ADVERTISEMENT

ಭಾರತದಲ್ಲಿ ಭೂಸ್ವಾಧೀನ ಕಾರ್ಯ ಕಠಿಣ

‘ನೀತಿ’ ಆಯೋಗ ಉಪಾಧ್ಯಕ್ಷ ಪನಗರಿಯಾ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 11:31 IST
Last Updated 1 ಆಗಸ್ಟ್ 2015, 11:31 IST

ನವದೆಹಲಿ (‍ಪಿಟಿಐ): ಭಾರತದಲ್ಲಿ ಭೂ ಸ್ವಾಧೀನ ಎಂಬುದು ‘ಕಠಿಣ ಕಾರ್ಯಗಳಲ್ಲಿ’ ಒಂದು. ನಗರಗಳ ನಿರ್ಮಾಣ ಸೇರಿದಂತೆ ಬೃಹತ್‌ ಯೋಜನೆಗಳಿಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಐದು ವರ್ಷಗಳೇ ಬೇಕಾಗುತ್ತವೆ ಎಂದು ‘ನೀತಿ’ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಅಭಿಪ್ರಾಯ ಪಟ್ಟಿದ್ದಾರೆ.

‘ಸುಸ್ಥಿರ ಹಾಗೂ ಸಮಗ್ರ ನಗರೀಕರಣ’ ಕುರಿತ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಅವರು, ದೇಶದಲ್ಲಿ ಭೂಮಿಯ ಲಭ್ಯತೆ ದೊಡ್ಡ ಸವಾಲು ಹಾಗೂ ದೊಡ್ಡ ಚರ್ಚೆಯಾಗಿ ಮಾರ್ಪಟ್ಟಿದೆ ಎಂದರು.

‘ನೀವು ಹೊಸ ನಗರಗಳನ್ನು ನಿರ್ಮಿಸಬೇಕಾದರೆ, ಭೂಮಿಬೇಕು. ವ್ಯಾಪಾರಗಳನ್ನು ವಿಸ್ತರಿಸಲು ವಿಶಾಲ ಜಾಗಗಳು ಬೇಕು. ಅದೂ ಈಗಿರುವ ನಗರಗಳಲ್ಲೇ ಆಗಬೇಕು’ ಎಂದರು.

ADVERTISEMENT

ಅಲ್ಲದೇ, ‘ನಾನು ನೋಡಿದ ಎಲ್ಲಾ ಅಂದಾಜುಗಳ ಪ್ರಕಾರ,  ಒಂದು ನಗರ ಅಥವಾ ಅಂಥ ಯಾವುದೇ ಯೋಜನೆಯೊಂದರ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಸುಲಭವಾಗಿ ಐದು ವರ್ಷಗಳೇ ಹಿಡಿಯುತ್ತದೆ. ಅದೂ ಪ್ರತಿಭಟನೆಗಳು, ನ್ಯಾಯಾಂಗ ಸೇರಿದಂತೆ ಎನ್‌ಜಿಒಗಳ ಯಾವುದೇ ಅಡ್ಡಗಾಲು ಇಲ್ಲದೇ, ಎಲ್ಲಾ ಪ್ರಕ್ರಿಯೆಗಳು ಸುಲಲಿತವಾಗಿ ನಡೆದರೂ ಇಷ್ಟು ಸಮಯಬೇಕು ಎಂಬುದು ನನ್ನ ಅಂದಾಜು. ಆದ್ದರಿಂದ ಭೂ ಸ್ವಾಧೀನ ಪ್ರಕ್ರಿಯೆ ಕಾರ್ಯ ಜಟಿಲವಾದ್ದದ್ದು’ ಎಂದು ಅವರು ನುಡಿದರು.

ಎರಡಂಕಿ ಅಭಿವೃದ್ಧಿ ದರ: ಇದೇ ವೇಳೆ, ಎರಡಂಕಿಯ ಅಭಿವೃದ್ಧಿ ಸಾಧಿಸುವ ಸಾಮರ್ಥ್ಯ ಭಾರತಕ್ಕೆ ಇದೆ ಎಂದು ಅವರು ತಿಳಿಸಿದ್ದಾರೆ.

‘ಭಾರತವು ತುಂಬ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದೆ ಎಂದು ನಾನು ಹೇಳುತ್ತಲೇ ಇದ್ದೇನೆ. ಸದ್ಯ ಅಭಿವೃದ್ಧಿ ದರ ಶೇಕಡ 7.5 ರಷ್ಟಿದೆ. ಇದು ಶೇ 8–9ಕ್ಕೆ ಹೆಚ್ಚಲಿದೆ ಎಂಬುದು ನನ್ನ ನಿರೀಕ್ಷೆ. ಎರಡಂಕಿ ಅಭಿವೃದ್ಧಿ ದರವನ್ನೂ ನಾವು ಸಾಧಿಸಬಹುದು’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.