹ್ಯಾಕಾಶದಲ್ಲಿ ವಸ್ತುಗಳು ತ್ಯಾಜ್ಯವಾಗಿ  ಸುತ್ತುತ್ತಲೇ ಇವೆ. 10 ಕೋಟಿಗೂ ಹೆಚ್ಚು ವಸ್ತುಗಳು ತೇಲುತ್ತಲೇ ಇವೆ.  ಭೂಮಿಯ ಕಕ್ಷೆಯಲ್ಲಿ ತ್ಯಾಜ್ಯ ಡಿಕ್ಕಿ ಹೊಡೆದು ಸ್ಫೋಟವಾದರೆ ಉಪಗ್ರಹಗಳಿಗೆ ಅಪಾಯ ಎದುರಾಗ ಲಿದೆ. ಇದರಿಂದ ವಿಶ್ವದ ಸಂವಹನ ವ್ಯವಸ್ಥೆಗೆ ಹಾನಿಯಾಗಲಿದೆ.
2009ರಲ್ಲಿ ರಷ್ಯಾದ ಸೇನಾ ಉಪಗ್ರಹವು ಅಮೆರಿಕದ ಖಾಸಗಿ ಸಂಪರ್ಕ ಉಪಗ್ರಹಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದ ಸೆಲ್‌ಫೋನ್ ಬಳಕೆದಾರರಿಗೆ ಸ್ವಲ್ಪ ಅಡಚಣೆಯಾಗಿತ್ತು. ರಸ್ತೆಗಳ ಮೇಲೆ ವಾಹನ ದಟ್ಟಣೆ ಹೆಚ್ಚಿದಂತೆ ಆಗಸದಲ್ಲೂ  ಉಪಗ್ರಹಗಳು ಹೆಚ್ಚಿದರೆ ಇದೇ ಆಗುವುದು ಎಂದು ವಿಜ್ಞಾನಿಗಳು ಆಗಲೇ ಹೇಳಿದ್ದರು.

‘ಬಾಹ್ಯಾಕಾಶ ತ್ಯಾಜ್ಯವನ್ನು ನಾವು ಕಡಿಮೆ ಮಾಡದಿದ್ದರೆ ಇಲ್ಲವೇ ತೆರವು ಮಾಡದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ’ ಎಂದು ಕ್ಯಾಲಿಫೋರ್ನಿ ಯಾದ ಏರೋಸ್ಪೇಸ್‌ ಕಾರ್ಪೋ ರೇಷನ್‌ನ ಸಂಶೋಧಕ ವಿಲಿಯಂ ಏಲರ್ ಹೇಳುತ್ತಾರೆ.

ಏನೇನು ಸಂಗ್ರಹಿಸುತ್ತದೆ
ಕಾಂಟೋರಿ ಉಪಗ್ರಹ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬಿದ್ದ ತ್ಯಾಜ್ಯ, ಹಳೆ ಉಪಗ್ರಹಗಳ ಬಿಡಿಭಾಗಗಳು, ಕ್ಷಿಪಣಿ ಪ್ರಾಪೆಲ್‌ಗಳು, ಬಾಹ್ಯಾಕಾಶ ಕೇಂದ್ರದಿಂದ ಗಗನಯಾನಿಗಳು ಎಸೆದ ಚೀಲ, ಟೂತ್‌ಬ್ರಷ್ ಸೇರಿದಂತೆ ತ್ರಿಶಂಕು ಸ್ಥಿತಿಯಲ್ಲಿನ ವಿವಿಧ  ವಸ್ತುಗಳನ್ನು ಸಂಗ್ರಹಿಸುತ್ತದೆ.

* ಬಾಹ್ಯಾಕಾಶದ ಬಲೆ ಸಿದ್ಧಪಡಿಸುವುದು ಸವಾಲಿನ ಕೆಲಸವಾಗಿತ್ತು. ಆದರೆ, ಮಹತ್ವದ ಕೆಲಸ ಮಾಡಿಯೇ ತೀರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು.
–ಕಾಟ್ಸುಯ ಸುಜುಕಿ, ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.