ADVERTISEMENT

ಭಾರತದಲ್ಲಿ ಬಂಡವಾಳ ಹೂಡಲು ಜಪಾನ್ ಸಾಫ್ಟ್‌ಬ್ಯಾಂಕ್‌ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
ಟೋಕಿಯೊದಲ್ಲಿ ಭಾನುವಾರ ಜಪಾನ್‌ ಸಾಫ್ಟ್‌ಬ್ಯಾಂಕ್‌ ಸಿಇಒ ಮಸಯೋಶಿ ಸನ್‌ ಅವರೊಂದಿಗೆ ಹಣಕಾಸು ಸಚಿವ ಅರುಣ್‌ ಜೇಟ್ಲಿ
ಟೋಕಿಯೊದಲ್ಲಿ ಭಾನುವಾರ ಜಪಾನ್‌ ಸಾಫ್ಟ್‌ಬ್ಯಾಂಕ್‌ ಸಿಇಒ ಮಸಯೋಶಿ ಸನ್‌ ಅವರೊಂದಿಗೆ ಹಣಕಾಸು ಸಚಿವ ಅರುಣ್‌ ಜೇಟ್ಲಿ   

ಟೋಕಿಯೊ (ಪಿಟಿಐ): ‘ಭಾರತದ ಮೂಲ ಸೌಕರ್ಯ ರಂಗದಲ್ಲಿ ಬಂಡವಾಳ ಹೂಡಿಕೆ ಮಾಡಲು ಜಪಾನಿನ ಆರ್ಥಿಕ ಒಕ್ಕೂಟ ಸಾಫ್ಟ್‌ಬ್ಯಾಂಕ್‌ ಮತ್ತು ಇತರ ಹೂಡಿಕೆದಾರರು ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

ಬಂಡವಾಳ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ ಜೇಟ್ಲಿ ಅವರು, ಏಷ್ಯಾದ ಎರಡನೆ ಅತಿದೊಡ್ಡ ಆರ್ಥಿಕತೆಯಾಗಿರುವ ಜಪಾನಿಗೆ  6 ದಿನಗಳ ಭೇಟಿ ನೀಡಿದ್ದಾರೆ.ಭಾನುವಾರ ಇಲ್ಲಿ ಸಾಫ್ಟ್‌ಬ್ಯಾಂಕ್‌ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಸಯೋಶಿ ಸನ್‌ ಅವರನ್ನು ಭೇಟಿ ಮಾಡಿದ ನಂತರ ಈ ವಿಷಯ ತಿಳಿಸಿದ್ದಾರೆ.

ಭಾರತದಲ್ಲಿ ಸೌರಶಕ್ತಿ ಉತ್ಪಾದನಾ ವಲಯ ಮತ್ತು ಅಂತರ್ಜಾಲ ಸಂಸ್ಥೆಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ತಮಗೆ  ಆಸಕ್ತಿ ಇರುವುದಾಗಿ ಮಸಯೋಶಿ ಸನ್‌ ತಿಳಿಸಿದ್ದಾರೆ.   

ಭಾರ್ತಿ ಎಂಟರ್‌ಪ್ರೈಸಸ್‌ ಮತ್ತು ತೈವಾನಿನ ಫಾಕ್ಸ್‌ಕಾನ್‌ ಟೆಕ್ನಾಲಜೀಸ್‌ ಗ್ರೂಪ್‌ನ  ಸಹಭಾಗಿತ್ವದಲ್ಲಿ ಪುನರ್‌ ಬಳಕೆ ಇಂಧನ ಕ್ಷೇತ್ರದಲ್ಲಿ ₹ 1.34 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಮಸಯೋಶಿ ಈಗಾಗಲೇ  ಪ್ರಕಟಿಸಿದ್ದಾರೆ. ಈ ಜಂಟಿ ಯೋಜನೆಯಡಿ  20 ಗಿಗಾವಾಟ್ಸ್‌ಗಳಷ್ಟು ವಿದ್ಯುತ್‌ ಉತ್ಪಾದಿಸುವ ಗುರಿ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.