ADVERTISEMENT

ಭಾರತದ ಶ್ರೀಮಂತ ನಗರ ಮುಂಬೈ: ಬೆಂಗಳೂರಿಗೆ 3ನೇ ಸ್ಥಾನ

ಪಿಟಿಐ
Published 1 ಮಾರ್ಚ್ 2017, 11:08 IST
Last Updated 1 ಮಾರ್ಚ್ 2017, 11:08 IST
ಭಾರತದ ಶ್ರೀಮಂತ ನಗರ ಮುಂಬೈ: ಬೆಂಗಳೂರಿಗೆ 3ನೇ ಸ್ಥಾನ
ಭಾರತದ ಶ್ರೀಮಂತ ನಗರ ಮುಂಬೈ: ಬೆಂಗಳೂರಿಗೆ 3ನೇ ಸ್ಥಾನ   

ನವದೆಹಲಿ: ಭಾರತದ ಆರ್ಥಿಕ ರಾಜಧಾನಿ ಮುಂಬೈ ಭಾರತದ ಶ್ರೀಮಂತ ನಗರ ಎಂಬ ಹಿರಿಮೆಗೆ ಪಾತ್ರವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಮುಂಬೈನಲ್ಲಿ 46 ಸಾವಿರ ಲಕ್ಷಾಧಿಪತಿಗಳು ಮತ್ತು 28 ಜನ ಕೋಟ್ಯಧಿಪತಿಗಳು ನೆಲೆಯೂರಿದ್ದಾರೆ. ಮುಂಬೈನಲ್ಲಿರುವ ಸಂಪತ್ತಿನ ಪ್ರಮಾಣ 820 ಬಿಲಿಯನ್‌ ಅಮೆರಿಕನ್‌ ಡಾಲರ್‌ (₹ 54.94 ಲಕ್ಷ ಕೋಟಿ) ಎಂದು ನ್ಯೂ ವರ್ಲ್ಡ್‌ ವೆಲ್ತ್‌ ವರದಿ ತಿಳಿಸಿದೆ.

ರಾಷ್ಟ್ರ ರಾಜಧಾನಿ ನವದೆಹಲಿ 23 ಸಾವಿರ ಲಕ್ಷಾಧಿಪತಿಗಳು ಮತ್ತು 18 ಕೋಟ್ಯಧಿಪತಿಗಳನ್ನು ಹೊಂದಿದೆ.  450 ಬಿಲಿಯನ್‌ ಡಾಲರ್‌ (₹ 30.15 ಲಕ್ಷ ಕೋಟಿ) ಶ್ರೀಮಂತಿಕೆ ಹೊಂದಿದೆ.

ಇನ್ನು ಬೆಂಗಳೂರಿನಲ್ಲಿ 7,700 ಲಕ್ಷಾಧಿಪತಿಗಳು ಮತ್ತು 8 ಕೋಟ್ಯಧಿಪತಿಗಳು ನೆಲೆಸಿದ್ದಾರೆ. 320 ಬಿಲಿಯನ್‌ ಡಾಲರ್‌ (₹ 21.44 ಲಕ್ಷ ಕೋಟಿ) ಸಂಪತ್ತು ಹೊಂದಿರುವ ಪ್ರದೇಶವಾಗಿದೆ.


ನಂತರ ಹೈದರಾಬಾದ್‌ 310 ಬಿಲಿಯನ್‌ ಡಾಲರ್‌ (₹20.77 ಲಕ್ಷ ಕೋಟಿ), ಕೋಲ್ಕತ 290 ಬಿಲಿಯನ್‌ ಡಾಲರ್‌ (₹19.43 ಲಕ್ಷಕೋಟಿ), ಪುಣೆ 180 ಬಿಲಿಯನ್‌ ಡಾಲರ್‌(₹12.06 ಲಕ್ಷಕೋಟಿ), ಚೆನ್ನೈ 150 ಬಿಲಿಯನ್‌ ಡಾಲರ್‌(₹10.05 ಲಕ್ಷ ಕೋಟಿ), ಗುರುಗ್ರಾಮ 110 ಬಿಲಿಯನ್‌ ಡಾಲರ್‌ (₹7.37ಲಕ್ಷ ಕೋಟಿ)ಶ್ರೀಮಂತಿಗೆ ತಮ್ಮದಾಗಿಸಿಕೊಂಡಿವೆ.

ಸೂರತ್‌, ಅಹಮದಾಬಾದ್‌, ವಿಶಾಖಪಟ್ಟಣ, ಗೋವಾ, ಚಂಡೀಗಢ, ಜೈಪುರ ಮತ್ತು ವಡೋದರಾ ನಗರಗಳು ಉದಯೋನ್ಮುಖ ಪ್ರದೇಶಗಳಾಗಿ ರೂಪುಗೊಳ್ಳುತ್ತಿವೆ.

ದೇಶದ ಒಟ್ಟು ಆರ್ಥಿಕ ಪ್ರಾಬಲ್ಯ 6.2 ಟ್ರಿಲಿಯನ್‌ ಡಾಲರ್‌ (₹375.20 ಲಕ್ಷ ಕೋಟಿ) ಯಾಗಿದೆ. ಒಟ್ಟಾರೆ 2,64,000 ಲಕ್ಷಾಧಿಪತಿಗಳು ಮತ್ತು 95 ಕೋಟ್ಯಧಿಪತಿಗಳನ್ನು ದೇಶ ಹೊಂದಿದೆ.



ಮುಂಬರುವ ಒಂದು ದಶಕದಲ್ಲಿ ಸ್ಥಳೀಯ ವಾಣಿಜ್ಯ ವ್ಯವಹಾರ ಸೇವೆಗಳಲ್ಲಿ ಭಾರತ ಪಾರುಪತ್ಯ ಸಾಧಿಸಲಿದೆ. ಮಾಹಿತಿ ಮತ್ತು ತಂತ್ರಜ್ಞಾನ, ರಿಯಲ್‌ ಎಸ್ಟೇಟ್‌, ಆರೋಗ್ಯ, ಮಾಧ್ಯಮ, ವಿಮೆ ಕ್ಷೇತ್ರಗಳಲ್ಲಿ  ಪ್ರಗತಿ ಕಾಣಲಿದೆ. ಬೆಂಗಳೂರು, ಹೈದರಾಬಾದ್‌, ಪುಣೆ ನಗರಗಳು ತ್ವರಿತ ಶ್ರೀಮಂತಿಕೆ ಗಳಿಸುವ ನಗರಗಳು ಎಂದು ವರದಿ ತಿಳಿಸಿದೆ.

ವ್ಯಕ್ತಿಯೊಬ್ಬರ ತಲಾ ಆದಾಯ, ಹಣ, ವ್ಯಾಪಾರ, ಸ್ಥಿರಾಸ್ತಿಗಳ ಆಧಾರದ ಮೇಲೆ  ನ್ಯೂ ವರ್ಲ್ಡ್‌ ವೆಲ್ತ್‌ ವರದಿ ಸಿದ್ಧಪಡಿಸುತ್ತದೆ. ವಾರ್ಷಿಕ ಆಯಾ ಪ್ರದೇಶದ ಸುಮಾರು 800 ಜನರನ್ನು ಸಮೀಕ್ಷೆಗೆ ಒಳಪಡಿಸಿ ಪಟ್ಟಿ ಸಿದ್ಧಗೊಳಿಸುತ್ತದೆ.

ಲಕ್ಷಾಧಿಪತಿಗಳು ಅಥವಾ 1 ಮಿಲಿಯನ್‌ ಡಾಲರ್‌ (₹ 6.7 ಕೋಟಿ) ಗಿಂತ ಹೆಚ್ಚಿನ ನಿವ್ವಳ ಸ್ವತ್ತು ಹೊಂದಿರುವ  ವ್ಯಕ್ತಿಗಳ ಸಮೀಕ್ಷೆ ಮೂಲಕ ಲಕ್ಷಾಧಿಪತಿಗಳು ಮತ್ತು ಕೋಟ್ಯಧಿಪತಿಗಳ ವರದಿ ತಯಾರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.