ADVERTISEMENT

ಬೇಗನೆ ಕಬ್ಬು ಅರೆಯುವಿಕೆ ಆರಂಭಿಸಲು ಸೂಚನೆ

ಪಿಟಿಐ
Published 27 ಜುಲೈ 2017, 19:59 IST
Last Updated 27 ಜುಲೈ 2017, 19:59 IST

ನವದೆಹಲಿ: ಈ ವರ್ಷ ಕಬ್ಬು ಇಳುವರಿ ಹೆಚ್ಚಿರುವ ನಿರೀಕ್ಷೆ ಮಾಡಲಾಗಿದೆ. ಹೀಗಾಗಿ ಅಕ್ಟೋಬರ್‌ನಿಂದಲೇ ಕಬ್ಬು ಅರೆಯುವ ಕಾರ್ಯ ಆರಂಭಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ ಎಂದು ಆಹಾರ ಸಚಿವಾಲಯದ ಕಾರ್ಯದರ್ಶಿ ಪ್ರೀತಿ ಸದನ್‌ ಅವರು ತಿಳಿಸಿದ್ದಾರೆ.

‘2017–18ರ ಬೆಳೆ ವರ್ಷದಲ್ಲಿ (ಜುಲೈ–ಜೂನ್‌) ಈವರೆಗೆ ಬಿತ್ತನೆ ಪ್ರಮಾಣ ಉತ್ತಮವಾಗಿದೆ. ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಇಳುವರಿ ಬರುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದ್ದಾರೆ.

‘ಸಾಮಾನ್ಯವಾಗಿ ಕಾರ್ಖಾನೆಗಳು ದಸರಾ ಮತ್ತು ದೀಪಾವಳಿ ಅವಧಿಯಲ್ಲಿ ಕಬ್ಬು ಅರೆಯಲು ಆರಂಭಿಸುತ್ತವೆ. ಆದರೆ, ಈ ಬಾರಿ ಅಕ್ಟೋಬರ್‌ ತಿಂಗಳ ಆರಂಭದಿಂದಲೇ ಅರೆಯುವಿಕೆಗೆ ಚಾಲನೆ ನೀಡುವಂತೆ ಸೂಚನೆ ನೀಡಲಾಗಿದೆ.

‘ಜಿಎಸ್‌ಟಿ ಬಳಿಕ ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆ ಕಾಣುತ್ತಿದೆ. ಇದನ್ನು ನಿಯಂತ್ರಿಸಲು ಮಾರುಕಟ್ಟೆಗೆ ಹೆಚ್ಚು ಸಕ್ಕರೆ ಪೂರೈಕೆ ಮಾಡದಂತೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘2017–18ರ ಬೆಳೆ ವರ್ಷದಲ್ಲಿ (ಜುಲೈ–ಜೂನ್‌) ಈವರೆಗೆ 49.15 ಲಕ್ಷ ಹೆಕ್ಟೇರ್‌ಗಳಲ್ಲಿ ಕಬ್ಬು ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ 45.22 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಕಾರ್ಯ ನಡೆದಿತ್ತು ಎಂದು ಕೃಷಿ ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.