ADVERTISEMENT

ಬುಧವಾರ, 01, 2017

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2017, 19:30 IST
Last Updated 31 ಅಕ್ಟೋಬರ್ 2017, 19:30 IST
ಬುಧವಾರ, 01, 2017
ಬುಧವಾರ, 01, 2017   

ಹೆಸರು–ಊರು ಬೇಡ
ನಾನು ಸರ್ಕಾರಿ ನೌಕರ. ವಯಸ್ಸು 50. ನನಗೆ ಪಟ್ಟಣದ ಸಮೀಪ 3 ಎಕರೆ ಕೃಷಿ ಜಮೀನಿದ್ದು, ಅದನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ. ಎಕರೆಗೆ ₹ 40 ಲಕ್ಷ ಬರುತ್ತದೆ. ಖರೀದಿದಾರರು ಸಂಪೂರ್ಣ ಹಣಕ್ಕೆ ನೋಂದಾಯಿಸಿಕೊಳ್ಳಲು ತಯಾರಿದ್ದಾರೆ. ಹೀಗೆ ಪಡೆಯುವ ₹ 1.20 ಕೋಟಿಗೆ ಆದಾಯ ತೆರಿಗೆ ಬರುತ್ತಿದೆಯೇ. ಈ ಹಣದಿಂದ ಮುಂದೆ ಮನೆ ಖರೀದಿಸಲು ಬಳಸುವಾಗ ತೆರಿಗೆ ಇಲಾಖೆಯಿಂದ ತೊಂದರೆ ಇದೆಯೇ? ತಿಳಿಸಿರಿ. ನಾನು ಆದಾಯ ತೆರಿಗೆ ವರದಿ ಸಲ್ಲಿಸುವಾಗ ಸೆಕ್ಷನ್‌ 80 ಡಿಡಿಬಿ ಆಧಾರದ ಮೇಲೆ ವೈದ್ಯಕೀಯ ವೆಚ್ಚ (ನನ್ನ ಕುಟುಂಬಕ್ಕೆ ಸಕ್ಕರೆ, ಬಿ.ಪಿ. ನರರೋಗದ ಚಿಕಿತ್ಸೆ) ಕಳೆದು ತೆರಿಗೆ ಲೆಕ್ಕಚಾರ ಹಾಕಬಹುದೇ?

ಉತ್ತರ: ನಿಮ್ಮ ಕೃಷಿ ಜಮೀನು ಪಟ್ಟಣದ ಹತ್ತಿರವಿದ್ದು (8 ಕಿ.ಮೀ. ಒಳಗೆ) ಇಂತಹ ಜಮೀನು ಮಾರಾಟ ಮಾಡಿದಾಗ ಶೇ 20 ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಕೊಡಬೇಕಾಗುತ್ತದೆ. (ಸೆಕ್ಷನ್‌ 2(14)(iii)(a) ನೀವು ಗರಿಷ್ಠ ₹ 50 ಲಕ್ಷ, National Highway Authority of India ಅಥವಾ Rural Electrification Corporation ನಲ್ಲಿ 3 ವರ್ಷಗಳ ಅವಧಿಗೆ ಠೇವಣಿ ಮಾಡಿದರೆ, ಈ ಮೊತ್ತದ ಮಟ್ಟಿಗೆ, ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ವಿನಾಯ್ತಿ ಪಡೆಯಬಹುದು. (ಸೆಕ್ಷನ್‌ 54ಇಸಿ) ಇದೇ ವೇಳೆ, ನೀವು ಬಯಸಿದಂತೆ ಈ ಹಣದಿಂದ ಮುಂದೆ ಮನೆ ಖರೀದಿಸುವಲ್ಲಿ (ಸೆಕ್ಷನ್‌ 54ಎಫ್‌), ಮಾರಾಟ ಮಾಡಿದ ಎರಡು ವರ್ಷಗಳ ತನಕ ಸಮಯ ಸಿಗುತ್ತದೆ ಹಾಗೂ ನಿವೇಶನ ಕೊಂಡು ಮನೆ ಕಟ್ಟಿಸುವಲ್ಲಿ 3 ವರ್ಷ ಅವಧಿ ದೊರೆಯುತ್ತದೆ. ಇಲ್ಲಿ ಕೂಡಾ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ವಿನಾಯ್ತಿ ಇದೆ.

ಸೆಕ್ಷನ್‌ 80 ಬಿಬಿಡಿ. ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್‌, ಏಡ್ಸ್‌, ಮೂತ್ರಪಿಂಡದ ವಿಫಲತೆ, ಇವುಗಳಿಂದ ವ್ಯಕ್ತಿ ಅಥವಾ ವ್ಯಕ್ತಿಯ ಕುಟುಂಬ ಬಳಲುತ್ತಿದ್ದರೆ ಮಾತ್ರ ಗರಿಷ್ಠ ₹ 60,000, ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ನೀವು ತಿಳಿಸಿದ ಸಕ್ಕರೆ, ಬಿ.ಪಿ. ನರಗಳ ಕಾಯಿಲೆಗಳಿಗೆ ಅನ್ವಯವಾಗುವುದಿಲ್ಲ. ಸರ್ವೇ ಸಾಮಾನ್ಯವಾಗಿ ಇಂತಹ ಕಾಯಿಲೆಗಳು 50 ವರ್ಷ ದಾಟಿದ ಶೇ 50 ರಷ್ಟು ಜನರಿಗೆ ಇರುತ್ತದೆ.

ADVERTISEMENT

ನೀವು ಜಮೀನು ಮಾರಾಟ ಮಾಡಿ ದೊಡ್ಡ ಮೊತ್ತ ಪಡೆಯುವುದರಿಂದ, ಪ್ರಾರಂಭದಲ್ಲಿಯೇ ನಿಮಗೆ ಸಮೀಪದ ಚಾರ್ಟರ್ಡ್‌ ಅಕೌಂಟಂಟ್‌ ಸಲಹೆ ಪಡೆದು, ಮೇಲಿನ ವಿಚಾರ ಅವರ ಗಮನಕ್ಕೆ ತಂದು, ಮುಂದೆ ಯಾವ ತೊಂದರೆಯಾಗದಂತೆ ನೋಡಿಕೊಳ್ಳಿ.

ಹೆಸರು–ಊರು ಬೇಡ
ನನ್ನ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ, 2013 ಹಾಗೂ 2014 ರಲ್ಲಿ ಒಟ್ಟಿಗೆ ₹ 4,81,990 (ಹಂತ ಹಂತವಾಗಿ) ವಿಜಯ ಬ್ಯಾಂಕಿನಲ್ಲಿ ಶಿಕ್ಷಣ ಸಾಲ ಪಡೆದಿದ್ದೆ. ಶಿಕ್ಷಣ ಮುಗಿಯುವ ತನಕವೂ ಈ ಸಾಲಕ್ಕೆ ಬಡ್ಡಿ ಇಲ್ಲ ಎಂದು ತಿಳಿಸಿದ್ದರು. 2016 ರಲ್ಲಿ ಬ್ಯಾಂಕಿನಲ್ಲಿ ವಿಚಾರಿಸಿದಾಗ ಸಾಲಪಡೆದ ತಾರೀಕಿನಿಂದ ಬಡ್ಡಿ ಕೊಡಬೇಕು ಎಂದು ತಿಳಿಸಿದರು. ನಾನು ಬಡ್ಡಿಗೆ ಹೆದರಿ ಬೇರೆಯವರಿಂದ ಸಾಲ ಪಡೆದು ಬಡ್ಡಿ ಸೇರಿಸಿ 15–7–16 ರಂದು ಬ್ಯಾಂಕಿಗೆ ಸಂದಾಯ ಮಾಡಿದೆ. ನಾನು ಕೃಷಿಕ ಹಾಗೂ ಆದಾಯದ ಪುರಾವೆ ಕೊಟ್ಟರೂ ಸಂಪೂರ್ಣ ಬಡ್ಡಿ ಕಟ್ಟಿಸಿಕೊಂಡಿದ್ದಾರೆ. ಈ ಬಡ್ಡಿ ಹಣ ವಾಪಸ್‌ ಪಡೆಯಬಹುದೇ?

ಉತ್ತರ: ಕೇಂದ್ರ ಸರ್ಕಾರದ ಮಾದರಿ ಶಿಕ್ಷಣ ಸಾಲದ ಯೋಜನೆಯಲ್ಲಿ ವೃತ್ತಿಪರ ಶಿಕ್ಷಣ ಪಡೆಯುವಲ್ಲಿ, ಹೆತ್ತವರ ಆದಾಯ ವಾರ್ಷಿಕ ₹ 4.50 ಲಕ್ಷದೊಳಗಿರುವಲ್ಲಿ, ಶಿಕ್ಷಣದ ಅವಧಿ ಹಾಗೂ ಒಂದು ವರ್ಷ ಅಥವಾ ಕೆಲಸಕ್ಕಿದ್ದ ಆರು ತಿಂಗಳು, ಈ ಅವಧಿಗೆ ಅನುದಾನಿತ ಬಡ್ಡಿ (Interest Subsidy) ಇರುತ್ತದೆ. ಆದಾಯದ ಪುರಾವೆ ತಹಸೀಲ್ದಾರರಿಂದ ಪಡೆದು ಬ್ಯಾಂಕಿಗೆ ಸಲ್ಲಿಸಬೇಕು. ಈ ಎಲ್ಲಾ ಕರಾರುಗಳಿಗೆ ನಿಮಗೆ ಅರ್ಹತೆ ಇದ್ದಲ್ಲಿ, ಬಡ್ಡಿ ಅನುದಾನಿತ ಸಾಲಕ್ಕೆ ನೀವು ಕೂಡಾ ಅರ್ಹರಾಗುತ್ತೀರಿ. ವಿಷಯ ಸರಿಯಾಗಿ ತಿಳಿಯದೇ ಏನೂ ಹೇಳುವಂತಿಲ್ಲ. ಸಾಲ ಬಡ್ಡಿ ಸಮೇತ ಕಟ್ಟುವ ಮುನ್ನ ಬ್ಯಾಂಕಿನಲ್ಲಿ ಹೆಚ್ಚಿನ ವಿಚಾರ ಚರ್ಚಿಸಬಹುದಿತ್ತು. ನೀವು ಬ್ಯಾಂಕನ್ನು ಮತ್ತೊಮ್ಮೆ ವಿಚಾರಿಸಿರಿ.

ಹೆಸರು ಬೇಡ, ಹೊಸಕೋಟೆ
ನನ್ನ ವಯಸ್ಸು 74. ಪಿಂಚಣಿ ಬರುತ್ತದೆ. ನನಗೆ ಡಿಸೆಂಬರ್‌ 2016 ರಲ್ಲಿ ಕಳೆದ 5 ವರ್ಷಗಳ ಪಿಂಚಣಿ ಹಿಂಬಾಕಿ ₹ 70,000 ಬಂದಿದೆ. ನನ್ನ ಒಟ್ಟು ವರಮಾನ ₹ 3 ಲಕ್ಷ ದಾಟಿದೆ. 2016–2017 ನನ್ನ ವರಮಾನ, ನಿವೃತ್ತಿ ವೇತನ+ಹಿಂಬಾಕಿ ₹ 2,98,000, ಷೇರುಗಳ ಡಿವಿಡೆಂಡ್‌ ₹ 20,000, ಬಡ್ಡಿ ವರಮಾನ ₹ 40,000, ಜಮಾ ₹ 3,38,000. ನನ್ನ ಪಿಂಚಣಿ ಹಿಂಬಾಕಿಯಿಂದ ಬಂದ ಹಣದಿಂದ ₹ 1 ಲಕ್ಷ ಅಂಚೆ ಕಚೇರಿ ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌ ಠೇವಣಿಯಲ್ಲಿ (2016–17) ಇರಿಸಿದ್ದೇನೆ. ನನಗೆ ಶೇ 71  ರಷ್ಟು ಕಿವುಡುತನ ಇದೆ. ಇದಕ್ಕೆ ಮೆಡಿಕಲ್‌ ಸರ್ಟಿಫಿಕೇಟ್‌ ಇದೆ. ಈ ಕಾರಣದಿಂದ ತೆರಿಗೆ ವಿನಾಯ್ತಿ ಇದೆಯೇ? ನಾನು ಆದಾಯ ತೆರಿಗೆ ಸಲ್ಲಿಸಬೇಕೇ?

ಉತ್ತರ: ಸೆಕ್ಷನ್‌ 80.U ಆಧಾರದ ಮೇಲೆ ಕಿವುಡುತನ ಬಗ್ಗೆ ನಿಮ್ಮ ಒಟ್ಟು ಆದಾಯದಿಂದ ಗರಿಷ್ಠ ₹ 75,000 ಕಳೆದು ತೆರಿಗೆ ಸಲ್ಲಿಸುವ ಅವಕಾಶವಿದೆ. ಷೇರಿನ ಮೇಲಿನ ಡಿವಿಡೆಂಡ್‌ ಸೆಕ್ಷನ್‌ 10(34) ಆಧಾರದ ಮೇಲೆ ಸಂಪೂರ್ಣ ವಿನಾಯ್ತಿ ಇದೆ. ಸೆಕ್ಷನ್‌ 89(1) ಆಧಾರದ ಮೇಲೆ ಪಿಂಚಣಿ ಹಿಂಬಾಕಿ ಕೂಡಾ ಹಿಂದಿನ ವರ್ಷದ ಆದಾಯಕ್ಕೆ ಸೇರಿಸುವ ಅವಕಾಶವಿದೆ. ಸೆಕ್ಷನ್‌ 80ಸಿ ಆಧಾರದ ಮೇಲೆ, ಗರಿಷ್ಠ ₹ 1.50 ಲಕ್ಷ ತನಕ S.C.S.S. (ಅಂಚೆ ಕಚೇರಿ) ಠೇವಣಿ ಕೂಡಾ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ನಿಮಗೆ ಆದಾಯ ತೆರಿಗೆ ಬರುವುದಿಲ್ಲ. ನಿಶ್ಚಿಂತೆಯಿಂದ ಬಾಳಿ.

ಎಚ್‌.ಎಸ್‌. ಆಲಿ, ಮದ್ದೂರು
ನಾನು ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ. ನನಗೆ ಇಪಿಎಫ್‌ನಲ್ಲಿ ₹ 2 ಲಕ್ಷ ಬಂದಿದೆ. ಸ್ವಂತ ಮನೆ ಇದೆ. ಈ ಹಣ 10 ವರ್ಷಗಳ ಅವಧಿಗೆ ಅಂಚೆ ಕಚೇರಿ, ಬ್ಯಾಂಕ್‌, ಮ್ಯೂಚುವಲ್‌ ಫಂಡ್‌ ಹೀಗೆ ಯಾವುದರಲ್ಲಿ ವಿನಿಯೋಗಿಸಲಿ? ನನ್ನ ಹಣಕ್ಕೆ ಭದ್ರತೆ ಇರಬೇಕು. ನಾನು ಈಗ ಬೇರೆ ಶಾಲೆಗೆ ಸೇರಿದ್ದೇವೆ. ಮನೆ ಖರ್ಚಿಗೆ ಸರಿ ಹೋಗುತ್ತದೆ. ನನಗೆ ನಿಮ್ಮ ಉತ್ತಮ ಸಲಹೆ ಬೇಕಾಗಿದೆ.

ಉತ್ತರ: ಮ್ಯೂಚುವಲ್‌ ಫಂಡ್‌ನಲ್ಲಿ ನಿಖರವಾದ ಆದಾಯ ಬಂದರೂ ಬರಬಹುದು ಹಾಗೂ ಬಾರದೇ ಕೂಡಾ ಇರಬಹುದು. ಭದ್ರತೆಯ ದೃಷ್ಟಿಯಿಂದ ಹಾಗೂ 10 ವರ್ಷಗಳ ಅವಧಿ ನೀವು ಕೇಳುವುದರಿಂದ. ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ ₹ 2 ಲಕ್ಷ, 10 ವರ್ಷಗಳ ಅವಧಿಗೆ, ಒಮ್ಮೆಲೇ ಬಡ್ಡಿ ಬರುವ, ಚಕ್ರ ಬಡ್ಡಿಯಲ್ಲಿ ಹಣ ಸಿಗುವ, ಠೇವಣಿಯಲ್ಲಿ ಇರಿಸಿರಿ, ಇದರಿಂದ ನೀವು ನಿಮ್ಮ ಹೂಡಿಕೆ ವಿಚಾರದಲ್ಲಿ ನಿಶ್ಚಿಂತೆಯಿಂದ ಇರಬಹುದು.

ಎನ್‌. ವೆಂಕಟಶಾಮಪ್ಪ, ಬೆಂಗಳೂರು
ನಾನು  ಸರ್ಕಾರಿ ಸ್ವಾಮ್ಯದ ಕಾರ್ಖಾನೆಯ ನಿವೃತ್ತ ಕಾರ್ಮಿಕ. ನನಗೆ ಸೇವೆಯಲ್ಲಿ ಉಳಿಸಿದ ಹಣ ಹಾಗೂ ಸ್ವಲ್ಪ ಪಿಂಚಣಿ ಇದರಿಂದ ಹೀಗೆ ವಾರ್ಷಿಕ ಆದಾಯವಿದೆ. ಸೊಸೈಟಿಯಲ್ಲಿ ಇಟ್ಟ ಠೇವಣಿ–ವಾರ್ಷಿಕ ಬಡ್ಡಿ ₹ 6.30 ಲಕ್ಷ. ಬ್ಯಾಂಕ್‌ ಠೇವಣಿ ಬಡ್ಡಿ ₹ 38,000, ಪಿಂಚಣಿ ₹ 72,000 (ವಾರ್ಷಿಕ ಒಟ್ಟು ಆದಾಯ ₹ 7.40 ಲಕ್ಷ) ಸೊಸೈಟಿ ಠೇವಣಿಗೆ ಆದಾಯ ತೆರಿಗೆ ಇಲ್ಲವೆಂದು ಕೇಳಿದ್ದೇನೆ. ನನಗೆ ತೆರಿಗೆ ಬಗ್ಗೆ ಸರಿಯಾದ ಮಾಹಿತಿ ಹಾಗೂ ರಿಟರ್ನ್‌ ಸಲ್ಲಿಸಬೇಕಾದಲ್ಲಿ, ಉತ್ತಮ ತೆರಿಗೆ ಸಲಹೆಗಾರರನ್ನು ತಿಳಿಸಿ?

ಉತ್ತರ: ನೀವು ಸೊಸೈಟಿಯಲ್ಲಿ ಇಟ್ಟಿರುವ ಠೇವಣಿ ಬಡ್ಡಿಗೆ ಟಿ.ಡಿ.ಎಸ್. ಇಲ್ಲವಾದರೂ, ಆ ಆದಾಯಕ್ಕೆ ಆದಾಯ ತೆರಿಗೆ ಬರುತ್ತದೆ. ₹ 3 ಲಕ್ಷದ ತನಕ ತೆರಿಗೆ ವಿನಾಯ್ತಿ ಇದ್ದು ಉಳಿದ ಆದಾಯಕ್ಕೆ ತೆರಿಗೆ ಸಲ್ಲಿಸಬೇಕು. ನಿಮ್ಮ ಮನೆಗೆ ಸಮೀಪದ ತೆರಿಗೆ ಸಲಹೆಗಾರರನ್ನು, ವಿಚಾರಿಸಿರಿ ಅಥವಾ T. Vishwanath &  CO, Chartered Accontants, ದೂರವಾಣಿ ಸಂಖ್ಯೆ: 9845769000 ವಿಚಾರಿಸಿರಿ. ನೀವು ಹೆಚ್ಚಿನ ಆದಾಯ ಪಡೆಯುತ್ತಿದ್ದು, ತೆರಿಗೆ ಸಲ್ಲಿಸದಿರುವುದು ಹಾಗೂ ರಿಟರ್ನ್‌ ತುಂಬದಿರುವುದು ತಪ್ಪಾಗುತ್ತದೆ. ತಕ್ಷಣ ಕಾರ್ಯೋನ್ಮುಖರಾಗಿರಿ.

ಜೆ.ಕೆ. ಅರುಣ್‌ ಕುಮಾರ್‌, ಮೈಸೂರು
ನನ್ನ ಮಗಳು ಬಿಇ ಓದಲು, ಇಲ್ಲಿಯ ಕರ್ಣಾಟಕ ಬ್ಯಾಂಕಿನಲ್ಲಿ ₹ 2.48 ಲಕ್ಷ ಸಾಲ ಪಡೆದಿದ್ದೆ. ಆಕೆ ಬಿಇ ಮುಗಿಸಿದ್ದಾಳೆ. ಆದರೆ ಕೆಲಸ ಸಿಗಲಿಲ್ಲ. ನನ್ನ ಆದಾಯ ವಾರ್ಷಿಕ ₹ 4.50 ಲಕ್ಷ ದೊಳಗಿದೆ ಹಾಗೂ ತಹಸೀಲ್ದಾರರಿಂದ ಆದಾಯದ ಸರ್ಟಿಫಿಕೇಟ್‌ ಬ್ಯಾಂಕಿಗೆ ಒದಗಿಸಿದ್ದೆ. ಕೆಲಸ ಸಿಗದಿದ್ದರೂ ನಾನು ₹ 2.48 ಲಕ್ಷ ಬ್ಯಾಂಕಿಗೆ ಅವಧಿಯಲ್ಲಿ ತುಂಬಿದೆ. ಆದರೆ ಅವರು ₹ 2,99,833 ತುಂಬಿದರೆ ಮಾತ್ರ ಸಾಲ ತೀರುತ್ತದೆ ಎಂದು ತಿಳಿಸಿದರು. ₹ 2.48 ಲಕ್ಷ ಪಡೆದು ಉಳಿದ ಬಡ್ಡಿ ಬಾಕಿ ಇದೆ ಎಂಬುದಾಗಿ ಪತ್ರ ಕಳಿಸಿದ್ದಾರೆ. ದಯಮಾಡಿ ಮಾರ್ಗದರ್ಶನ ಮಾಡಿ.

ಉತ್ತರ: ನೀವು ಕೇಂದ್ರ ಸರ್ಕಾರದ ಬಡ್ಡಿ ಅನುದಾನಿತ ಶಿಕ್ಷಣ ಸಾಲ ನಿಮ್ಮ ಮಗಳ ಓದಿಗೆ ಪಡೆಯಲು ಅರ್ಹರಾಗಿದ್ದೀರಿ ಹಾಗೂ ಶಿಕ್ಷಣ ಸಾಲದ ಕಾನೂನಿನಂತೆ ಸಮಯದಲ್ಲಿ ಸಂಪೂರ್ಣ ಅಸಲು ಕೂಡಾ ಬ್ಯಾಂಕಿಗೆ ಕಟ್ಟಿದ್ದೀರಿ. ನನ್ನ ಪ್ರಕಾರ ಬ್ಯಾಂಕಿನವರು ಅನುದಾನಿತ ಬಡ್ಡಿ, ಕೆನರಾ ಬ್ಯಾಂಕಿನಿಂದ ಪಡೆದು, ಸಾಲ ತೀರಿರುವುದಾಗಿ, ನಿಮಗೆ ತಿಳಿಸುತ್ತಾರೆ. ಇನ್ನೊಮ್ಮೆ ಬ್ಯಾಂಕ್‌ ಮ್ಯಾನೇಜರ್‌ ಅಥವಾ ಅಲ್ಲಿಯ ರೀಜನಲ್‌ ಮ್ಯಾನೇಜರ ಅವರನ್ನು ಬೇಟಿಯಾಗಿ.

ಮೋಹನ್‌ ಕುಮಾರ್‌, ನೆಲಮಂಗಲ
ಅವಿವಾಹಿತ, ವಯಸ್ಸು 28, ನಾನು ಖಾಸಗಿ ಬ್ರೆಡ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ. ತಿಂಗಳ ಸಂಬಳ ₹ 15–20 ಸಾವಿರ (ಸೇಲ್ಸ್‌ಮ್ಯಾನ್‌) ವ್ಯಾಪಾರಕ್ಕೆ ಅನುಗುಣವಾಗಿ ಸಂಬಳ ಬದಲಾಗುತ್ತದೆ. ಸ್ವಂತ ಅಟೋ ಇದೆ. ಬೇರೆ ಯಾವ ರೀತಿಯ ವ್ಯಾಪಾರ ಮಾಡಬಹುದು ತಿಳಿಸಿರಿ. ನನ್ನ ಇದುವರೆಗಿನ ಉಳಿತಾಯ ಅಟಲ್‌ ಪಿಂಚಣಿ ₹ 409, ₹ 5000 ಆರ್‌.ಡಿ. ₹ 21,000 ವಾರ್ಷಿಕ ಎಲ್‌ಐಸಿ ಕಂತು. Canara Bank, HSBC, Insuranceಗೆ ವಾರ್ಷಿಕ ₹ 13,000. ನನ್ನ ಉಳಿತಾಯ ಸರಿ ಇದೆಯೇ. ನಾನು ಮುಂದಿನ ವರ್ಷ ಮದುವೆಯಾಗಬೇಕು. ಜೊತೆಗೆ ಒಂದು ನಿವೇಶನ ಕೊಳ್ಳುವ ಆಸೆ ಇದೆ. ಸಾಲ ಸಿಗಬಹುದೇ?

ಉತ್ತರ: ನಿಮ್ಮ ವಯಸ್ಸು ಹಾಗೂ ಆದಾಯ ಪರಿಗಣಿಸುವಾಗ ನೀವು ಇದುವರೆಗೆ ಕೈಗೊಂಡಿರುವ ಎಲ್ಲಾ ಉಳಿತಾಯ ಯೋಜನೆಗಳೂ ತುಂಬಾ ಚೆನ್ನಾಗಿದೆ. ಅವುಗಳನ್ನು ಹಾಗೆಯೇ ಮುಂದುವರಿಸಿರಿ. ಸಧ್ಯಕ್ಕೆ ವಿಮೆ ಹೆಚ್ಚು ಮಾಡುವ ಅವಶ್ಯವಿಲ್ಲ. ನೀವು ಬ್ರೆಡ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಆ ವ್ಯವಹಾರ ಸಂಪೂರ್ಣ ಮಾಹಿತಿ ಪಡೆದು ನೀವೇ ಒಂದು ಬ್ರೆಡ್‌ ಅಂಗಡಿ ಪ್ರಾರಂಭಿಸಿರಿ. ನಿಮಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ (PMMY) ಶಿಸು ಶೀರ್ಷಿಕೆಯಲ್ಲಿ ₹ 50,000 ಸಾಲ ಪಡೆಯಬಹುದು. ಈ ಸಾಲಕ್ಕೆ ಮಾರ್ಜಿನ್‌ ಹಣ ಅಥವಾ ಬೇರಾವ ಆಧಾರ (Collateral Security) ಕೂಡಾ ಅವಶ್ಯವಿಲ್ಲ. ನಿಮ್ಮ ಉಳಿತಾಯ ಬರುವ ಬ್ಯಾಂಕಿನಲ್ಲಿ ನಿವೇಶನ ಸಾಲ ಕೂಡಾ ದೊರೆಯುತ್ತದೆ. ಆದರೆ ಬ್ರೆಡ್‌ ಅಂಗಡಿ ಮೊದಲು ಪ್ರಾರಂಬಿಸಿರಿ. ಆಟೋ ಸ್ವಂತ ಇರುವುದರಿಂದ ಮಾರ್ಕೆಟಿಂಗ್‌ ನಿಮಗೆ ಸುಲಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.